ಮಂಗಳೂರು : ಅತ್ತಾವರದಲ್ಲಿ ಆ. 24 ರಂದು ಹಿಂದೂ ಯುವತಿಯನ್ನು ಕಾರಿನಲ್ಲಿ ಕರೆದೊಯ್ದ ಯುವಕ ಶಾಕಿರ್‌ನನ್ನು ಅರೆ ನಗ್ನಗೊಳಿಸಿ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಇದುವರೆಗೆ ಒಟ್ಟು 13 ಮಂದಿಯನ್ನು ಬಂಧಿಸಲಾಗಿದ್ದು, ಅವರಿಗೆ ಸೆ. 7 ರ ತನಕ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪ್ರಸ್ತುತ ಅವರನ್ನು ಬಳ್ಳಾರಿ ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಎಸ್. ಮುರುಗನ್ ಆ. 26 ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪ್ರಕರಣಕ್ಕೆ ಸಂಬಂಧಿಸಿ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರು ಮತ್ತು ಪ್ರತಿ ದೂರುಗಳೆರಡರ ಬಗ್ಗೆ ಸಮಗ್ರ ತನಿಖೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿ ಮೊಬೈಲ್ ಫೋನ್‌ನಲ್ಲಿ ವಾಟ್ಸಪ್‌ನಲ್ಲಿ ಮತ್ತು ಫೇಸ್‌ಬುಕ್‌ನಲ್ಲಿ ಹರಿದಾಡಿದ ಚಿತ್ರಗಳನ್ನು ಪರಿಶೀಲಿಸಿ ಹಾಗೂ ಸಿಸಿಟಿವಿ ಮತ್ತು ಇತರ ಮಾಹಿತಿಗಳನ್ನು ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ. ಕೆಲವರನ್ನು ವಿಚಾರಣೆ ನಡೆಸಿ ಬಿಡಲಾಗಿದೆ. ಘಟನೆಯಲ್ಲಿ ನೇರವಾಗಿ ಭಾಗಿಯಾಗಿದ್ದರೆನ್ನಲಾದ ಇನ್ನೂ 2- 3 ಮಂದಿ ಇದ್ದಾರೆ. ಪರೋಕ್ಷವಾಗಿ ನೆರವಾದವರೂ ಇದ್ದಾರೆ. ಹಾಗಾಗಿ ಇನ್ನೂ 6- 7 ಮಂದಿ ಬಂಧನಕ್ಕೆ ಬಾಕಿ ಇದ್ದು ಅವರ ಪತ್ತೆಗೆ ಕ್ರಮ ವಹಿಸಲಾಗಿದೆ ಎಂದು ವಿವರಿಸಿದರು.
ಬಂಧಿತ ಆರೋಪಗಳಲ್ಲಿ ಕೆಲವರು ಬಜರಂಗ ದಳದವರಿದ್ದು, ಓರ್ವ ವಿಶ್ವ ಹಿಂದೂ ಪರಿಷತ್‌ಕಾರ್ಯಕರ್ತನಿದ್ದಾನೆ. ಎರಡೂ ಸಂಘಟನೆಗಳಿಗೆ ಸೇರದವರೂ ಇದ್ದಾರೆ ಎಂದರು.
ಆ. 24ರಂದು ಅತ್ತಾವರದ ಮಾಲ್‌ನಿಂದ ಶಾಕಿರ್ ತನ್ನ ಡಸ್ಟರ್ ಕಾರಿನಲ್ಲಿ ಸಂಜೆ 5.27ಕ್ಕೆ ಹೊರಟಿದ್ದಾನೆ. ಯುವತಿ 5.34ಕ್ಕೆ ಹೊರಟು ನಡೆದುಕೊಂಡು ರಸ್ತೆ ಬದಿಯಲ್ಲಿದ್ದ ಕಾರಿನ ಬಳಿಗೆ ತೆರಳಿದ್ದಾಳೆ. 5.47ಕ್ಕೆ ಕಾರು ಅಲ್ಲಿಂದ ಹೊರಟಿದೆ. 5.52ಕ್ಕೆ ಕಾರನ್ನು ಆರೋಪಿಗಳು ತಡೆದು ಶಾಕಿರ್‌ನನ್ನು ಹೊರಗೆಳೆದು ಹಾಕಿ ಹಲ್ಲೆ ನಡೆಸಿದ್ದಾರೆ. 6.10ರ ವೇಳೆಗೆ ಪೊಲೀಸರು ಸ್ಥಳಕ್ಕೆ ತಲುಪಿದ್ದಾರೆ ಎಂದು ಎಸ್. ಮುರುಗನ್ ತಿಳಿಸಿದರು.
ಪೊಲೀಸರು ಸ್ಥಳಕ್ಕೆ ತಲಪುವಾಗ ವಿಳಂಬವಾಗಿದೆ ಎನ್ನುವ ಆರೋಪ ಸರಿಯಲ್ಲ. ಪಾಂಡೇಶ್ವರ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬಂದಿ ಮಾಹಿತಿ ಲಭಿಸಿದಾಕ್ಷಣ ಧಾವಿಸಿ ಸ್ಥಳಕ್ಕೆ ತೆರಳಿ ಜನರನ್ನು ಚದುರಿಸಿದ್ದಾರೆ. ಗಾಯಾಳು ಶಾಕಿರ್‌ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದರು.
ಇಂತಹ ಘಟನೆಗಳು ಸಮಾಜದಲ್ಲಿ ಭಯ ಹುಟ್ಟಿಸುತ್ತಿವೆ. ಜತೆಗೆ ಸಮಾಜಕ್ಕೆ ಕಳಂಕವನ್ನೂ ತರುತ್ತವೆ. ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಇಂತಹ ಘಟನೆಗಳನ್ನು ನಿಯಂತ್ರಿಸಲು ಎಲ್ಲಾ ರೀತಿಯ ಕ್ರಮ ಜರಗಿಸಲಾಗುವುದು. ಆದಕ್ಕೆ ಸಾರ್ವಜನಿಕರ ಸಹಕಾರ ಬೇಕು ಎಂದು ಮನವಿ ಮಾಡಿದರು.
ಬಂಧಿತ ಆರೋಪಿಗಳ ಮೇಲೆ ಯಾವುದೇ ಹಳೆಯ ಕ್ರಿಮಿನಲ್ ಆರೋಪಗಳಿಲ್ಲ. ಆರೋಪಿ ಕಿಶನ್ ಮೇಲೆ ಮಾತ್ರ ಒಂದು ಪೆಟ್ಟಿ ಕೇಸ್ ಇದೆ ಎಂದರು. ಆರೋಪಿಗಳ ಮೇಲೆ ದೊಂಬಿ, ಕೊಲೆ ಯತ್ನ, ಡಕಾಯಿತಿ ಮತ್ತು ಜೀವ ಬೆದರಿಕೆ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ವಿವರಿಸಿದರು.
Click this button or press Ctrl+G to toggle between Kannada and English