ಕಾಸರಗೋಡು: ಗಡಿ ಪ್ರದೇಶ ಕಾಸರಗೋಡಿನಲ್ಲಿ ಸಾಂಸ್ಕೃತಿಕ ಉತ್ಸವಗಳ ಮೂಲಕ ಕನ್ನಡ ಭಾಷೆಯ ಬಗೆಗಿನ ಅಭಿಮಾನ ಮೂಡುವ ಜೊತೆಗೆ ಭಾಷೆಯ ಬಗ್ಗೆ ಹೆಮ್ಮೆ ಎನಿಸುತ್ತದೆ. ಕರ್ನಾಟಕದ ವಿವಿಧ ಸಾಂಸ್ಕೃತಿಕ ಸಂಪತ್ತು ಕಾಸರಗೋಡಿನಲ್ಲಿ ಅನಾವರಣಗೊಳಿಸುವ ಮೂಲಕ ಇಲ್ಲಿನ ಕನ್ನಡಿಗರಿಗೆ ಹೊಸ ಅನುಭವ ನೀಡುತ್ತದೆ. ಸಾಂಸ್ಕೃತಿಕ ವೈವಿಧ್ಯತೆಯನ್ನು ಪರಿಚಯಿಸುತ್ತದೆ ಎಂದು ಕವಿ, ಪತ್ರಕರ್ತ ರಾಧಾಕೃಷ್ಣ ಕೆ. ಉಳಿಯತ್ತಡ್ಕ ಅಭಿಪ್ರಾಯ ವ್ಯಕ್ತಪಡಿಸಿದರು.
ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ ಕಾಸರಗೋಡು ಇದರ 25 ನೇ ವರ್ಷಾಚರಣೆಯ ಅಂಗವಾಗಿ ವಿ.ಕೆ.ಎಂ. ಕಲಾವಿದರು ಬೆಂಗಳೂರು ಇದರ ಸಂಯುಕ್ತ ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಕಾರದಲ್ಲಿ ಕೋಟೆಕಣಿಯ ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿ ಸಹಯೋಗದಲ್ಲಿ ತಿರುಮಲ ತಿರುಪತಿ ದೇವಸ್ಥಾನಂ ದಾಸ ಸಾಹಿತ್ಯ ಪ್ರಾಜೆಕ್ಟ್ ನಿರ್ದೇಶನದಲ್ಲಿ ಕಾಸರಗೋಡು ಪಾರೆಕಟ್ಟೆಯ ಕನ್ನಡ ಗ್ರಾಮದ ಬಯಲು ರಂಗಮಂದಿರದಲ್ಲಿ ಆಯೋಜಿಸಿದ ಕಾಸರಗೋಡು-ಕರ್ನಾಟಕ ಉತ್ಸವ -2015 ವಿವಿಧ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ವಿ.ಕೆ.ಎಂ. ಕಲಾವಿದರು ಅಧ್ಯಕ್ಷ ಸಿ.ಎಂ.ತಿಮ್ಮಯ್ಯ ಅವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಇಂತಹ ಕಾರ್ಯಕ್ರಮಗಳ ಮೂಲಕ ಕಾಸರಗೋಡು ಸಾಂಸ್ಕೃತಿಕವಾಗಿ ಕರ್ನಾಟಕದ್ದೇ ಭಾಗ ಎಂಬುದನ್ನು ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ. ಅಲ್ಲದೆ ಕನ್ನಡಿಗರು ಎಲ್ಲೇ ಇರಲಿ ಕನ್ನಡವಾಗಿರು ಎಂಬ ಸಂದೇಶವನ್ನು ನೀಡುತ್ತದೆ ಎಂದರು.
ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದರು. ಅತಿಥಿಗಳಾಗಿ ಕಾಸರಗೋಡು ಸರಕಾರಿ ಕಾಲೇಜಿನ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಎ.ಶ್ರೀನಾಥ್ ಕಾಸರಗೋಡು, ಶ್ರೀ ಕ್ಷೇತ್ರ ಧರ್ಮಸ್ಥಳ ಭಜನಾ ಪರಿಷತ್ತು ಜಿಲ್ಲಾ ಸಮಿತಿ ಅಧ್ಯಕ್ಷ ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ, ಕಾಸರಗೋಡು ನಗರಸಭಾ ಕೌನ್ಸಿಲರ್ ಶಂಕರ ಕೆ, ಎಚ್‌ಡಿಎಫ್‌ಸಿ ಬ್ಯಾಂಕ್ ಮೈಸೂರು ಶಾಖೆ ಪ್ರಬಂಧಕ ಕೆ.ಉದಯ ಕುಮಾರ್, ಪತ್ರಕರ್ತ ಪ್ರದೀಪ್ ಬೇಕಲ್, ಕೆಸಿಎನ್ ಚಾನೆಲ್ ನಿರ್ದೇಶಕ ಪುರುಷೋತ್ತಮ ಎಂ.ನಾಕ್, ಶ್ರೀ ರಾಮನಾಥ ಸಾಂಸ್ಕೃತಿಕ ಭವನ ಸಮಿತಿ ಪ್ರಧಾನ ಸಂಚಾಲಕ ಕೆ.ಗುರುಪ್ರಸಾದ್ ಕೋಟೆಕಣಿ, ಉದ್ಯಮಿ ಕೆ.ಲವ ಮೀಪುಗುರಿ ಉಪಸ್ಥಿತರಿದ್ದರು.
ಶಿವರಾಮ ಕಾಸರಗೋಡು ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು. ಜಗದೀಶ್ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು. ಕಾವ್ಯ ಕುಶಲ ವಂದಿಸಿದರು.
ಇದೇ ಸಂದರ್ಭದಲ್ಲಿ ವಿ.ಕೆ.ಎಂ. ಕಲಾವಿದರು ಬೆಂಗಳೂರು ಸಂಸ್ಥೆಯಿಂದ ಕಾಸರಗೋಡಿನ ಪ್ರತಿಭಾನ್ವಿತ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 10 ಮಂದಿಯನ್ನು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಸಮ್ಮಾನಿಸಿ ಗೌರವಿಸಿದರು.
ಕಾಸರಗೋಡು-ಕರ್ನಾಟಕ ಉತ್ಸವದ ಅಂಗವಾಗಿ ವಿವಿಧ ಕಲಾವಿದರಿಂದ ಸಂಗೀತ ಮತ್ತು ನಾಟ್ಯ ಸಂಗಮ ಬೆಂಗಳೂರು ಇವರಿಂದ ಭರತನಾಟ್ಯ, ಕೋಲಾಟ, ಚಿತ್ರಗೀತೆಗಳಿಗೆ ನೃತ್ಯ ಮೊದಲಾದವು ನಡೆಯಿತು. ಸ್ಥಳೀಯ ಕಲಾವಿದರಿಂದ ಭಾವಗಾಯನ, ದಾಸ ಸಂಕೀರ್ತನೆ, ಸಿನಿಮಾ ಹಾಡುಗಳ ಗಾಯನ ಮನಸೂರೆಗೊಂಡಿತು. ಬೆಂಗಳೂರಿನ ಸುಮಾರು ೪೦ ಮಂದಿ ಕಲಾವಿದರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡುವ ಮೂಲಕ ಪ್ರೇಕ್ಷಕರನ್ನು ರಂಜಿಸಿದರು.
Click this button or press Ctrl+G to toggle between Kannada and English