ಮಂಗಳೂರು : MRPL ಕೋಕ್, ಸಲ್ಫರ್ ಘಟಕದ ಮಾಲಿನ್ಯಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದ, ಕೋಕ್, ಸಲ್ಫರ್ ಘಟಕದ ಪರವಾನಿಗೆ ನವೀಕರಿಸಲು ಮುಂದಾಗಿರುವ ಮಾಲಿನ್ಯ ನಿಯಂತ್ರಣ ಮಂಡಳಿಯ ಕ್ರಮವನ್ನು ಖಂಡಿಸಿ, ಆಗಸ್ಟ್ ೩ರಂದು ’ನಾಗರಿಕ ಹೋರಾಟ ಸಮಿತಿ, ಜೋಕಟ್ಟೆ’ ಬೈಕಂಪಾಡಿಯಲ್ಲಿರುವ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದೆ.
ನಾಗರಿಕ ಹೋರಾಟ ಸಮಿತಿಯ ಮುನೀರ್ ಕಾಟಿಪಳ್ಳ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, MRPL ಕೋಕ್, ಸಲ್ಫರ್ ಘಟಕದ ಮಾಲಿನ್ಯದ ವಿರುದ್ಧ ಕಳೆದ ಹತ್ತು ತಿಂಗಳುಗಳಿಂದ ಜೋಕಟ್ಟೆ ನಾಗರಿಕರು ತೀವ್ರ ರೀತಿಯ ಹೋರಾಟಗಳನ್ನು ನಡೆಸುತ್ತಿದ್ದಾರೆ. ಹೋರಾಟದ ತೀವ್ರತೆಗೆ ಎಚ್ಚೆತ್ತುಕೊಂಡ ಮಾಲಿನ್ಯ ನಿಯಂತ್ರಣ ಮಂಡಳಿಯು, ಮಾಲಿನ್ಯದ ಪ್ರಮಾಣ ಜನರ ಆರೋಗ್ಯದ ಮೇಲಿನ ಪರಿಣಾಮಗಳನ್ನು ಅಧ್ಯಯನ ನಡೆಸಿ, MRPL ಗೆ ನಾಲ್ಕು ಬಾರಿ ಶೋಕಾಸ್ ನೋಟೀಸ್ ನೀಡಿದೆ. ಘಟಕವನ್ನು ಯಾಕೆ ಮುಚ್ಚಬಾರದು ಎಂದು ಕಂಪೆನಿಯನ್ನು ಎಚ್ಚರಿಸಿದೆ. ಆದರೆ ಕಂಪೆನಿಯು ಯಾವುದೇ ಪರಿಹಾರಗಳನ್ನು ಕಂಡುಕೊಳ್ಳದೆ ಉತ್ಪಾದನೆಯನ್ನು ಮುಂದುವರಿಸಿದೆ. ಈಗ ಜೂನ್ ೩೦ಕ್ಕೆ ಕೋಕ್, ಸಲ್ಫರ್ ಘಟಕದ ಪರವಾನಿಗೆಯ ಅವಧಿ ಮುಗಿದಿದ್ದು ಮಾಲಿನ್ಯ ನಿಯಂತ್ರಣ ಮಂಡಳಿಯು ಪರವಾನಿಗೆಯನ್ನು ಇನ್ನೂ ನವೀಕರಿಸಿಲ್ಲ, ಆದರೂ ನಿಯಮಬಾಹಿರವಾಗಿ ಕಂಪೆನಿ ಉತ್ಪಾದನೆಯಲ್ಲಿ ತೊಡಗಿದೆ. ಈ ರೀತಿಯ ಅಕ್ರಮಗಳಿಗಾಗಿ ಘಟಕಕ್ಕೆ ಬೀಗ ಜಡಿಯಬೇಕಾದ ಮಾಲಿನ್ಯ ನಿಯಂತ್ರಣ ಮಂಡಳಿಯು MRPL ನ ಒತ್ತಡಗಳಿಗೆ ಬಲಿಯಾಗಿ ಪರವಾನಿಗೆ ನವೀಕರಿಸಲು ಹಿಂಬಾಗಿಲಿನಿಂದ ಮುಂದಾಗಿದೆ.
ಮಾಲಿನ್ಯ ನಿಯಂತ್ರಣ ಮಂಡಳಿಯ ಇಂತಹ ಬೇಜವಾಬ್ದಾರಿ ವರ್ತನೆಯನ್ನು ಖಂಡಿಸಿ, ಯಾವುದೇ ಕಾರಣಕ್ಕೂ ಪರವಾನಿಗೆ ನವೀಕರಿಸಬಾರದು ಎಂದು ಒತ್ತಾಯಿಸಿ, ತಕ್ಷಣ ಕೋಕ್, ಸಲ್ಫರ್ ಘಟಕವನ್ನು ಮುಚ್ಚಲು ಆಗ್ರಹಿಸಿ ಆಗಸ್ಟ್ ೩ರ ಬೆಳಿಗ್ಗೆ ಬೈಕಂಪಾಡಿ ಜಂಕ್ಷನ್‌ನಿಂದ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿಯವರೆಗೆ ಬೃಹತ್ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.
Click this button or press Ctrl+G to toggle between Kannada and English