ಬದಿಯಡ್ಕ: ಪ್ರಾಚೀನ ಸತನಾತನ ಧರ್ಮದಲ್ಲಿ ಆಚರಿಸುವ ಆಚರಣೆಗಳ ಹಿಂದೆ ಮಹತ್ವವಾದ ಹಿನ್ನೆಲೆಗಳಿವೆ. ಆದರೆ ಆಧುನಿಕ ಚಿಂತನೆಗಳ ಫಲಗಳೆಂದು ಆಚರಣೆಗಳನ್ನು ಹೀಯಾಳಿಸುವುದು ತರವಲ್ಲ ಎಂದು ಹಿಂದೂ ಐಕ್ಯವೇದಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರವೀಣ್ ಕೋಡೋತ್ತ್ ಅಭಿಪ್ರಾಯ ವ್ಯಕ್ತಪಡಿಸಿದರು.
ನೀರ್ಚಾಲು ಸಮೀಪದ ಏಣಿಯರ್ಪು ಕೋದಂರ್ಬತ್ತ್ ತರವಾಡು ಹಾಗೂ ಪರಿವಾರ ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವದಂಗವಾಗಿ ಗುರುವಾರ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ವಿಶೇಷೋಪನ್ಯಾಸಗೈದು ಮಾತನಾಡುತ್ತಿದ್ದರು.
ಭೋಗ ಸಂಸ್ಕೃತಿಯ ಜಗತ್ತಿನ ದೊಡ್ಡಣ್ಣಗಳು ಆಧ್ಯಾತ್ಮಿಕ,ಭೌದ್ದಿಕ ಶ್ರೀಮಂತಿಕೆಯ ಕೊರತೆಯಿಂದ ಧೂಳೀಪಟವಾಗುತ್ತಿರುವ ಇಂದಿನ ಸಂದರ್ಭದಲ್ಲಿ ಅವೆಲ್ಲವಕ್ಕೂ ಕಲಶಪ್ರಾಯವಾಗಿ ಭಾರತ ಮತ್ತೆ ವಿಶ್ವಗುರುವಾಗುವತ್ತ ದಾಪುಗಾಲಿಡುತ್ತಿದೆ. ಭಾರತೀಯ ಸನಾತನ ಸಂಸ್ಕೃತಿ ಭೋಗ ಲಾಲಸೆಗಳಿಗೆ,ಕ್ಷಣಿಕ ಸುಖಕ್ಕೆ ಎಂದೂ ಆಸ್ಪದ ನೀಡಿಲ್ಲ. ಶ್ರೀ ಭಗವಂತನಲ್ಲಿ ವಿವಿಧ ಮಾರ್ಗಗಳ ಮೂಲಕ ವಿಲೀನವಾಗಿ ಅನುಭವಿಸುವ ಸಂತಸ ಸತ್ಯವಾದುದೆಂಬುದು ನಮ್ಮ ಪ್ರಾಜ್ಞರು ಕಂಡುಕೊಂಡ ಸತ್ಯವಾಗಿದ್ದು ನಾವದನ್ನು ಮರೆಯುವಂತಿಲ್ಲವೆಂದು ಅವರು ತಿಳಿಸಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ತಂತ್ರಿವರ್ಯ ಉಳಿಯತ್ತಾಯ ವಿಷ್ಣು ಆಸ್ರ ಆಶೀರ್ವಚನವಿತ್ತು ಮಾತನಾಡಿ ಕಲಿಯುಗದಲ್ಲಿ ಭಗವಂತನನ್ನು ಒಲಿಸುವಲ್ಲಿ ಭಕ್ತಿ ಮಾರ್ಗ ಪ್ರಮುಖವಾದುದೆಂದು ತಿಳಿಸಿ ಧಾರ್ಮಿಕ ಚಟುವಟಿಕೆಗಳಲ್ಲಿ ನಮ್ಮ ಕರ್ತವ್ಯಗಳ ನಿಭಾವಣೆ ಭಗವಂತನ ಅನುಗ್ರಹಕ್ಕೆ ಕಾರಣವಾಗುವುದೆಂದು ತಿಳಿಸಿದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕುಂಜಾರು ರಾಜಾರಾಮ ಮಧ್ಯಸ್ಥ ಸಭೆಯ ಅಧ್ಯಕ್ಷತೆ ವಹಿಸಿದ್ದರು.ಕುಮಾರಮಂಗಲ ಕುಮಾರ ಸುಬ್ರಹ್ಮಣ್ಯ ಕ್ಷೇತ್ರದ ಪ್ರಧಾನ ಅರ್ಚಕ ರಾಮಚಂದ್ರ ಅಡಿಗ ಬೇಳ,ತರವಾಡಿನ ಹಿರಿಯರಾದ ಗೋವಿಂದ ಮಣಿಯಾಣಿ,ತರವಾಡು ಮನೆ ಪೂಜಾರಿ ಬಾಲಕೃಷ್ಣ ಮಣಿಯಾಣಿ,ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ರಾಮಚಂದ್ರನ್ ಚೀನಪ್ಪಾಡಿ ಉಪಸ್ಥಿತರಿದ್ದರು.ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯದರ್ಶಿ ರಾಘವನ್ ಬೆಳೇರಿ ಸ್ವಾಗತಿಸಿ,ಶಶಿಧರನ್ ಪಾಂಡಿ ವಂದಿಸಿದರು.
Click this button or press Ctrl+G to toggle between Kannada and English