ಕೋಡ್ಲು ನಿರ್ದೇಶನದ ತುಳು ಚಲನಚಿತ್ರ ’ಏರೆಗ್ಲಾ ಪನೊಡ್ಚಿ’ ಮುಕ್ತಾಯ ಹಂತದಲ್ಲಿ

12:34 PM, Sunday, August 2nd, 2015
Share
1 Star2 Stars3 Stars4 Stars5 Stars
(5 rating, 6 votes)
Loading...
Eregla Panodchi

ಮಂಗಳೂರು : ಕನ್ನಡದ ಹೆಸರಾಂತ ಚಿತ್ರ ನಿರ್ದೇಶಕ ಕೋಡ್ಲು ರಾಮಕೃಷ್ಣ ಅವರ 25ನೇ ಚಿತ್ರ ’ಏರೆಗ್ಲಾ ಪನೊಡ್ಚಿ’ ಮುಕ್ತಾಯ ಹಂತದಲ್ಲಿದೆ. ವಠಾರವೊಂದರಲ್ಲಿ ನಡೆಯುವ ನಿತ್ಯ ಘಟನೆಯನ್ನಾಧರಿಸಿ ಚಿತ್ರಕಥೆ ರಚಿಸಲಾಗಿದ್ದು ಪ್ರತೀ ಸನ್ನಿವೇಶ ಕೂಡಾ ಇಂದಿನ ಕಾಲಕ್ಕೆ ತಕ್ಕುದಾಗಿದೆ. ಮದ್ಯಮ ವರ್ಗದ ಹೆಂಗಸರ ಸುತ್ತ ನಡೆಯುವ ಕತೆ ಇದೆ. ವಠಾರದಲ್ಲಿ ಬಾಡಿಗೆಗೆ ಇರುವ ನಾಲ್ಕು ಸಂಸಾರ. ಹೆಂಗಸರಿಗೆಲ್ಲಾ ಸ್ವಂತ ಮನೆ ಬೇಕೆಂಬ ಆಸೆ. ಆದರೆ ಗಂಡಸರಿಗೆ ಮನೆಯ ಬಗ್ಗೆ ಯಾವುದೇ ರೀತಿಯ ಆಸಕ್ತಿ ಇರುವುದಿಲ್ಲ. ಇದೇ ಸಮಯ ವಠಾರಕ್ಕೆ ಬರುವ ಸಮಾಜಸೇವಕ ಆ ವಠಾರದ ಹೆಂಗಸರ ಮನೆಯ ಆಸೆಗೆ ನೀರೆರೆಯುತ್ತಾನೆ. ಹೀಗೆ ಕತೆಯು ಹಾಸ್ಯದ ಸ್ವರೂಪವನ್ನು ಪಡೆದು ಪ್ರೇಕ್ಷಕರಿಗೆ ಕುತೂಹಲ ಮೂಡಿಸುವ ರೀತಿಯಲ್ಲಿ ಸಾಗುತ್ತದೆ.

ತುಳು ಹಾಗೂ ಕನ್ನಡ ಚಿತ್ರರಂಗದ ಹೆಸರಾಂತ ಕಲಾವಿದರನ್ನು ಒಂದೆಡೆ ಸೇರಿಸಿ ಚಿತ್ರವನ್ನು ನಿರ್ಮಾಣ ಮಾಡಲಾಗಿದೆ.

ಮಂಗಳೂರು, ತೀರ್ಥಹಳ್ಳಿ ಬೆಂಗಳೂರು, ಉಡುಪಿ ಸುತ್ತಮುತ್ತ ಚಿತ್ರದ ಮಾತಿನ ಭಾಗವನ್ನು ಚಿತ್ರೀಕರಿಸಲಾಗಿದ್ದು, ಕರಾವಳಿಯ ಪ್ರವಾಸಿ ತಾಣಗಳಲ್ಲಿ ಹಾಡಿನ ಚಿತ್ರೀಕರಣವನ್ನು ಮುಗಿಸಲಾಗಿದೆ. ಚಿತ್ರದಲ್ಲಿ ಕರಾವಳಿ ಸೊಗಡಿನ ಯಕ್ಷಗಾನದ ದೃಶ್ಯವನ್ನು ಚಿತ್ರೀಕರಿಸಿದ್ದು, ಶೀಘ್ರದಲ್ಲೇ ಚಿತ್ರ ಬಿಡುಗಡೆಯಾಗಲಿದೆ.

ಚಿತ್ರದ ತಾರಾಗಣದಲ್ಲಿ ಶಿವಧ್ವಜ್, ಸಂದೀಪ್ ಶೆಟ್ಟ್ಟಿ, ನೀತೂ, ಅನಿತಾ ಭಟ್, ಇಳಾ ವಿಟ್ಲ, ರಕ್ಷಾ ಪೈ, ಶೋಭಾ ರೈ, ಭೋಜರಾಜ ವಾಮಂಜೂರು, ಅರವಿಂದ್ ಬೋಳಾರ್, ಸುಂದರ ರೈ ಮಂದಾರ, ರವಿ ಸುರತ್ಕಲ್, ಪ್ರದೀಪ್ ಆಳ್ವ, ರೂಪಾ ವರ್ಕಾಡಿ, ಕವಿತಾ ರೈ, ಶಶಿಧರ ಬೆಳ್ಳಾಯರು, ತಮ್ಮ ಲಕ್ಷ್ಮಣ, ರಾಜ್ ಗೋಪಾಲ್ ಜೋಶ್ ಮತ್ತಿತರರು ಇದ್ದಾರೆ.

ಚಿತ್ರಕಥೆ-ನಿರ್ದೇಶನ: ಕೋಡ್ಲು ರಾಮಕೃಷ್ಣ, ಕಥೆ: ಬನಶಂಕರಿ, ನಿರ್ಮಾಪಕರು: ಬಿ.ಎಲ್. ಮುರಳಿ, ಎಸ್.ಕೆ.ಶೆಟ್ಟಿ, ಛಾಯಾಗ್ರಹಣ: ಶಶಿಧರ ಶೆಟ್ಟರ್, ಸಂಭಾಷಣೆ-ಸಹರ್ದೇಶನ: ಸಚಿನ್ ಶೆಟ್ಟಿ, ಕುಂಬ್ಳೆ, ಪ್ರಶಾಂತ್ ಕಲ್ಲಡ್ಕ, ಸಂಕಲನ: ಸುರೇಶ್ ಅರಸ್, ಕಲೆ: ತಮ್ಮ ಲಕ್ಷ್ಮಣ, ಸಂಗೀತ: ಗಿರಿಧರ ದಿವಾನ್, ಸಾಹಿತ್ಯ: ಡಾ.ಉಮೇಶ್, ಮೆನೇಜರ್: ದೇವರಾಜ್(ಆರ್‌ಟಿಒ)
ಕೋಡ್ಲು ರಾಮಕೃಷ್ಣ ಅವರು ಈವರೆಗೆ 24 ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಅವರ ೨೫ನೇ ಸಿನಿಮಾ ’ಏರೆಗ್ಲಾ ಪನೊಡ್ಚಿ’. ಕೋಡ್ಲು ಈ ಹಿಂದೆ ತುಳುವಿನಲ್ಲಿ ರಾತ್ರೆ ಪಗೆಲ್ ಮತ್ತು ತುಡರ್ ಸಿನಿಮಾವನ್ನು ನಿರ್ದೇಶಿಸಿದ್ದರು. ಈ ಪೈಕಿ ತುಡರು ಸಿನಿಮಾಕ್ಕೆ ರಾಜ್ಯ ಪ್ರಶಸ್ತಿಯೂ ಲಭಿಸಿತ್ತು. ’ಏರೆಗ್ಲಾ ಪನೊಡ್ಚಿ’ ಸಿನಿಮಾದಲ್ಲಿ ಕೌಟುಂಬಿಕ ಕಥೆಗೆ ಹಾಸ್ಯದ ಟಚ್ ನೀಡಲಾಗಿದೆ. ಚಿತ್ರದಲ್ಲಿ ಕಮರ್ಷಿಯಲ್ ಅಂಶಗಳನ್ನು ಸೇರಿಸಲಾಗಿದೆ. ತುಳು ರಂಗಭೂಮಿಯ ಬಹುತೇಕ ಕಲಾವಿದರು ಸಿನಿಮಾದಲ್ಲಿರುವುದರಿಂದ ಮನರಂಜನೆಗೆ ಯಾವುದೇ ಕೊರತೆ ಇಲ್ಲ. ಸಂಪೂರ್ಣ ಹಾಸ್ಯದ ಜತೆಗೆ ಸಮಾಜಕ್ಕೆ ಒಳ್ಳೆಯ ಸಂದೇಶವೂ ಚಿತ್ರದಲ್ಲಿದೆ.

ತುಳು ಸಿನಿಮಾರಂಗದಲೀಗ ಚಿತ್ರ ನಿರ್ಮಾಣದ ಸಂಖ್ಯೆ ಹೆಚ್ಚಿದೆ. ಜತೆಗೆ ಒಳ್ಳೆಯ ತುಳು ಸಿನಿಮಾಗಳನ್ನು ನೋಡುವವರು ಮತ್ತು ಪ್ರೋತ್ಸಾಹಿಸುವವರು ಇಲ್ಲಿದ್ದಾರೆ. ತುಳು ಸಿನಿಮಾರಂಗದ ಮಾರ್ಕೆಟ್ ಈಗ ವಿಸ್ತಾರವಾದಂತಿದೆ. ಮುಂಬಾಯಿ, ಮತ್ತು ವಿದೇಶದಲ್ಲೂ ತುಳು ಸಿನಿಮಾಗಳಿಗೆ ಹೆಚ್ಚಿನ ಬೇಡಿಕೆಯೂ ಇರುವುದರಿಂದ ತುಳು ಸಿನಿಮಾ ನಿರ್ಮಾಣಕ್ಕೆ ಕೈಹಾಕಿದ್ದೇನೆ. ಮುಂದೆಯೂ ಕೋಡ್ಲು ಕ್ರಿಯೇಷನ್ಸ್‌ನಿಂದ ತುಳು ಚಿತ್ರವನ್ನು ನಿರ್ಮಾಣ ಮಾಡುತ್ತೇನೆ ಎಂದಿದ್ದಾರೆ ನಿರ್ದೇಶಕ ಕೋಡ್ಲು ರಾಮಕೃಷ್ಣ.

Eregla Panodchi

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English