ಧರ್ಮಸ್ಥಳ : ಯಕ್ಷಗಾನಕ್ಕೆ ಮತ್ತು ಪುರಾಣಗಳಿಗೆ ಅವಿನಾಭಾವ ಸಂಬಂಧವಿದೆ. ಯಕ್ಷಗಾನಕ್ಕೆ ಪುರಾಣಗಳೇ ಆಕರವಾಗಿದ್ದು ಧರ್ಮಸ್ಥಳದಲ್ಲಿ ಕಳೆದ 40 ವರ್ಷಗಳಿಂದ ಪ್ರತಿವರ್ಷ ಎರಡು ತಿಂಗಳ ಕಾಲ ಪುರಾಣ ವಾಚನ – ಪ್ರವಚನ ನಡೆಸುತ್ತಿರುವುದು ಶ್ಲಾಘನೀಯವಾಗಿದೆ.
ಇದರಿಂದಾಗಿ ಧರ್ಮ, ಶಾಸ್ತ್ರ ಮತ್ತು ಪುರಾಣಗಳಲ್ಲಿ ಜನರಿಗೆ ಆಸಕ್ತಿ ಉಂಟಾಗಿ ಧರ್ಮ ಜಾಗೃತಿಯಾಗುತ್ತದೆ. ಆರೋಗ್ಯಪೂರ್ಣ ಸಮಾಜ ನಿರ್ಮಾಣವಾಗುತ್ತದೆ ಎಂದು ಬಲಿಪ ನಾರಾಯಣ ಭಾಗವತರು ಹೇಳಿದರು.
ಧರ್ಮಸ್ಥಳದಲ್ಲಿ ಪ್ರವಚನ ಮಂಟಪದಲ್ಲಿ ಗುರುವಾರ ತೊರವೆ ರಾಮಾಯಣ ಮಹಾಕಾವ್ಯದ ವಾಚನ – ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
1951 ರಲ್ಲಿ ಕೀರ್ತಿಶೇಷ ಮಂಜಯ್ಯ ಹೆಗ್ಗಡೆಯವರ ಕಾಲದಿಂದಲೂ ಧರ್ಮಸ್ಥಳದೊಂದಿಗೆ ತನಗೆ ಇದ್ದ ಆತ್ಮೀಯ ಸಂಬಂಧವನ್ನು ಕೃತಜ್ಞತೆಯಿಂದ ಸ್ಮರಿಸಿದ ಅವರು ಧರ್ಮಸ್ಥಳ ಮೇಳದಲ್ಲಿ ಭಾಗವತರಾಗಿ ಕೆಲಸ ಮಾಡಿದ ಸಂದರ್ಭವನ್ನು ವಿವರಿಸಿದರು.
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಪುರಾಣಗಳಲ್ಲಿ ನಮ್ಮ ಬದುಕಿನ ಎಲ್ಲಾ ಸಮಸ್ಯೆಗಳಿಗೆ ಸೂಕ್ತ ಪರಿಹಾರವಿದೆ. ಪುರಾಣ ವಾಚನ – ಪ್ರವಚನ ಶ್ರವಣದಿಂದ ಶ್ರೋತೃಗಳಲ್ಲಿ ಕುತೂಹಲ ಮೂಡಿ ಹೆಚ್ಚಿನ ಅಧ್ಯಯನಕ್ಕೆ ಅವಕಾಶವಾಗುತ್ತದೆ. ಸಮಯದ ಸದುಪಯೋಗದೊಂದಿಗೆ ಶ್ರದ್ಧಾ-ಭಕ್ತಿಯಿಂದ ದೇವರ ಸೇವೆಯನ್ನು ಮಾಡುವ ಸದವಕಾಶ ಇದಾಗಿದೆ ಎಂದು ಹೇಳಿದರು.
ಹವ್ಯಾಸಿ ಯಕ್ಷಗಾನ ಕಲಾವಿದ ಉಜಿರೆ ಅಶೋಕ ಭಟ್ ಮಾತನಾಡಿ, ಪುರಾಣ ವಾಚನ – ಪ್ರವಚನ ಕೇಳುವುದರಿಂದ ನಮ್ಮಲ್ಲಿ ಜಿಜ್ಞಾಸೆ ಹೆಚ್ಚಾಗಿ ಓದುವ ಹವ್ಯಾಸ ಬೆಳೆಯುತ್ತದೆ ಎಂದರು.
ಹೇಮಾವತಿ ವಿ. ಹೆಗ್ಗಡೆ ಉಪಸ್ಥಿತರಿದ್ದರು.
ಬಲಿಪ ನಾರಾಯಣ ಭಾಗವತರನ್ನು ಹೆಗ್ಗಡೆಯವರು ಸನ್ಮಾನಿಸಿದರು.
Click this button or press Ctrl+G to toggle between Kannada and English