ಮಂಗಳೂರು : ರಾಜ್ಯ ಕಂಡ ಸಂಭಾವಿತ ರಾಜಕಾರಣಿಗಳಲ್ಲಿ ಮುಂಚೂಣಿಯಲ್ಲಿ ಇರುವವರು ಕೆ.ಜಯಪ್ರಕಾಶ್ ಹೆಗ್ಡೆ. ಅವರು ಯಾವುದೇ ಪಕ್ಷದಲ್ಲಿ ಇರಲಿ, ಆ ಪಕ್ಷಕ್ಕೊಂದು ಘನತೆ ತಂದುಕೊಡುವವರು. ಜನತಾ ಪರಿವಾರದಲ್ಲಿ ಇದ್ದಷ್ಟು ಸಮಯ ಆ ಪಕ್ಷದ ಆಸ್ತಿಯಂತೆ ಕೆಲಸ ಮಾಡಿದರು. ಅದನ್ನು ಬಿಟ್ಟ ಬಳಿಕ ಯಾವುದೇ ಪಕ್ಷದ ರಗಳೆಯೇ ಬೇಡವೆಂದು ಪಕ್ಷೇತರರಾಗಿ ಇದ್ದರು. ಆಗಲೂ ಗೆದ್ದು ಜನಸೇವೆ ಮಾಡಿದರು. ಮತ್ತೆ ಕಾಂಗ್ರೆಸ್ ಸೇರಿದರು. ಆಗಲೂ ಗೆದ್ದರು. ಸಂಸತ್ತಿನಲ್ಲಿ ಧ್ವನಿ ಮೊಳಗಿಸಿದರು. ಬಳಿಕ ಕಾಂಗ್ರೆಸ್ ವಿರೋಧಿ ಅಲೆಯಲ್ಲಿ ಸೋತು ಹೋದರು. ಕಾಂಗ್ರೆಸ್ಸಿನ ಉಡುಪಿ ಜನಪ್ರತಿನಿಧಿಗಳು ಅದರಲ್ಲೂ ಪ್ರತಾಪ್ ಚಂದ್ರ ಶೆಟ್ಟಿಯವರು ಪ್ರಚಾರಕ್ಕೆ ಹೋಗದ ಕಾರಣ ಸೋಲು ಎದುರಾಯಿತೇ ವಿನ: ಅದು ಜಯಪ್ರಕಾಶ್ ಹೆಗ್ಡೆ ಸೋಲಲ್ಲ. ಈಗ ಮತ್ತೇ ಜಯಪ್ರಕಾಶ್ ಹೆಗ್ಡೆ ಜನರ ಎದುರು ಮತಕ್ಕಾಗಿ ನಿಂತಿದ್ದಾರೆ ಆದರೆ ಈ ಬಾರಿ ಏಕಾಂಗಿಯಾಗಿ.
ತನ್ನನ್ನು ಬಂಡಾಯ ಅಭ್ಯರ್ಥಿ ಎಂದು ಕರೆಸಿಕೊಳ್ಳಲು ಅವರು ಇಷ್ಟಪಡುವುದಿಲ್ಲ. ತಾನು ತನಗಾಗಿ ಟಿಕೇಟ್ ಕೇಳಿರಲಿಲ್ಲ ಎನ್ನುವುದು ಅವರ ಮಾತುಗಳು. ಅದು ನಿಜ ಕೂಡ. ಜಯಪ್ರಕಾಶ್ ಹೆಗ್ಡೆ ಅವರು ಪ್ರಾರಂಭದಲ್ಲಿ ಹೇಳಿದ್ದ ಮಾತುಗಳೇ ಹಾಗೆ. ಪಕ್ಷದಲ್ಲಿ ಸಕ್ರಿಯರಾಗಿರುವವರಿಗೆ ಅವಕಾಶ ಕೊಡಿ. ಸುಮ್ಮನೆ ಹೆಸರಿಗೆ ಒಬ್ಬರು ಇರಬೇಕು ಎಂದು ವಿಧಾನಪರಿಷತ್ ಗೆ ಕಳುಹಿಸುವುದು ಬೇಡಾ. ಅದರಲ್ಲೂ ತನಗೆ ಮುಂದಿನ ಬಾರಿ ಟಿಕೇಟ್ ಬೇಡಾ ಎಂದವರಿಗೆ ಅವಕಾಶ ಮತ್ತೇ ಮತ್ತೇ ಕೊಡುವುದರಿಂದ ಮೇಲ್ಮನೆಯಲ್ಲಿ ನಾವು ಏನೂ ಸಾಧಿಸುವಂತೆ ಆಗುವುದಿಲ್ಲ ಎಂದಿದ್ದರು. ಆದರೆ ಕಾಂಗ್ರೆಸ್ ಮತ್ತೇ ಅವಕಾಶ ಬೇಡಾ ಎಂದ ಪ್ರತಾಪ್‌ಚಂದ್ರ ಶೆಟ್ಟಿಯವರಿಗೆ ಕರೆದು ಮಣೆ ಹಾಕಿದ ಪರಿಣಾಮವಾಗಿ ನೈಜ ಕಾರ್ಯಕರ್ತರ ಮನವಿಗೆ ಮನಸೋತು ಹೆಗ್ಡೆ ಚುನಾವಣಾ ಕಣಕ್ಕೆ ಇಳಿದಿದ್ದಾರೆ.
ಜಯಪ್ರಕಾಶ್ ಹೆಗ್ಡೆ ಗೆಲ್ಲುತ್ತಾರೆ ಎನ್ನುವ ವಾತಾವರಣ ಈಗಾಗಲೇ ಉಡುಪಿ ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುತ್ತಿದೆ. ಅದಕ್ಕೆ ಕಾರಣ ಹೆಗ್ಡೆಯವರು ಗೆದ್ದಾಗಲೂ, ಸೋತಾಗಲೂ ಜನರೊಂದಿಗೆ ನಿಕಟ ಸಂಪರ್ಕದಲ್ಲಿ ಇರುವುದು. ಅವರು ಮತಯಾಚಿಸಲು ಗ್ರಾಮ ಪಂಚಾಯತ್‌ಗಳಿಗೆ ಭೇಟಿಕೊಡಲು ಹೋಗುವಾಗ ಅಲ್ಲಿನ ಸದಸ್ಯರೇ ನೀವು ಇಲ್ಲಿ ತನಕ ಬರುವ ಅಗತ್ಯ ಇಲ್ಲ. ನಾವು ಬೇರೆಯವರಿಗೆ ವೋಟ್ ಕೊಡುವ ಪ್ರಶ್ನೆಯೇ ಬರುವುದಿಲ್ಲ, ನಮ್ಮ ಮತವೇನಿದ್ದರೂ ಅದು ನಿಮಗೇನೆ ಎನ್ನುವುದನ್ನು ಕೇಳುವಾಗ ಜಯಪ್ರಕಾಶ್ ಹೆಗ್ಡೆಯವರಿಗೆನೆ ಆಶ್ಚರ್ಯವಾಗುತ್ತಿದೆ. ಹೆಗ್ಡೆಯವರ ಪರವಾಗಿ ಕೆಲಸ ಮಾಡಲು ಈಗಾಗಲೇ ಬೇರೆ ಬೇರೆ ಜಿಲ್ಲೆಗಳಿಂದ ಅವರ ಅಭಿಮಾನಿಗಳು ಕರಾವಳಿಗೆ ಬಂದಿದ್ದಾರೆ. ಅವರ ಜನತಾ ಪರಿವಾರದ ಮುಖಂಡರು ಕೂಡ ಉಡುಪಿ ಜಿಲ್ಲೆಯಲ್ಲಿ ಬೀಡುಬಿಟ್ಟಿದ್ದಾರೆ. ಸಮಾಧಾನಚಿತ್ತ, ಜನರೊಂದಿಗೆ ಬೆರೆಯಬಲ್ಲ, ನಿರಹಂಕಾರಿ ಜಯಪ್ರಕಾಶ್ ಹೆಗ್ಡೆ ಅಜಾತಶತ್ರು ಎಂದೇ ಪ್ರಸಿದ್ಧರಾದವರು.
ಚುನಾವಣಾ ಪೂರ್ವದಲ್ಲಿ ಮುಖ್ಯಮಂತ್ರಿಗಳು ತರಿಸಿದ ಆಂತರಿಕ ಸಮೀಕ್ಷಾ ವರದಿಯಲ್ಲಿ ಜನರ ಅಭಿಮತ ಜಯಪ್ರಕಾಶ್ ಹೆಗ್ಡೆ ಅವರ ಪರವಾಗಿಯೇ ಇದೆ ಎನ್ನುವ ಉಲ್ಲೇಖ ಇತ್ತು. ಆದರೆ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಆಸ್ಕರ್ ಫೆರ್ನಾಂಡಿಸ್ ಎನ್ನುವ ಕರಾವಳಿಯ ಕಾಂಗ್ರೆಸ್ ಹೈಕಮಾಂಡ್ ಅವರ ಮಾತಿಗೆ ಮಣಿದು ಆಸ್ಕರ್ ಪಾಳಯದ ಪ್ರತಾಪ್‌ಚಂದ್ರ ಶೆಟ್ಟಿಯವರಿಗೆ ಟಿಕೇಟು ಕೊಡಬೇಕಾಯಿತು. ಅದರಿಂದ ಬೇಸತ್ತ ಹೆಗ್ಡೆ ಅಭಿಮಾನಿಗಳು ಜಯಪ್ರಕಾಶ್ ಹೆಗ್ಡೆ ಅವರಿಗೆ ದಂಬಾಲು ಬಿದ್ದು ಚುನಾವಣೆಗೆ ಸ್ಪರ್ಧಿಸಲು ಒತ್ತಡ ಹಾಕಿದರು. ಮೇಲ್ಮನೆ ಇರುವುದು ಚಿಂತನಾಶೀಲ, ಸಕ್ರಿಯ ಮತ್ತು ಯೋಚನಾಬದ್ಧ ಮನಸ್ಸುಗಳಿಗಾಗಿ ಎನ್ನುವುದು ನಿಜವಾಗಿದ್ದಲ್ಲಿ ಅವಿಭಜಿತ ಜಿಲ್ಲೆಯ ಮತದಾರರು ಜಯಪ್ರಕಾಶ್ ಹೆಗ್ಡೆಯವರಿಗೆ ಮತ ನೀಡುವುದರಲ್ಲಿ ಸಂಶಯವಿಲ್ಲ.
Click this button or press Ctrl+G to toggle between Kannada and English