ಮತ್ತಷ್ಟು ಬಿರುಸುಗೊಂಡ ಐಎಸ್‌ಪಿಆರ್‌ಎಲ್ ಪೈಪ್‌ಲೈನ್ ವಿರೋಧಿ ಹೋರಾಟ

11:38 PM, Monday, July 20th, 2015
Share
1 Star2 Stars3 Stars4 Stars5 Stars
(5 rating, 4 votes)
Loading...
pipe line

ಸುರತ್ಕಲ್ : ದಕ್ಷಿಣ ಕನ್ನಡ ಜಿಲ್ಲಾ ಜನಜಾಗೃತಿ ಸಮಿತಿ ಹಮ್ಮಿಕೊಂಡ ದ.ಕ. ಜಿಲ್ಲೆಯ 17 ಗ್ರಾಮಗಳ ಸಂತ್ರಸ್ತರ ಐಎಸ್‌ಪಿಆರ್‌ಎಲ್ ಪೈಪ್ ಲೈನ್ ವಿರೋಧಿ ಹೋರಾಟದ ಸಭೆಯ ಸುರತ್ಕಲ್‌ನ ಲಯನ್ಸ್ ಕ್ಲಬ್‌ನಲ್ಲಿ ನಡೆಯಿತು. ಈ ಸಭೆಯಲ್ಲಿ ಸಾಮಾಜಿಕ ಹೋರಾಟಗಾರರಾದ ಗ್ರೆಗೋರಿ ಪತ್ರಾವೋ ಮತ್ತು ಮುನೀರ್ ಕಾಟಿಪಳ್ಳ ಭಾಗವಹಿಸಿ ಹೋರಾಟಕ್ಕೆ ಬೆಂಬಲ ಸೂಚಿಸಿದರು.

ಕೆಎಐಡಿಬಿಯು ಪೈಪ್‌ಲೈನ್ ಸಂತ್ರಸ್ತರಿಗೆ ಹಿಂದೆ ಘೋಷಿಸಿದ ಪರಿಹಾರ ಮೊತ್ತದ ಶೇ 40 ರಷ್ಟು ಹೆಚ್ಚುವರಿ ಮಾಡಿ ನಾಲ್ಕು ಪಟ್ಟು ಹೆಚ್ಚು ಮಾಡಲಾಗಿದೆ ಎಂದು ಸಂತ್ರಸ್ತರನ್ನು ದಾರಿ ತಪ್ಪಿಸಿ ಪರಿಹಾರ ಪಡೆದುಕೊಳ್ಳಲು ಪುಸಲಾಯಿಸುತ್ತಿದೆ. ಯಾವ ಸಂತ್ರಸ್ತರೂ ಪರಿಹಾರ ಧನವನ್ನು ಪಡೆಯಬಾರದು ಎಂದು ಜನಜಾಗೃತಿ ವೇದಿಕೆಯ ಸಂಚಾಲಕ ಚಿತ್ತರಂಜನ್ ಭಂಡಾರಿ ಕರೆ ನೀಡಿದರು. ಕೆಲವು ಸಂತ್ರಸ್ತರಿಗೆ ಡಿಡಿ ಕಳುಹಿಸಿ ಪರಿಹಾರ ಧನ ಪಡೆಯಲು ಒತ್ತಾಯಿಸಲಾಗುತ್ತಿದೆ. ಕೆಎಐಡಿಬಿಯ ಈ ತಂತ್ರವನ್ನು ವಿರೋಧಿಸುವುದರ ಮೂಲಕ ಪ್ರತಿಭಟನೆ ಸಲ್ಲಿಸಬೇಕೆಂದು ಈ ಸಂದರ್ಭದಲ್ಲಿ ಹೇಳಿದರು.

ಸಭೆಯಲ್ಲಿ ಭಾಗವಹಿಸಿದ ಮಂಗಳೂರು ಸೋಲೂರು ಪೈಪ್‌ಲೈನ್ ಸಂತ್ರಸ್ಥರ ಸಮಿತಿಯ ಅಧ್ಯಕ್ಷ ಕೃಷ್ಣಪ್ರಸಾದ್‌ರೈ ಮಾಗದರ್ಶನ ನೀಡುತ್ತಾ ಕಾನೂನು ಹೋರಾಟ ಮಾಡುವುದರ ಮೂಲಕ ಸರಕಾರದ 1992 ನೇ ವರ್ಷದ ಸ್ವಾಧೀನ ಮಸೂದೆಗೆ ತಿದ್ದುಪಡಿ ತರುವ ಪ್ರಯತ್ನವನ್ನು ಮಾಡಬೇಕೆಂದು ಹೇಳಿದರು.

ಸಾಮಾಜಿಕ ಹೋರಾಟಗಾರ ಗ್ರೆಗೊರಿ ಪತ್ರಾವೊ ಮಾತನಾಡುತ್ತಾ ರೈತರಿಂದ ಭೂಮಿಯನ್ನು ಕಡಿಮೆ ದರಕ್ಕೆ ಪಡೆದು ಕೈಗಾರಿಕೆಗಳಿಗೆ ಕೋಟ್ಯಂತರ ರೂಪಾಯಿಗಳಿಗೆ ಮಾರಾಟ ಮಾಡಲಾಗುತ್ತಿದೆ. ಕೆಐಡಿಬಿ ಅಧಿಕಾರಿಗಳು ಜನರಿಗೆ ಯಾವುದೇ ಮಾಹಿತಿ ನೀಡದೆ ವಂಚಿಸುತ್ತಿದ್ದಾರೆ. ಮಾಹಿತಿ ಹಕ್ಕಿನ ಕಾನೂನು ಉಪಯೋಗಿಸಿ ಸೂಕ್ತ ಮಾಹಿತಿಗಳನ್ನು ಪಡೆದು ಜನರಿಗಾಗುತ್ತಿರುವ ವಂಚನೆಯನ್ನು ಪ್ರತಿಭಟಿಸಬೇಕು. ಪರಿಹಾರ ಧನವನ್ನು ನ್ಯಾಯಾಲಯದಲ್ಲಿ ಠೇವಣಿ ಇಡುವುದಾಗಿ ಕೆಎಐಡಿಬಿ ಸಂತ್ರಸ್ತರನ್ನು ಹೆದರಿಸುತ್ತಿದೆ. ಈ ಬೆದರಿಕೆಗೆ ಬಗ್ಗಬಾರದು. ಠೇವಣಿ ಇಟ್ಟ ಹಣಕ್ಕೆ ಶೇ.15 ಬಡ್ಡಿ ನೀಡಲಾಗುತ್ತದೆ. ಸಂತ್ರಸ್ತರ ಹೋರಾಟಕ್ಕೆ ಸರ್ವ ಸಹಕಾರವನ್ನೂ ಸಾಮಾಜಿಕ ಹೋರಾಟಗಾರನ ನೆಲೆಯಲ್ಲಿ ನೀಡಲು ಸಿದ್ಧ ಎಂದು ಹೇಳಿದರು.
ರಾಜಕಾರಣಿಗಳು ಜನರ ಸಮಸ್ಯೆಗಳ ಬಗ್ಗೆ ಸ್ಪಂದಿಸದೆ ಜನರಿಗೆ ತೊಂದರೆ ನೀಡುತ್ತಿರುವವರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಜನಾಂದೋಲನ ಮಾಡುವುದರ ಮೂಲಕ ಜನತೆ ತನ್ನ ಹಿತಾಸಕ್ತಿಯನ್ನು ಸಾಧಿಸಬೇಕು. ಐಎಸ್‌ಪಿಆರ್‌ಎಲ್ ವಿರೋಧಿ ಹೋರಾಟದಲ್ಲಿ ಎಲ್ಲಾ ರೀತಿಯ ಸಹಕಾರವನ್ನು ನೀಡಲಾಗುವುದು ಎಂದು ಸಾಮಾಜಿಕ ಹೋರಾಟಗಾರ ಮುನೀರ್ ಕಾಟಿಪಳ್ಳ ತಿಳಿಸಿದರು.

ಸೂರಿಂಜೆ ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷ ವಿನೀತ್ ಶೆಟ್ಟಿ ಮಾತನಾಡುತ್ತಾ ರೈತರು ಆತ್ಮಹತ್ಯೆಯನ್ನು ಮಾಡಿದ ನಂತರ ಅವರ ಮನೆಗೆ ರಾಜಕಾರಣಿಗಳು ಭೇಟಿ ನೀಡುತ್ತಾರೆ. ಆತ್ಮಹತ್ಯೆಯ ಮೊದಲೇ ರೈತರ ಸಮಸ್ಯೆಗಳನ್ನು ಅವರು ಆಲಿಸುವುದಿಲ್ಲ. ಐಎಸ್‌ಪಿಆರ್‌ಎಲ್ ಪೈಪ್‌ಲೈನ್ ಸಮಸ್ಯೆಯು ಇದೇ ರೀತಿಯದ್ದಾಗಿದೆ. ಪೈಪ್‌ಲೈನ್ ಕಾಮಗಾರಿಯಿಂದ ಬೆಳೆ ಮತ್ತು ಕೃಷಿ ಜಮೀನು ನಾಶವಾಗಿ ರೈತ ಆತ್ಮಹತ್ಯೆ ಮಾಡಿಕೊಳ್ಳುವಂತಾಗಬಹುದು ಎಂದರು.

ಪತ್ರಕರ್ತ ಜಯರಾಂ ಶ್ರೀಯಾನ್ ಸುರತ್ಕಲ್ ಸಂತ್ರಸ್ಥರ ಸಮಸ್ಯೆ ಪರಿಹಾರಕ್ಕೆ ಸೂಕ್ತ ಮಾರ್ಗೋಪಾಯವನ್ನು ಸೂಚಿಸಿದರು. ಪುಷ್ಪರಾಜ್ ಶೆಟ್ಟಿ ಮದ್ಯ, ಸಮಿತಿಯ ಕಾನೂನು ಸಲಹೆಗಾರ ಜಗದೀಶ ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀಧರ ಶೆಟ್ಟಿ ಕುತ್ತೆತ್ತೂರು ಸ್ವಾಗತಿಸಿದರು.

ದ.ಕ. ಜಿಲ್ಲೆಯ ಸಂತ್ರಸ್ಥ 17 ಗ್ರಾಮಗಳ ಪಂಚಾಯತ್ ಸದಸ್ಯರು, ಮಾಜಿ ಆಧ್ಯಕ್ಷರು, ಉಪಾಧ್ಯಕ್ಷರು ಸಭೆಯಲ್ಲಿ ಭಾಗವಹಿಸಿ ಚರ್ಚಿಸಿದರು. ಕೆಐಡಿಬಿಐ ಜನರನ್ನು ವಂಚಿಸುವ ಕೆಲಸವನ್ನು ಮುಂದುವರಿಸಿದ್ದೇ ಆದರೆ ಸಂತ್ರಸ್ತರು ಅದರ ಕಚೇರಿಗೆ ಮುತ್ತಿಗೆ ಹಾಕಬೇಕಾಗಬಹುದು ಎಂದು ಈ ಸಂದರ್ಭದಲ್ಲಿ ಎಚ್ಚರಿಕೆಯನ್ನೂ ನೀಡಲಾಯಿತು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English