ಪೆರ್ಲ: ಮಕ್ಕಳೂ, ಮಹಿಳೆಯರೂ, ಹೊಸಬರೂ-ಹಳೆಬರೂ ಮೊಣಕಾಲಷ್ಟು ಕೆಸರು ಗದ್ದೆಯಲ್ಲಿ ಇಂಚು ಉದ್ದದ ನೇಜಿ ನೆಡುವ ನೋಟ ಬಜಕೂಡ್ಲಿನಲ್ಲಿ ಉತ್ಸವದ ಸಂಭ್ರಮವನ್ನುಂಟು ಮಾಡಿತ್ತು.
ಪೆರ್ಲ ಬಜಕೂಡ್ಲಿನ ಬಂಗಾರಿ ಎಪ್.ಇ.ಒ. ಎಂಬ ಕೃಷಿಕರ ಸಂಘಟನೆ ರೈತರಿಗೆ ಶ್ರೀ ಪದ್ಧತಿಯಲ್ಲಿ ಭತ್ತಕೃಷಿ ಮಾಡುವ ತರಬೇತಿಗಾಗಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಸಾಮಾನ್ಯವಾಗಿ ಕಾರ್ಯಕ್ರಮಕ್ಕಾಗಿ ತರಬೇತಿ ಎಂಬ ನಿಲುವನ್ನು ಬದಲಿಸಿ, ಸುಮಾರು ಎರಡು ಎಕರೆಯಷ್ಟು ವಿಶಾಲವಾದ ಹಡಿಲು ಬಿದ್ದ ಗದ್ದೆಯನ್ನು ಕೆಸರು ಗದ್ದೆಯಾಗಿ ಮಾಡಿಕೊಂಡು, ಗೋ ಆಧಾರಿತ ಜೈವ ಕೃಷಿ ಮಾಡಲು ಬಜಕೂಡ್ಲಿನ ಅಮೃತಧಾರಾ ಗೋಶಾಲೆಯ ಸಹಕಾರವನ್ನೂ ಪಡೆದು ಕೊಂಡು ಒಂದು ಮಾದರಿ ಕಾರ್ಯಕ್ರಮವಾಗಿ ಮಾಡಿದೆ. ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಒಳಪಟ್ಟ ಈ ಬಯಲು ಇದೀಗ ನಡುಬೈಲು-ಪೆರ್ಲ ಕಾಲುದಾರಿಯಾಗಿ ಸಾಗುವಾಗ ಕಣ್ಣಿಗೆ ತಂಪಾಗಿ ನಿಂತಿದೆ.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ನಾರಾಯಣ ಪಾಟಾಳಿ ಶ್ರೀ ಪದ್ಧತಿ ಭತ್ತ ನಾಟಿಯ ತರಬೇತಿ ನೀಡಿದರು. ಯೋಜನೆಯ ಪೆರ್ಲ ವಲಯ ಮೇಲ್ವಿಚಾರಕ ಮೋಹನ್ ಸಹಕರಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿವಿಧ ಸ್ವಸಹಾಯ ಸಂಘಗಳ ತರಬೇತಿ ಪಡೆದ ಸದಸ್ಯರೂ, ಊರವರೂ, ವಿಶೇಷವಾಗಿ ಪೆರ್ಲ ಶ್ರೀ ಸತ್ಯನಾರಾಯಣ ಹೈಸ್ಕೂಲಿನ ಎಸ್.ಎನ್. ನೇಚರ್ ಕ್ಲಬ್‌ನ 40 ರಷ್ಟು ವಿದ್ಯಾರ್ಥಿಗಳು ಈ ನಾಟಿ ಮಾಡಿದರು. 12 ದಿನ ಪ್ರಾಯದ ಒಂದೆರಡು ಇಂಚು ಉದ್ದದ ಆರ್‌ಆರ್-8 ಎಂಬ ಭತ್ತ ತಳಿಯನ್ನು ಆಯ್ಕೆ ಮಾಡಲಾಯಿತು.
ಸಭಾ ಕಾರ್ಯಕ್ರಮದಲ್ಲಿ ಎಣ್ಮಕಜೆ ಗ್ರಾಮ ಪಂಚಾಯತ್ ಕ್ಷೇಮಕಾರ್ಯ ಸ್ಥಾಯೀ ಸಮಿತಿ ಅಧ್ಯಕ್ಷ ಉದಯ ಚೆಟ್ಟಿಯಾರ್ ಅಧ್ಯಕ್ಷತೆ ವಹಿಸಿದರು. ಕುಂಟಾರು ಶ್ರೀ ರವೀಶ ತಂತ್ರಿ ಅವರ ಉಪಸ್ಥಿತಿಯಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯೆ ಪುಷ್ಪಾ ಅಮೆಕ್ಕಳ, ಬ್ಲಾಕ್ ಪಂಚಾಯತ್ ಸದಸ್ಯೆ ಸಪ್ರೀನಾ, ಪೆರ್ಲ ಕೃಷಿ ಭವನದ ಕೃಷಿ ಅಧಿಕಾರಿ ಮೀರಾ, ಪಂಚಾಯತ್ ಸದಸ್ಯೆ ಶಶಿಕಲಾ ಶುಭಹಾರೈಸಿದರು. ಎಫ್.ಇ.ಡಿ. ಉಪಾಧ್ಯಕ್ಷ ಉಮೇಶ್ ಕೆ.ಪೆರ್ಲ ಸ್ವಾಗತಿಸಿ, ಅಮೃತಧಾರಾ ಗೋಶಾಲೆಯ ಅಧ್ಯಕ್ಷ ಜಗದೀಶ್ ಬಿ.ಜಿ. ವಂದಿಸಿದರು.
Click this button or press Ctrl+G to toggle between Kannada and English