ವಿಶ್ವ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ಟೀಂ ಇಂಡಿಯಾ

9:03 AM, Sunday, April 3rd, 2011
Share
1 Star2 Stars3 Stars4 Stars5 Stars
(No Ratings Yet)
Loading...

ವಿಶ್ವ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ಟೀಂ ಇಂಡಿಯಾಮುಂಬೈ : 28 ವರ್ಷಗಳ ಬಳಿಕ ಭಾರತವು  ಮುಂಬೈಯ ಕಿಕ್ಕಿರಿದ ವಾಂಖೇಡೆ ಕ್ರೀಡಾಂಗಣದಲ್ಲಿ 2011ರ ಕ್ರಿಕೆಟ್ ವಿಶ್ವಕಪ್ ಅನ್ನು ಮುಡಿಗೇರಿಸಿಕೊಂಡಿತು. ಶನಿವಾರ ನಡೆದ ಫೈನಲ್ ಪಂದ್ಯವು ಏಷ್ಯಾದ ಪ್ರಬಲ ತಂಡಗಳೆರಡರ  ಹೋರಾಟಕ್ಕೆ ಸಾಕ್ಷಿಯಾಗಿ ಭಾರತವು 1983ರ ಏಪ್ರಿಲ್ 2ರ ಶನಿವಾರ ಮಾಡಿದ ಸಾಧನೆಯನ್ನೇ ಅದೇ ವಾರ ಅದೇ ತಾರೀಕಿನಲ್ಲಿ 28 ವರ್ಷಗಳ ಬಳಿಕ ಪುನರಾವರ್ತಿಸಿ, ಏಕದಿನ ಕ್ರಿಕೆಟ್ ನಲ್ಲಿ ನಂ.1 ಪಟ್ಟಕ್ಕೇರಿತು.
ವಿಶ್ವ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ಟೀಂ ಇಂಡಿಯಾಶ್ರೀಲಂಕಾ ಒಡ್ಡಿದ 275 ರನ್ನುಗಳ ಬೆಂಬತ್ತಿದ ಭಾರತ, ಅಂತಿಮವಾಗಿ 48.2 ಓವರುಗಳಲ್ಲಿ 4 ವಿಕೆಟ್ ಕಳೆದುಕೊಂಡು ಧೋನಿ ಅವರ ಭರ್ಜರಿ ಸಿಕ್ಸರ್‌ನೊಂದಿಗೆ 277 ರನ್ ದಾಖಲಿಸಿ ವಿಶ್ವ ಚಾಂಪಿಯನ್ ಪಟ್ಟಕ್ಕೆರಿತು.  ಆರಂಭದಲ್ಲೇ ಆಘಾತ ಉಂಟಾಯಿತಾದರು, ನಿಧಾನವಾಗಿ ಚೇತರಿಸಿ ವಿಜಯದ ನಗೆ ಬೀರಿ, ಎರಡನೇ ಬಾರಿಗೆ ಕ್ರಿಕೆಟ್ ಜಗತ್ತಿನ ಸಾಮ್ರಾಟನಾಗಿ ಮೆರೆಯಿತು.
ವಿಶ್ವ ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ಟೀಂ ಇಂಡಿಯಾಜವಾಬ್ದಾರಿಯುತವಾಗಿ ಆಟವಾಡಿದ  ಗಂಭೀರ್ ಅವರ ಆಕರ್ಷಕ 97 ರನ್ ಹಾಗೂ ಕೊನೆಗೂ ವಿಶ್ವಕಪ್ ಕ್ರಿಕೆಟ್ ಕೂಟದಲ್ಲಿ ಅತ್ಯಂತ ಅಗತ್ಯವಿದ್ದಾಗಲೇ ತಮ್ಮ ಜವಾಬ್ದಾರಿಯುತ ‘ನಾಯಕನ’ ಆಟ ಪ್ರದರ್ಶಿಸಿದ ಮಹೇಂದ್ರ ಸಿಂಗ್ ಧೋನಿ ಅವರ ಅಜೇಯ 91 ರನ್ನುಗಳ (79 ಎಸೆತಗಳಲ್ಲಿ) ಅಮೂಲ್ಯ ಕೊಡುಗೆಗಳು ಭಾರತದ ವಿಜಯದಲ್ಲಿ ಮಹತ್ವದ ಪಾತ್ರ ವಹಿಸಿದವು.
ಮಹೇಂದ್ರ ಸಿಂಗ್ ಧೋನಿ ಮತ್ತು ಗಂಭೀರ್ 19.4 ಓವರುಗಳಲ್ಲಿ 109 ರನ್ ಸೇರಿಸಿ ತಂಡಕ್ಕೆ ಭದ್ರ ಬುನಾದಿ ಒದಗಿಸಿದ್ದರು. ಧೋನಿ ಅವರ ನಾಯಕನಾಟದಲ್ಲಿ 8 ಬೌಂಡರಿಗಳು ಹಾಗೂ ಎರಡು  ಸಿಕ್ಸರ್‌ಗಳಿದ್ದವು.
ಲಸಿತ್ ಮಾಲಿಂಗ ಆರಂಭದಲ್ಲಿ ಎರಡು ವಿಕೆಟ್ ಕಬಳಿಸಿದ್ದು ಬಿಟ್ಟರೆ, ಯಾವುದೇ ಹಂತದಲ್ಲಿ ಶ್ರೀಲಂಕಾ ಬೌಲರುಗಳು ಭಾರತೀಯ ದಾಂಡಿಗರಿಗೆ ಸವಾಲೆನಿಸಲಿಲ್ಲ. ಆದರೆ, ದೊಡ್ಡ ಹೊಡೆತಗಳಿಗೆ ಅವಕಾಶ ಕೊಡುತ್ತಿರಲಿಲ್ಲ. ಕೊನೆಯಲ್ಲಿ, ಸಚಿನ್-ಸೆಹ್ವಾಗ್‌ರನ್ನು ಔಟ್ ಮಾಡಿದ್ದ ಇದೇ ಲಸಿತ್ ಮಾಲಿಂಗ ಎಸೆತಗಳನ್ನು ಬೌಂಡರಿಗೆ ಚಚ್ಚುವ ಮೂಲಕ ಯುವರಾಜ್ ಸಿಂಗ್ ಮತ್ತು ಧೋನಿ ಇಬ್ಬರೂ ಸೇಡು ತೀರಿಸಿಕೊಂಡರು.
33ರ ಮೊತ್ತದಲ್ಲಿದ್ದಾಗ ಕ್ಯಾಚ್‌ನಿಂದ ಜೀವದಾನ ಪಡೆದಿದ್ದ ಗಂಭೀರ್, ನಿಧಾನವಾಗಿಯೇ ಇನ್ನಿಂಗ್ಸ್ ಕಟ್ಟುತ್ತಾ, ತಮ್ಮ ಏಕದಿನ ವೃತ್ತಿ ಜೀವನದ 10ನೇ ಶತಕದಿಂದ ವಂಚಿತರಾದರು. ಅವರು 42ನೇ ಓವರಿನಲ್ಲಿ ಪೆರೇರಾ ಎಸೆತದಲ್ಲಿ ಅನಗತ್ಯ ಹೊಡೆತಕ್ಕೆ ಮುಂದಾಗಿ ಬೌಲ್ಡ್ ಔಟ್ ಆಗುವ ಮೊದಲು 122 ಎಸೆತಗಳಲ್ಲಿ 97 ರನ್ ಸೇರಿಸಿದ್ದರು. ಇದರಲ್ಲಿ 9 ಬೌಂಡರಿಗಳಿದ್ದವು.
ಆರಂಭಿಕರಾದ ವೀರೇಂದ್ರ ಸೆಹ್ವಾಗ್ ಮತ್ತು ಸಚಿನ್ ತೆಂಡುಲ್ಕರ್ ಅವರನ್ನು ಬಲುಬೇಗನೇ ಕಳೆದುಕೊಂಡ ಭಾರತಕ್ಕೆ ಅರ್ಧ ಶತಕ ಸಿಡಿಸಿದ ಗೌತಮ್ ಗಂಭೀರ್ ಆಧಾರವಾಗಿದ್ದರು. ವಿರಾಟ್ ಕೋಹ್ಲಿ ಮತ್ತು ನಾಯಕ ಧೋನಿ ಜೊತೆಗೆ ಅವರು ಆಕರ್ಷಕ ಜೊತೆಯಾಟವನ್ನು ಪ್ರದರ್ಶಿಸಿ, ಭಾರತದ ಇನ್ನಿಂಗ್ಸ್‌ಗೆ ಸ್ಥಿರತೆ ನೀಡಿದರು.
7ನೇ ಓವರಿನ ಮೊದಲ ಎಸೆತದಲ್ಲೇ ಸಚಿನ್ ನಿರ್ಗಮಿಸುವುದರೊಂದಿಗೆ ಭಾರತವು 31 ರನ್ನುಗಳಿಗೆ 2 ವಿಕೆಟ್ ಕಳೆದುಕೊಂಡು ಸಂಕಷ್ಟ ಸ್ಥಿತಿಗೆ ತಲುಪಿತ್ತು. ಮಾಲಿಂಗ ಎಸೆತದಲ್ಲಿ ಸಚಿನ್ ಅವರು ವಿಕೆಟ್ ಕೀಪರ್ ಸಂಗಕ್ಕಾರ ಅವರ ಕೈಗೆ ಕ್ಯಾಚಿತ್ತು ನಿರ್ಗಮಿಸುವಾಗ, ಇಡೀ ವಾಂಖೇಡೆ ಸ್ಟೇಡಿಯಂ ಮೌನವಾಗಿತ್ತು. ತಮ್ಮದೇ ನೆಲದ ಸಿಡಿಲಮರಿಯು ಇಷ್ಟು ಬೇಗನೇ ಹೋಗಿದ್ದು, ಶತಕಗಳ ಶತಕ ದಾಖಲಿಸುತ್ತಾರೆ ಎಂದೆಲ್ಲಾ ಕನಸು ಕಾಣುತ್ತಿದ್ದ ಮಂದಿಗೆ ತೀವ್ರ ನಿರಾಶೆ ಮೂಡಿಸಿತು. ಬಹುಶಃ ಇದು ಸಚಿನ್ ಅವರ ಕೊನೆಯ ವಿಶ್ವಕಪ್ ಆಗಿರುವುದೂ ಅಭಿಮಾನಿಗಳ ತೀವ್ರ ನೋವಿಗೆ ಕಾರಣ.
ಆರಂಭಿಕರಿಬ್ಬರ ನಿರ್ಗಮನದ ಬಳಿಕ ಗೌತಮ್ ಗಂಭೀರ್ ಮತ್ತು ವಿರಾಟ್ ಕೋಹ್ಲಿ ತಂಡಕ್ಕೆ ಆಧಾರವಾದರು. ಇಬ್ಬರೂ ಕೂಡ ಆಗಾಗ್ಗೆ ಬೌಂಡರಿಗಳನ್ನು ಬಾರಿಸುತ್ತಾ, ರನ್‌ಗಳನ್ನು ಕದಿಯುತ್ತಾ, 20ನೇ ಓವರಿನಲ್ಲಿ ತಂಡವು 100 ರನ್ ಒಟ್ಟುಗೂಡಿಸಲು ನೆರವಾದರು. ಭಾರತಕ್ಕೆ ವ್ಯತಿರಿಕ್ತವಾಗಿ ಶ್ರೀಲಂಕಾದ ಫೀಲ್ಡಿಂಗ್ ತೀರಾ ಕೆಟ್ಟದಾಗಿದ್ದು, ಹಲವು ಬೌಂಡರಿಗಳು ಹರಿದುಬಂದವು. ಅಂತೆಯೇ ಗಂಭೀರ್ ಕೂಡ 33 ರನ್ ಮಾಡಿದ್ದಾಗ ಕುಲಶೇಖರ ಕೈಯಲ್ಲಿ ಕ್ಯಾಚ್‌ನಿಂದ ಜೀವದಾನ ಪಡೆದಿದ್ದರು.
3ನೇ ವಿಕೆಟಿಗೆ ಇವರಿಬ್ಬರೂ 15.3 ಓವರುಗಳಲ್ಲಿ 83 ರನ್ನುಗಳ ಜತೆಯಾಟ ಪ್ರದರ್ಶಿಸಿ, ಭಾರತ ತಂಡವನ್ನು ಆಧರಿಸಿದ್ದರು. ಆದರೆ 49 ಎಸೆತಗಳಲ್ಲಿ 35 ರನ್ ಮಾಡಿದ್ದ ಕೋಹ್ಲಿ 22ನೇ ಓವರಿನಲ್ಲಿ ದಿಲ್ಶಾನ್ ಅವರ ಆಕರ್ಷಕ ಕ್ಯಾಚ್‌ಗೆ ಬಲಿಯಾದರು. ಆಗ ತಂಡದ ಮೊತ್ತ 3 ವಿಕೆಟ್ ನಷ್ಟಕ್ಕೆ 114. ಅದೇ ಹೊತ್ತಿಗೆ ಗಂಭೀರ್ 56 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದರಲ್ಲದೆ, ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟಿನಲ್ಲಿ 4000 ರನ್ ಪೂರೈಸಿದ 11ನೇ ಆಟಗಾರ ಎಂಬ ಕೀರ್ತಿಗೂ ಪಾತ್ರರಾಗಿದ್ದರು.
ಬಳಿಕ, ಯುವರಾಜ್ ಸಿಂಗ್ ಬದಲು ತಾವೇ 3ನೇ ವಿಕೆಟಿಗೆ ಬಂದು ಗಂಭೀರ್ ಜೊತೆಗೂಡಿದ ನಾಯಕ ಮಹೇಂದ್ರ ಸಿಂಗ್ ಧೋನಿ, 10 ಓವರು (60 ಎಸೆತ)ದಲ್ಲಿ 50 ರನ್ ಸೇರಿಸಿದರು. 30ನೇ ಓವರಿನಲ್ಲಿ ಭಾರತದ 150 ರನ್ನುಗಳು ಬಂದವು. ಅಂದರೆ ಒಟ್ಟು 179 ಎಸೆತಗಳಲ್ಲಿ 150 ರನ್ನುಗಳು ಹರಿದುಬಂದಿದ್ದವು. ಪಾನೀಯ ವಿರಾಮದ ವೇಳೆಗೆ ಭಾರತವು 32 ಓವರುಗಳಲ್ಲಿ 165 ರನ್ ಮಾಡಿತ್ತು. ಇವರಿಬ್ಬರೂ ಸೇರಿಕೊಂಡು ಒಂದೊಂದೇ ರನ್ನುಗಳನ್ನು ಕದಿಯುತ್ತಾ, ಮಧ್ಯೆ ಮಧ್ಯೆ ಬೌಂಡರಿಗಳನ್ನು ಬಾರಿಸುತ್ತಾ, ಅರಿವಿಲ್ಲದಂತೆಯೇ ಶ್ರೀಲಂಕನ್ನರಿಗೆ ಒತ್ತಡ ಹೇರಿದರು.
ರನ್ನುಗಳು ಹರಿದುಬರತೊಡಗಿದಂತೆಯೇ, ಅಗತ್ಯವಿರುವ ರನ್ ರೇಟ್ ಕೂಡ ಓವರಿಗೆ 6ರ ಆಸುಪಾಸಿನಲ್ಲೇ ಓಲಾಡುತ್ತಿತ್ತು. ಧೋನಿಯವರಂತೂ ವಿಶ್ವಕಪ್‌ನಲ್ಲಿ ಇದುವರೆಗೆ ಹೇಳಿಕೊಳ್ಳುವಂತಹಾ ಆಟವಾಡಲಿಲ್ಲ. ಫೈನಲ್ ಪಂದ್ಯದಲ್ಲಾದರೂ ಆಡುವರೇ ಎಂಬ ಅಭಿಮಾನಿಗಳ ಅಭಿಲಾಷೆಗೆ ಸ್ಪಂದಿಸುವಂತೆ, ಹೆಚ್ಚೇನೂ ಚೆಂಡು ವೇಸ್ಟ್ ಮಾಡದೆ ಆಟವಾಡುತ್ತಾ, ಒಂದೊಂದೇ ರನ್ನುಗಳನ್ನು ಕಸಿಯತೊಡಗಿದ್ದರು. ಧೋನಿ ಅವರು ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 6000 ರನ್ ಪೂರೈಸಿ ಹೊಸ ದಾಖಲೆ ಬರೆದರಲ್ಲದೆ, ವಿಶ್ವಕಪ್ ಕ್ರಿಕೆಟಿನಲ್ಲಿ ತಮ್ಮ ಇದುವರೆಗಿನ ವೈಯಕ್ತಿಕ ಗರಿಷ್ಠ ಮೊತ್ತವಾದ 34ನ್ನೂ ಬದಲಾಯಿಸಿ ಅರ್ಧ ಶತಕ ದಾಖಲಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English