ಲಕ್ಷದ್ವೀಪ ಆಡಳಿತ ಕಚೇರಿ ಕಟ್ಟಡ ನಿರ್ಮಾಣಕ್ಕೆ ಸಿಆರ್‌ಝಡ್ ಎನ್‌ಓಸಿ

8:46 PM, Monday, June 29th, 2015
Share
1 Star2 Stars3 Stars4 Stars5 Stars
(4 rating, 5 votes)
Loading...
DC crz

ಮಂಗಳೂರು : ಲಕ್ಷದ್ವೀಪ ಆಡಳಿತವು ಮಂಗಳೂರು ಬಂದರು ಪ್ರದೇಶದಲ್ಲಿ ಕಚೇರಿ , ವಸತಿ ಹಾಗೂ ಉಗ್ರಾಣ ಕಟ್ಟಡಗಳ ನಿರ್ಮಾಣಕ್ಕೆ ನಿರಾಕ್ಷೇಪಣ ಪತ್ರ ನೀಡಲು ಜಿಲ್ಲಾ ಕರಾವಳಿ ವಲಯ ನಿರ್ವಹಣಾ ಸಮಿತಿ(ಸಿಆರ್‌ಝಡ್) ಸಭೆಯಲ್ಲಿ ಇಂದು ನಿರ್ಧರಿಸಲಾಯಿತು.

ಸೋಮವಾರ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಿತಿಯ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲಾಯಿತು. ಲಕ್ಷದ್ವೀಪ ಆಡಳಿತವು ಮಂಗಳೂರು ಹಳೇ ಬಂದರು ಪ್ರದೇಶದಲ್ಲಿ ತನ್ನದೇ ಜಮೀನು ಹೊಂದಿದೆ. ಕರಾವಳಿ ವಲಯ ಅಧಿಸೂಚನೆಯಂತೆ ಈ ಸ್ಥಳವು ವಲಯದಿಂದ ಹೊರಗಿದ್ದು, ಸಿಆರ್‌ಝಡ್ 2ನೇ ವರ್ಗದಲ್ಲಿ ಬರುತ್ತದೆ. ಪ್ರಸ್ತುತ ಲಕ್ಷದ್ವೀಪ ಆಡಳಿತವು ಈ ಪ್ರದೇಶದಲ್ಲಿ ಕಟ್ಟಡ, ವಸತಿ ಮತ್ತು ಉಗ್ರಾಣ ನಿರ್ಮಾಣಕ್ಕೆ ನಿರಾಕ್ಷೇಪಣಾ ಪತ್ರ ಕೋರಿ ಸಮಿತಿಯ ಮುಂದೆ ಅರ್ಜಿ ಸಲ್ಲಿಸಿದ್ದು, ನಿಯಮಾನುಸಾರ ಈ ಸ್ಥಳದಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಅವಕಾಶವಿದೆ. ಸ್ಥಳೀಯ ಪಟ್ಟಣ ಮತ್ತು ಗ್ರಾಮಾಂತರ ಯೋಜನಾ ನಿಯಮಾವಳಿಯಂತೆ ಕಟ್ಟಡ ನಿರ್ಮಾಣಕ್ಕೆ ನಿರಾಕ್ಷೇಪಣೆ ನೀಡಲು ಸಭೆ ತಿರ್ಮಾನಿಸಿತು.

ಬೆಂಗರೆ ಗ್ರಾಮದಲ್ಲಿ ಮಂಗಳೂರು ಪೊಲೀಸ್ ಆಯುಕ್ತರ ವ್ಯಾಪ್ತಿಯ ಪೊಲೀಸ್ ಕಲ್ಯಾಣ ಕಾರ್ಯಕ್ರಮ ಕಟ್ಟಡ, ಕ್ಯಾಂಟೀನ್, ಪೊಲೀಸ್ ವಸತಿಗೃಹ ಮತ್ತು ನಗರ ಸಶಸ್ತ್ರ ಮೀಸಲು ಪಡೆ ಕಚೇರಿ, ಕವಾಯತು ಮೈದಾನ ನಿರ್ಮಾಣಕ್ಕೆ ನಿರಾಕ್ಷೇಪಣಾ ಪತ್ರ ಕೋರಿ ಸಮಿತಿಗೆ ಅರ್ಜಿ ಸಲ್ಲಿಕೆಯಾಗಿದ್ದು, ಈ ಪೈಕಿ ಕವಾಯತು ಮೈದಾನ ಮತ್ತು ಸಿಎಆರ್ ಕಚೇರಿ ನಿರ್ಮಾಣಕ್ಕೆ ಪ್ರಸ್ತಾವಿತ ಸ್ಥಳವು ಸಿಆರ್‌ಝಡ್-೧ರ ವ್ಯಾಪ್ತಿಯಲ್ಲಿ ಬರುತ್ತಿದೆ. ಈ ನಿಟ್ಟಿನಲ್ಲಿ ಸ್ಥಳ ಪರಿಶೀಲನೆ ನಡೆಸಿ, ಮುಂದಿನ ಸಭೆಯಲ್ಲಿಡಲು ತೀರ್ಮಾನಿಸಲಾಯಿತು.

ಅದೇ ರೀತಿ, ತಣ್ಣೀರುಬಾವಿಯಲ್ಲಿ ರಫ್ತಾರ್ ಟರ್ಮಿನಲ್ ಸಂಸ್ಥೆಯು ರಾಸಾಯನಿಕ ಉತ್ಪನ್ನಗಳ ದಾಸ್ತಾನು ಸೌಕರ್ಯ ನಿರ್ಮಿಸಲು ಕೋರಿ ಸಲ್ಲಿಸಿದ ಅರ್ಜಿಯ ಬಗ್ಗೆಯೂ ಅಧಿಕಾರಿಗಳು ಮತ್ತು ಸಮಿತಿಯ ಸದಸ್ಯರೊಂದಿಗೆ ಸ್ಥಳ ಪರಿಶೀಲನೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀವಿದ್ಯಾ, ಸಿಆರ್‌ಝಡ್ ಪ್ರಾದೇಶಿಕ ನಿರ್ದೇಶಕ ಚಂದ್ರಶೇಖರ್ ಎಸ್.ಜೆ., ಮೂಡಾ ಆಯುಕ್ತ ಮುಹಮದ್ ನಝೀರ್, ಮೀನುಗಾರಿಕಾ ಇಲಾಖಾ ಉಪನಿರ್ದೇಶಕ ಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English