ನವದೆಹಲಿ: ತುಳು ಭಾಷೆ ಮತ್ತು ಸಂಸ್ಕೃತಿಯ ಕುರಿತು ದೆಹಲಿಯಲ್ಲಿ ಚಟುವಟಿಕೆಗಳನ್ನು ನಡೆಸುತ್ತಿರುವ ಸಂಸ್ಥೆ ದೆಹಲಿ ತುಳು ಸಿರಿಯ ಅಧ್ಯಕ್ಷರಾಗಿ ಹಿರಿಯ ವಿದ್ವಾಂಸ ಡಾ. ಪುರುಷೋತ್ತಮ ಬಿಳಿಮಲೆ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ದೆಹಲಿಯಲ್ಲಿದ್ದು ಕನ್ನಡ ಮತ್ತು ತುಳು ಭಾಷೆಗಳಿಗೆ ಅಪೂರ್ವ ಕೊಡುಗೆಗಳನ್ನು ನೀಡಿರುವ ಡಾ. ಪುರುಷೋತ್ತಮ ಬಿಳಿಮಲೆ ಅವರು ಅಮೇರಿಕನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಸ್ಟಡೀಸ್‌ನಲ್ಲಿ ನಿರ್ದೇಶಕರಾಗಿದ್ದಾರೆ. ಡಾ. ಬಿಳಿಮಲೆ ಅವರು ದೆಹಲಿ ಕರ್ನಾಟಕ ಸಂಘದಲ್ಲಿ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಮಹತ್ವಾಕಾಂಕ್ಷೆಯ ಸಾಂಸ್ಕೃತಿಕ ಸಮುಚ್ಛಯದ ನಿರ್ಮಾಣವಾಯಿತು.
ಇದೇ ಆಗಸ್ಟ್ ೯ರಂದು ದೆಹಲಿಯಲ್ಲಿ ನಡೆದ ಸಂಸ್ಥೆಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಹೊಸ ಆಡಳಿತ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಶ್ರೀ ಕೆ.ಆರ್. ರಾಮಮೂರ್ತಿ ಮತ್ತು ಡಾ. ಸಾಯಿ ಪ್ರಶಾಂತಿ ಶೆಟ್ಟಿ, ಕಾರ್ಯದರ್ಶಿಯಾಗಿ ಶ್ರೀ ಬಾಲಕೃಷ್ಣ ನಾಯ್ಕ್ ಡಿ., ಕೋಶಾಧಿಕಾರಿಯಾಗಿ ಶ್ರೀ ಕೆ.ಎಸ್.ಜಿ. ಶೆಟ್ಟಿ ಹಾಗೂ ಜತೆ ಕಾರ್ಯದರ್ಶಿಯಾಗಿ ಶ್ರೀ ಪ್ರಕಾಶ್ ಶೆಟ್ಟಿ ಉಳೆಪಾಡಿ ಮತ್ತು ಪ್ರದೀಪ್ ಕುಮಾರ್ ಆಯ್ಕೆಯಾಗಿದ್ದಾರೆ. ಶ್ರೀಮತಿ ವಂದನಾ ಶೆಟ್ಟಿ, ಶ್ರೀಮತಿ ಮಾಲಿನಿ ರಾವ್ ಮತ್ತು ಶ್ರೀಮತಿ ಪೃಥ್ವಿ ಕಾರಿಂಜೆ ಅವರು ಸಮಿತಿ ಸದಸ್ಯರಾಗಿದ್ದಾರೆ.
ದೆಹಲಿ ತುಳುಸಿರಿ ಸಂಸ್ಥೆಯು ದೆಹಲಿಯಲ್ಲಿ 2013 ರಲ್ಲಿ ಜಾಗತಿಕ ಸಮ್ಮೇಳನವನ್ನು ನಡೆಸಿ ತುಳುಭಾಷೆಯನ್ನು ಭಾರತದ ಸಂವಿಧಾನದ ಎಂಟನೇ ಪರಿಛೇಧದಲ್ಲಿ ಸೇರಿಸಲು ಮನವಿಪತ್ರವನ್ನು ತಯಾರಿಸಿ ಕೇಂದ್ರ ಸರಕಾರ ಮತ್ತು ಪ್ರಧಾನಮಂತ್ರಿಯವರಿಗೆ ನೀಡಿದೆ. ನಂತರದ ದಿನಗಳಲ್ಲಿ ದೆಹಲಿ ತುಳು ಸಿರಿಯು ತುಳುಭಾಷೆಯನ್ನು ಎಂಟನೇ ಪರಿಛೇಧದಲ್ಲಿ ಸೇರಿಸಲು ದೆಹಲಿಯ ರಾಜಕೀಯ ವಲಯದಲ್ಲಿ ಹಲವಾರು ರೀತಿಯಲ್ಲಿ ಒತ್ತಾಯ ಮಾಡುತ್ತಾ ಬಂದಿದೆ. ಜತೆಗೆ ದೆಹಲಿಯಲ್ಲಿ ತುಳು ಸಂಸ್ಕೃತಿಯನ್ನು ಬೆಳೆಸಲು ತುಳು ರಂಗ ಕಮ್ಮಟ, ತುಳು ರಂಗ ಪರ್ಬೊ ಮೊದಲಾದ ರಂಗಭೂಮಿಗೆ ಸಂಬಂಧಿಸಿದ ಚಟುವಟಿಕೆಗಳನ್ನು, ತುಳು ಭಾಷೆಗೆ ಸಂಬಂಧಿಸಿದಂತೆ ವಿಚಾರ ಸಂಕಿರಣಗಳನ್ನು ಕೂಡಾ ನಡೆಸುತ್ತಾ ಬಂದಿದೆ.
Click this button or press Ctrl+G to toggle between Kannada and English