ಶತಾಯುಷಿ, ಕರ್ನಾಟಕ ಏಕೀಕರಣ ಚಳುವಳಿಯ ಮುಂಚೂಣಿಯ ನಾಯಕ, ಕಯ್ಯಾರ ಕಿಞ್ಞಣ್ಣ ರೈ ಇನ್ನು ನೆನಪು ಮಾತ್ರ

12:52 AM, Tuesday, August 11th, 2015
Share
1 Star2 Stars3 Stars4 Stars5 Stars
(5 rating, 6 votes)
Loading...

Kayyara Kinhanna Rai

ಕಾಸರಗೋಡು: ಮಹಾಕವಿ, ಹಿರಿಯ ಸಾಹಿತಿ, ಬಹುಭಾಷಾ ವಿದ್ವಾಂಸ, ಸ್ವಾತಂತ್ರ್ಯ ಹೋರಾಟಗಾರ, ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಮುಂಚೂಣಿಯ ನಾಯಕ, ಕಾಸರಗೋಡು ವಿಲೀನೀಕರಣ ಕ್ರಿಯಾಸಮಿತಿಯ ಪ್ರಧಾನ ಸಂಚಾಕ, ನಾಡೋಜ ಡಾ.ಕಯ್ಯಾರ ಕಿಞ್ಞಣ್ಣ ರೈರವರು, ಕಾಸರಗೋಡಿನ ಬದಿಯಡ್ಕ ಗ್ರಾಮದ ಮನೆಯಲ್ಲಿ ತನ್ನ 101ನೆಯ ಇಳಿ ವಯಸ್ಸಿನಲ್ಲಿ ಭಾನುವಾರ ನಿಧನರಾದರು.

ಅಖಿಲಭಾರತ ಮಟ್ಟದಲ್ಲಿ ಜರುಗಿದ 66 ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಕಯ್ಯಾರ ಕಿಞ್ಞಣ್ಣ ರೈ ಕೇರಳ ರಾಜ್ಯದಲ್ಲಿರುವ ಕಾಸರಗೋಡು ತಾಲೂಕಿನ ಪೆರಡಾಲ ಗ್ರಾಮದಲ್ಲಿ ದುಗ್ಗಪ್ಪ ರೈ-ದೈಯಕ್ಕೆ ದಂಪತಿಗಳ ಮಗನಾಗಿ 1915 ಜೂನ್ 8ರಂದು ಜನಿಸಿದರು. ಕಯ್ನಾರರು ಉಞ್ಞಕ್ಕ ಅವರನ್ನು ಬಾಳ ಸಂಗಾತಿಯಾಗಿ ಸ್ವೀಕರಿಸಿ ಆರು ಮಂದಿ ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣು ಮಕ್ಕಳ ತುಂಬು ಸಂಸಾರದೊಂದಿಗೆ ಬದಿಯಡ್ಕ ಪೆರಡಾಲ ಕವಿತಾ ಕುಟೀರದಲ್ಲಿ ನೆಮ್ಮದಿಯ ಜೀವನ ಸಾಗಿಸಿದವರು. ರೈಗಳ ಮನೆಮಾತು ತುಳು. ರೈಗಳು ಹಲವು ತುಳು ಕವನಗಳನ್ನು, ಲೇಖನಗಳನ್ನು ಬರೆದಿದ್ದಾರೆ. ಪರಿವು ಕಟ್ಟುಜಿ, ರಡ್ಡ್ ಕಣ್ಣ್‌ಡ್ ಸಾರೊ ಎಸಳ್ದ ತಾಮರೆ ಲೆಪ್ಪುನ್ಯೇರ್?, ಬತ್ತನೊ ಈ ಬರ್ಪನೊ ರೈಗಳ ಕೆಲವು ತುಳು ಕವನಗಳು.

ರೈಯವರು ಸಂಸ್ಕೃತ ಮತ್ತು ಕನ್ನಡ ಭಾಷೆಗಳಲ್ಲಿ ವಿದ್ವಾನ್ ಪದವಿ ಪಡೆದ ಬಳಿಕ ಬಿ.ಎ.ಪದವಿಯನ್ನು ಪಡೆದು ಅಧ್ಯಾಪಕ ತರಬೇತಿಯನ್ನು ಪೂರೈಸಿದರು. ಆನಂತರ ಎಂ.ಎ. ಸ್ನಾತಕೋತ್ತರ ಪದವೀಧರರೂ ಆದರು. ಕಾಸರಗೋಡಿನ ಬಳಿಯ ಪೆರಡಾಲ ಗ್ರಾಮದ ನವಜೀವನ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು.

ಕಯ್ಯಾರ ಕಿಞ್ಞಣ್ಣ ರೈಯವರು ಸ್ವಾತಂತ್ರ್ಯಸಂಗ್ರಾಮದಲ್ಲಿ ಹೋರಾಡಿದ್ದಾರೆ. ಹರಿಜನ ಸೇವಕ ಸಂಘಟನೆಯಲ್ಲಿ ದುಡಿದಿದ್ದಾರೆ. ಸ್ಥಳೀಯ ಪಂಚಾಯತಿಯ ಅಧ್ಯಕ್ಷ ಪದವಿಯನ್ನೂ ಅಲಂಕರಿಸಿದ್ದರು. ಕೇರಳ ಸಂಗೀತ ನಾಟಕ ಆಕಾಡೆಮಿಯ ಸದಸ್ಯರೂ ಆಗಿದ್ದರು. ಅಲ್ಲದೆ ಕಾಸರಗೋಡು ತಾಲೂಕನ್ನು ಕರ್ನಾಟಕ ರಾಜ್ಯಕ್ಕೆ ಸೇರಿಸಲು ಸಹ ಹೋರಾಟ ಮಾಡಿದರು. ಕಯ್ಯಾರ ಕಿಞ್ಞಣ್ಣ ರೈಯವರು ಶ್ರೀಮುಖ, ಐಕ್ಯಗಾನ, ಪುನರ್ನವ, ಚೇತನ, ಕೊರಗ, ಶತಮಾನದ ಗಾನ, ಗಂಧವತಿ, ಪ್ರತಿಭಾ ಪಯಸ್ವಿನಿ, ಮೊದಲಾದ ಕನ್ನಡ ಕವನ ಸಂಕಲನಗಳನ್ನಲ್ಲದೆ ಒಂದು ತುಳು ಕವನ ಸಂಕಲನವನ್ನೂ ಹೊರ ತಂದಿದ್ದಾರೆ.

ಕಾರ್ನಾಡ ಸದಾಶಿವರಾವ, ರತ್ನರಾಜಿ, ಏ.ಬಿ.ಶೆಟ್ಟಿ ಮೊದಲಾದವರ ಜೀವನಚರಿತ್ರೆಗಳನ್ನು ಹಾಗು ಕಥಾಸಂಗ್ರಹಗಳನ್ನು ಬರೆದು ಪ್ರಕಟಿಸಿದ್ದಾರೆ. ರಾಷ್ಟ್ರಕವಿ ಗೋವಿಂದ ಪೈಯವರ ಬಗೆಗೆ ಮೂರು ಗ್ರಂಥಗಳನ್ನು ಬರೆದಿದ್ದಾರೆ. ಪಂಚಮಿ ಮತ್ತು ಆಶಾನ್‍ರ ಖಂಡಕಾವ್ಯಗಳು ಎನ್ನುವ ಎರಡು ಅನುವಾದ ಕೃತಿಗಳನ್ನು ರಚಿಸಿದ್ದಾರೆ. ಸಾಹಿತ್ಯದೃಷ್ಟಿ ಎನ್ನುವ ಲೇಖನಸಂಕಲನ ಪ್ರಕಟಿಸಿದ್ದಾರೆ. ಮಕ್ಕಳ ಪದ್ಯಮಂಜರಿ ಎನ್ನುವ ಮಕ್ಕಳ ಕವನ ಸಂಕಲನ ರಚಿಸಿದ್ದಾರೆ. ಭಾರತ ಭಾರತಿ ಪುಸ್ತಕ ಸಂಪದಮಾಲೆಯಲ್ಲಿ ಮಕ್ಕಳಿಗಾಗಿ ಪರಶುರಾಮ ಬರೆದುಕೊಟ್ಟಿದ್ದಾರೆ. ನವೋದಯ ವಾಚನ ಮಾಲೆ ಎನ್ನುವ ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ ಎಂಟು ಪಠ್ಯಪುಸ್ತಕಗಳನ್ನು, ವ್ಯಾಕರಣ ಮತ್ತು ಪ್ರಬಂಧ ಎನ್ನುವ ನಾಲ್ಕು ಕೃತಿಗಳನ್ನು ಹೊರತಂದಿದ್ದಾರೆ. ವಿರಾಗಿಣಿ ಎನ್ನುವುದು ಇವರು ಬರೆದ ನಾಟಕ. ದುಡಿತವೆ ನನ್ನ ದೇವರು ಎನ್ನುವುದು ರೈಯವರ ಆತ್ಮಕಥನ.

ಕಾಸರಗೋಡಿನ ಗಡಿನಾಡಿನಲ್ಲಿ ಕನ್ನಡಿಗರ ಸಾಂಸ್ಕೃತಿಕ ಪ್ರತಿನಿಧಿಯಾಗಿ ಕರ್ನಾಟಕದ ಬಹುತೇಕ ಮುಖ್ಯಮಂತ್ರಿಗಳನ್ನು `ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು, ಅದು ನನ್ನಬದುಕಿನ ಕೊನೆಯ ಆಸೆ’ ಎಂದು ಆಗಾಗ ಒತ್ತಾಯಿಸುತ್ತಲೇ ಬಂದಿದ್ದ ಕಯ್ಯಾರರಿಗೆ ಕೊನೆಗೂ `ಕರ್ನಾಟಕ ರತ್ನ’ ದೊರಕಲಿಲ್ಲ.

2014 ಜೂ. 8ರಂದು ಕಯ್ಯಾರರಿಗೆ ನೂರು ತುಂಬಿ ಕಯ್ಯಾರರ ಶತಮಾನೋತ್ಸವದ ಆರಂಭವಾಗಿತ್ತು. ರಾಜ್ಯ ಸರಕಾರ ಅವರಿಗೆ ಈ ವಿಶೇಷ ಸಂದರ್ಭದಲ್ಲಾದರೂ ಹುಟ್ಟುಹಬ್ಬದ ಕೊಡುಗೆಯಾಗಿ `ಕರ್ನಾಟಕ ರತ್ನ’ ನೀಡುವ ನಿರೀಕ್ಷೆ ಇತ್ತು.

ಕನ್ನಡ ಸಾಹಿತ್ಯ ಪರಿಷತ್‍ನ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಕರ್ನಾಟಕ ಸರ್ಕಾರವನ್ನು ಮತ್ತು ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಯನ್ನು ಕಳೆದ ಐದು ವರ್ಷಗಳಿಂದ `ಕರ್ನಾಟಕ ರತ್ನ’ ಮತ್ತು ‘ರಾಷ್ಟ್ರ ಕವಿ’ ಗೌರವ ನೀಡಲು ವಿನಂತಿಸಿದ್ದರು. ಮಂಗಳೂರು ವಿವಿಯಿಂದ ಡಾಕ್ಟರ್ ಆಫ್ ಲಿಟರೇಚರ್ ಗೌರವ, ಶ್ರೇಷ್ಠ ಶಿಕ್ಷಕ ರಾಷ್ಟ್ರಪ್ರಶಸ್ತಿ ಕಯ್ಯಾರರಿಗೆ ದೊರೆತಿದೆ.

ಪದ್ಯ, ಗದ್ಯ, ಸಾಹಿತ್ಯ ಸಂಸ್ಕೃತಿ ವಿಮರ್ಶೆ, ವ್ಯಾಕರಣ, ಶಿಶು ಸಾಹಿತ್ಯ, ನವೋದಯ ವಾಚನ ಮಾಲೆ, ತುಳು ಸಾಹಿತ್ಯ ಹೀಗೆ ಸಾಹಿತ್ಯ ಎಲ್ಲಾ ಪ್ರಕಾರಗಳಲ್ಲೂ ಹೆಸರು ಮಾಡಿರುವ ಕಯ್ಯಾರರ ಹಲವಾರು ನಾಟಕಗಳನ್ನೂ ರಚಿಸಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English