ಮಂಗಳೂರು : ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲಿರುವ ಎಲ್ಲಾ ವಾಣಿಜ್ಯ ಸಂಕೀರ್ಣ ಮತ್ತು ಬೃಹತ್ ಕಟ್ಟಡಗಳ ನಿಖರ ಅಳತೆ ಮಾಡಿ, ಗ್ರಾಮ ಪಂಚಾಯತ್‌ಗಳು ಕಟ್ಟಡ ತೆರಿಗೆ ವಿಧಿಸಲು ಇಂದು ನಡೆದ ಕೆಡಿಪಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಆಶಾ ತಿಮ್ಮಪ್ಪಗೌಡ ಅವರ ಅಧ್ಯಕ್ಷತೆಯಲ್ಲಿ ಗುರುವಾರ ಜಿ.ಪಂ. ಸಭಾಂಗಣದಲ್ಲಿ ನಡೆದ ಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಬಗ್ಗೆ ನಿರ್ಧರಿಸಲಾಯಿತು. ಜಿ.ಪಂ. ಉಪಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ಜಿಲ್ಲೆಯ ವಿವಿಧ ಗ್ರಾಮ ಪಂಚಾಯತ್‌ಗಳಲ್ಲಿ ಕಟ್ಟಡ ತೆರಿಗೆಯಲ್ಲಿ ಏಕರೂಪತೆ ಇಲ್ಲ. ಕೆಲವೆಡೆ ತೆರಿಗೆ ಅಧಿಕ ಇದ್ದರೆ, ಕೆಲವಡೆ ಬಹಳ ಕನಿಷ್ಠ ದರದಲ್ಲಿದೆ. ಇದಲ್ಲದೆ, ವಾಣಿಜ್ಯ ಸಂಕೀರ್ಣಗಳನ್ನು ಬಿಟ್ಟು ಮನೆಗಳಿಗೆ ಮಾತ್ರ ತೆರಿಗೆ ವಿಧಿಸಲಾಗುತ್ತಿದೆ. ಲೈಸನ್ಸ್ ಇಲ್ಲದೇ ಕಟ್ಟಡ ನಿರ್ಮಿಸುವ ಪ್ರಕರಣಗಳೂ ಇವೆ. ಜಿಲ್ಲೆಯ ಹಲವೆಡೆ ಗ್ರಾಮಾಂತರ ಪ್ರದೇಶಗಳಲ್ಲಿ ಶಿಕ್ಷಣ ಸಂಸ್ಥೆಗಳು ಬೃಹತ್ ಕಟ್ಟಡಗಳನ್ನು ನಿರ್ಮಿಸಿದ್ದು, ಚಾರಿಟೇಬಲ್ ಟ್ರಸ್ಟ್‌ಗಳ ಹೆಸರಿನಲ್ಲಿ ಕಟ್ಟಡ ತೆರಿಗೆ ಪಾವತಿಸುತ್ತಿಲ್ಲ. ಇದರಿಂದ ಗ್ರಾಮ ಪಂಚಾಯತ್‌ಗಳಿಗೆ ನಿರೀಕ್ಷಿತ ಆದಾಯ ಸಂಗ್ರಹವಾಗುತ್ತಿಲ್ಲ ಎಂದು ಹೇಳಿದರು.
ಅಧ್ಯಕ್ಷೆ ಆಶಾ ತಿಮ್ಮಪ್ಪಗೌಡ ಮಾತನಾಡಿ, ಜಿಲ್ಲೆಯ ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲಿರುವ ಎಲ್ಲಾ ವಾಣಿಜ್ಯ ಸಂಕೀರ್ಣ ಮತ್ತು ಕಟ್ಟಡಗಳನ್ನು ಪಿಡಿಓಗಳು ಖುದ್ದಾಗಿ ಭೇಟಿ ಪರಿಶೀಲಿಸಿ, ಸಮರ್ಪಕ ಅಳತೆ ಮಾಡಿ ನಿಖರವಾದ ತೆರಿಗೆ ನಿರ್ಧರಿಸಬೇಕು. ಗ್ರಾ.ಪಂ.ಗಳ ಆರ್ಥಿಕ ಸಂಪನ್ಮೂಲ ಹೆಚ್ಚಿಸಲು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು ಎಂದು ಸೂಚಿಸಿದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀವಿದ್ಯಾ ಮಾತನಾಡಿ, ಮನೆ ಮತ್ತು ವಾಣಿಜ್ಯ ಕಟಟ್ಡಗಳಿಗೆ ತೆರಿಗೆ ಯಾವ ರೀತಿ ನಿರ್ಧರಿಸಬೇಕು ಎಂದು ಸರಕಾರದ ಕಾನೂನು ಮತ್ತು ಸುತ್ತೋಲೆ ಇದೆ. ಇದನ್ನು ಕಟ್ಟುನಿಟ್ಟಾಗಿ ಎಲ್ಲಾ ಗ್ರಾಮ ಪಂಚಾಯತ್‌ಗಳಲ್ಲಿ ಜಾರಿಗೆ ತರಬೇಕು. ಕಟ್ಟಡದ ವಾರ್ಷಿಕ ಬಾಡಿಗೆಯ ಶೇಕಡಾ ೧೦ನ್ನು ಕಟ್ಟಡ ತೆರಿಗೆ ರೂಪದಲ್ಲಿ ವಿಧಿಸಲು ಪಂಚಾಯತ್‌ರಾಜ್ ಅಧಿನಿಯಮದಲ್ಲಿ ಅವಕಾಶವಿದೆ. ಆದರೂ, ಸಂಪನ್ಮೂಲ ಕ್ರೋಢೀಕರಣಕ್ಕೆ ಇದಕ್ಕಿಂತ ಹೆಚ್ಚು ತೆರಿಗೆ ವಿಧಿಸಲು ಗ್ರಾ.ಪಂ.ಗಳಿಗೆ ಅವಕಾಶ ಕಲ್ಪಿಸಲಾಗಿದೆ ಎಂದರು. ಕಟ್ಟಡ ತೆರಿಗೆ ಸಂಗ್ರಹಣೆಗೆ ಪ್ರತೀ ಗ್ರಾ.ಪಂ.ಗಳಿಗೆ ಗುರಿ ನಿಗದಿಪಡಿಸಬೇಕು. ನಿರೀಕ್ಷಿತ ತೆರಿಗೆ ಸಂಗ್ರಹಿಸದ ಪಿಡಿಓಗಳ ಬಗ್ಗೆ ವಾರ್ಷಿಕ ಕಾರ್ಯನಿರ್ವಹಣಾ ವರದಿಯಲ್ಲಿ ನಮೂದಿಸುವಂತೆ ಅವರು ತಾ.ಪಂ. ಇ.ಓ.ಗಳಿಗೆ ಸೂಚಿಸಿದರು.
ಕಟ್ಟಡ ನಿರ್ಮಾಣಕ್ಕೆ ಲೈಸನ್ಸ್ ನೀಡುವ ಹಂತದಲ್ಲೇ ಕಟ್ಟಡದ ಅಳತೆ ಪರಿಗಣಿಸಬೇಕು. ಲೈಸನ್ಸ್ ಇಲ್ಲದೇ ನಿರ್ಮಿಸಿರುವ ಕಟ್ಟಡಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಅವರು ಸೂಚಿಸಿದರು.
ಕಟ್ಟಡಗಳಿಗೆ ಲೈಸನ್ಸ್ ನೀಡುವ ಸಂಬಂಧ ಎಲ್ಲಾ ಗ್ರಾಮ ಪಂಚಾಯತ್‌ಗಳು ತಮ್ಮದೆ ಬೈಲಾ ರಚಿಸಲು ಸರಕಾರ ಇತ್ತೀಚೆಗೆ ಆದೇಶ ಹೊರಡಿಸಿದೆ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗುವಂತೆ ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಿದ ಅವರು, ಗ್ರಾಮ ಪಂಚಾಯತ್‌ಗಳಲ್ಲಿ ಹೊಸ ಚುನಾಯಿತ ಪ್ರತಿನಿಧಿಗಳ ಆಯ್ಕೆಯಾಗಿರುವುದರಿಂದ ಈಗಲೇ ಈ ಬಗ್ಗೆ ಕ್ರಮ ಕೈಗೊಂಡು ಗ್ರಾಮ ಪಂಚಾಯತ್ ಸಭೆಯಲ್ಲಿ ಇಡುವಂತೆ ಸೂಚಿಸಿದರು.
ಹೊಸ ಗ್ರಾ.ಪಂ.ಗಳಿಗೆ ಕಟ್ಟಡ: ಜಿಲ್ಲೆಯಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದ ಗ್ರಾಮ ಪಂಚಾಯತ್‌ಗಳಿಗೆ ಕಚೇರಿ ಒದಗಿಸಲು ಸರಕಾರಿ ಕಟ್ಟಡ ಲಭ್ಯವಿಲ್ಲದಿದ್ದಲ್ಲಿ ಖಾಸಗಿ ಕಟಟ್ಡಗಳನ್ನು ಬಾಡಿಗೆಯಲ್ಲಿ ಪಡೆಯಲು ಸರಕಾರ ಸೂಚಿಸಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿ.ಪಂ. ಉಪಕಾರ್ಯದರ್ಶಿ ಎನ್.ಆರ್. ಉಮೇಶ್ ಹೇಳಿದರು. ಈ ಸಂದರ್ಭದಲ್ಲಿ ಮಾತನಾಡಿದ ಉಪಾಧ್ಯಕ್ಷ ಸತೀಶ್ ಕುಂಪಲ, ನೂತನ ಕಟ್ಟಡ ನಿರ್ಮಾಣಕ್ಕೆ ಕನಿಷ್ಠ 2 ಎಕರೆ ಸರಕಾರ ಜಾಗ ಕಾದಿರಿಸಬೇಕು. ಇದರಿಂದ ಭವಿಷ್ಯದಲ್ಲಿ ಗ್ರಾಮದ ಇತರೆ ಅಭಿವೃದ್ಧಿ ಕಾರ್ಯಗಳಿಗೆ ಜಾಗದ ಸಮಸ್ಯೆ ಎದುರಾಗುವುದಿಲ್ಲ ಎಂದರು.
ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಾಲುಸಂಕ ನಿರ್ಮಾಣಕ್ಕೆ ಅವಕಾಶ ಇರುವುದರಿಂದ ಗ್ರಾ.ಪಂ. ಗಳು ಅಗತ್ಯ ಇರುವಷ್ಟು ಕಾಲು ಸಂಕ ನಿರ್ಮಾಣಕ್ಕೆ ಮುಂದಿನ ಒಂದು ವಾರದೊಳಗೆ ಪ್ರಸ್ತಾವನೆ ಸಲ್ಲಿಸಬೇಕು. ಪ್ರಸಕ್ತ ವರ್ಷದ ಕ್ರಿಯಾ ಯೋಜನೆ ಅನುಮೋದನೆಯಾಗಿದ್ದು, ಎಲ್ಲಾ ಅನುಷ್ಠಾನಾಧಿಕಾರಿಗಳು ಕೂಡಲೇ ಕಾರ್ಯಕ್ರಮಗಳ ಜಾರಿಗೆ ಕಾರ್ಯಪ್ರವೃತ್ತರಾಗಬೇಕು. ಯಾವುದೇ ಕಾರಣಕ್ಕೂ ಅನುದಾನ ವ್ಯಪಗತವಾಗದಂತೆ ಯೋಜನಾ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಸಿ.ಇ.ಓ ಸೂಚಿಸಿದರು.
ಸಭೆಯಲ್ಲಿ ಜಿ.ಪಂ. ಸ್ಥಾಯೀ ಸಮಿತಿ ಅಧ್ಯಕ್ಷರಾದ ಕೆ.ಮೀನಾಕ್ಷಿ, ಸಿ.ಕೆ. ಚಂದ್ರಕಲಾ ಮತ್ತು ಬಾಲಕೃಷ್ಣ ಸುವರ್ಣ ಉಪಸ್ಥಿತರಿದ್ದರು
Click this button or press Ctrl+G to toggle between Kannada and English