ಮಂಗಳೂರು: ಮನೆಗಳ ಮೇಲ್ಛಾವಣಿಗಳಲ್ಲಿ ಸೌರ ವಿದ್ಯುತ್ ಘಟಕಗಳ ಅಳವಡಿಕೆಗೆ ಬ್ಯಾಂಕ್‌ಗಳು ವಿಶೇಷ ಒತ್ತು ನೀಡಿ ಅಗತ್ಯ ಸಾಲ ಸೌಲಭ್ಯವನ್ನು ತ್ವರಿತಗತಿಯಲ್ಲಿ ಒದಗಿಸಲು ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎ. ಬಿ. ಇಬ್ರಾಹಿಂ ಅವರು ಹೇಳಿದರು.
ಸೌರಶಕ್ತಿ ಮೇಲ್ಛಾವಣಿ ಘಟಕ ಅಳವಡಿಕೆಯ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ ಜರಗಿದ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು ಅರ್ಜಿ ಸಲ್ಲಿಸಿದ ಒಂದು ವಾರದೊಳಗೆ ಸಾಲ ಲಭ್ಯವಾಗುವಂತೆ ಬ್ಯಾಂಕ್‌ಗಳು ವಿಶೇಷ ಮುತುವರ್ಜಿ ವಹಿಸಬೇಕು ಹಾಗೂ ಬಡ್ಡಿದರವನ್ನೂ ಕಡಿಮೆ ಪ್ರಮಾಣದಲ್ಲಿ ವಿಧಿಸಬೇಕು ಎಂದು ಕೋರಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೌರವಿದ್ಯುತ್ ಘಟಕ ಅಳವಡಿಕೆ ಪ್ರಕ್ರಿಯೆ ಪ್ರಗತಿಯಲ್ಲಿದ್ದು ಮುಂದಿನ ಮಾರ್ಚ್ ವೇಳೆಗೆ ಕಚೇರಿಗೆ ಬೇಕಾದ ವಿದ್ಯುತ್‌ನ್ನು ಸೋಲಾರ್ ಶಕ್ತಿಯಿಂದ ಪಡೆಯಲಾಗುವುದು.
ನಬಾರ್ಡ್‌ನ ಎಜಿಎಂ ಪ್ರಸಾದ್ ರಾವ್ ಅವರು ಮಾತನಾಡಿ ನವೀಕರಿಸಬಹುದಾದ ವಿದ್ಯುತ್ ಉತ್ಪಾದನೆಗೆ ಒತ್ತು ನೀಡುವ ನಿಟ್ಟಿನಲ್ಲಿ ಆರ್‌ಬಿಐ ಈಗಾಗಲೇ ಪೂರಕ ನೀತಿ ರೂಪಿಸಿದ್ದು ಸೌರಶಕ್ತಿ ಮೇಲ್ಛಾವಣಿ ಘಟಕಕ್ಕೆ ಗರಿಷ್ಠ 10 ಲಕ್ಷ ರೂ.ವರೆಗೆ ಸಾಲ ನೀಡಲು ಅವಕಾಶವಿದೆ. ಈ ದಿಶೆಯಲ್ಲಿ ಪ್ರಸ್ತುತ ಅರ್ಥಿಕ ವರ್ಷದ ಬಾಕಿಯುಳಿದಿರುವ 4 ತಿಂಗಳುಗಳಲ್ಲಿ ಬ್ಯಾಂಕ್‌ಗಳು ಕ್ರಿಯಾಯೋಜನೆ ರೂಪಿಸಿ ಜಿಲ್ಲಾ ಲೀಡ್ ಬ್ಯಾಂಕ್‌ಗೆ ಸಲ್ಲಿಸಬೇಕು ಹಾಗೂ ಮಾರ್ಚ್‌ನೊಳಗೆ 600 ಕೋ.ರೂ. ಸಾಲವನ್ನು ಈ ಕ್ಷೇತ್ರಕ್ಕೆ ಒದಗಿಸಿ ಉತ್ತೇಜನ ನೀಡಬೇಕು ಎಂದರು.
ಲೀಡ್ ಬ್ಯಾಂಕ್ ಮೆನೇಜರ್ ರಾಘವ ಅವರು ಮಾತನಾಡಿ 2016ರ ಮಾರ್ಚ್ 31 ರೊಳಗೆ ದ.ಕನ್ನಡ ಜಿಲ್ಲೆಯಲ್ಲಿ 5000 ಸೌರಶಕ್ತಿ ಮೇಲ್ಛಾವಣಿ ಘಟಕ ಅಳವಡಿಕೆ ಪ್ರಸ್ತಾವನೆಗಳನ್ನು ಪರಿಗಣಿಸಿ ಸಾಲಸೌಲಭ್ಯ ಒದಗಿಸುವ ಗುರಿಯನ್ನು ಹೊಂದಲಾಗಿದೆ. ಜಿಲ್ಲೆಯಲ್ಲಿ 600 ಬ್ಯಾಂಕ್ ಶಾಖೆಗಳಿದ್ದು ಪ್ರತಿಯೊಂದು ಶಾಖೆ ತಿಂಗಳಿಗೆ 3 ರಂತೆ ಪ್ರಸ್ತಾವನೆಗಳನ್ನು ಪರಿಗಣಿಸಿ ಸಾಲ ಒದಗಿಸಿದರೆ ಈ ಗುರಿ ಸಾಧಿಸಲು ಸಾಧ್ಯವಿದೆ ಎಂದರು.
ವಿಧಾನಪರಿಷತ್ ಸದಸ್ಯ ಐವನ್‌ಡಿಸೋಜ ಅವರು ಮಾತನಾಡಿ ಜಿಲ್ಲೆಯಲ್ಲಿ ಸೌರಶಕ್ತಿ ಮೇಲ್ಛಾವಣಿ ಘಟಕ ಅಳವಡಿಕೆ ಅಭಿಯಾನ ಆರಂಭಗೊಂಡಿದ್ದು ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗುತ್ತಿದೆ. ಸೌರಶಕ್ತಿ ಘಟಕ ಅಳವಡಿಕೆಯಿಂದ ಮನೆಗೆ ಅವಶ್ಯವಿರುವ ವಿದ್ಯುತ್‌ನಲ್ಲಿ ಸ್ವಾವಲಂಬನೆ ಸಾಧಿಸಬಹುದಾಗಿದೆ ಹಾಗೂ ಮಿಗತೆ ವಿದ್ಯುತ್‌ನ್ನು ಮೆಸ್ಕಾಂಗೆ ಮಾರಾಟ ಮಾಡಿ ಹಣ ಸಂಪಾದಿಸಲು ಅವಕಾಶವಿದೆ ಎಂದರು. ಈ ನಿಟ್ಟಿನಲ್ಲಿ ಬ್ಯಾಂಕ್‌ಗಳಿಂದ ಹೆಚ್ಚಿನ ಪ್ರೋತ್ಸಾಹ ಅವಶ್ಯವಿದೆ ಎಂದವರು ಮನವಿ ಮಾಡಿದರು.
ಮೆಸ್ಕಾಂ ಆಡಳಿತ ನಿರ್ದೇಶಕ ಚಿಕ್ಕನಂಜಪ್ಪ ಅವರು ಮಾತನಾಡಿ ಸೌರಶಕ್ತಿ ಮೇಲ್ಛಾವಣಿ ಘಟಕ ಅಳವಡಿಕೆಗೆ ಮೆಸ್ಕಾಂ ವತಿಯಿಂದ ವಿಶೇಷ ಉತ್ತೇಜನ ನೀಡಲಾಗುತ್ತದೆ . ಪೂರಕ ಅನುಮತಿ ಪ್ರಕ್ರಿಯೆಗಳು ತ್ವರಿತಗತಿಯಲ್ಲಿ ಆಗುವಂತೆ ಮೆಸ್ಕಾಂ ವಿಭಾಗಗಳಲ್ಲಿ ಕಚೇರಿಗಳಲ್ಲಿ ಏಕಗವಾಕ್ಷಿ ವ್ಯವಸ್ಥೆಯನ್ನು ರೂಪಿಸಲಾಗುವುದು ಎಂದು ತಿಳಿಸಿದರು.
ಕೆಸಿಸಿಐ ಅಧ್ಯಕ್ಷ ರಾಮಮೋಹನ ಪೈ ಮಾರೂರು , ಜಿ.ಪಂ. ಸಿಇಒ ಶ್ರೀಶ್ರೀವಿದ್ಯಾ, ಅಪರ ಜಿಲ್ಲಾಧಿಕಾರಿ ಕುಮಾರ್, ಮಹಾನಗರ ಪಾಲಿಕೆ ಆಯುಕ್ತ ಡಾ | ಎಚ್. ಎನ್. ಗೋಪಾಲ ಕೃಷ್ಣ ಉಪಸ್ಥಿತರಿದ್ದರು.
ಸೌರಶಕ್ತಿ ಮೇಲ್ಛಾವಣಿ ಘಟಕ ಯೋಜನೆ ಅತ್ಯಂತ ಉಪಯುಕ್ತವಾಗಿದೆ. 1 ಕಿಲೋವ್ಯಾಟ್ ವಿದ್ಯುತ್ ತಯಾರಿ ಸೌರಫಲಕ ಅಳವಡಿಸಲು 100 ಚದರ ಅಡಿ ವಿಸ್ತೀರ್ಣ ಅವಶ್ಯವಿದೆ. ಮನೆಗೆ ಉಪಯೋಗಿಸಿ ಮಿಗತೆ ವಿದ್ಯುತ್‌ನ್ನು ಖರೀದಿಸುವ ಬಗ್ಗೆ ಮೆಸ್ಕಾಂ 25 ವರ್ಷಗಳ ಒಡಂಬಡಿಕೆ ಮಾಡಿಕೊಡುತ್ತದೆ ಹಾಗೂ ಪ್ರತಿ ಯೂನಿಟ್‌ಗೆ 9.56 ರೂ. ನೀಡಿ ಖರೀದಿಸುತ್ತದೆ. ಇವರು ಮೆಸ್ಕಾಂ ಗ್ರಾಹಕರಾಗಿರಬೇಕು. ಅಳವಡಿಕೆಗೆ ಸಮೀಪದ ಮೆಸ್ಕಾಂ ಉಪವಿಭಾಗ ಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕು. ಮೆಸ್ಕಾಂ ಅಧಿಕಾರಿ ಅರ್ಜಿಯನ್ನು ಪರಿಶೀಲನೆ ಮಾಡಿ 1 ವಾರದೊಳಗೆ ಮಂಜೂರು ಮಾಡಿ ಅನುಮತಿ ಪತ್ರ ನೀಡುತ್ತಾರೆ. ಮನೆಗಳಲ್ಲಿ ಸೋಲಾರ್ ಅಳವಡಿಸಿದರೆ ಎಂಎನ್‌ಆರ್ ಇ ವತಿಯಿಂದ ಶೇ 30ರಷ್ಟು ಸಬ್ಸಿಡಿ ಲಭ್ಯ. ಸಬ್ಸಿಡಿ ಪಡೆದರೆ ವಿದ್ಯುತ್ ಖರೀದಿ ಸಂದರ್ಭದಲ್ಲಿ ಯೂನಿಟ್‌ಗೆ ಬೆಲೆ ಕಡಿಮೆ ನಿಗದಿ ಮಾಡಲಾಗುತ್ತದೆ ಎಂದು ಮೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದರು.
Click this button or press Ctrl+G to toggle between Kannada and English