ಉಡುಪಿ : ಬೆಂಗಳೂರಿನ ವಾಸ್ತು ತಜ್ಙ, ಅಂತರಾಷ್ಟ್ರೀಯ ಜ್ಯೋತಿಷಿ ಮೂಲ್ಕಿಯ ಚಂದ್ರಶೇಖರ್ ಸ್ವಾಮೀಜಿಯ ಕೈ ಹಿಡಿದು ಶಾಸಕನಾಗುವ ಕನಸು ಕಾಣುತ್ತಿರುವ ಬೆಳಪು ದೇವಿಪ್ರಸಾದ್ ಶೆಟ್ಟಿಯ ನಡೆ ನಿಜಕ್ಕೂ ಫಲಪ್ರದವಾಗಿಯೇ ಬಿಡುತ್ತದೆ ಎನ್ನುವುದು ಮೇಲ್ನೋಟಕ್ಕೆ ಖಾತ್ರಿಯಾಗುತ್ತದೆ. ಮುಂದಿನ ಚುನಾವಣೆಯಲ್ಲಿ ಸಚಿವ ಅಭಯಚಂದ್ರ ಜೈನ್ ಚುನಾವಣೆಗೆ ಸ್ಪರ್ಧಿಸುವುದು ಸಂಶಯವಾಗಿರುವ ನಿಟ್ಟಿನಲ್ಲಿ ದೇವಿಪ್ರಸಾದ್ ಶೆಟ್ಟಿಯ ನಡೆ ಕುತೂಹಲಕಾರಿಯಾಗಿದೆ. ಚಂದ್ರಶೇಖರ್ ಸ್ವಾಮಿಜಿ, ಗುರೂಜಿ ಎಂದು ಹೀಗೆ ಕರೆಸಿಕೊಳ್ಳುತ್ತಾ ಬೆಂಗಳೂರಿನ ಅಷ್ಟೂ ರಾಜಕಾರಣಿಗಳ ಡಾರ್ಲಿಂಗ್ ಆಗಿರುವ ಚಂದ್ರಶೇಖರ್ ಅವರಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿರುವ ಪರಮೇಶ್ವರ್ ಅವರು ಪರಮಾಪ್ತರು. ಚಂದ್ರಶೇಖರ್ ಸ್ವಾಮಿ ಎಡಗೈಯಲ್ಲಿ ತೋರಿಸಿದರೆ ಅದನ್ನು ಬಲಗೈಯಲ್ಲಿ ಮಾಡಲು ತಯಾರಾಗಿರುವ ಪರಮೇಶ್ವರ್ ಸ್ವಾಮಿಯ ಸಂಸ್ಥಾನದ ಖಾಯಂ ಆಹ್ವಾನಿತರು. ಅಂತಹ ಗುರುವನ್ನು ಹಿಂದೆ ಇಟ್ಟು ಎದುರಿಗೆ ಶಾಸಕನಾಗುವ ಗುರಿಯನ್ನು ಹೊಂದಿರುವ ದೇವಿಪ್ರಸಾದ್ ಶೆಟ್ಟಿಗೆ ಮೂಡಬಿದ್ರೆಯೇ ಸೇಫ್ ಎನಿಸಿದೆ. ಕಾರಣ, ಅಲ್ಲಿ ಇರುವ ಜಾತಿ ಲೆಕ್ಕಾಚಾರ.
ಮೂಲ್ಕಿ-ಮೂಡಬಿದ್ರೆಯಲ್ಲಿ ಯಾವತ್ತೂ ಕಾಂಗ್ರೆಸ್‌ನ ಸ್ಟ್ರಾಂಗ್ ಸೀಟ್. ಒಂದು ವೇಳೆ ಅಭಯರು ಸ್ಪರ್ಧಿಸದೆ ಹೋದರೆ ಸಹಜವಾಗಿ ಅಲ್ಲಿ ಅಭ್ಯರ್ಥಿಯ ಹುಡುಕಾಟ ನಡೆಯಲಿದೆ. ರಾಜೇಂದ್ರ ಕುಮಾರ್ ಎಂಪಿ ಸ್ಥಾನದ ಮೇಲೆ ಕಣ್ಣಿಟ್ಟಿರುವುದರಿಂದ ಅವರು ಸುಲಭವಾಗಿ ಶಾಸಕ ಸ್ಥಾನಕ್ಕೆ ಒಪ್ಪಲಾರರು. ಇನ್ನೂ ಅಭಯರು ಯಾರನ್ನೂ ಸೂಚಿಸುತ್ತಾರೋ ಅವರೇ ಅಭ್ಯರ್ಥಿಯಾಗುವುದು ಅಲ್ಲಿ ಖಚಿತ. ಅಂತಹ ಸಮಯದಲ್ಲಿ ಚಂದ್ರಶೇಖರ ಸ್ವಾಮಿಯ ಕೈ, ಕಾಲು ಇನ್ನಿತರ ಒತ್ತಿ ಟಿಕೇಟ್ ದೊರಕಿಸಿಕೊಳ್ಳುವ ಪ್ಲಾನ್ ದೇವಿಪ್ರಸಾದ್ ಶೆಟ್ಟಿಯದು. ಚಂದ್ರಶೇಖರ್ ಸ್ವಾಮಿ ಹೇಳಿದರೆ ಕಾಂಗ್ರೆಸ್ಸಿನ ಯಾವ ಘಟಾನುಘಟಿ ನಾಯಕರೂ ಸುಲಭವಾಗಿ ಇಲ್ಲ ಎನ್ನುವುದಿಲ್ಲ. ಅಲ್ಲಿ ಚುನಾವಣಾ ಪ್ರಚಾರದ ವೇಳೆ ಜೈನರ ಮತ್ತು ಅಲ್ಪಸಂಖ್ಯಾತರ ಮತಗಳನ್ನು ಸೆಳೆಯಲು ಅಭಯಚಂದ್ರ ಜೈನ್ ಇರುತ್ತಾರೆ. ಇತ್ತ ಬಿಲ್ಲವ ಮತಗಳನ್ನು ಸೆಳೆಯಲು ವಿನಯ ಕುಮಾರ್ ಸೊರಕೆ ಇರುತ್ತಾರೆ. ಇನ್ನೂ ಬಂಟ ಮತಗಳನ್ನು ಧಮಯ್ಯ ಎಂದು ಗೋಗರೆದು ಒಟ್ಟು ಹಾಕಿದರೆ ಗೆಲವು ನಿಶ್ಚಿತ ಎನ್ನುವುದು ದೇವಿಪ್ರಸಾದ್ ಶೆಟ್ಟಿಯ ಲೆಕ್ಕಾಚಾರ. ಅದಕ್ಕೆ ಅವರು ಹಾಕಿಕೊಂಡ ಪ್ಲಾನ್ ಕೂಡ ಮಸ್ತಾಗಿದೆ.
ವಿನಯ ಕುಮಾರ್ ಸೊರಕೆಯೇ ಯಾಕೆ?
ಈಗ ಯಾವುದೇ ಸಮಾರಂಭವೇ ಇರಲಿ, ದೇವಿಪ್ರಸಾದ್ ಶೆಟ್ಟಿ ಸೊರಕೆಯವರ ಗುಣಗಾನ ಮಾಡದೇ ಭಾಷಣ ಮುಗಿಸುವುದಿಲ್ಲ. ಅತ್ತ ಸೊರಕೆ ಕೂಡ ಬೆಳಪು ಗ್ರಾಮದ ಅಬಿವೃದ್ಧಿಯಲ್ಲಿ ಏನೆಲ್ಲ ಮಾಡಬೇಕೊ ಅಷ್ಟನ್ನು ತಮ್ಮ ಲೋಕಸಭಾ ಅವಧಿಯಲ್ಲೂ ಮತ್ತು ಈಗ ಉಸ್ತುವರಿ ಸಚಿವನಾಗಿ ಎರಡೂ ಬಾರಿ ಮಾಡುತ್ತಲೇ ಬರುತ್ತಿದ್ದಾರೆ. ಈ ಮೂಲಕ ಇಬ್ಬರೂ ಕೊಡುಕೊಳ್ಳುವಿಕೆಯಲ್ಲಿ ಬಿಝಿಯಾಗಿದ್ದಾರೆ. ಅಷ್ಟಕ್ಕೂ ಸೊರಕೆಗೆ ದೇವಿಪ್ರಸಾದ್ ಶೆಟ್ಟಿಯ ಹಂಗು ಅಷ್ಟು ಯಾಕೆ? ಸಿಂಪಲ್. ಕಾಪು ಮುಂದಿನ ಬಾರಿ ಸೊರಕೆಗೆ ಅಷ್ಟು ಸುಲಭವಾಗಿ ಒಲಿಯುವ ಸ್ಥಿತಿಯಲ್ಲಿಲ್ಲ. ಮುಂಬೈ ಮತ್ತು ಬಳ್ಳಾರಿ ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ ಕಳೆದ ಬಾರಿ ಕಾಂಗ್ರೆಸ್ಸಿನಿಂದ ಸ್ಪರ್ಧಿಸಲು ಹಾತೊರೆಯುತ್ತಿದ್ದವರು ಅವಕಾಶ ಸಿಗದೆ ನಿರಾಶರಾಗಿದ್ದವರು ಈ ಬಾರಿ ಭಾರತೀಯ ಜನತಾ ಪಕ್ಷದಲ್ಲಿದ್ದಾರೆ. ಅತ್ತ ವಸಂತ ಸಾಲ್ಯಾನ್ ಬೆಂಬಲಿಗರು ಲಾಲಾಜಿ ಮೆಂಡನ್ ಜೊತೆ ಸೇರಿದರೆ ಇತ್ತ ಸೊರಕೆಯವರದ್ದು ಏಕಾಂಗಿ ಹೋರಾಟವೇ ಆಗಲಿದೆ. ಅಂತಹ ಸಂದರ್ಭದಲ್ಲಿ ತಮ್ಮ ಜೊತೆಯಲ್ಲಿ ಇರಲಿ ಎಂದು ಸೊರಕೆ ದೇವಿಪ್ರಸಾದ್ ಶೆಟ್ಟಿಯನ್ನು ಹತ್ತಿರಕ್ಕೆ ಸೇರಿಸಿಕೊಂಡಿದ್ದಾರೆ. ಬೇರೆ ಬೇರೆ ಪಕ್ಷದವರನ್ನು ತಂದು ಕಾಂಗ್ರೆಸ್ಸಿನಿಂದ ಗೆಲ್ಲಿಸಿ ಶಾಸಕರನ್ನಾಗಿರುವ ಒಳ್ಳೆಯ ಟ್ರಾಕ್ ಸೊರಕೆ ಇದ್ದದ್ದು ದೇವಿಪ್ರಸಾದ್ ಶೆಟ್ಟಿಗೆ ಗೊತ್ತಿದೆ. ಇನ್ನೂ ಪಕ್ಕದ ಕ್ಷೇತ್ರ ಮೂಲ್ಕಿ-ಮೂಡಬಿದರೆಯಲ್ಲಿ ಸೊರಕೆಯ ಬಿಲ್ಲವ ಮತಗಳು ತಮಗೆ ವರದಾನ ಆಗಬಹುದು ಎನ್ನುವುದು ಶೆಟ್ಟಿ ಹಾಕಿಕೊಂಡ ಸ್ಕೆಚ್. ಅದಕ್ಕಾಗಿ ಈಗಾಗಲೇ ಜನಪ್ರಿಯ ನಾಯಕನಾಗುವ ಪ್ರಯತ್ನವನ್ನು ದೇವಿಪ್ರಸಾದ್ ಶೆಟ್ಟಿ ಮಾಡುತ್ತಿದ್ದಾರೆ. ಅದರ ಮೊದಲ ಹೆಜ್ಜೆಯೇ ಪಾದೂರು ಪೈಪ್‌ಲೈನ್ ವಿರುದ್ಧ ಹೋರಾಟ.
ಒಂದೊ ಹೋರಾಟದಿಂದ ಹಣ ಮಾಡಬೇಕು ಅಥವಾ ಜನಪ್ರಿಯತೆ ಗಳಿಸಬೇಕು ಎನ್ನುವ ಹಟಕ್ಕೆ ಬಿದ್ದಿರುವ ದೇವಿಪ್ರಸಾದ್ ಶೆಟ್ಟಿ ಪಾದೂರು ಪೈಪ್‌ಲೈನ್ ಕಾಮಗಾರಿ ವಹಿಸಿಕೊಂಡಿರುವ ಕಂಪೆನಿಯಿಂದ ಕೇಳಿದ ಮೊತ್ತ ಚಿಕ್ಕದೇನಲ್ಲವಂತೆ. ಈ ವ್ಯಕ್ತಿಯ ಡಿಮ್ಯಾಂಡ್ ನೋಡಿಯೇ ಹೌಹಾರಿದ ಸಂಸ್ಥೆ ಅಷ್ಟೆಲ್ಲ ಕೊಡಲು ಆಗುವುದಿಲ್ಲ ಎಂದು ಹೇಳಿತು. ಹೆಚ್ಚೆಂದರೆ ಹತ್ತಿಪ್ಪತ್ತು ಲಕ್ಷ ಕೊಡಬಹುದು. ಒಂದು ಕೋಟಿ ಕೊಡಲು ಸಾಧ್ಯವೇ ಇಲ್ಲ ಎಂದಿತು. ಸಾಧ್ಯವಿಲ್ಲದಿದ್ದರೆ ನೀವು ಅದೇಗೆ ಕಾಮಗಾರಿ ಮುಗಿಸುತ್ತೀರಿ ಎಂದು ಸವಾಲು ಹಾಕಿದ ದೇವಿಪ್ರಸಾದ್ ಶೆಟ್ಟಿ ಆವತ್ತಿನಿಂದ ಪಾದೂರು ಪೈಪ್‌ಲೈನ್ ಹಿಂದೆ ಬಿದ್ದಿದ್ದಾರೆ ಎಂದು ಬಿಸಿಬಿಸಿ ಸುದ್ದಿ ಅವರ ಆಪ್ತ ವಲಯದಿಂದಲೇ ಕೇಳಿಬರುತ್ತಿದೆ. ಯಾವುದೇ ವಿಷಯ ಕೊಡಿ ಅಲ್ಲಿ ನಿರರ್ಗಳವಾಗಿ ವೇದಿಕೆಯಲ್ಲಿ ಮಾತನಾಡಬಲ್ಲ ದೇವಿಪ್ರಸಾದ್ ಶೆಟ್ಟಿ ಹಿಂದೊಮ್ಮೆ ನಾಗಾರ್ಜುನ ವಿರೋಧಿ ಹೋರಾಟ ಸಮಿತಿಯ ಸಮಾವೇಶ ನಡೆಯುತ್ತಿದ್ದಾಗ ಏಕಾಏಕಿ ವೇದಿಕೆಗೆ ನುಗ್ಗಿ ಭಾಷಣ ಬಿಗಿದಿದ್ದರು. ಆ ವೇದಿಕೆಯಲ್ಲಿ ಪೇಜಾವರ ಶ್ರೀಗಳು, ಹರಿಕೃಷ್ಣ ಪುನರೂರು ಅವರಂತಹ ದಿಗ್ಗಜರು ಇದ್ದರೂ ಮರುದಿನ ಮಾಧ್ಯಮಗಳಲ್ಲಿ ಮಿಂಚಿದ್ದು ಇದೇ ದೇವಿಪ್ರಸಾದ್ ಶೆಟ್ಟಿ. ಇನ್ನೂ ಈಗ ಯಾವುದೇ ಹೋರಾಟ ಇರಲಿ, ಅಲ್ಲಿ ಧಾವಿಸಿ ಮುಂಚೂಣಿಯಲ್ಲಿ ನಿಲ್ಲುವ ಶೆಟ್ಟಿಗೆ ಸುರತ್ಕಲ್ ಸಮೀಪ ಹಾಕಲಾಗುತ್ತಿರುವ ಟೋಲ್‌ಗೇಟ್ ಕೂಡ ಪ್ರತಿಭಟನೆಯ ವಿಷಯವೇ ಆಗಿದೆ, ಅಂತಹ ದೇವಿಪ್ರಸಾದ್ ಶೆಟ್ಟಿ ಕಾಂಗ್ರೆಸ್ ಸೇರುತ್ತಿದ್ದಂತೆ ಬೆಂಗಳೂರಿನ ಪದ್ಮನಾಭ ನಗರದ ಬಂಗ್ಲೆಯಲ್ಲಿ ಕುಳಿತು ಜೆಡಿಎಸ್ ವರಿಷ್ಟ ಎಚ್,ಡಿ.ದೇವೇಗೌಡರು ತಮ್ಮ ಆಪ್ತರಲ್ಲಿ ಹೇಳುತ್ತಿದ್ದರಂತೆ- ಅವನು ಹಣ ಬೇಕು ಎಂದ, ಹಣ ಕೊಟ್ಟೆ, ಗಾಡಿ ಬೇಕು ಎಂದ ಅದು ಕೊಟ್ಟೆ, ಕೊನೆಗೆ ಮನೆ ಬೇಕು ಎಂದ, ದೊಡ್ಡ ಮನೆ ಕಟ್ಟಿಸಿಕೊಟ್ಟೆ. ಈಗ ಪಕ್ಷ ಬಿಟ್ಟು ಹೋದ. ಅಲ್ಲಿಗೆ ಉಡುಪಿಯ ಏಕೈಕ ಜೆಡಿಎಸ್ ಮುಖ ದೇವಿಪ್ರಸಾದ್ ಶೆಟ್ಟಿ ದೇವೇಗೌಡರಂತೆ ತಾನು ಕೂಡ ಅವಕಾಶವಾದಿ ರಾಜಕಾರಣಕ್ಕೆ ಹೊರತಲ್ಲ ಎಂದು ರೂಪಿಸಿಬಿಟ್ಟಿದ್ದಾರೆ. ಅಂತಹ ದೇವಿಪ್ರಸಾದ್ ಶೆಟ್ಟಿಗೆ ಯಾವುದೋ ಪರದೇಶಿ ಸಂಸ್ಥೆ ಗೌರವ? ಡಾಕ್ಟರೇಟ್ ನೀಡಿದೆ. ನಾಳೆ ಸಾಹೇಬ್ರು ಎಲ್ಲಿಯಾದರೂ ಚುನಾವಣೆಯಲ್ಲಿ ನಿಂತಾಗ ಒಂದಿಷ್ಟು ಗೌರವಕ್ಕಾದರೂ ಆ ಡಾ! ಬೇಡವೇ.
ಅಷ್ಟಕ್ಕೂ ದೇವಿಪ್ರಸಾದ್ ಎನೋ ಹುಟ್ಟಿದ ಮನೆಯಿಂದ ಬೆಳಗಿದ ಮನೆಗೆ ಅನಾಯಾಸವಾಗಿ ಬಂದು ಬಿಟ್ಟಿದ್ದಾರೆ. ಆದರೆ ಕಾಂಗ್ರೆಸ್‌ನಂತಹ ಪಕ್ಷದಲ್ಲಿ ಹಿರಿಯ ನಾಯಕರು ಶೆಟ್ಟಿಯನ್ನು ಸುಲಭವಾಗಿ ಒಪ್ಪಿಕೊಂಡಂತೆ ಕಾಣುವುದಿಲ್ಲ. ಕಾರಣ ಬೆರಳು ನೀಡಿದರೆ ಹಸ್ತವನ್ನೇ ನುಂಗುವಂತಹ ಗುಣದ ದೇವಿಪ್ರಸಾದ್ ತಮ್ಮ ಕಾಂಗ್ರೆಸ್ ಪಕ್ಷದಲ್ಲಿ ಇದ್ದಷ್ಟು ತಮಗೆ ಬೆಳೆಯಲು ಅವಕಾಶ ಸಿಗುವುದಿಲ್ಲ ಎನ್ನುವುದು ಮೂಲ ಕಾಂಗ್ರೆಸ್ಸಿಗರ ನೋವು. ಅದನ್ನು ಕಾಪು ಬ್ಲಾಕ್ ಕಾಂಗ್ರೆಸ್ಸಿನ ಅಧ್ಯಕ್ಷರಾಗಿರುವ ನವೀನ್‌ಚಂದ್ರ ಶೆಟ್ಟಿಯವರು ಬಹಿರಂಗ ಸಭೆಯಲ್ಲಿಯೇ ಹೊರ ಹಾಕಿದ್ದಾರೆ. ಬೇರೆ ಪಕ್ಷದಲ್ಲಿ ತುಂಬಾ ದುಡಿದವರನ್ನು ಕಾಂಗ್ರೆಸ್ಸಿಗೆ ತೆಗೆದುಕೊಳ್ಳುವಾಗ ನಿಷ್ಟಾವಂತ ಮುಖಂಡರನ್ನು ಒಂದು ಮಾತು ಕೇಳಬೇಕಿತ್ತು ಎನ್ನುವುದು ಅವರ ಅಳಲು. ಅದನ್ನು ಅವರು ಪಕ್ಷದ ಸಭೆಯಲ್ಲಿಯೇ ಹೊರಹಾಕಿದ್ದರು. ಆದರೆ ಆ ಸಭೆಯಲ್ಲಿಯೇ ಅದಕ್ಕೆ ಸ್ಪಷ್ಟನೆ ನೀಡಿದ ವಿನಯ ಕುಮಾರ್ ಸೊರಕೆ ದೇವಿಪ್ರಸಾದ್ ಶೆಟ್ಟಿಯವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಲು ರಾಜ್ಯಾಧ್ಯಕ್ಷ ಜಿ. ಪರಮೇಶ್ವರ್ ಒಪ್ಪಿದ್ದಾರೆ, ಆದ್ದರಿಂದ ರಾಜ್ಯಾಧ್ಯಕ್ಷರೇ ಒಪ್ಪಿದ ಮೇಲೆ ಉಳಿದವರನ್ನು ಕೇಳುವ ಅವಶ್ಯಕತೆ ಇಲ್ಲ ಎಂದು ಪರೋಕ್ಷವಾಗಿ ಬ್ಲಾಕ್ ಅಧ್ಯಕ್ಷರಿಗೆ ಟಾಂಗ್ ನೀಡಿದ್ದಾರೆ. ಅಷ್ಟಕ್ಕೂ ಕಾಪು ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ, ಚಂದ್ರಶೇಖರ ಗುರೂಜಿ ಹಾಗೂ ದೇವಿಪ್ರಸಾದ್ ಸಹಪಾಠಿಗಳು. ಆದರೆ ಮೂರು ಜನರು ಬೇರೆ ಬೇರೆಯಾಗಿ ತಮ್ಮ ಅಸ್ತಿತ್ವ ಕಂಡುಕೊಂಡರು. ದೇವಿಪ್ರಸಾದ್ ಶೆಟ್ಟಿ ದೇವೇಗೌಡರ ಅಪ್ಪಾಜಿ, ಅಪ್ಪಾಜಿ ಎಂದು ಕರೆಯುತ್ತಾ, ಅವರ ಮಕ್ಕಳಿಗಿಂತ ದೊಡ್ಡ ಮನೆ ಕಟ್ಟಿಸಿಕೊಂಡ. ಇವತ್ತಿಗೂ ದೇವಿಪ್ರಸಾದ್ ಶೆಟ್ಟಿಯ ಆದಾಯದ ಮೂಲ ಯಾವುದು ಎಂದು ಯಾರಿಗೂ ಗೊತ್ತಿಲ್ಲ. ಒಂದು ಕಾಲದಲ್ಲಿ ಅಂಡರ್ ವಲ್ಡ್ ಡಾನ್ ಹೇಮಂತ ಪೂಜಾರಿಗೆ ಕರಾವಳಿಯ ಶ್ರೀಮಂತರಿಂದ ಹಫ್ತಾ ಒಟ್ಟು ಮಾಡಿ ನೀಡುತ್ತಿದ್ದ ಎಂದು ಉಡುಪಿಯ ಹಿರಿಯ ಕ್ರೈಂ ವರದಿಗಾರರು ನೆನಪಿಸಿಕೊಳ್ಳುತ್ತಾರಾದರೂ ಅದಕ್ಕೆ ಯಾವುದೇ ಸಾಕ್ಷಿ ಇಲ್ಲ. ಹಾಗಂತ ದೇವಿಪ್ರಸಾದ್ ಶೆಟ್ಟಿಯೇ ಜೆಡಿಎಸ್ ಪಕ್ಷಕ್ಕೆ ಕರೆ ತಂದಿದ್ದ ಗುಲಾಂ ಮೊಹಮ್ಮದ್ ಮಾತ್ರ ಪಕ್ಕಾ ಆಂಟಿ ಎಲಿಮೆಂಟ್. ಆತನನ್ನು ಉಡುಪಿ ಜಿಲ್ಲಾ ಗೌರವಾಧ್ಯಕ್ಷನನ್ನಾಗಿ ಮಾಡುವಾಗ ಕನಿಷ್ಟ ದೇವೆಗೌಡರು ಉಡುಪಿಯ ಯಾವುದಾದರೂ ಪತ್ರಿಕಾ ಕಚೇರಿಗೆ ಫೋನ್ ಮಾಡಿದ್ರು ಸಾಕಿತ್ತು. ಆದರೆ ದೇವೆಗೌಡರಿಗೆ ಅವರ ಕಾಲು ಒತ್ತುವವರೇ ಪಕ್ಷದ ನಾಯಕರು. ಹೊರಗೆ ಪಕ್ಷ ಸತ್ತು ಹೋಗುತ್ತಿದ್ದರೂ ಅಪ್ಪಾಜಿ ಕಾಲು ಒತ್ತಲಾ ಎಂದು ಕೇಳಿದರೆ ಸಾಕು, ಆತ ಪಕ್ಷದ ನಿಷ್ಟಾವಂತ ಮುಖಂಡ. ಅಂತವರನ್ನು ನಂಬಿಯೇ ಕರಾವಳಿಯಲ್ಲಿ ಜೆಡಿಎಸ್‌ಗೆ ಮೂರಾಣೆ ಬೆಲೆನೂ ಇಲ್ಲವಾಗಿದೆ ಎನ್ನುವುದು ಅವರಿಗೆ ಗೊತ್ತಿಲ್ಲ. ಅಂತಹ ಗುಲಾಂ ಮೊಹಮ್ಮದ್ ಕೂಡ ಯಾವುದಕ್ಕೂ ಪ್ರಯೋಜನವಿಲ್ಲದ ಜೆಡಿಎಸ್ ಉಡುಪಿ ಜಿಲ್ಲಾ ಗೌರವಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷದಿಂದ ಹೊರಗೆ ಬಂದಾಗಿದೆ. ಈಗ ಅಂತಹ ಹತ್ತಾರು ನಿಷ್ಟ್ಪಯೋಜಕ ತಲೆಗಳನ್ನು ಹಿಡಿದುಕೊಂಡು ದೇವಿಪ್ರಸಾದ್ ಶೆಟ್ಟಿ ಕಾಂಗ್ರೆಸ್ ಪಡಸಾಲೆಗೆ ನುಗ್ಗುವುದು ನವೀನ್‌ಚಂದ್ರ ಶೆಟ್ಟಿಯವರಿಗೆ ಇಷ್ಟವಿಲ್ಲ. ತಾವು ಹದ್ದಿನಂತೆ ಕಾದು ಕುಳಿತುಕೊಂಡಿರುವ ಪಕ್ಷಕ್ಕೆ ಈಗ ಹಂದಿ, ತೋಳಗಳು ಬರುವುದು ಅವರಿಗೆ ಬೇಸರ ತಂದಿಯಂತೆ. ಹಾಗಂತ ದೇವಿಗೆ ಈಗ ಕಾಪು ಪಕ್ಷಕ್ಕೆ ಒಳಗೆ ಬರಲು ಮಾರ್ಗ ಮಾತ್ರ, ಅವರ ಅಂತಿಮ ತಾಣ ಮೂಡಬಿದ್ರೆ ಎನ್ನುವುದು ಹಲವರಿಗೆ ಗೊತ್ತಿಲ್ಲ. ಉಳಿದವರ ಹೆದರಿಕೆ ಇಷ್ಟೇ, ಮುಂದಿನ ಬಾರಿ ಸೊರಕೆಯವರು ಬಿಲ್ಲವರ ಮೇಲೆ ಕಣ್ಣಿಟ್ಟು ದಕ್ಷಿಣ ಕನ್ನಡ ಲೋಕಸಭೆಯತ್ತ ಪ್ರಯಾಣ ಬೆಳೆಸಿದರೆ ಕಾಪು ವಿಧಾನಸಭೆಯ ಮೇಲೆ ದೇವಿಪ್ರಸಾದ್ ವಕ್ಕರಿಸಿ ಬಿಡುತ್ತಾನೋ, ಎನ್ನುವುದು. ಹೇಗೆ ನೋಡಿದರೂ ಲಾಭದ ಮೇಲೆನೆ ಕಣ್ಣಿಟ್ಟಿರುವ ದೇವಿಪ್ರಸಾದ್ ಶೆಟ್ಟಿ ಮುಖ್ಯ ಆಟಕ್ಕೆ ಮೂರು ವರ್ಷಗಳಿರುವಾಗಲೇ ಕಾಂಗ್ರೆಸ್ಸಿನ ಅಂಗಣಕ್ಕೆ ಇಳಿದಿರುವುದು ಕರಾವಳಿಯ ಪುಟ್ಟ ವಿಧಾನಸಭಾ ಕ್ಷೇತ್ರದಲ್ಲಿ ಕುತೂಹಲ ಮೂಡಿಸಿದೆ.
ಕೃಪೆ : ಮೆಗಾ ಮಿಡಿಯಾ ನ್ಯೂಸ್ ಪತ್ರಿಕೆ
Click this button or press Ctrl+G to toggle between Kannada and English