ಮಂಗಳೂರು: ಮಹಿಳಾ ಸಂಘಗಳ ಜಾಲ, ಮಂಗಳೂರು ಇದರ ಆಶ್ರಯದಲ್ಲಿ ಇಂದು 101ನೇ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಯಿತು.. ಇದರ ಅಂಗವಾಗಿ ಇಂದು ಬೆಳಿಗ್ಗೆ 9.30 ಕ್ಕೆ ಜ್ಯೋತಿ ಸರ್ಕಲ್ ನಲ್ಲಿ ಜಾಥಾವನ್ನು ಉದ್ಘಾಟಿಸಲಾಯಿತು. ಉದ್ಘಾಟನಾ ಸಮಾರಂಭದಲ್ಲಿ ಶ್ರೀಮತಿ ಮೀನಾ ಕೊರಗ, ವಾಮಂಜೂರು, ಮಂಗಳೂರು, ಸ್ವಚ್ಛತಾ ಕಾರ್ಮಿಕರು, ಶ್ರೀಮತಿ ವಿಜಯಲಕ್ಷ್ಮೀ ಪೂಜಾರ್ತಿ, ಶ್ರಮಿಕ ರೈತ ಮಹಿಳೆ, ನೀರುಮಾರ್ಗ, ಡಾ| ರತಿ ರಾವ್, ಸಮತಾ ವೇದಿಕೆ, ಮೈಸೂರು, ಶ್ರೀಮತಿ ಮರಿಯಮ್ಮ ಥಾಮಸ್, ಕಾರ್ಪೋರೇಟರ್ ಮಂಗಳೂರು, ಶ್ರೀಮತಿ ಶಹನಾಜ್ ಎಂ, ಸಂಪಾದಕರು, ಅನುಪಮಾ ಮಾಸಪತ್ರಿಕೆ ಮಂಗಳೂರು ಉಪಸ್ಥಿತರಿದ್ದರು.
ಜಾಥದಲ್ಲಿ ಮಹಿಳೆಯರು ಘೋಷಣಾ ಫಲಕಗಳನ್ನಿಡಿದು ಪುರಭವನದತ್ತ ಸಾಗಿದರು. ಬಳಿಕ ಪುರಭವನದಲ್ಲಿ ಮಹಿಳಾ ಸಮಾವೇಶವು ವಿವಿಧ ವಯೋಮಾನದ ಮಹಿಳೆಯರಿಂದ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಶ್ರೀಮತಿ ಶೈಲಜಾ ಭಟ್, ದ.ಕ.ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಸಮಾವೇಶದ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಶ್ರೀಮತಿ ಮಧು ಭೂಷಣ್, ವಿಮೋಚನಾ ಸಂಸ್ಥೆ, ಬೆಂಗಳೂರು ಮಾತನಾಡಿ, ಮಹಿಳೆ ಮದುವೆ ಎಂಬ ಬಂಧನದಿಂದ ಚಡಪಡಿಸುತ್ತಿದ್ದಾಳೆ. ವರದಕ್ಷಿಣೆ, ಕಟ್ಟುಪಾಡುಗಳಿಂದ ವಿಮೋಚನೆಗೊಳ್ಳಬೇಕು. ಮದುವೆ ಒಂದು ಸಾಮಾಜಿಕ ವ್ಯವಸ್ಥೆ. ಅದನ್ನು ಅಲುಗಾಡಿಸಲು ಸಾಧ್ಯವಾಗದ ಸುಳಿಯಲ್ಲಿ ಮಹಿಳೆ ಇದ್ದಾಳೆ. ಮದುವೆಯಾದ ಮಾತ್ರಕ್ಕೆ ಹೆಣ್ಣಿಗೆ ಭದ್ರತೆಯಿಲ್ಲ ಅಲ್ಲೂ ಅವಳಿಗೆ ನರಕಯಾತನೆ ಇದೆ. ಹೆಣ್ಣನ್ನು ಗಂಡಸರು ಶೋಷಣೆಗೊಳಪಡೆಸುವುದನ್ನು ನಿಲ್ಲಿಸಬೇಕು ಎಂದು ಹೇಳಿದರು.
ರೋಶನಿ ನಿಲಯದ ರೀಟಾ ನೋರೋನ್ಹಾ ಪ್ರಸ್ತಾವನೆಗೈದು, ಮಹಿಳೆಯರಿಗಾಗಿ ದುಡಿಯುವ ಪುರುಷರಿದ್ದಾರೆ, ಹಲವಾರು ಸಂಘಟನೆಗಳಿವೆ. ಒಬ್ಬ ಮಹಿಳೆಗೆ ನೋವಾದರೆ ಎಲ್ಲರೂ ಸೇರಿ ಪ್ರತಿಭಟಿಸಬೇಕು. ಸಮಾಜದಲ್ಲಿ ಮಹಿಳೆಯೂ ಒಬ್ಬ ಪ್ರಜೆ, ಅವಳ ಎಲ್ಲಾ ಹಕ್ಕುಗಳನ್ನು ರಕ್ಷಿಸಬೇಕು, ಎಂದು ಹೇಳಿದರು.
ಶ್ರೀಮತಿ ಶ್ಯಾಮಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಡಾ| ಜೆಸಿಂತಾ ಡಿ ಸೋಜಾ, ಪ್ರಾಂಶುಪಾಲರು ರೋಶನಿ ನಿಲಯ ಮಂಗಳೂರು ವೇದಿಕೆಯಲ್ಲಿಉಪಸ್ಥಿತರಿದ್ದರು.
ಶ್ರೀಮತಿ ಮಲ್ಲಿನ್ ಮಾರ್ಟಿನ್ ಸ್ವಾಗತಿಸಿದರು. ಸಮಾವೇಶದ ಸಮಾರೋಪ ಕಾರ್ಯಕ್ರಮ ಮದ್ಯಾಹ್ನ 3.30 ಕ್ಕೆ ನಡೆಯಿತು.
Click this button or press Ctrl+G to toggle between Kannada and English