ಭಾಷಾಂತರ ಕಾರ್ಯ ಸುಲಭ ಸಾಧ್ಯವಲ್ಲ : ಯು.ಎಸ್.ಶೆಣೈ

8:02 AM, Saturday, January 9th, 2016
Share
1 Star2 Stars3 Stars4 Stars5 Stars
(5 rating, 5 votes)
Loading...
kasargod-chinna

ಕಾಸರಗೋಡು: ಆಧುನಿಕ ಸಂದರ್ಭದಲ್ಲಿ ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ಸಾಹಿತ್ಯ ಕೃತಿಗಳು ಭಾಷಾಂತರಗೊಳ್ಳಬೇಕಾದ ಅಗತ್ಯವಿದೆ.ಒಂದು ಭಾಷೆಯ ಕೃತಿಯು ಇನ್ನೊಂದು ಭಾಷೆಗೆ ಭಾಷಾಂತರಗೊಂಡಾಗ ಬಹಳಷ್ಟು ಜಾಗ್ರತೆ ವಹಿಸಬೇಕಾಗುತ್ತದೆ. ಮೂಲಭಾಷೆಯ ಸೊಗಡಿಗೆ ಧಕ್ಕೆ ಬಾರದಂತೆ, ಮೂಲಕೃತಿಯ ಆಶಯಕ್ಕೆ ಚ್ಯುತಿ ಬಾರದಂತೆ ಮುತುವರ್ಜಿವಹಿಸಬೇಕಾಗುತ್ತದೆ. ಈ ಬಗ್ಗೆ ಭಾಷಾಂತರಕಾರ ಎಚ್ಚರದಿಂದ ಭಾಷಾಂತರಿಸಬೇಕಾಗುತ್ತದೆ ಎಂದು ಖ್ಯಾತ ಸಂಘಟಕ, ಕುಂದಪ್ರಭಾ ಪತ್ರಿಕೆಯ ಸಂಪಾದಕ ಯು.ಎಸ್.ಶೆಣೈ ಅಭಿಪ್ರಾಯ ವ್ಯಕ್ತಪಡಿಸಿದರು.

ಅವರು ಕುಂದಾಪುರದ ತೇಜಸ್ ಡೆವಲಪರ‍್ಸ್‌ನ ಆಶ್ರಯದಲ್ಲಿ ಹೊಟೇಲ್ ಶರೂನ್‌ನಲ್ಲಿ ಖ್ಯಾತ ನಿರ್ದೇಶಕ, ಕೊಂಕಣಿ ಅಕಾಡೆಮಿ ಮಾಜಿ ಅಧ್ಯಕ್ಷ ಕಾಸರಗೋಡು ಚಿನ್ನಾ ಅವರು ಭಾಷಾಂತರಿಸಿದ ‘ಕನ್ನಡಾಚ್ಲೊ ತೀಸ ಕಾಣಿಯೋ’ ಬಿಡುಗಡೆಗೊಳಿಸಿ ಮಾತನಾಡಿದರು.

ಸಮಾರಂಭ ಉದ್ಘಾಟಿಸಿ ಮಾತನಾಡಿದ ಕುಂದಾಪುರ ಪೇಟೆ ಶ್ರೀ ವೆಂಕಟ್ರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ರಾಧಾಕೃಷ್ಣ ಶೆಣೈ ಅವರು ಕೊಂಕಣಿ ಮಾತೃ ಭಾಷೆಯ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಅಗತ್ಯವನ್ನು ಒತ್ತಿ ಹೇಳಿದರಲ್ಲದೆ ಒಂದು ಸಂಸ್ಥೆ ಮಾಡುವಷ್ಟು ಕೆಲಸವನ್ನು ಕಾಸರಗೋಡು ಚಿನ್ನಾ ಅವರು ಒಬ್ಬರೇ ಮಾಡುತ್ತಿರುವುದು ದೊಡ್ಡ ಸಾಹಸವೇ ಸರಿ ಎಂದರಲ್ಲದೆ ಇದೇ ಪ್ರಪ್ರಥಮ ಬಾರಿ ಕನ್ನಡದ ಶ್ರೇಷ್ಠ ಮೂವತ್ತು ಕತೆಗಳನ್ನು ಕೊಂಕಣಿ ಭಾಷೆಗೆ ಅನುವಾದಿಸಿ ಭಾಷೆಯನ್ನು ಮತ್ತಷ್ಟು ಸಮೃದ್ಧಿಗೊಳಿಸಿದ್ದಾರೆ ಎಂದರು.

ಹಿರಿಯ ಉದ್ಯಮಿ ಕೆ.ಪ್ರಭಾಕರ ಪ್ರಭು ಪುಸ್ತಕಗಳನ್ನು ಖರೀದಿಸಿ ಶುಭಹಾರೈಸಿದರು.ಹಿರಿಯ ಕೊಂಕಣಿ ಲೇಖಕ, ಬರ್ನಾಡ್ ಡಿ’ ಕೋಸ್ಟಾ ಕೊಂಕಣಿ ಲೇಖಕರು ಬೆಳಕಿಗೆ ಬರುವ ನಿಟ್ಟಿನಲ್ಲಿ ಎಲ್ಲಾ ಸಮುದಾಯದವರು ಬರೆಯಬೇಕೆಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ ಭಾಷಾಂತರಕಾರ ಕಾಸರಗೋಡು ಚಿನ್ನಾ ಕೊಂಕಣಿ ಭಾಷಿಗರು ಸಾಹಿತ್ಯ ಕೃತಿ ರಚನೆಯಲ್ಲಿ ಬೇರೆ ಬೇರೆ ಸಾಧ್ಯತೆಗಳನ್ನು ಕಂಡುಕೊಳ್ಳಬಹುದು ಎಂಬ ಕಾರಣದಿಂದಲೇ ಅನ್ಯ ಭಾಷೆಯಿಂದ ಕೊಂಕಣಿ ಭಾಷೆಗೆ ನಾಟಕ, ಕತೆಗಳನ್ನು ಭಾಷಾಂತರಿಸಲು ಪ್ರಾರಂಭಿಸಿದೆ. ಹಿರಿಯ ಲೇಖಕರಾದ ಗೋಪಾಲಕೃಷ್ಣ ಪೈ ಅವರ ಮಾರ್ಗದರ್ಶನದಿಂದ ಈ ಕೆಲಸ ಸುಲಭವಾಯಿತು ಎಂದರಲ್ಲದೆ ಇದೊಂದು ಉತ್ತಮ ಗುಣಮಟ್ಟದ ಕೃತಿಯಾಗಿಸಲು ಬಹಳಷ್ಟು ಜಾಗೃತೆ ವಹಿಸಿದ್ದೇನೆ. ಕೊಂಕಣಿ ಭಾಷಿಕರು ಓದುವ ಹವ್ಯಾಸ ಬೆಳೆಸಿಕೊಂಡರೆ ಒಳಿತೆಂದರು.

ಖಾರ್ವಿ ಸಮಾಜದ ಮುಖಂಡರಾದ ದೇವದಾಸ ಖಾರ್ವಿಯನ್ನು ಕಾಸರಗೋಡು ಚಿನ್ನಾ ಅವರ ಈ ಸಾಧನೆಯನ್ನು ಪ್ರಶಂಶಿಸಿದರು. ಕರ್ನಾಟಕದ ಮಣಿಪಾಲ, ಮಂಗಳೂರು, ಕಾರ್ಕಳ, ಬೆಂಗಳೂರು, ಭಟ್ಕಳ, ಕುಂದಾಪುರ ಊರುಗಳಲ್ಲಿ ಬಿಡುಗಡೆಗೊಂಡಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಊರುಗಳಲ್ಲಿ ಬಿಡುಗೊಳಿಸಿ ಭಾಷೆಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದೆಂದು ಚಿನ್ನಾ ಹೇಳಿದರು.

ಖ್ಯಾತ ಹಿಂದೂಸ್ಥಾನಿ ಗಾಯಕಿ ಆಶಾ ನಾಯಕ್ ಪ್ರಾರ್ಥನೆ ಹಾಡಿದರು. ತೇಜಸ್ ಡೆವಲಪರ‍್ಸ್‌ನ ಚಂದ್ರಕಾಂತ ಶೆಣೈ ಸ್ವಾಗತಿಸಿ, ಉದ್ಯಮಿಗಳಾದ ಗಣೇಶ್ ನಾಯಕ್, ರಾಮಕೃಷ್ಣ ಪೈ ಅತಿಥಿಗಳನ್ನು ಪರಿಚಯಿಸಿ ಗೌರವಿಸಿದರು. ಗಣಪತಿ ಶಿಪಾಯಿ ಗಂಗೊಳ್ಳಿ ವಂದಿಸಿದರು. ವೈಶ್ಯವಾಣಿ ಸಮೂಹದ ವೆಂಕಟೇಶ್ ಶೇಟ್, ಮಾಧವ ಶೇಟ್, ಗಣಪತಿ ಶೇಟ್, ಬಾಲು, ಸುಹಾಸ್ ರಾವ್ ಸೇರಿದಂತೆ ನೂರಾರು ಗಣ್ಯರು ಭಾಗವಹಿಸಿದ್ದರು. ಲೇಖಕ ಪಿ.ಜಯವಂತ ಪೈ ಕಾರ್ಯಕ್ರಮ ನಿರೂಪಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English