ಮಂಗಳೂರು : ಬೆಸೆಂಟ್ ಮಹಿಳಾ ಕಾಲೇಜಿನ ಶಿಕ್ಷಕ ರಕ್ಷಕ ಸಂಘದ ಮಹಾಸಭೆ ಅಗೋಸ್ಟ್ 5 ಶನಿವಾರದಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ಮಾನಸಿಕ ಆರೋಗ್ಯ ವಿಭಾಗದ ಡಾ.ಸುಪ್ರಿಯಾ ಹೆಗ್ಡೆ ಅರೂರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಸಭೆಯಲ್ಲಿ ಭಾಗವಹಿಸಿದ ಪೋಷಕರನ್ನು ಹಾಗೂ ರಕ್ಷಕರನ್ನು ಉದ್ದೇಶಿಸಿ ಮಾತನಾಡುತ್ತಾ ಅವರು ಮಕ್ಕಳು ತಂದೆ ತಾಯಿಯರಲ್ಲಿ ಏನಾದರೂ ವಿಷಯವನ್ನು ಹಂಚಿಕೊಳ್ಳಲು ಬಯಸಿದಾಗ ಅವರು ಕಿವಿಗೊಡುವುದೇ ಅಲ್ಲದೆ ದಿನ ನಿತ್ಯದ ಕೆಲಸಗಳನ್ನು ಮಾಡುವಾಗ ತಮ್ಮೊಂದಿಗೆ ಮಕ್ಕಳನ್ನು ಸೇರಿಸಿಕೊಳ್ಳುವುದರಿಂದ ವಿಶ್ವಾಸ ವೃದ್ಧಿಗೊಳ್ಳುವುದು ಹಾಗೂ ಉತ್ತಮ ಕೌಟುಂಬಿಕ ಸಂಬಂಧಗಳು ಏರ್ಪಡುತ್ತವೆ ಎಂದು ಅಭಿಪ್ರಾಯಪಟ್ಟರು. ದಿನದಲ್ಲಿ ಒಮ್ಮೆಯಾದರೂ ಇಡೀ ಕುಟುಂಬದವರು ಸೇರಿಕೊಂಡು ಊಟ ಉಪಹಾರಗಳನ್ನು ಮಾಡುವುದರಿಂದ ಪ್ರೀತಿ ಬೆಳೆಯುತ್ತದೆ, ಹಾಗೆಯೇ ವಾರಕೊಮ್ಮೆ ಕುಟುಂಬದ ಸದಸ್ಯರು ಧಾರ್ಮಿಕ ಸ್ಥಳಗಳಿಗೆ ಭೇಟಿ ಕೊಡುವುದರಿಂದ ಮಕ್ಕಳಿಗೆ ಧರ್ಮ ಹಾಗೂ ಸಂಸ್ಕೃತಿ ಜೊತೆಗಿನ ಒಡನಾಟ ಬೆಳೆಸಿದಂತಾಗುತ್ತದೆ. ಎಂದರು. ವಿದ್ಯಾರ್ಥಿನಿಯರು ಮೊಬೈಲ್ ಅತಿಯಾಗಿ ಉಪಯೋಗಿಸುವುದು, ಹಾರಿಕೆ ಉತ್ತರ ನೀಡುವುದು, ಸರಿಯಾಗಿ ಮಾತನಾಡದೇ ಇರುವುದು, ಸಮಯಕ್ಕೆ ಸರಿಯಾಗಿ ಮನೆ ತಲುಪದೇ ಇರುವುದು ಇತ್ಯಾದಿಗಳನ್ನು ಕಂಡಾಗ ಪೋಷಕರು ಬೈಯದೆ ಗಾಬರಿಯಾಗದೆ ಅವರಲ್ಲಿ ವಿಶ್ವಾಸದಿಂದ ವ್ಯವಹರಿಸಿ ಕಾರಣಗಳನ್ನು ತಿಳಿದುಕೊಳ್ಳಬೇಕು. ಇದರಿಂದ ಮುಂದೆ ಆಗುವ ಸಮಸ್ಯೆಗಳನ್ನು ತಡೆಯಬಹುದು ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲೆ ಕಾಲೇಜಿನಲ್ಲಿ ಲಭ್ಯವಿರುವ ವಿವಿದ ಅಲ್ಪಕಾಲಿಕ ಕೋರ್ಸುಗಳ ಹಾಗೂ ಸಂಘ ಸಂಸ್ಥೆಗಳ ಬಗ್ಗೆ ವಿವರಿಸಿದರು. ಮುಂದಿನ ವರ್ಷದ ನ್ಯಾಕ್ ಪರಿಶೀಲನೆಯ ಬಗ್ಗೆ ಪೋಷಕರು, ರಕ್ಷಕರು ಸಹಕರಿಸಬೇಕೆಂದು ವಿನಂತಿಸಿದರು. ಈ ಸಂದರ್ಭದಲ್ಲಿ ಇತ್ತೀಚೆಗೆ ನಿವೃತ್ತರಾದ ಪ್ರಾಂಶುಪಾಲೆ ಪ್ರೊ. ಪುಷ್ಪಲತಾ ಬಿ.ಕೆ ಇವರನ್ನು ಸನ್ಮಾನಿಸಲಾಯಿತು. ಕಳೆದ ಸಾಲಿನಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿನಿಯರನ್ನು ಅಭಿನಂದಿಸಲಾಯಿತು. ಪ್ರಸಕ್ತ ಸಾಲಿನ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾಗಿ ಶ್ರೀ.ಸುಜನ್‌ರಾಂ ಎಂ, ಶ್ರೀಮತಿ ಮೋಹಿಸಿ ಉಪಾಧ್ಯಕ್ಷರಾಗಿ ಹಾಗೂ ಶ್ರೀ. ಸದಾಶಿವ ಶೆಟ್ಟಿ ಸಹ ಕಾರ್ಯದರ್ಶಿಯಾಗಿ ಆಯ್ಕೆಯಾದರು. ಶ್ರೀಮತಿ ಸರಿತಾ ಸಂಯೋಜಕಿ ಅಯವ್ಯಯ ಮಂಡಿಸಿದರು. ಹಿಂದಿನ ಸಾಲಿನ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಶ್ರೀಮತಿ ದಮಯಂತಿ ಸ್ವಾಗತಿಸಿದರು, ಕಾಲೇಜಿನ ಸಂಚಾಲಕರಾದ ದೇವಾನಂದ ಪೈ ವೇದಿಕೆಯಲ್ಲಿದ್ದರು.
Click this button or press Ctrl+G to toggle between Kannada and English