ಕಾಸರಗೋಡು: ಜಿಲ್ಲಾಡಳಿತ ಈ ಬಾರಿಯೂ ನಗರದ ಜನತೆಗೆ ಉಪ್ಪು ನೀರು ಕುಡಿಸಲು ತಯಾರಿ ನಡೆಸುತ್ತಿದೆ. ಶಾಶ್ವತ ತಡೆಗೋಡೆ ಕಾಮಗಾರಿ ಸ್ಥಗಿತಗೊಂಡಿದ್ದು, ಪರಿಷ್ಕೃತ ಎಸ್ಟಿಮೇಟ್ ಕಳುಹಿಸಿ ಸರ್ಕಾರದ ಅನುಮೋದನೆ ಲಭಿಸಿದ್ದರೂ ಹಲವು ಕಾರಣಗಳಿಂದ ಯೋಜನೆ ಜಾರಿಯಾಗದೆ ಕಡತದಲ್ಲೇ ಉಳಿದಿದೆ. ನಗರದ ಜನತೆಗೆ ಕುಡಿಯುವ ಶುಧ್ಧ ನೀರು ಪೂರೈಕೆಯ ಗುರಿಯಿರಿಸಿರುವ ಜಿಲ್ಲಾಡಳಿತ ಬಾವಿಕ್ಕೆರೆಯ ಪಯಸ್ವಿನಿ ಹೊಳೆಗೆ ಅಡ್ಡ ಮರಳಚೀಲದ ತಾತ್ಕಾಲಿಕ ತಡೆಗೋಡೆಯ ನಿರ್ಮಾಣಕ್ಕೆ ಮುಂದಾಗಿದೆ. ಸಮುದ್ರದ ಉಪ್ಪುನೀರು ಸಿಹಿ ನೀರಿನೊಂದಿಗೆ ಸೇರ್ಪಡೆಗೊಳ್ಳುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿ ವರ್ಷ ಇಲ್ಲಿ ಹೊಳೆಗೆ ತಡೆಗೋಡೆ ನಿರ್ಮಿಸಲಾಗುತ್ತಿದೆ.
ಲಕ್ಷಾಂತರ ರೂ.ವೆಚ್ಚದಲ್ಲಿ ಪಯಸ್ವಿನಿ ಹೊಳೆಗೆ ನಿರ್ಮಿಸುವ ತಡೆಗೋಡೆ ಗುತ್ತಿಗೆದಾರರ ಪಾಲಿಗೆ ಹಣಮಾಡುವ ದಂಧೆಯಾಗಿ ಪರಿಣಮಿಸಿದೆ. ಬಾವಿಕ್ಕೆರೆಯ ಪಂಪಿಂಗ್ ಸ್ಟೇಶನ್ನಿಂದ ಒಂದುವರೆ ಕಿ.ಮೀ ದೂರದಲ್ಲಿ ಕೆಳಭಾಗದಲ್ಲಿ ತಡೆಗೋಡೆ ನಿರ್ಮಿಸಲಾಗುತ್ತಿದೆ. 110ಮೀ. ಉದ್ದ, ಎರಡು ಮೀ. ಅಗಲ ಹಾಗೂ ಎರಡುವರೆ ಮೀ. ಎತ್ತರಕ್ಕೆ ತಡೆಗೋಡೆ ನಿರ್ಮಿಸಲಾಗುತ್ತಿದೆ. ಹತ್ತು ಲಕ್ಷ ರೂ. ವೆಚ್ಚದಲ್ಲಿ ಕಾಮಗಾರಿ ಬಿರುಸಿನಿಂದ ನಡೆದುಬರುತ್ತಿದೆ. ಪ್ಲಾಸ್ಟಿಕ್ ಚೀಲದಲ್ಲಿ ಮರಳು ತುಂಬಿಸಿ ಒಂದುವರೆ ಮೀ.ಅಗಲದಲ್ಲಿ ಚೀಲಗಳನ್ನು ಪೇರಿಸಿ, ಇದರ ಮಧ್ಯೆ ಮಣ್ಣು ತುಂಬಿಸಲಾಗುತ್ತಿದೆ. ಎರಡು ಮೀ.ಎತ್ತರಕ್ಕೆ ಸಮಾನವಾಗಿ ಕಟ್ಟದಿಂದ ಹೆಚ್ಚುವರಿ ನೀರು ಹೊರ ಹರಿದುಹೋಗುವಂತೆ ಪೈಪುಗಳನ್ನು ಅಳವಡಿಸಲಾಗಿದೆ. ಕಳೆದ ಹಲವಾರು ವರ್ಷಗಳಿಂದ ತಾತ್ಕಾಲಿಕ ತಡೆಗೋಡೆ ನಿರ್ಮಿಸಲಾಗುತ್ತಿದ್ದು, ಅದೆಷ್ಟೋ ಬಾರಿ ಬೇಸಿಗೆ ಮಳೆಯಿಂದ ನೀರಿನ ಪ್ರವಾಹಕ್ಕೆ ಸಿಲುಕಿ ಒಡೆದು ನಿರ್ನಾಮಗೊಂಡ ಹಾಗೂ ಇದಕ್ಕೆ ಮತ್ತೆ ಹಣ ವ್ಯಯಿಸಿ ತಡೆಗೋಡೆ ನಿರ್ಮಿಸಿದ ನಿದರ್ಶನಗಳಿವೆ.
ಕನಸಾಗಿ ಉಳಿದ ಶಾಶ್ವತ ತಡೆಗೋಡೆ:
ಕಾಸರಗೋಡಿನ ಜನತೆಯ ಉಪ್ಪು ನೀರಿನ ಸಮಸ್ಯೆ ಪರಿಹಾರಕ್ಕಾಗಿ ಪಯಸ್ವಿನಿ ಹಾಗೂ ಕರಿಚ್ಚೇರಿ ಹೊಳೆಗಳ ಸಂಗಮ ಪ್ರದೇಶ ಮುನಾಂಬತ್ ಎಂಬಲ್ಲಿ ಶಾಶ್ವತ ತಡೆಗೋಡೆ ನಿರ್ಮಾಣಕ್ಕೆ ಕಾಮಗಾರಿ ಆರಂಭಿಸಿದ್ದರೂ, ಕೆಲವೊಂದು ತಾಂತ್ರಿಕ ಕಾರಣಗಳಿಂದ ಕಾಮಗಾರಿ ಪಿಲ್ಲರ್‌ಗಳಿಗಷ್ಟೆ ಸೀಮಿತವಾಗಿದೆ. ಸಣ್ಣ ನೀರಾವರಿ ಇಲಾಖೆ ಮೂಲಕ ಸರ್ಕಾರ ಶಾಶ್ವತ ತಡೆಗೋಡೆ ನಿರ್ಮಾಣಕ್ಕೆ ಮುಂದಾಗಿದ್ದು, ಸುಮಾರು ನಾಲ್ಕು ಕೋಟಿ ರೂ. ವ್ಯಯಿಸಲಾಗಿದೆ. ಪ್ರಸ್ತುತ ಕಾಮಗಾರಿಯ ಪರಿಷ್ಕೃತ ಎಸ್ಟಿಮೇಟ್‌ನ ತಪಾಸಣೆ ನಡೆದುಬರುತ್ತಿದೆ, ಕಾಮಗಾರಿ ಯಾವಾಗ ಪೂರ್ತಿಗೊಳ್ಳಲಿದೆ ಎಂಬ ಬಗ್ಗೆ ನಿಖರವಾಗಿ ಹೇಳಲು ಸಾಧ್ಯವಿಲ್ಲ ಎಂಬುದಾಗಿ 2014 ರಲ್ಲಿ ರಾಜ್ಯ ಜಲಸಂಪನ್ಮೂಲ ಖಾತೆ ಸಚಿವ ಪಿ.ಜೆ ಜೋಸೆಫ್ ಉದುಮ ಶಾಸಕ ಕೆ. ಕುಞಿರಾಮನ್ ಅವರಿಗೆ ವಿಧಾನಸಭೆಯಲ್ಲಿ ತಿಳಿಸಿದ್ದರು. ಕಳೆದ ಹಲವು ವರ್ಷಗಳಿಂದ ಕಾಂಕ್ರೀಟ್‌ನ ಶಾಶ್ವತ ತಡೆಗೋಡೆ ಕಾಮಗಾರಿ ಅನಿಶ್ಚಿತತೆಯತ್ತ ಸಾಗುತ್ತಿದ್ದರೂ, ಕಾಸರಗೋಡಿನ ಶಾಸಕರಾಗಲಿ, ಇತರ ಜನಪ್ರತಿನಿಧಿಗಳಾಗಲಿ, ಈ ಬಗ್ಗೆ ಚಕಾರವೆತ್ತದಿರುವುದು ಸಂಶಯಕ್ಕೆಡೆಮಾಡಿದೆ.
ಪ್ಲಾಸ್ಟಿಕ್‌ಮಯ ಹೊಳೆ:
ಪ್ರತಿ ವರ್ಷ ಪಯಸ್ವಿನಿ ಹೊಳೆಗೆ ಪ್ಲಾಸ್ಟಿಕ್ ಚೀಲದಲ್ಲಿ ಮರಳುತುಂಬಿ ತಾತ್ಕಾಲಿಕ ತಡೆಗೋಡೆ ನಿರ್ಮಿಸುತ್ತಿರುವುದರಿಂದ ಪಯಸ್ವಿನಿ ಹೊಳೆ ಪ್ಲಾಸ್ಟಿಕ್‌ಮಯವಾಗಿದೆ. ೧೯೮೦ರಿಂದ ಇಲ್ಲಿ ತಾತ್ಕಾಲಿಕ ತಡೆಗೋಡೆ ನಿರ್ಮಿಸಲಾಗುತ್ತಿದ್ದು, ಈ ವರೆಗೆ ತಡೆಗೋಡೆ ನಿರ್ಮಾಣಕ್ಕಾಗಿ ಬಳಸಿರುವ ಲಕ್ಷಾಂತರ ಪ್ಲಾಸ್ಟಿಕ್ ಚೀಲಗಳು ಹೊಳೆಯ ತಳದಲ್ಲಿ ದಾಸ್ತಾನಾಗಿದೆ. ಈ ಬಾರಿ ತಡೆಗೋಡೆ ನಿರ್ಮಾಣಕ್ಕೆ ೨೦ಸಾವಿರಕ್ಕೂ ಹೆಚ್ಚು ಪ್ಲಾಸ್ಟಿಕ್ ಚೀಲಗಳನ್ನು ಬಳಸಲಾಗಿದೆ.ಮಳೆಗಾಲ ಆರಂಭಕ್ಕೆ ಮುನ್ನ ತಡೆಗೋಡೆ ಪ್ಲಾಸ್ಟಿಕ್ ಸಹಿತ ಮರಳನ್ನು ಸ್ಥಳಾಂತರಿಸಬೇಕಾಗಿದ್ದರೂ, ಇದ್ಯಾವುದೂ ಇಲ್ಲಿ ನಡೆದುಬಾರದಿರುವುದರಿಂದ ಹೊಳೆ ಹಾಗೂ ದಡದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ತುಂಬಿ ತುಳುಕುತ್ತಿದೆ. ಮರಳು ತುಂಬಿದ ಹಳೆ ಪ್ಲಾಸ್ಟಿಕ್ ತೆರವುಗೊಳಿಸಲು ಪ್ರತ್ಯೇಕ ಮೊತ್ತ ಮೀಸಲಿರಿಸುತ್ತಿದ್ದರೂ, ಈ ಹಣವನ್ನು ದುರುಪಯೋಗಪಡಿಸುತ್ತಿರುವ ಬಗ್ಗೆ ದೂರುಗಳಿವೆ.
ಕಾಸರಗೋಡು ನಗರಸಭೆ ಹಾಗೂ ಮುಳಿಯಾರ್, ಚೆಂಗಳ, ಮಧೂರು, ಮೊಗ್ರಾಲ್‌ಪುತ್ತೂರು ಗ್ರಾಪಂ ವ್ಯಾಪ್ತಿಯ ಜನರಿಗೆ ಶುದ್ಧ ಕುಡಿಯುವ ನೀರು ಮತ್ತೆ ಮರಿಚಿಕೆಯಾಗಿದೆ. ನಗರಸಭೆ ವ್ಯಾಪ್ತಿಯ ಚೆನ್ನಿಕ್ಕರ, ಕಸಬಾಕಡಪ್ಪುರ ಸಹಿತ ಹಲವಾರು ಕಡೆ ಬೇಸಿಗೆಯಲ್ಲಿ ಕುಡಿಯುವ ನೀರಿನ ತೀವ್ರ ಕ್ಷಾಮ ಎದುರಾಗುತ್ತಿದೆ.
Click this button or press Ctrl+G to toggle between Kannada and English