ಮಂಜೇಶ್ವರ: ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನ ಆವರಣದಲ್ಲಿ ಅಸ್ತಿತ್ವಕ್ಕೆ ಬರಲಿರುವ ಭಾರತೀಯ ಭಾಷಾ ಅಧ್ಯಯನ ಕೇಂದ್ರಕ್ಕೆ ಪ್ರಸಿದ್ಧ ಕವಿ, ವಿದ್ವಾಂಸ, ನಾಡೋಜ ಡಾ.ಕಯ್ಯಾರ ಕಿಞ್ಞಣ್ಣ ರೈಗಳ ಹೆಸರಿಡಲು ಕಣ್ಣೂರು ವಿಶ್ವ ವಿದ್ಯಾನಿಲಯವು ಅಗತ್ಯದ ಕ್ರಮ ಕೈಗೊಳ್ಳಬೇಕೆಂದು ಪ್ರಾದೇಶಿಕ ಭಾಷಾ ಅಧ್ಯಯನಾಂಗದ ಸಂಯೋಜಕರಾಗಿದ್ದ ಕಾಸರಗೋಡು ಸರಕಾರಿ ಕಾಲೇಜಿನ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ.ಪಿ.ಶ್ರೀಕೃಷ್ಣ ಭಟ್ ಆಗ್ರಹಿಸಿದ್ದಾರೆ.
ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನ ಸಭಾಂಗಣದಲ್ಲಿ ‘ಕಯ್ಯಾರರ ಸಾಹಿತ್ಯ ಮರು ಓದು’ ಎನ್ನುವ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಗುರುವಾರ ಸಂಜೆ ದೀಪಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಜನವರಿ 18ರಂದು ಅಧಿಕೃತವಾಗಿ ಉದ್ಘಾಟನೆಗೊಳ್ಳಲಿರುವ ಭಾರತೀಯ ಭಾಷಾ ಅಧ್ಯಯನ ಕೇಂದ್ರದಲ್ಲಿ ಕನ್ನಡಕ್ಕೆ ಪ್ರಥಮ ಪ್ರಾತಿನಿಧ್ಯ ಲಭಿಸಿದೆ. ಇದು ಗಡಿನಾಡು ಕಾಸರಗೋಡು ಜಿಲ್ಲೆಯ ಕನ್ನಡಿಗರಿಗೆ ಸಂತೋಷದ ವಿಷಯವಾಗಿದೆ. ಮಾತ್ರವಲ್ಲದೆ ಕನ್ನಡ ಸಾಹಿತ್ಯ ಕ್ಷೇತ್ರದ ಸಾಧಕ ಹಾಗೂ ಕರಾವಳಿಯ ಮಹಾಕವಿ ಡಾ.ಕಯ್ಯಾರರ ಹೆಸರನ್ನಿಡುವ ಮೂಲಕ ಮಂಜೇಶ್ವರ ಗೋವಿಂದ ಪೈಯವರಿಗೆ ಅತಿ ಪ್ರಿಯರಾಗಿದ್ದ ಕಯ್ಯಾರರನ್ನು ಶಾಶ್ವತವಾಗಿ ಸ್ಮರಿಸಿದಂತಾಗುತ್ತದೆ ಎಂದು ಡಾ.ಪಿ.ಶ್ರೀಕೃಷ್ಣ ಭಟ್ ಅಭಿಪ್ರಾಯಪಟ್ಟರು.
ಕಾಲೇಜಿನ ಪ್ರಭಾರ ಪ್ರಾಂಶುಪಾಲ ಶಾಜನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವಿವಿಧ ವಿಭಾಗಗಳ ಮುಖ್ಯಸ್ಥರಾದ ದಿಲೀಪ್, ಸಚೀಂದ್ರನ್ ವಿ. ಶುಭಹಾರೈಸಿದರು. ವಿಚಾರ ಸಂಕಿರಣದ ಸಂಯೋಜಕ ಶಿವಶಂಕರ ಪಿ. ಸ್ವಾಗತಿಸಿ, ಕನ್ನಡ ವಿಭಾಗದ ಮುಖ್ಯಸ್ಥ ದಿನೇಶ್‌ಕುಮಾರ್ ಕೆ. ಪ್ರಾಸ್ತಾವಿಕ ಮಾತನಾಡಿದರು. ಸಹಾಯಕ ಪ್ರಾಧ್ಯಾಪಿಕೆ ಲಕ್ಷ್ಮಿ ಕೆ. ವಂದಿಸಿದರು.
ವಿಚಾರ ಮಂಡನೆ, ಪ್ರತಿಕ್ರಿಯೆ
‘ಕಯ್ಯಾರರ ಬದುಕು ಮತ್ತು ಕನ್ನಡ ಹೋರಾಟ’ ಎಂಬುದರ ಕುರಿತು ಮಂಗಳೂರು ಬೆಸೆಂಟ್ ಮಹಿಳಾ ಕಾಲೇಜಿನ ಸಹಾಯಕ ಪ್ರಾಧ್ಯಾಪಿಕೆ ಡಾ.ಮೀನಾಕ್ಷಿ ವಿಷಯ ಮಂಡಿಸಿದರು. ಕವಿ, ಪತ್ರಕರ್ತ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಪ್ರತಿಕ್ರಿಯೆ ನೀಡಿದರು. ‘ಕಯ್ಯಾರರ ಭಾಷಾಂತರ ಸಾಹಿತ್ಯ’ದ ಬಗ್ಗೆ ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ರತ್ನಾಕರ ಮಲ್ಲಮೂಲೆ ವಿಷಯ ಮಂಡಿಸಿದರು. ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಉಪನ್ಯಾಸಕ ಪ್ರವೀಣ್ ಪದ್ಯಾಣ ಪ್ರತಿಕ್ರಿಯೆ ವ್ಯಕ್ತಪಡಿಸಿದರು.
ಗದ್ಯ ಸಾಹಿತ್ಯ ಅವಲೋಕನ
ಕಯ್ಯಾರರ ಗದ್ಯ ಸಾಹಿತ್ಯವನ್ನು ಮಂಗಳೂರು ವಿಶ್ವ ವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕ ಡಾ.ಮಾಧವ ಅವಲೋಕನ ನಡೆಸಿದರು. ಕಯ್ಯಾರರ ಅಳಿಯ ಭುವನಪ್ರಸಾದ್ ಹೆಗ್ಡೆ ಉಡುಪಿ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಯ್ಯಾರರ ಕಾವ್ಯ-ವಿಷಯ ಮಂಡನೆ
ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಕಯ್ಯಾರರ ಕಾವ್ಯದ ಕುರಿತು ಡಾ.ಸುಬ್ರಹ್ಮಣ್ಯ ಭಟ್ ಪ್ರಬಂಧ ಮಂಡಿಸಿ ಮಾತನಾಡಿದರು. ಕಯ್ಯಾರರ ಸಾಹಿತ್ಯದಲ್ಲಿ ಜೀವನ ಧೋರಣೆ ಎಂಬ ವಿಷಯದ ಬಗ್ಗೆ ಮಂಗಳೂರು ವಿಶ್ವ ವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕ ಡಾ.ಧನಂಜಯ ಕುಂಬ್ಳೆ ಸಮಗ್ರವಾಗಿ ಮಾತನಾಡಿದರು. ವಿವಿಧ ವಲಯಗಳ ಹಲವಾರು ಮಂದಿ ಪ್ರಮುಖರು ಈ ಸಂದರ್ಭ ಭಾಗವಹಿಸಿದ್ದರು.
‘ನಿರಂಜನರ ಸಾಹಿತ್ಯ’ ರಾಷ್ಟ್ರೀಯ ವಿಚಾರ ಸಂಕಿರಣ
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಮತ್ತು ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನ ಕನ್ನಡ ವಿಭಾಗದ ಸಹಯೋಗದಲ್ಲಿ ‘ನಿರಂಜನರ ಸಾಹಿತ್ಯ ಹಾಗೂ ಸಾಧನೆ’ ರಾಷ್ಟ್ರೀಯ ವಿಚಾರ ಸಂಕಿರಣವು ಜ.9ರಂದು ಮಂಜೇಶ್ವರ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ. ಪೂರ್ವಾಹ್ನ 10ಗಂಟೆಗೆ ಆರಂಭಗೊಳ್ಳುವ ಸಮಾರಂಭವನ್ನು ಪ್ರಾಧಿಕಾರದ ಅಧ್ಯಕ್ಷ ಡಾ.ಎಲ್.ಹನುಮಂತಯ್ಯ ಉದ್ಘಾಟಿಸುವರು. ಹಿರಿಯ ಜಾನಪದ ವಿದ್ವಾಂಸ ಡಾ.ಕಾಳೇಗೌಡ ನಾಗವಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ಕನ್ನಡ ಸಾಹಿತ್ಯ ಪರಿಷತ್‌ನ ಕೇರಳ ಗಡಿನಾಡ ಘಟಕದ ಮಾಜಿ ಅಧ್ಯಕ್ಷ ಎಸ್.ವಿ.ಭಟ್ ಕಾಸರಗೋಡು, ಕಾಲೇಜಿನ ಪ್ರಾಂಶುಪಾಲ ಡಾ.ಪಿ.ರಾಜೇಂದ್ರನ್, ಕರ್ನಾಟಕ ನಾಟಕ ಅಕಾಡೆಮಿಯ ಸದಸ್ಯ ಉಮೇಶ್ ಎಂ.ಸಾಲಿಯಾನ್, ಡಾ.ರತ್ನಾಕರ ಮಲ್ಲಮೂಲೆ, ರಂಗ ಕಲಾವಿದೆ ಭಾರತಿ ಬಾಬು, ವಿದ್ಯಾರ್ಥಿ ಸಂಘದ ಅಧ್ಯಕ್ಷ ಅಭಿತ್ ಶುಭಹಾರೈಸಲಿದ್ದಾರೆ. ದಿನೇಶ್‌ಕುಮಾರ್ ಕೆ. ಪ್ರಾಸ್ತಾವಿಕ ನುಡಿವರು.
ಉದ್ಘಾಟನಾ ಕಾರ್ಯಕ್ರಮದ ಬಳಿಕ ವಿವಿಧ ಗೋಷ್ಠಿಗಳು ಜರಗಲಿವೆ. ಡಾ.ನಂದಾ ಕುಮಾರಸ್ವಾಮಿ (ನಿರಂಜನರ ಬದುಕು), ಅನುರಾಧಾ ಕುರುಂಜಿ (ನಿರಂಜನರ ಕಥಾ ಸಾಹಿತ್ಯ), ಡಾ.ವಾಸುದೇವ ಬೆಳ್ಳೆ (ನಿರಂಜನರ ಸಾಹಿತ್ಯದಲ್ಲಿ ವೈಚಾರಿಕತೆ), ಡಾ.ರಾಧಾಕೃಷ್ಣ ಬೆಳ್ಳೂರು (ನಿರಂಜನರ ಕಾದಂಬರಿಗಳು) ವಿಷಯ ಮಂಡಿಸಲಿದ್ದಾರೆ. ಡಾ.ಪಿ.ಶ್ರೀಕೃಷ್ಣ ಭಟ್ ಅಧ್ಯಕ್ಷತೆ ವಹಿಸುವರು.
ಅಪರಾಹ್ನ 3.45 ಕ್ಕೆ ನಡೆಯುವ ಕವಿಗೋಷ್ಠಿಯಲ್ಲಿ ಭಾರತೀಯ ಭಾಷಾ ಅಧ್ಯಯನ ಕೇಂದ್ರದ ಸಂಯೋಜಕಿ ಡಾ.ಯು.ಮಹೇಶ್ವರಿ ಅಧ್ಯಕ್ಷತೆ ವಹಿಸುವರು. ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಲಕ್ಷ್ಮಿ ಕೆ., ಕವಿತಾ ಕೂಡ್ಲು , ಹರೀಶ್ ಸುಲಾಯ, ಆಶಾ ದಿಲೀಪ್, ರೇಶ್ಮಾ , ಸುಜಿತ್, ಅಭಿತ್, ವಿದ್ಯಾಲಕ್ಷ್ಮಿ , ಶೋಭಿತಾಕುಮಾರಿ ಕವಿತೆಗಳನ್ನು ವಾಚಿಸುವರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಹಿರಿಯ ರಂಗಕರ್ಮಿ ಡಾ.ಎಚ್.ಎಂ.ಕುಮಾರಸ್ವಾಮಿ ವಹಿಸುವರು. ಪೆರ್ಲ ನಾಲಂದ ಕಾಲೇಜಿನ ಪ್ರಾಚಾರ್ಯ ಡಾ.ಕೆ.ಕಮಲಾಕ್ಷ , ಕಾಸರಗೋಡು ಸರಕಾರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಶ್ರೀಧರ ಎನ್. ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ವಿಚಾರ ಸಂಕಿರಣದ ಸಂಯೋಜಕ ಶಿವಶಂಕರ ಪಿ. ಮತ್ತು ಲಕ್ಷ್ಮಿ ಕೆ. ಉಪಸ್ಥಿತರಿರುವರು.
Click this button or press Ctrl+G to toggle between Kannada and English