ದ.ಕ.ಜಿಲ್ಲಾ ಪೊಲೀಸ್ ಫೇಸ್‌ಬುಕ್, ಟ್ವಿಟರ್ ಸೇರಿದಂತೆ ನೂತನ ವೆಬ್ ಸೈಟ್ ಗೆ ಚಾಲನೆ

12:44 PM, Sunday, October 18th, 2015
Share
1 Star2 Stars3 Stars4 Stars5 Stars
(5 rating, 6 votes)
Loading...

Police website

ಮಂಗಳೂರು : ದ.ಕ.ಜಿಲ್ಲಾ ಪೊಲೀಸ್ ವತಿಯಿಂದ ಹೊಸ ತಂತ್ರಾಂಶಗಳಾದ ಫೇಸ್‌ಬುಕ್, ಟ್ವಿಟರ್ ಸೇರಿದಂತೆ ನೂತನ ವೆಬ್ ಸೈಟ್ ನ್ನು ಶನಿವಾರ ಎಸ್ಪಿ ಕಚೇರಿಯಲ್ಲಿ ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶರಣಪ್ಪ ಎಸ್.ಡಿ. ಅವರು ಚಾಲನೆ ನೀಡಿದರು.

ದ.ಕ. ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಯುವ ಅಪರಾಧ ಸೇರಿದಂತೆ ವಿವಿಧ ಸುದ್ದಿಗಳ ಬಗ್ಗೆ ಮಾಧ್ಯಮದವರಿಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಕಾರ್ಯಾಚರಿಸುತ್ತಿದ್ದ ಜಿಲ್ಲಾ ಪೊಲೀಸ್ ಬ್ಲಾಗ್‌ನಲ್ಲಿ ಇದೀಗ ಸಮಗ್ರ ಮಾಹಿತಿಯನ್ನು ಅಳವಡಿಸಲಾಗಿದ್ದು, ಸಾರ್ವಜನಿಕರು ಕೂಡಾ ಇದರ ಸದುಪಯೋಗ ಪಡೆಯಬಹುದು ಎಂದು ಹೇಳಿದರು.

ವೆಬ್ ಸೈಟ್ ನಲ್ಲಿ ಜಿಲ್ಲೆಯ ಅಧಿಕಾರಿಗಳು, ಠಾಣಾ ವಿವರದ ಜೊತೆಯಲ್ಲಿ ವಿವಿಧ ರೀತಿಯ ಅಪರಾಧಗಳ ಕುರಿತಂತೆಯೂ ಕಾನೂನು ಮಾಹಿತಿಯನ್ನು ಅಳವಡಿಸಲಾಗಿದೆ ಎಂದರು. ಜಿಲ್ಲೆಯಲ್ಲಿರುವ ಪೊಲೀಸ್ ಠಾಣೆಗಳ ವಿವರದ ಜೊತೆ ದ.ಕ. ಜಿಲ್ಲಾ ಪೊಲೀಸ್ ಇತಿಹಾಸವನ್ನೂ ಇಲ್ಲಿ ನೀಡಲಾಗಿದೆ. ಕೆಲವೊಂದು ಪುಸ್ತಕಗಳ ಮಾಹಿತಿಗಳನ್ನು ಕಲೆ ಹಾಕಿ ಬ್ಲಾಗ್‌ನಲ್ಲಿ ಅಳವಡಿಸಲಾಗಿದೆ.
ಸ್ಥಳೀಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಯುವ ಎಲ್ಲಾ ಮಾಹಿತಿಗಳು ಬ್ಲಾಗ್‌ನಲ್ಲಿ ಸಾರ್ವಜನಿಕರ ವೀಕ್ಷಣೆಗೂ ಲಭ್ಯವಾಗಲಿದೆ. ಪ್ರತಿದಿನ ಬೆಳಗ್ಗೆ 10 ಗಂಟೆಯೊಳಗೆ ಮತ್ತು ಸಂಜೆ 7 ಗಂಟೆಯೊಳಗೆ ವೆಬ್ ಸೈಟ್ ಅಪ್‌ಡೇಟ್ ಮಾಡಲಾಗುವುದು. ವೆಬ್ ಸೈಟ್ ಜೊತೆ ಜಿಲ್ಲಾ ಪೊಲೀಸ್ ಫೇಸ್‌ಬುಕ್ ಕೂಡಾ ಹೊಸತಾಗಿ ಆರಂಭಿಸಲಾಗಿದ್ದು, ಟ್ವಿಟರ್ ಲಿಂಕ್ ಕೂಡಾ ನೀಡಲಾಗಿದೆ ಎಂದು ಎಸ್ಪಿಯವರು ವಿವರ ನೀಡಿದರು.

ಯಾವುದೇ ಸುದ್ದಿ, ಮಾಹಿತಿ ಬಗ್ಗೆ ಸಮರ್ಪಕ ರೀತಿಯಲ್ಲಿ ಟೀಕೆ, ಭಿನ್ನಾಭಿಪ್ರಾಯ ವ್ಯಕ್ತಪಡಿಸುವುದರಲ್ಲಿ ತಪ್ಪಿಲ್ಲ. ಆದರೆ ಆಕ್ಷೇಪಾರ್ಹ ಸಂದೇಶ ರವಾನಿಸಿದ್ದಲ್ಲಿ ಕ್ರಮ ಕೈಗೊಳ್ಳಬೇಕಾಗುತ್ತದೆ. ದ.ಕ. ಜಿಲ್ಲಾ ಪೊಲೀಸ್ ವ್ಯಾಪ್ತಿಯ ಗ್ರಾಮಾಂತರ ಪ್ರದೇಶಗಳಲ್ಲಿ ಸೇರಿದಂತೆ 60 ಕಡೆ ಸಿಸಿಟಿವಿ ಕ್ಯಾಮರಾ ಅಳವಡಿಸಲು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಆ ಬೇಡಿಕೆ ಈಡೇರಬೇಕಾಗಿ ದೆ. ಈಗಾಗಲೇ ಜಿಲ್ಲೆಯ 18 ಕಡೆಗಳಲ್ಲಿ 67 ಸಿಸಿ ಕ್ಯಾಮರಾಗಳು ಕಾರ್ಯಾಚರಿಸುತ್ತಿವೆ ಎಂದು ಅವರು ಹೇಳಿದರು.

ಈ ಸಂದರ್ಭ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿನ್ಸೆಂಟ್ ಶಾಂತಕುಮಾರ್, ಸಹಾಯಕ ಪೊಲೀಸ್ ವರಿಷ್ಠಾಧಿಕಾರಿಗಳಾದ ರಾಹುಲ್ ಕುಮಾರ್ (ಬಂಟ್ವಾಳ), ರಿಷ್ಯಂತ್ (ಪುತ್ತೂರು) ಉಪಸ್ಥಿತರಿದ್ದರು.

Police website

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English