ರಾಜಕೀಯ ತಂತ್ರಗಳ ಮೂಲಕ ಜನರನ್ನು ಮರುಳುಗೊಳಿಸುತ್ತಿರುವ ಬಿಜೆಪಿ : ಉಮ್ಮನ್‌ಚಾಂಡಿ

7:36 PM, Tuesday, January 5th, 2016
Share
1 Star2 Stars3 Stars4 Stars5 Stars
(5 rating, 4 votes)
Loading...
omanchandi

ಕುಂಬಳೆ: ರಾಷ್ಟ್ರದಲ್ಲಿ ಪ್ರಜಾಪ್ರಭುತ್ವ ಹಾಗೂ ಮತ ನಿರಪೇಕ್ಷತೆಯನ್ನು ಉಳಿಸಿ ಬೆಳೆಸುವಲ್ಲಿ, ಜನಸಾಮಾನ್ಯರಿಗೆ ಸೌಖ್ಯ ಸಮಾಧಾನದಲ್ಲಿ ಬದುಕು ಸಾಗಿಸಲು ಅನುವು ಮಾಡಿಕೊಡುವ ಆಡಳಿತ ನೀಡಲು ಕಾಂಗ್ರೆಸ್ಸ್ ಪಕ್ಷದಿಂದ ಮಾತ್ರ ಸಾಧ್ಯ. ನರೇಂದ್ರ ಮೋದಿಯವರು ಪ್ರಧಾನಿಯಾದೊಡನೆ ಜನಸಾಮಾನ್ಯರು ಅವರ ಮೇಲಿರಿಸಿದ್ದ ನಂಬಿಕೆಗಳು ಇದೀಗ ಹುಸಿಯೆಂದು ಅನಿಸತೊಡಗಿದೆಯೆಂದು ರಾಜ್ಯದ ಮುಖ್ಯಮಂತ್ರಿ ಉಮ್ಮನ್‌ಚಾಂಡಿ ಅಭಿಪ್ರಾಯ ವ್ಯಕ್ತಪಡಿಸಿದರು.

ಕೇರಳ ಪ್ರದೇಶ್ ಕಾಂಗ್ರೆಸ್ಸ್ ಸಮಿತಿ(ಕೆಪಿಸಿಸಿ)ಅಧ್ಯಕ್ಷ ವಿ.ಎಂ ಸುಧೀರನ್ ನೇತೃತ್ವದಲ್ಲಿ ಆರಂಭಿಸಲಾದ ಜನಪಕ್ಷ ಯಾತ್ರೆಯನ್ನು ಸೋಮವಾರ ಸಂಜೆ ಕುಂಬಳೆಯಲ್ಲಿ ಪಕ್ಷದ ಧ್ವಜವನ್ನು ಸುಧೀರನ್ ರವರಿಗೆ ಹಸ್ತಾಂತರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಯಾವ ಅಭಿವೃದ್ದಿಯ ಭರವಸೆಗಳೊಂದಿಗೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಎರಡು ವರ್ಷಗಳು ಹತ್ತಿರವಾಗುತ್ತಿದ್ದರೂ, ಯಾವ ಭರವಸೆಗಳನ್ನೂ ನೆರವೇರಿಸಲಾರದೆ ಡೊಂಬರಾಟದ ರಾಜಕೀಯ ತಂತ್ರಗಳ ಮೂಲಕ ಜನರನ್ನು ಮರುಳುಗೊಳಿಸುತ್ತಿರುವುದು ಜನ ಸಾಮಾನ್ಯರ ಅರಿವಿಗೆ ಬಂದಿದೆ.

ಜನಸಾಮಾನ್ಯರಿಗೆ ಸಮಾಧಾನದ ಜೀವನ ಸಾಗಿಸಬೇಕಿದ್ದರೆ ಕಾಂಗ್ರೆಸ್ಸ್ ಪಕ್ಷವೊಂದರಿಂದ ಮಾತ್ರ ಸಾಧ್ಯವೆಂದು ಅವರು ತಿಳಿಸಿದರು.ಬಿಜೆಪಿ ಸಂಘ ಪರಿವಾರ ಕೇರಳದಲ್ಲಿ ಯಾವ ಅರಾಜಕತೆಯ ವಾತಾವರಣ ಸೃಷ್ಟಿಸಲು ಪ್ರಯತ್ನಿಸಿದರೂ ಅದು ಫಲಿಸದೆಂದು ಅವರು ತಿಳಿಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ರಾಜ್ಯದ ಗೃಹ ಸಚಿವ ರಮೇಶ್ ಚೆನ್ನಿತ್ತಲ ಮಾತನಾಡಿ,ರಾಜ್ಯದ ಎಲ್ಲಾ ಕ್ಷೇತ್ರಗಳ ಸಮಗ್ರ ಅಭಿವೃದ್ದಿ ಯೋಜನೆಯ ಮೂಲಕ ರಾಜ್ಯದ ಯುಡಿಎಫ್ ಸರಕಾರ ಯಶಸ್ವಿ ಆಡಳಿತವನ್ನು ನೀಡಿದೆ.ಆದರೆ ವಿಪಕ್ಷಗಳು ಜನರಲ್ಲಿ ಸರಕಾರದ ಬಗ್ಗೆ ತಪ್ಪು ಅಭಿಪ್ರಾಯಗಳನ್ನು ಹುಟ್ಟು ಹಾಕುತ್ತಿದ್ದು,ಇದು ಅವರ ಸೋಲಿನ ಭೀತಿಯ ಸಂಕೇತವೆಂದು ತಿಳಿಸಿದರು.ರಾಷ್ಟ್ರದ ಸಂವಿಧಾನ ನಮಗೆ ಮತೇತರತ್ವವನ್ನು ನೀಡಿದೆ.ಬಿಜೆಪಿ ನೇತೃತ್ವದ ಸರಕಾರ ಇದನ್ನು ಇಲ್ಲವಾಗಿಸಲೆತ್ನಿಸಿ ಒಂದು ವರ್ಗದ ಜನರ ಓಲೈಕೆಗೆ ಯತ್ನಿಸುತ್ತಿರುವುದು ಕಳವಳಕಾರಿಯೆಂದು ಬೊಟ್ಟು ಮಾಡಿದ ಅವರು ಪೂರ್ಣ ಸಾಕ್ಷರರ ರಾಜ್ಯವಾದ ಕೇರಳದಲ್ಲಿ ಆರ್‌ಎಸ್‌ಎಸ್ ಬಿಜೆಪಿ ಮತ್ತು ಎಡರಂಗಗಳ ರಾಜಕೀಯದ ಆಟಗಳು ನಡೆಯದೆಂದು ಅಭಿಪ್ರಾಯಪಟ್ಟರು.ಯೋಗ,ಧ್ಯಾನಗಳ ಮೂಲಕ ಜನರನ್ನು ಮರುಳುಗೊಳಿಸುವ ಹೊಸ ಹಾದಿಗಿಳಿದಿರುವ ಸಿಪಿಎಂ ಅದರ ದೀವಾಳಿತನವನ್ನು ಮರೆಮಾಚಲೆತ್ನಿಸುತ್ತಿದೆಯೆಂದು ಲೇವಡಿಗೈದರು.

ಕೇರಳ ಪ್ರದೇಶ್ ಕಾಂಗ್ರೆಸ್ಸ್ ಅಧ್ಯಕ್ಷ ವಿ.ಎಂ.ಸುಧೀರನ್,ಅಖಿಲ ಭಾರತ ಕಾಂಗ್ರೆಸ್ಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಮುಖುಲ್ ವಾಸಿನಿಕ್,ಯುಡಿಎಫ್ ರಾಜ್ಯಾಧ್ಯಕ್ಷ ಪಿ.ಬಿ.ತಂಗಚ್ಚನ್,ಕೆಪಿಸಿಸಿ ಉಪಾಧ್ಯಕ್ಷರಾದ ವಿ.ಡಿ.ಸುರೇಶನ್,ತಿರುವಾಂಜೂರು ರಾಧಾಕೃಷ್ಣನ್,ಕೆ.ಬಾಬು,ಸಂಸದರಾದ ಎಂ.ಕೆ.ರಾಘವನ್,ಆಂಟೋ ಆಟೋನಿ,ಕರ್ನಾಟಕ ಅರಣ್ಯ ಸಚಿವ ಬಿ.ರಮಾನಾಥ ರೈ,ಗ್ರಾಮೀಣಾಭಿವೃದ್ದಿ ಸಚಿವ ವಿನಯಕುಮಾರ್ ಸೊರಕೆ,ಹಿರಿಯ ಮುಖಂಡ ಪಿ.ಸಿ.ಚಾಕೋ,ಮುಖಂಡರುಗಳಾದ ಪಿ.ಸಿ.ಥೋಮಸ್,ಕೆ.ಪಿ.ಅನಿಲ್ ಕುಮಾರ್,ವತ್ಸಲಾ ಪ್ರಸನ್ನಕುಮಾರ್,ರಾಜಮೋಹನ್ ಉಣ್ಣಿತ್ತಾನ್,ಪಿ.ಸಿ.ವಿಷ್ಣುನಾಥನ್,ಸುಮಾ ಬಾಲಕೃಷ್ಣನ್,ಎ.ಸಿ.ಜೋಸ್,ಮಂಜೇಶ್ವರ ಶಾಸಕ ಪಿ.ಬಿ.ಅಬ್ದುಲ್ ರಸಾಕ್,ರಾಜ್ಯ ಕಾಂಗ್ರೆಸ್ಸ್ ನಾಯಕರು, ಜಿಲ್ಲಾ ಕಾಂಗ್ರೆಸ್ಸ್ ಉಪಾಧ್ಯಕ್ಷರು,ಕಾರ್ಯದರ್ಶಿಗಳು,ವಿವಿಧ ಸಚಿವರು ಸಭೆಯಲ್ಲಿ ಉಪಸ್ಥಿತರಿದ್ದರು.ಜಿಲ್ಲಾ ಕಾಂಗ್ರೆಸ್ಸ್ ಅಧ್ಯಕ್ಷ ಅಡ್ವ.ಸಿ.ಕೆ.ಶ್ರೀಧರನ್ ಸ್ವಾಗತಿಸಿದರು.ಟಿ.ಸಿದ್ದೀಕ್ ಕಾರ್ಯಕ್ರಮ ನಿರೂಪಿಸಿದರು.ಕಾರ್ಯಕ್ರಮದಲ್ಲಿ ಪಂಜಾಬ್ ನ ಪಠಾಣ್ ಕೋಟ್ ನಲ್ಲಿ ವೀರ ಮರಣವನ್ನಪ್ಪಿದ ಧೀರ ಯೋಧರಿಗೆ ಶ್ರದ್ದಾಂಜಲಿ ಅರ್ಪಿಸಿ ಮೌನ ಪ್ರಾರ್ಥನೆ ನಡೆಸಲಾಯಿತು.

ಜನಸ್ತೋಮ
ಕೆಪಿಸಿಸಿ ಅಧ್ಯಕ್ಷ ವಿ.ಎಂ.ಸುಧೀರನ್ ಕುಂಬಳೆಯಿಂದ ಆರಂಭಿಸಿದ ಜನ ಪಕ್ಷ ಯಾತ್ರೆ ಫೆ.೯ ರಂದು ತಿರುವನಂತಪುರದ ಶಂಖಮುಖ ಕಡಲ ಕಿನಾರೆಯಲ್ಲಿ ರಾಜ್ಯಾದ್ಯಂತ ಸಂಚರಿಸಿ ಸಮಾರೋಪಗೊಳ್ಳಲಿದೆ.ರಾಜ್ಯದ ಯುಡಿಎಫ್ ಸರಕಾರ ಮುಂದಿನ ೩ ತಿಂಗಳಲ್ಲಿ ನಡೆಯಲಿರುವ ರಾಜ್ಯ ವಿಧಾನ ಸಭಾ ಚುನಾವಣಾ ಹಿನ್ನೆಲೆಯಲ್ಲಿ ಸರಕಾರದ ಶಕ್ತಿ ಪ್ರದರ್ಶನ ಮತ್ತು ಸರಕಾರದ ಜನಪರ ಯೋಜನೆಗಳನ್ನು ಮುಂದಿಟ್ಟು ಆಯೋಜಿಸಿರುವ ರ‍್ಯಾಲಿಯ ಉದ್ಘಾಟನೆಗೆ ಕುಂಬಳೆ ಈ ಹಿಂದೆ ಕಂಡು ಕೇಳರಿಯದಷ್ಟು ಬಹುಸಂಖ್ಯೆಯ ಜನರು ಆಗಮಿಸಿ ಪಾಲ್ಗೊಂಡಿರುವುದಕ್ಕೆ ಸಾಕ್ಷ್ಯಿಯಾಯಿತು.ಸುಮಾರು ೩ ಸಾವಿರಕ್ಕಿಂತಲೂ ಅಧಿಕ ಜನ ಪಾಲ್ಗೊಂಡಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English