ಬಿ.ಸಿ.ರೋಡಿನ ಮುಖ್ಯವೃತಕ್ಕೆ ನಾಮಕರಣ ಗೊಂದಲ

8:50 PM, Thursday, August 6th, 2015
Share
1 Star2 Stars3 Stars4 Stars5 Stars
(5 rating, 6 votes)
Loading...
bantwal circle

ಬಂಟ್ವಾಳ: ಡಾ. ಬಾಬಾ ಸಾಹೇಬ್ ಅಂಬೇಡ್ಕ್‌ರ್ ಅವರ ಹೆಸರನ್ನು ತಿರಸ್ಕರಿಸಿ ಬಿ.ಸಿ.ರೋಡಿನ ಮುಖ್ಯವೃತಕ್ಕೆ ಬ್ರಹ್ಮಶ್ರೀ ನಾರಾಯಣ ಗುರು ಹೆಸರಿಡುವ ಬಗ್ಗೆ ಪುರಸಭೆಯ ಸಾಮಾನ್ಯ ಸಭೆ ಕೈಗೊಂಡ ನಿರ್ಣಯದ ಬಗ್ಗೆ ದಲಿತ ಸಮುದಾಯದಿಂದ ಅಪಸ್ವರ ಕೇಳಿ ಬಂದ ಬೆನ್ನಲ್ಲೆ ಮುಖ್ಯ ವೃತ್ತಕ್ಕೆ ಮತ್ತೆ ನಾಮಕರಣ ಗೊಂದಲ ಕಾಡಲಾರಂಭಿಸಿದೆ.

ಹಿರಿಯ ಸ್ವಾತಂತ್ರ್ಯ ಹೋರಾಟಗಾರ, ಶೋಷಿತ ಸಮುದಾಯದ ಪರವಾಗಿ ಹೋರಾಟ ನಡೆಸಿದ ಧೀಮಂತ ನಾಯಕ ಬಂಟ್ವಾಳ ತಾಲೂಕಿನವರೇ ಆದ ಡಾ. ಅಮ್ಮೆಂಬಳ ಬಾಳಪ್ಪ ಅವರ ಹೆಸರಿಡ ಬೇಕೆನ್ನುವ ಒತ್ತಾಯಗಳು ಜನ ಸಮುದಾಯದಿಂದ ಕೇಳಿ ಬಂದಿದೆ. 2002 ರಲ್ಲಿ ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ನಡೆದ ಅಮ್ಮೆಂಬಳ ಬಾಳಪ್ಪ ಸಾರ್ವಜನಿಕ ಅಭಿನಂದನಾ ಸಮಾರಂಭದಲ್ಲಿ ಬಿ.ಸಿ.ರೋಡಿನ ಮುಖ್ಯವೃತ್ತಕ್ಕೆ ಡಾ. ಅಮ್ಮೆಂಬಳ ಬಾಳಪ್ಪ ವೃತ್ತ ಹೆಸರಿಡಬೇಕೆನ್ನುವ ನಿರ್ಣಯವನ್ನು ಕೈಗೊಳ್ಳಲಾಗಿತ್ತು. ಈ ಸಮಾರಂಭದದಲ್ಲಿ ಡಾ. ಬಾಳಪ್ಪನವರ ರಾಜಕೀಯ ಶಿಷ್ಯ, ಮಾಜಿ ಕೇಂದ್ರ ಸಚಿವ ಜಾರ್ಜ್ ಫೆರ್ನಾಂಡೀಸ್, ಆಗಿನ ಆಡಳಿತ ಸುಧಾರಣ ಆಯೋಗದ ಅಧ್ಯಕ, ಮಾಜಿ ಕೇಂದ್ರ ಸಚಿವ ವೀರಪ್ಪ ಮೊಲಿ, ಶಾಸಕ ರಮಾನಾಥ ರೈ, ಹಿರಿಯ ಸಾಹಿತಿ ಕಯ್ಯಾರ ಕಿಂಞಣ್ಣ ರೈ ಮೊದಲಾದ ಗಣ್ಯರು ಸಭೆಯಲ್ಲಿ ಹಾಜರಿದ್ದು ಈ ನಿರ್ಣಯಕ್ಕೆ ಸಮ್ಮತಿ ಸೂಚಿಸಿದ್ದರು. ಜಿ.ಪಂ.ಮಾಜಿ ಸದಸ್ಯ ಎ.ಸಿ. ಭಂಡಾರಿ, ಭೂ ಅಭಿವೃದ್ದಿ ಬ್ಯಾಂಕ್ ಅಧ್ಯಕ್ಷ ಸುದರ್ಶನ ಜೈನ್, ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಡಿ. ಎಂ.ಕುಲಾಲ್ ಮತ್ತಿತರರ ನೇತೃತ್ವದಲ್ಲಿ ಈ ಕಾರ್ಯಕ್ರಮ ಸಂಘಟಿಸಲಾಗಿತ್ತು. ಆದರೆ ಆ ಬಳಿಕ ವೃತ್ತಕ್ಕೆ ಡಾ. ಬಾಳಪ್ಪರ ಹೆಸರನ್ನು ಶಾಶ್ವತಗೊಳಿಸುವ ಪ್ರಕ್ರಿಯೆ ನೆನೆಗುದಿಗೆ ಬಿದ್ದಿತ್ತು. ಈಗ ನಾಮಕರಣಕ್ಕೆ ವಿವಿಧ ಹೆಸರುಗಳು ಕೇಳಿ ಬಂದಿದ್ದು ಗೊಂದಲಕ್ಕೆ ಕಾರಣವಾಗಿರು ಹಿನ್ನೆಲೆಯಲ್ಲಿ ಡಾ. ಬಾಳಪ್ಪರ ಹೆಸರು ಮತ್ತೆ ಜೀವ ಪಡೆದುಕೊಂಡಿದೆ.

ಡಾ. ಬಾಳಪ್ಪರ ಹೆಸರು ಯಾಕೆ?

ಡಾ. ಅಮ್ಮೆಂಬಳ ಬಾಳಪ್ಪ ಹಿರಿಯ ಸ್ವಾತಂತ್ರ್ಯ ಹೋರಾಟಗಾರರು. ಸಮಾಜವಾದಿ ಚಿಂತಕರು. ಸಹಕಾರಿ ಧುರೀಣ, ಕಾರ್ಮಿಕ ಮುಂದಾಳುವಾಗಿದ್ದವರು. ಬಂಟ್ವಾಳ ತಾಲೂಕಿನ ಅಮ್ಮೆಂಬಳ ಅವರ ಹುಟೂರು. ಬಾಳಪ್ಪನವರು ಯಾವುದೇ ಒಂದು ಸಮುದಾಯಕ್ಕೆ ಸೀಮಿತವಾಗಿ ಉಳಿಯದೆ ಎಲ್ಲಾ ಹಿಂದುಳಿದ ಹಾಗೂ ಶೋಷಿತ ಸಮಾಜದ ಅಭಿವೃದ್ದಿಗೆ ಶ್ರಮಿಸಿದವರು. ಸಮಾಜಮುಖಿ ಚಿಂತನೆಗಳೊಂದಿಗೆ ಆದರ್ಶ ಬದುಕು ಸವೆಸಿದವರು. ಆದರೂ ಇತರ ಸ್ವಾತಂತ್ಯ್ರ ಸೇನಾನಿಗಳಿಗೆ ಸಂದ ಗೌರವ ಸ್ವತಃ ಹುಟ್ಟೂರಿನಲ್ಲೇ ಡಾ. ಬಾಳಪ್ಪನವರಿಗೆ ಸಿಕ್ಕಿಲ್ಲ. ಬಾಳಪ್ಪ ಹೆಸರು ಶಾಶ್ವತಗೊಳಿಸುವ ಯಾವುದೇ ಚಟುವಟಿಕೆಗಳು ನಡೆದಿಲ್ಲ. ಈ ನೋವು ಅವರ ಅಭಿಮಾನಿ ವರ್ಗವನ್ನು ಕಾಡುತ್ತಿದೆ.

ಕೊನೆಯ ಪಕ್ಷ ಅವರು ಹುಟ್ಟಿದ ತಾಲೂಕಿನ ಕೇಂದ್ರ ಸ್ಥಾನದ ಮುಖ್ಯವೃತ್ತಕ್ಕಾದರೂ ಅವರ ಹೆಸರು ನಾಮಕರಣ ಮಾಡುವ ಮೂಲಕ ಬಾಳಪ್ಪರ ಹೆಸರು ಚಿರಸ್ಥಾಯಿಗೊಳಿಸ ಬೇಕು, ಬಂಟ್ವಾಳವನ್ನು ಹೊರತು ಪಡಿಸಿದರೆ ಬೇರೆ ಊರುಗಳಲ್ಲಿ ಬಾಳಪ್ಪನವರ ಹೆಸರು ಇಡುವ ಅವಕಾಶಗಳು ಕಡಿಮೆ ಇರುವುದರಿಂದ ಬಿ.ಸಿ.ರೋಡಿನ ಮುಖ್ಯವೃತ್ತಕ್ಕೇ ಬಾಳಪ್ಪರ ಹೆಸರು ಇಡಬೇಕು ಎನ್ನುವುದು ಇದರ ಹಿಂದಿನ ಉದ್ದೇಶ. ಇದೀಗ ಉದ್ಭವ ಗೊಂಡಿರುವ ನಾಮಕರಣದ ಹಿಂದಿನ ಎಲ್ಲಾ ಗೊಂದಲಗಳನ್ನು ನಿವಾರಿಸಿ ಡಾ. ಅಮ್ಮೆಂಬಳ ಬಾಳಪ್ಪನವರ ಹೆಸರು ನಾಮಕರಣ ಮಾಡುವ ನಿಟ್ಟಿನಲ್ಲಿ ಬಾಳಪ್ಪ ಅಭಿಮಾನಿ ಬಳಗ ಸಿದ್ದತೆ ನಡೆಸುತ್ತಿದೆ.

ಬಾಳಪ್ಪರ ಹೆಸರೇ ಸೂಕ್ತ: ಡಾ. ಅಣ್ಣಯ್ಯ ಕುಲಾಲ್

ಬಿ.ಸಿ.ರೋಡಿನ ಮುಖ್ಯವೃತ್ತಕ್ಕೆ ಡಾ. ಅಮ್ಮೆಂಬಳ ಬಾಳಪ್ಪ ಹೆಸರು ಸೂಕ್ತ ಎಂದು ಸಾಮಾಜಿಕ ಹೋರಾಟಗಾರ, ಬಾಳಪ್ಪ ಅಭಿಮಾನಿ ಡಾ.ಅಣ್ಣಯ್ಯ ಕುಲಾಲ್ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಮುಖ್ಯವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣ ಗುರು, ಡಾ. ಬಿ.ಆರ್. ಅಂಬೇಡ್ಕರ್, ಸ್ವಾಮಿ ವಿವೇಕಾನಂದ ಮೊದಲಾದ ಹೆಸರುಗಳು ಕೇಳಿಬಂದಿದೆ. ಆದರೆ ಈ ಮಹಾನ್ ವ್ಯಕ್ತಿಗಳು ಯಾವತ್ತೋ ಜನಮಾನಸದಲ್ಲಿ ಬೆರೆತು ಹೋಗಿರುವುದರಿಂದ ವೃತ್ತ ಹಾಗೂ ರಸ್ತೆಗಳಿಗೆ ಹೆಸರನ್ನಿಡುವ ಅಗತ್ಯತೆ ಕಂಡು ಬರುವುದಿಲ್ಲ. ಆದರೆ ಇದೇ ತಾಲೂಕಿನಲ್ಲಿ ಹುಟ್ಟಿ ಬೆಳೆದು ತನ್ನ ಜೀವನವನ್ನೆಲ್ಲಾ ದೇಶ ಸೇವೆ, ಹಿಂದುಳಿದ ಸಮಾಜದ ಉನ್ನತಿಗಾಗಿ ಶ್ರಮಿಸಿದ ಡಾ. ಅಮ್ಮೆಂಬಳ ಬಾಳಪ್ಪನವರ ಹೆಸರೇ ಇಟ್ಟರೆ ಅವರಿಗೂ ಗೌರವ ಸಲ್ಲಿಸಿದಂತಾಗುತ್ತದೆ. ಈ ನಿಟ್ಟಿನಲ್ಲಿ ಅಮ್ಮೆಂಬಳ ಬಾಳಪ್ಪನವರ ಎಲ್ಲಾ ಅಭಿಮಾನಿಗಳು ಒಗ್ಗಟ್ಟಿನಿಂದ ಶ್ರಮಿಸಬೇಕಾಗಿದೆ ಎಂದಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English