ಧರ್ಮಸ್ಥಳ : ಲಕ್ಷದೀಪೋತ್ಸವ ಸಂದರ್ಭದಲ್ಲಿ ಅಲ್ಲಿನ ಪ್ರೌಢಶಾಲಾ ವಠಾರದಲ್ಲಿ ಆಯೋಜಿಸಲಾದ ರಾಜ್ಯ ಮಟ್ಟದ ವಸ್ತು ಪ್ರದರ್ಶನವನ್ನು ಭಾನುವಾರ ದ.ಕ. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಉದ್ಘಾಟಿಸಿದರು.
ನಾವೆಲ್ಲರೂ ಜಾತಿ-ಮತ, ಭೇದ ಮರೆತು ಪರಸ್ಪರ ಪ್ರೀತಿ-ವಿಶ್ವಾಸದಿಂದ ದೇಶದ ಪ್ರಗತಿಗಾಗಿ ಸಂಘಟಿತ ಪ್ರಯತ್ನ ಮಾಡಬೇಕು ಎಂದು ದ.ಕ. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಹೇಳಿದರು.
ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಸಂದರ್ಭದಲ್ಲಿ ಅಲ್ಲಿನ ಪ್ರೌಢಶಾಲಾ ವಠಾರದಲ್ಲಿ ಆಯೋಜಿಸಲಾದ ರಾಜ್ಯ ಮಟ್ಟದ ವಸ್ತು ಪ್ರದರ್ಶನವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.
ಯುವಜನತೆ ದೇಶದ ಅಮೂಲ್ಯ ಮಾನವ ಸಂಪನ್ಮೂಲವಾಗಿದ್ದು ತಾವು ಪ್ರಗತಿ ಸಾಧಿಸುವುದರ ಜೊತೆಗೆ ಇತರರೂ ಅಭಿವೃದ್ಧಿ ಪಥದಲ್ಲಿ ಸಾಗುವಂತೆ ಮಾಡಬೇಕು ಎಂದು ಅವರು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಬ್ಯಾಂಕ್‌ಗಳು, ಉದ್ಯಮಿಗಳು ಹಾಗೂ ಸರ್ಕಾರದ ವಿವಿಧ ಇಲಾಖೆಗಳ ಮಳಿಗೆಗಳಿದ್ದು ಜನರು ಇದರ ಸದುಪಯೋಗ ಪಡೆಯಬೇಕು. ಆಧುನಿಕ ಕೃಷಿ ಯಂತ್ರೋಪಕರಣಗಳು ಹಾಗೂ ತಾಂತ್ರಿಕ ಮಾಹಿತಿಯ ಪ್ರಯೋಜನ ಪಡೆಬೇಕು ಎಂದು ಸಲಹೆ ನೀಡಿದರು.
ಜಗದೀಶ್ ಪ್ರಸಾದ್ ಸ್ವಾಗತಿಸಿದರು. ಸುನಿಲ್ ಪಂಡಿತ್ ಧನ್ಯವಾದವಿತ್ತರು. ಡಾ. ಬಿ.ಎ. ಕುಮಾರ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು.
ವಸ್ತು ಪ್ರದರ್ಶನದಲ್ಲಿ 195 ಮಳಿಗೆಗಳಿದ್ದು ಪ್ರತಿದಿನ ಬೆಳಿಗ್ಗೆ ಗಂಟೆ 9 ರಿಂದ ರಾತ್ರಿ 6 ರ ವರೆಗೆ ಉಚಿತ ಪ್ರವೇಶಾವಕಾಶವಿದೆ.
ಮಂಗಳೂರಿನ ಕದ್ರಿಯ ಕು. ರಂಜಿತಾ ಎಲ್ಲೂರು ಮತ್ತು ರಕ್ಷಿತಾ ಎಲ್ಲೂರು ಅವರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆದವು.
ರಾತ್ರಿ ಶ್ರೀ ಮಂಜುನಾಥ ಸ್ವಾಮಿಯ ಹೊಸಕಟ್ಟೆ ಉತ್ಸವ ನಡೆಯಿತು.
Click this button or press Ctrl+G to toggle between Kannada and English