ಉಪ್ಪಳ: ಕಳೆದ 15 ವರ್ಷಗಳಿಂದ ನಿಷ್ಪಕ್ಷಪಾತ,ಭ್ರಷ್ಠಾಚಾರ ರಹಿತ ಆಡಳಿತ ನೀಡಿದ ಬಿಜೆಪಿ ನೇತೃತ್ವದ ಆಡಳಿತವನ್ನು ಈ ಬಾರಿಯೂ ಜನತೆ ಒಪ್ಪಿ ಬಹುಮತದಿಂದ ಗೆಲ್ಲಿಸಿದ್ದರು.ಆದರೆ ಪ್ರತಿಪಕ್ಷಗಳ ಅನೈತಿಕ ಒಳಒಪ್ಪಂದದ ಫಲವಾಗಿ ಜನರಿಂದ ತಿರಸ್ಕರಿಸಲ್ಪಟ್ಟವರು ಅಧಿಕಾರ ಲಾಲಸೆಯಿಂದ ಒಂದಾಗಿ ಗ್ರಾಮ ಪಂಚಾಯತ್ ಅಧಿಕಾರದ ಚುಕ್ಕಾಣಿ ಹಿಡಿದಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಣಕಿಸುವಂತದ್ದು ಎಂದು ಭಾರತೀಯ ಜನತಾ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ,ಜಿಲ್ಲಾ ಪಂಚಾಯತ್ ಸದಸ್ಯ ಅಡ್ವ.ಶ್ರೀಕಾಂತ್ ಅಭಿಪ್ರಾಯ ವ್ಯಕ್ತಪಡಿಸಿದರು.
ಇತ್ತೀಚೆಗೆ ನಡೆದ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ಪೈವಳಿಕೆ ಗ್ರಾಮ ಪಂಚಾಯತಿಯಲ್ಲಿ ಬಹುಮತದಿಂದ ಆಯ್ಕೆಯಾದ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಾರದಂತೆ ಯುಡಿಎಫ್ ಹಾಗೂ ಎಲ್‌ಡಿಎಫ್ ಜೊತೆಯಾಗಿ ಪಂಚಾಯತ್ ಆಡಳಿತ ನಡೆಸುತ್ತಿರುವುದನ್ನು ಖಂಡಿಸಿ ಮಂಗಳವಾರ ಸಂಜೆ ಪೈವಳಿಕೆ ನಗರದಲ್ಲಿ ನಡೆದ ಬೃಹತ್ ಪ್ರತಿಭಟನಾ ರ‍್ಯಾಲಿ ಹಾಗೂ ಜನಜಾಗೃತಿ ಸಭೆಯಲ್ಲಿ ಪ್ರಧಾನ ಭಾಷಣಕಾರರಾಗಿ ಅವರು ಮಾತನಾಡುತ್ತಿದ್ದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಹುಮತದಿಂದ ಗೆದ್ದ ಪಕ್ಷವನ್ನು ಅಧಿಕ್ಕಾರಕ್ಕೇರದಂತೆ ತಡೆಯಲು ಸೋತ ಪಕ್ಷಗಳು ಒಂದಾಗುವುದಾದರೆ ಚುನಾವಣೆ ನಡೆಸುವ ಔಚಿತ್ಯವಾದರೂ ಏನು ಎಂದು ಪ್ರಶ್ನಿಸಿದ ಅವರು,ಅಧಿಕಾರ ಲಾಲಸೆ ಹಾಗೂ ವಂಚನೆ ನಡೆಸುವ ಹುನ್ನಾರಗಳು ಬುದ್ದಿಯಾಗಿರುವವರಿಗೆ ಜನಪರ ಆಡಳಿತದ ಮಹತ್ವ ಅರಿವಾಗುವುದಿಲ್ಲವೆಂದು ಅವರು ಲೇವಡಿ ಮಾಡಿದರು.ಬಿಜೆಪಿಯ ಆಯ್ಕೆಯಾದ ಎಲ್ಲಾ ಎಂಟು ಸದಸ್ಯರೂ ರಾಜೀನಾಮೆ ನೀಡಿ ಮತ್ತೆ ಚುನಾವಣೆ ಎದುರಿಸಲು ಸಿದ್ದವಿದೆ.ದೈರ್ಯವಿದ್ದರೆ ಗ್ರಾಮ ಪಂಚಾಯತ್ ಸ್ಥಾನಗಳಿಗೆ ರಾಜೀನಾಮೆ ನೀಡಿ ಮತ್ತೆ ಚುನಾವಣೆ ಎದುರಿಸುವ ಸಾಮರ್ಥ್ಯ ಯುಡಿಎಫ್ ಹಾಗೂ ಎಲ್‌ಡಿಎಫ್ ಗಳಿಗಿವೆಯೇ ಎಂದವರು ಸವಾಲೆಸೆದರು.
ಆನರ ಅಭಿಪ್ರಾಯಕ್ಕೆ ಬೆಲೆ ನೀಡದ ಪಕ್ಷಗಳು ಅಧಿಕಾರದ ಆಸೆಗೆ ಒಟ್ಟು ವ್ಯವಸ್ಥೆಯನ್ನೇ ಬುಡಮೇಲುಗೊಳಿಸುತ್ತವೆಯೆಂದರೆ ಅವರಿಂದ ಉತ್ತಮ ಆಡಳಿತ ನಿರೀಕ್ಷಿಸುವುದು ಬಾಲಿಶತನ.ಭ್ರಷ್ಟಾಚಾರ ರಹಿತ ಆಡಳಿತದ ಬಗ್ಗೆ ಮಾತನಾಡುವ ಎಡರಂಗ ಹಾಗೂ ಐಕ್ಯರಂಗ ಕಳೆದ ಹದಿನೈದು ವರ್ಷಗಳ ಪೈವಳಿಕೆ ಗ್ರಾಮ ಪಂಚಾಯತ್ ಆಡಳಿತ ವೈಖರಿಯನ್ನು ಇದೀಗ ಪರಿಶೀಲಿಸಬಹುದು.ಪಕ್ಷದ ಅಂಧ ದೃಷ್ಟಿ ರಹಿತವಾಗಿ ಅವಲೋಕಿಸಿದಾಗ ಸತ್ಯದ ಬೆಳಕು ಕಂಡುಬರುವುದೆಂದು ಅವರು ತಿಳಿಸಿದರು.
ಬಿಜೆಪಿ ಪೈವಳಿಕೆ ಪಂಚಾಯತ್ ಸಮಿತಿ ಅಧ್ಯಕ್ಷ ಸದಾನಂದ ಕೊಮ್ಮಂಡ ಅಧ್ಯಕ್ಷತೆ ವಹಿಸಿದ್ದರು.ಬಿಜೆಪಿ ಜಿಲ್ಲಾ ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪೂಕಟ್ಟೆ ಜನಜಾಗೃತಿ ರ‍್ಯಾಲಿಯನ್ನು ಉದ್ಘಾಟಿಸಿ ಮಾತನಾಡಿ,ಬಿಜೆಪಿ ಆಡಳಿತ ನಡೆಸದಂತೆ ವ್ಯಾಪಕ ಕಾರ್ಯತಂತ್ರಗಳು ಹೆಣೆಯಲಾಗುತ್ತಿದ್ದರೂ,ಸಜ್ಜನರ ನಿರೀಕ್ಷೆಯನ್ನು ಮನ್ನಿಸಿ ಮತ್ತೆ ಬಿಜೆಪಿ ಆಡಳಿತ ನೀಡಲಿದೆಯೆಂದು ತಿಳಿಸಿದರು.
ಬಿಜೆಪಿ ಮಂಜೇಶ್ವರ ಮಂಡಲಾಧ್ಯಕ್ಷ ಹರಿಶ್ಚಂದ್ರ ಮಂಜೇಶ್ವರ,ಯುವಮೋರ್ಚಾ ಜಿಲ್ಲಾ ಅಧ್ಯಕ್ಷ ಪಿ.ಆರ್ ಸುನಿಲ್,ಮುಖಂಡ ಬಾಬು ಮಂಗಲ್ಪಾಡಿ,ಮಂಡಲ ಕಾರ್ಯದರ್ಶಿ ಎ.ಕೆ.ಕಯ್ಯಾರ್,ಯುವಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಧನಂಜಯ ಮಧೂರು,ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ಸರೋಜಾ ಆರ್ ಬಲ್ಲಾಳ್,ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಸದಾಶಿವ ವರ್ಕಾಡಿ,ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಮಣಿಕಂಠ ರೈ ಪಟ್ಲ,ಜಿಲ್ಲಾ ಪಂಚಾಯತ್ ಸದಸ್ಯೆ ಪುಷ್ಪಾ ಅಮೆಕ್ಕಳ,ಸದಾಶಿವ ಚೇರಾಲುಬಿಜೆಪಿ ಕಾಸರಗೋಡು ಮಂಡಲಾಧ್ಯಕ್ಷ ಸುಧಾಮ ಗೋಸಾಡ ಮೊದಲಾದವರು ಮಾತನಾಡಿದರು.ಬಿಜೆಪಿ ಪೈವಳಿಕೆ ಪಂಚಾಯತ್ ಪ್ರಧಾನ ಕಾರ್ಯದರ್ಶಿ ಹರಿಣಾಕ್ಷ ಸ್ವಾಗತಿಸಿ,ವಂದಿಸಿದರು.ಜನಜಾಗೃತಿ ಸಭೆಗಿಂತ ಮೊದಲು ಲಾಲ್‌ಭಾಗ್ ನಿಂದ ಪೈವಳಿಕೆ ನಗರದ ವರೆಗೆ ಬೃಹತ್ ಕಾರ್ಯಕರ್ತರ ಮೆರವಣಿಗೆ ನಡೆಯಿತು.
Click this button or press Ctrl+G to toggle between Kannada and English