ಉಪ್ಪಳ: ಜಾತ್ಯಾತೀತ, ಭ್ರಷ್ಟಾಚಾರ ಮುಕ್ತ ಅಭಿವೃದ್ಧಿಯ ಕೇರಳ ಎಂಬ ಘೋಷಣೆಯೊಂದಿಗೆ ಸಿಪಿಎಂ ರಾಜ್ಯ ಪ್ರಧಾನ ಕಾರ್ಯದರ್ಶಿ, ಪ್ಯಾಲಿಟ್ ಬ್ಯೂರೋ ಸದಸ್ಯ, ಪಿಣರಾಯಿ ವಿಜಯನ್ ಅವರ ನೇತೃತ್ವದಲ್ಲಿ ಸಂಚರಿಸಲಿರುವ ನವಕೇರಳ ಜಾಥಾಕ್ಕೆ ಶುಕ್ರವಾರ ಸಂಜೆ ಉಪ್ಪಳದಲ್ಲಿ ಅದ್ದೂರಿ ಚಾಲನೆ ನೀಡಲಾಯಿತು. ಸಿಪಿಎಂನ ಮಾಜಿ ಪ್ರಧಾನ ಕಾರ್ಯದರ್ಶಿ, ಪಾಲಿಟ್ ಬ್ಯೂರೋ ಸದಸ್ಯ ಪ್ರಕಾಶ್ ಕಾರಟ್ ಅವರು ಪಿಣರಾಯಿ ವಿಜಯನ್ ಅವರಿಗೆ ಕೆಂಬಾವುಟ ಧ್ವಜ ಹಸ್ತಾಂತರಿಸುವ ಮೂಲಕ ಯಾತ್ರೆಗೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಪ್ರಕಾಶ್ ಕಾರಟ್ ಅವರು, ಭಷ್ಟಾಚಾರದಿಂದ ಕೂಡಿದ ರಾಜ್ಯ ಸರಕಾರ ರಾಜ್ಯದ ಜನತೆಗೆ ಉತ್ತಮವಾದ ಆಡಳಿತನವನ್ನು ನೀಡುವಲ್ಲಿ ಅತ್ಯಂತ ಹೀನಾಯ ವಿಫಲತೆಯನ್ನು ಕಂಡಿದೆ. ಇನ್ನೂ ಬೆಲೆಯೇರಿಕೆಯಿಂದ ಮುಕ್ತಿ ಕಾಣದೆ ಜನತೆ ಕಂಗಾಲಾಗಿದ್ದಾರೆ. ರಾಜ್ಯದ ಯುವಕರು ಉದ್ಯೋಗ ರಹಿತರಾಗಿದ್ದು, ಸರಕಾರ ಉದ್ಯೋಗವನ್ನು ನೀಡುವಲ್ಲಿ ಹಿಂದೇಟು ಹಾಕಿದೆ. ಕೃಷಿಕರು, ರಬ್ಬರ್ ಕಾರ್ಮಿಕರು ಸಂಕಷ್ಟಕ್ಕೆ ಒಳಗಾಗಿದ್ದು, ಜಾತ್ಯಾತೀತ ಕೇರಳವನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಬಂದೊದಗಿದೆ ಎಂದು ಅಭಿಪ್ರಾಯಪಟ್ಟರು.ಜನರ ನಡುವೆ ಭಿನ್ನತೆಗೆ ಕಾರಣವಾಗುವ ಕೋಮುವಾದವನ್ನು ಪೋಶಿಸುವಲ್ಲಿ ಅಂತಹ ಶಕ್ತಿಗಳೊಡನೆ ಸಖ್ಯದಿಂದಿರುವ ರಾಜ್ಯ ಸರಕಾರ ಭದ್ರತೆ,ಶಾಂತಿಗೆ ಸವಾಲಾಗಲಿದೆಯೆಂದು ತಿಳಿಸಿದರು.
ಸಿಪಿಎಂ ಮುನ್ನಡೆಸುತ್ತಿರುವ ನವಕೇರಳ ಯಾತ್ರೆ ರಾಜ್ಯದಲ್ಲಿ ಹೊಸ ಶಕೆಯನ್ನು ಸೃಷ್ಟಿಸಲಿದೆ. ರಾಜ್ಯದಲ್ಲಿ ಜಾತ್ಯಾತೀತತೆಯನ್ನು ಉಳಿಸಿಕೊಳ್ಳುವ ಮತ್ತು ಬದಲಾವಣೆಯ ಅಗತ್ಯತೆ ಕಂಡು ಬಂದಿದೆ. ರಾಜ್ಯದ ಜನತೆಗೆ ಭ್ರಷ್ಟಾಚಾರ ರಹಿತ ಆಡಳಿತವನ್ನು ನಡೆಸಲು ಎಲ್ಲಾ ರೀತಿಯ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುವುದು. ಅದಕ್ಕೆ ಜನತೆ ತಯಾರಾಗಬೇಕಾಗಿದೆ ಎಂದು ತಿಳಿಸಿದರು.
ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಎನ್‌ಡಿಎ ಸರಕಾರವನ್ನು ಅವರು ಟೀಕಿಸಿದ ಅವರು, ಸರಕಾರ ಕೋಮು ನೀತಿಗಳನ್ನು ಅನುಸರಿಸಿ ಜನರಲ್ಲಿ ಅನಿಶ್ಚಿತತೆಯನ್ನು ಹುಟ್ಟುಹಾಕುತ್ತಿದೆ. ಘರ್ ವಾಪಸಿಯಂತಹ ನಿರ್ಣಯಗಳ ಮೂಲಕ ಒಡೆದಾಳುವ ನೀತಿಯನ್ನು ಜಾರಿಗೊಳಿಸಿದೆ. ಪಠಾಣ್ ಕೋಟ್ ಘಟನೆಯನ್ನು ನೆಸಪಿಸಿದ ಅವರು ಕೇಂದ್ರ ಸರಕಾರ ಉಗ್ರವಾದವನ್ನು ಬೆಂಬಲಿಸುತ್ತಿದೆ ಎಂದು ತಿಳಿಸಿದರು. ಅಲ್ಲದೆ ರಾಜ್ಯದಲ್ಲಿ ಕಾಂಗ್ರೆಸ್ ನಡೆಸಿದ ಜನರಕ್ಷಾ ಯಾತ್ರೆ ಭ್ರಷ್ಟಾಚಾ ರಕ್ಷಾ ಯಾತ್ರೆ ಎಂದು ವ್ಯಂಗ್ಯವಾಗಿ ತಿಳಿಸಿದರು.
ರಾಜ್ಯ ವಿಪಕ್ಷ ನಾಯಕ ವಿ.ಎಸ್.ಅಚ್ಯುತಾನಂದನ್, ಸಿಪಿಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್, ಡಾ.ಟಿ.ಎಂ.ಥೋಮಸ್ ಐಸಾಕ್, ರಾಜ್ಯ ಸೆಕ್ರೆಟೆರಿಯೇಟ್ ಸದಸ್ಯ ಎಂ.ವಿ.ಗೋವಿಂದನ್, ಕೆ.ಜೆ.ಥೋಮಸ್, ರಾಜ್ಯ ಸಮಿತಿ ಸದಸ್ಯೆ ಪಿ.ಕೆ.ಸೈನಬಾ, ಪಿ.ಶ್ಯಾಮಲಾದೇವಿ, ಮಾಜಿ ಎಂ.ಪಿ ಕರುಣಾಕರನ್, ಉದುಮ ಶಾಸಕ ಕುಂಞರಾಮನ್ ಮೊದಲಾದವರು ಉಪಸ್ಥಿತರಿದ್ದರು.
ವಿ.ಪಿ.ಟಿ ಮುಸ್ತಪಾ ಸ್ವಾಗತಿಸಿ,ವಂದಿಸಿದರು.ಸಿಪಿಎಂನ ಹೊಸ ಶೈಲಿಯ ನವಕೇರಳ ಜಾಥಾದ ಹಿನ್ನೆಲೆಯಲ್ಲಿ ಮಂಜೇಶ್ವರದಿಂದ ಕಾಸರಗೋಡಿನವರೆಗೂ ಕೆಂಪು ಬಾಚುಟಗಳು ಹೆದ್ದಾರಿಯ ಎರಡೂ ಪಕ್ಕ ರಾರಾಜಿಸುತ್ತಿದ್ದು, ಜಾಥಾ ಕೇರಳ ರಾಜ್ಯದಾದ್ಯಂತ ಸಂಚಲನ ಮೂಡಿಸಲಿದೆ.
ಗಮನ ಸೆಳೆದ ಪುಸ್ತಕ ಬಂಡಿ
ಇತಿಹಾಸ ಸೃಷ್ಟಿಸುವ ಸಾಧಯತೆಯಿರುವ ಸಿಪಿಎಂನ ನವಕೇರಳ ಜಾಥಾದೊಂದಿಗೆ ಚಿಂತಾ ಪಬ್ಲಿಕೇಶನ್ಸ್‌ನ ಅಮೂಲ್ಯ ಸಂಗ್ರಹಗಳಿರುವ ಪುಸ್ತಕ ಬಂಡಿಯೂ ಉಪ್ಪಳದಿಂದ ಆರಂಭಗೊಂಡ ಜಾಥಾದ ಜತೆಗೆ ಸಾಗಲಿದ್ದು ವಿಶೇಷ ಗಮನ ಸೆಳೆಯುತ್ತಿದೆ. ಜಾಥಾ ಸ್ವಾಗತ ಕೇಂದ್ರಗಳಿಂದ ಈ ವಾಹನದಿಂದ ದರ ಕಡಿತದಲ್ಲಿ ಪುಸ್ತಕಗಳನ್ನು ಖರೀದಿಸಲು ಅವಕಾಶವಿದೆ. ಈ ಪುಸ್ತಕ ಬಂಡಿಯಲ್ಲಿ ರಾಜಕೀಯ, ಸಾಂಸ್ಕೃತಿಕ, ಸಾಮಾಜಿಕ ಸೇರಿದಂತೆ ಅನೇಕ ವಿಚಾರ ಧಾರೆಗಳನ್ನು ಒದಗಿಸುವ ಪುಸ್ತಕಗಳು ಲಭ್ಯವಿದೆ.
Click this button or press Ctrl+G to toggle between Kannada and English