ಪ್ರತ್ಯೇಕ ತುಳು ರಾಜ್ಯ ಅಸ್ತಿತ್ವಕ್ಕೆ ಕರಾವಳಿ ಸಜ್ಜು…

1:16 AM, Thursday, October 15th, 2015
Share
1 Star2 Stars3 Stars4 Stars5 Stars
(5 rating, 5 votes)
Loading...
Punaruru

ಮಂಗಳೂರು : ತುಳು ರಾಜ್ಯದ ಅವಶ್ಯಕತೆ ಹಿಂದಿಗಿಂತ ಈಗ ಹೆಚ್ಚಾಗಿದೆ. ಅದಕ್ಕೆ ಈಗ ಹೆಚ್ಚಿನ ಬಲ ಕೂಡ ಬಂದಿದೆ ಮತ್ತು ಆಶ್ಚರ್ಯ ಎಂದರೆ ತುಳು ರಾಜ್ಯವಾದರೆ ತಾವು ಅದಕ್ಕೆ ಸೇರಲು ಸಿದ್ಧ ಎಂದು ಕಾಸರಗೋಡು ಜಿಲ್ಲೆಯಲ್ಲಿರುವ ತುಳು-ಕನ್ನಡಿಗರು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಅಷ್ಟಕ್ಕೂ ತುಳು ರಾಜ್ಯದ ನಿರ್ಮಾಣಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಧಾನವಾಗಿ ಕ್ರಾಂತಿಯಾಗುತ್ತದೆ. ಬಾರ್ಕೂರಿನಿಂದ ಹಿಡಿದು ಕಾಸರಗೋಡುವಿನ ತನಕ, ಶಿವಮೊಗ್ಗ ಮತ್ತು ಚಿಕ್ಕಮಗಳೂರಿನ ಕೆಲವು ಗ್ರಾಮಗಳು ಸೇರಿದರೆ ಪ್ರತ್ಯೇಕ ತುಳು ರಾಜ್ಯದ ನಿರ್ಮಾಣ ಕಷ್ಟವೇನಲ್ಲ. ಅಷ್ಟಕ್ಕೂ ಇಲ್ಲಿಯ ತನಕ ರಾಜ್ಯವನ್ನು ಪ್ರತ್ಯೇಕಿಸಲು ಒಪ್ಪದಂತಹ ವಿವಿಧ ಪರಿಸರ ಉಳಿಸಿ ಹೋರಾಟ ಸಮಿತಿಯವರಿಗೆ ಈಗ ಈ ತುಳು ರಾಜ್ಯ ಆದರೆ ಮಾತ್ರ ನಮ್ಮ ಕರಾವಳಿಗರು ಬದುಕುತ್ತಾರೆ ಎಂದು ಮನವರಿಕೆ ಆಗಿದೆ. ಯಾವಾಗ ತುಳು ರಾಜ್ಯಕ್ಕೆ ಬೇಡಿಕೆ ಕಂಡು ಬಂತೊ, ಕಾಸರಗೋಡು ತುಳು-ಕನ್ನಡಿಗರ ದಶಕಗಳ ಆಸೆಗೆ ಮತ್ತೆ ರೆಕ್ಕೆ ಪುಕ್ಕ ಬಂದಿದೆ.

ಹೇಗೂ ನೀವು ನಮ್ಮನ್ನು ಕರ್ನಾಟಕಕ್ಕೆ ಸೇರಿಸುವುದಿಲ್ಲ. ಒಂದು ವೇಳೆ ಕರ್ನಾಟಕ ಹೋಳಾಗಿ ಪ್ರತ್ಯೇಕ ರಾಜ್ಯವೇನಾದರೂ ಆದರೆ ಅದರಲ್ಲಿ ನಮ್ಮನ್ನು ಸೇರಿಸಲು ಮರೆಯಬೇಡಿ ಎಂದು ಕಾಸರಗೋಡುವಿನ ಅನೇಕ ನಾಯಕರು ಬಯಕೆ ವ್ಯಕ್ತಪಡಿಸಿದ್ದಾರೆ. ಆ ಕುರಿತು ಅನೇಕ ರಹಸ್ಯ ಸಭೆಗಳು ನಡೆದಿವೆ. ಅಷ್ಟಕ್ಕೂ ಕಾಸರಗೋಡು ಜಿಲ್ಲೆಯವರಿಗೆ ಈಗ ಈ ಮನಸ್ಸು ಬಂದದ್ದು ಹೇಗೆ? ಅದು ಇಂಟರೆಸ್ಟಿಂಗ್ ವಿಷಯ. ಯಾವುದೇ ಒಂದು ರಾಜ್ಯದ ಗಡಿ ಜಿಲ್ಲೆಗಳಲ್ಲಿ ವಾಸಿಸುವ ನಾಗರಿಕರಿಗೆ ಅದೊಂದು ರೀತಿಯಲ್ಲಿ ನರಕಯಾತನೆ. ಅತ್ತ ವಾಸಿಸುವ ರಾಜ್ಯದಲ್ಲಿಯೇ ಪರಕೀಯರಂತೆ, ಏನಾದರೂ ಸರಕಾರಿ ಕೆಲಸಗಳಾಗಬೇಕಾದರೆ ಗಂಟೆಗಟ್ಟಲೆ ಪ್ರಯಾಣ ಮಾಡಿ ರಾಜಧಾನಿ ತಲುಪಬೇಕು. ಈ ಇಕ್ಕಟ್ಟಿನಲ್ಲಿಯೇ ಅಲ್ಲಿನ ಜನ ವಾಸಿಸುತ್ತಾರೆ. ಅದು ಕರ್ನಾಟಕ- ಮಹಾರಾಷ್ಟ್ರದ ಗಡಿ ಆಗಿರಲಿ, ಕರ್ನಾಟಕ-ಕೇರಳದ ಗಡಿ ಇರಲಿ. ಅಲ್ಲಿ ವಾಸಿಸುವ ಜನರಿಗೆ ಭಾವನಾತ್ಮಕವಾಗಿ ತಾವು ಮಾತನಾಡುವ ಭಾಷೆಯನ್ನು ರಾಜ್ಯ ಭಾಷೆಯನ್ನಾಗಿ ಹೊಂದಿರುವ ರಾಜ್ಯದ್ದೇ ಪ್ರಜೆ ಆಗಬೇಕು ಎನ್ನುವ ಆಸೆ ಇರುತ್ತದೆ. ಆ ನಿಟ್ಟಿನಲ್ಲಿ ಕಾಸರಗೋಡು ಜಿಲ್ಲೆಯ ನಾಗರಿಕರ ಆಶಯ ತಪ್ಪಲ್ಲ. ಕೇರಳಿಗರ ಚಾಣಾಕ್ಷ ಬುದ್ಧಿಯ ಮಲಯಾಳಿಗಳು ಆವತ್ತು ಡಬಲ್ ಗೇಮ್ ಆಡದೇ ಹೋಗಿದಿದ್ದರೆ ಇವತ್ತು ಕಾಸರಗೋಡು ಕರ್ನಾಟಕದಲ್ಲಿಯೇ ವಿಲೀನವಾಗುತ್ತಿತ್ತು. ಅದು 1953 ನೇ ಇಸವಿ. ಭಾಷೆಗಳ ಆಧಾರದಲ್ಲಿ ಪ್ರಾಂತ್ಯಾವಾರು ರಚನೆಯಾಗುವ ಸಂದರ್ಭ. ಅದಕ್ಕಾಗಿ ಫಣಿಕ್ಕರ್ ಅವರ ಅಧ್ಯಕ್ಷತೆಯಲ್ಲಿ ಒಂದು ಸಮಿತಿಯ ನಿರ್ಮಾಣವಾಗಿತ್ತು. ಭಾಷೆಗಳ ಆಧಾರದಲ್ಲಿ ರಾಜ್ಯಗಳನ್ನು ವಿಂಗಡಿಸುವುದಕ್ಕಾಗಿ ವಿವಿಧ ಪ್ರದೇಶಗಳಿಗೆ ಭೇಟಿ ಕೊಟ್ಟು ಅಲ್ಲಿನ ಜನರ ಮನಸ್ಥಿತಿ ಅರಿತು ಅವರು ಯಾವ ರಾಜ್ಯಕ್ಕೆ ಸೇರಬೇಕು ಎಂದು ನಿರ್ಧರಿಸಲು ಫಣಿಕ್ಕರ್ ಸಮಿತಿ ನಿರ್ಧರಿಸಿತು. ಅಂತಹ ಒಂದು ದಿನ ಈ ಸಮಿತಿಯ ಸದಸ್ಯರು ಮಂಗಳೂರಿನ ಕಂಕನಾಡಿ ರೈಲ್ವೆ ನಿಲ್ದಾಣಕ್ಕೆ ಬಂದಿದೆ. ಅಲ್ಲಿ ಒಂದಿಷ್ಟು ಜನರನ್ನು ಮಾತನಾಡಿಸಿ ಅವರ ಮನಸ್ಸನ್ನು ಅರಿತು ಬಳಿಕ ನಿರ್ಧಾರಕ್ಕೆ ಬರೋಣ ಎಂದು ಇವರು ತಮ್ಮೊಳಗೆ ಅಭಿಪ್ರಾಯಕ್ಕೆ ಬಂದಿದ್ದರು. ಫಣಿಕ್ಕರ್ ಸಮಿತಿ ಕಾಸರಗೋಡು ಜಿಲ್ಲೆಯ ಬಗ್ಗೆ ಸಮೀಕ್ಷೆ ನಡೆಸಲು ಮಂಗಳೂರು ರೈಲು ನಿಲ್ದಾಣಕ್ಕೆ ಬಂದಿಳಿಯುತ್ತಿರುವ ಸುದ್ದಿ ಅದೇಗೊ ಕೇರಳದ ಮುಖಂಡರಿಗೆ ಗೊತ್ತಾಗಿ ಹೋಯಿತು. ತಕ್ಷಣ ಅವರು ಏನು ಮಾಡಿದರು ಗೊತ್ತಾ? ಫಣಿಕ್ಕರ್ ಅವರು ಕಾಸರಗೋಡು ಜಿಲ್ಲೆಯೊಳಗೆ ಕಾಲಿಟ್ಟರೆ ಅವರಿಗೆ ಸತ್ಯಾಂಶ ಗೊತ್ತಾಗಿ ಬಿಡುತ್ತದೆ. ಅದಕ್ಕಾಗಿ ಉಪಾಯವಾಗಿ ಅವರನ್ನು ಮಂಗಳೂರಿನಲ್ಲಿಯೇ ಮೈಂಡ್ ವಾಷ್ ಮಾಡೋಣ ಎಂದು ಪ್ಲಾನ್ ಮಾಡಲಾಯಿತು. ಅದರಂತೆ ದೊಡ್ಡ ಪ್ರಮಾಣದಲ್ಲಿ ಮಲಯಾಳಿ ದಿನಪತ್ರಿಕೆಗಳನ್ನು ಖರೀದಿಸಲಾಯಿತು. ಮಲಯಾಳಿ ಮನೋರಮಾ, ಮಾತೃಭೂಮಿ ಪತ್ರಿಕೆಗಳನ್ನು ಕಾಸರಗೋಡುವಿನಿಂದ ಮಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ಇಳಿಯುವ ನೂರಾರು ಜನರಿಗೆ ಹಂಚಲಾಯಿತು. ಆಕರ್ಷಕ ಮುಖಪುಟಗಳನ್ನು ಹೊಂದಿರುವ ಪ್ರಖ್ಯಾತ ದಿನಪತ್ರಿಕೆಗಳನ್ನು ಉಚಿತವಾಗಿ ಹಂಚಿದರೆ ಯಾರು ತಾನೆ ಬೇಡಾ ಎಂದಾರು? ಮಂಗಳೂರು ರೈಲು ನಿಲ್ದಾಣ ಬರುತ್ತಿದ್ದ ಹಾಗೆ ಕೈಯಲ್ಲಿ ಪತ್ರಿಕೆಗಳನ್ನು ಯಾರೋ ಕೊಡುತ್ತಿದ್ದ ಹಾಗೆ ಜನ ಕೂಡ ಅದನ್ನು ಹಿಡಿದುಕೊಂಡೇ ರೈಲಿನಿಂದ ಇಳಿಯುತ್ತಿದ್ದರು. ನಿಲ್ದಾಣದಲ್ಲಿ ಉಪಸ್ಥಿತರಿದ್ದ ಫಣಿಕ್ಕರ್ ಮತ್ತು ಸಮಿತಿಯವರಿಗೆ ಅದನ್ನು ತೋರಿಸಿದ ಮಲಯಾಳಿ ಮುಖಂಡರು ನೋಡಿ ಸರ್, ಪ್ರತಿಯೊಬ್ಬರ ಕೈಯಲ್ಲೂ ಒಂದೊಂದು ಮಲಯಾಳಿ ಪತ್ರಿಕೆ. ಎಲ್ಲರೂ ಕಾಸರಗೋಡುವಿನಲ್ಲಿ ಮಲಯಾಳಿ ಭಾಷೆಯೇ ಮಾತನಾಡುವುದು, ಅಲ್ಲಿ ಕನ್ನಡದ ಬಗ್ಗೆ ಯಾರಿಗೂ ಒಲವಿಲ್ಲ. ಕನ್ನಡ ಮಾತನಾಡುವವರು ವಿರಳ. ಎಲ್ಲರೂ ಮಲಯಾಳಿಗಳೆ ಎಂದು ಕಿವಿ ಊದಿದರು. ಪ್ರತಿಯೊಬ್ಬರ ಕೈಯಲ್ಲಿ ಮಲಯಾಳಿ ಪತ್ರಿಕೆ ಇರುವುದನ್ನು ಕಣ್ಣಾರೆ ನೋಡಿದ ಫಣಿಕ್ಕರ್ ಸಮಿತಿಯವರು ಇನ್ನೂ ಕಾಸರಗೋಡಿಗೆ ಸಮಯ ವ್ಯರ್ಥ ಮಾಡುವುದು ಬೇಡಾ ಎಂದು ತೀರ್ಮಾನಿಸಿ ಹಿಂದಿರುಗಿ ಹೋದರು. ರಾಜಧಾನಿಗೆ ಹೋದ ಮೇಲೆ ತಮ್ಮ ಅಂತಿಮ ವರದಿಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಮಲಯಾಳಿ ಭಾಷೆಯ ಅಧಿಪತ್ಯ ಇರುವುದರಿಂದ ಅದು ಕೇರಳಕ್ಕೆ ಸೇರಬೇಕು ಎಂದು ಷರಾ ಬರೆದುಬಿಟ್ಟರು. ಹಾಗೆ ತುಳು-ಕನ್ನಡಿಗರೇ ಹೆಚ್ಚಿದ್ದ ಕಾಸರಗೋಡು ಕೇರಳದ ಪಾಲಾಯಿತು. ಅಲ್ಲಿಗೆ ಮಲಯಾಳಿಗಳ ಕುತಂತ್ರಕ್ಕೆ ಜಯವಾಯಿತು.

ಇನ್ನೂ ನಾವು ಕರ್ನಾಟಕದವರು ಎಂತಹ ದುರಾದೃಷ್ಟವಂತರು ಎಂದರೆ ಅತ್ತ ಕರ್ನಾಟಕದ ಪಾಲಾಗಲಿದ್ದ ಊಟಿಯನ್ನು ಉಳಿಸಲಾಗಿಲ್ಲ. ಇತ್ತ ಕಾಸರಗೋಡು ನಮ್ಮಿಂದ ಕೈ ತಪ್ಪಿ ಹೋಗಿತ್ತು. ಆದರೆ 60 ವರ್ಷಗಳ ಹಿಂದೆ ಫಣಿಕ್ಕರ್ ಸಮಿತಿಯ ಕಣ್ತಪ್ಪಿನಿಂದ ಆದ ಪ್ರಮಾದವನ್ನು ಸರಿಪಡಿಸಲು ಕಾಸರಗೋಡು ಜನ ಮುಂದಾಗಿದ್ದಾರೆ. ಅಲ್ಲಿ ಈಗ ಕನ್ನಡ ಭಾಷೆಯಲ್ಲಿ ಕಲಿಯುವ ಮಕ್ಕಳಿಗೆ ವಿಶೇಷ ಸನ್ಮಾನ ಕಾರ‍್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಕನ್ನಡ ಭಾಷೆಯಲ್ಲಿ ಕಲಿಯಲು ಒತ್ತು ನೀಡಲಾಗುತ್ತಿದೆ. ಈ ಬಗ್ಗೆ ಮೆಗಾ ಮೀಡಿಯಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷರಾಗಿರುವ ಹರಿಕೃಷ್ಣ ಪುನರೂರು ಅವರನ್ನು ಸಂಪರ್ಕಿಸಿದಾಗ ನಮ್ಮ ಕರಾವಳಿಯನ್ನು ಸೇರಿಸಿ, ನ್ಯಾಯಯುತವಾಗಿ ನಮಗೆ ಸೇರಬೇಕಾಗಿದ್ದ ಕಾಸರಗೋಡು ಜಿಲ್ಲೆಯನ್ನು ಒಳಗೊಂಡು, ಶಿವಮೊಗ್ಗ ಮತ್ತು ಚಿಕ್ಕಮಗಳೂರಿನ ಗಡಿ ಗ್ರಾಮದಲ್ಲಿ ತುಳು ಬಾಷೆಯನ್ನು ಮಾತನಾಡುವವರನ್ನು ಸೇರಿಸಿ ನ್ಯಾಯಯುತ ಹೋರಾಟ ಮಾಡಿದರೆ ಪ್ರತ್ಯೇಕ ತುಳು ರಾಜ್ಯ ಆಗಿಯೇ ಆಗುತ್ತದೆ ಎಂದು ಹೇಳುತ್ತಾರೆ. ಕನ್ನಡ ನಮ್ಮ ಸಾಕು ಭಾಷೆ, ತುಳು ಮಾತೃ ಭಾಷೆ. ಎರಡೂ ಭಾಷೆಯ ಬಗ್ಗೆ ಗೌರವವಿದೆ. ಆದರೆ ನಮ್ಮ ಮೌನವನ್ನು ನಮ್ಮ ಬಲಹೀನತೆ ಎಂದು ಅಂದುಕೊಂಡಿರುವ ರಾಜಕಾರಣಿಗಳು ಎಲ್ಲಿಯೂ ಸಲ್ಲದ ಕೈಗಾರಿಕೆಗಳನ್ನು ನಮ್ಮ ಕರಾವಳಿಯಲ್ಲಿ ಹಾಕುವ ಮೂಲಕ ಇಲ್ಲಿ ಪರೋಕ್ಷವಾಗಿ ದಬ್ಬಾಳಿಕೆ ನಡೆಸುತ್ತಾ ಇದ್ದಾರೆ ಎಂದು ತಿಳಿಸಿದರು. ಈಗ ನೇತ್ರಾವತಿಯನ್ನು ಉಳಿಸುವ ಪ್ರಯತ್ನ ಆರಂಭವಾಗಿದೆ. ಅದು ನಮ್ಮಲ್ಲೇ ಉಳಿಯಬೇಕಾದರೆ ನಾವು ಸ್ವಾವಲಂಬಿ ಆಗಬೇಕು. ನಾವು ಪ್ರತ್ಯೇಕ ರಾಜ್ಯ ಹೊಂದಿದರೆ ನೇತ್ರಾವತಿ ಮತ್ತು ನಮ್ಮ ಇತರ ಅಮೂಲ್ಯ ನದಿಗಳು ನಮ್ಮಲ್ಲಿಯೇ ಉಳಿಯುತ್ತವೆ. ನಮ್ಮ ದಕ್ಷಿಣ ಕನ್ನಡದಷ್ಟೇ ಚಿಕ್ಕದಾಗಿರುವ ಗೋವಾ ಪ್ರತ್ಯೇಕ ರಾಜ್ಯವಾಗುವುದಾದರೆ ಮೂರು ಜಿಲ್ಲೆಗಳನ್ನು ಒಳಗೊಂಡ ನಾವೇಕೆ ಪ್ರತ್ಯೇಕ ತುಳು ರಾಜ್ಯವಾಗಬಾರದು?

ಕೃಪೆ : ಮೆಗಾ ಮೀಡಿಯಾ ಪತ್ರಿಕೆ

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English