ಮಂಗಳೂರು : ಸರ್ಕಾರಿ ಲೇಡಿಗೋಶನ್ ಆಸ್ಪತ್ರೆಯ ಆವರಣದಲ್ಲಿ 18 ಕೋಟಿ ರೂ. ವೆಚ್ಚದಲ್ಲಿ ಆಂಧ್ರ ಪ್ರದೇಶದ ಉದ್ಯಮಿ ರಾಘವ ನಾಯ್ಡು ನಿರ್ಮಿಸಿ ಕೊಡಲಿರುವ ಎಂಟು ಅಂತಸ್ತುಗಳ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯ ಕಟ್ಟಡಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ಶಿಲಾನ್ಯಾಸ ನೆರವೇರಿಸಿದರು.
ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಕೆ.ಆರ್. ಕೀರ್ತಿ ಫೌಂಡೇಶನ್ ಟ್ರಸ್ಟ್ ನ ಆಡಳಿತ ಟ್ರಸ್ಟಿ ರಾಘವ ನಾಯ್ಡು ರವರು ತನ್ನ ಕೀರ್ತಿ ಶೇಷ ಪುತ್ರಿ ಕೆ.ಆರ್.ಕೀರ್ತಿ ಯ ಹೆಸರಿ ನಲ್ಲಿ ಮಂಗಳೂರಿನ ಜನತೆಗೆ ಕೊಡುಗೆಯಾಗಿ ನೀಡುವ ಈ ಆಸ್ಪತ್ರೆ ಜನತೆಗೆ ಪ್ರಯೋಜನವಾಗುವ ಜೊತೆಗೆ ತನ್ನ ಮಗಳ ಮೇಲಿರುವ ಪ್ರೀತಿಯನ್ನು ಸಾಮಾನ್ಯ ಜನರಿಗೆ ಕೊಡುಗೆಯ ರೀತಿಯಲ್ಲಿ ನೀಡಿದ್ದಾರೆ ಎಂದು ಹೇಳಿದರು.
ಯೋಗೀಶ ಭಟ್ ಅವರು ಈ ಕೊಡುಗೆಗೆ ಶ್ರಮ ವಹಿಸಿದ್ದು ಕಟ್ಟಡ ನಿರ್ಮಾಣದ ಸಂದರ್ಭ ಹಾಗೂ ನಿರ್ವಹಣೆ ಮತ್ತು ಅಗತ್ಯ ಸಲಕರಣೆ ಗಳಿಗೆ ಸಕಲ ನೆರವು ನೀಡಲು ಸರಕಾರ ಬದ್ಧವಾಗಿದೆ ಎಂದರು.
ರಾಘವ ನಾಯ್ಡು ರವರು ಬಂಟ್ವಾಳದ ಎಸ್ವಿ ಎಸ್ ಪ್ರಾಥಮಿಕ ಶಾಲೆಯ ನೂತನ ಕಟ್ಟಡಕ್ಕೂ ಒಂದೂವರೆ ಕೋಟಿ ರೂ.ಗಳನ್ನು ನೀಡಿದ್ದಾರೆ. ದಾನಿಗಳಾದ ರಾಘವ ನಾಯ್ಡು ದಂಪತಿಗಳನ್ನೂ ಈ ಸಂದರ್ಭದಲ್ಲಿ ಶಾಲು, ಹಾರ, ಫಲಪುಷ್ಪ ನೀಡಿ ಮುಖ್ಯಮಂತ್ರಿಗಳು ಗೌರವಿಸಿದರು.
ಕೆ.ಆರ್. ಕೀರ್ತಿ ಫೌಂಡೇಶನ್ ಟ್ರಸ್ಟ್ ನ ಆಡಳಿತ ಟ್ರಸ್ಟಿ ರಾಘವ ನಾಯ್ಡು ಮಾತನಾಡಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಬೆಂಬಲ ನೀಡುವುದು ಸರ್ವರ ಕರ್ತವ್ಯವಾಗಿದೆ. ಕರ್ನಾಟಕ ವಿಧಾನ ಸಭೆಯ ಉಪಾಧ್ಯಕ್ಷ ಎನ್.ಯೋಗೀಶ ಭಟ್ ಅವರು ಈ ಭಾಗದ ಲೇಡಿಗೋಶನ್ ಆಸ್ಪತ್ರೆಯ ಅಭಿವೃದ್ಧಿಯಲ್ಲಿ ತಾನು ಪಾಲ್ಗೊಳ್ಳುವ ಅವಕಾಶ ಮಾಡಿ ಕೊಟ್ಟಿದ್ದಾರೆ. ಒಂದು ವರ್ಷ ದೊಳಗೆ ರೂ. 18 ಕೋಟಿ ವೆಚ್ಚ ದಲ್ಲಿ ತನ್ನ ಕೀರ್ತಿ ಶೇಷ ಪುತ್ರಿ ಕೆ.ಆರ್.ಕೀರ್ತಿ ಯ ಹೆಸರಿನಲ್ಲಿ 8 ಅಂತಸ್ತುಗಳ ಕಟ್ಟಡ ನಿರ್ಮಿಸಿ ಹಸ್ತಾಂತರಿವುದಾಗಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಉಪಸಭಾಪತಿಗಳಾದ ಎನ್.ಯೋಗೀಶ ಭಟ್, ಲೇಡಿಗೋಶನ್ ಆಸ್ಪತ್ರೆಗೆ ದಾನಿಗಳ ನೆರವಿನಿಂದ ನಿರ್ಮಾಣಗೊಳ್ಳುವ 8 ಅಂತಸ್ತುಗಳ ನೂತನ ಕಟ್ಟಡದ ನಿರ್ವಹಣೆಗೆ ವಾರ್ಷಿಕ ರೂ. 2.5 ಕೋಟಿಯ ಅಗತ್ಯವಿದೆ. ಉಪಕರಣಗಳಿಗಾಗಿ ರೂ. 10 ಕೋಟಿ ಬೇಕು. ಮುಖ್ಯಮಂತ್ರಿಗಳು ಈ ಅನುದಾನ ಒದಗಿಸಿ ಸಹಕರಿಸಬೇಕೆಂದು ವಿನಂತಿಸಿದರು.
ಸರಕಾರಿ ವೆನ್ಲಾಕ್ ಆಸ್ಪತ್ರೆಯ ಬಳಿ ಸುಪರ್ ಸ್ಪೆಶಾಲಿಟಿ ಬ್ಲಾಕ್ ನಿರ್ಮಿಸುವುದು ನನ್ನ ಮುಂದಿನ ಗುರಿ. ಅದಕ್ಕಾಗಿ ರೂ. 100 -150 ಕೋಟಿ ಅನುದಾನ ಅಗತ್ಯವಿದೆ. ದಾನಿಗಳನ್ನು ಜೋಡಿಸುವ ಪ್ರಯತ್ನ ಆರಂಭವಾಗಿದೆ ಎಂದರು.
ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ. ಪಾಲೆಮಾರ್, ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷ ಕ್ಯಾ. ಗಣೇಶ್ ಕಾರ್ಣಿಕ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ನಾಗರಾಜ ಶೆಟ್ಟಿ , ಮೇಯರ್ ಪ್ರವೀಣ್ ಅಂಚನ್, ಉಪಮೇಯರ್ ಗೀತಾ ಎನ್. ನಾಯಕ್, ಪಾಲಿಕೆ ಸದಸ್ಯೆ ಸುರೇಖಾ, ದ.ಕ.ಜಿ.ಪಂ. ಅಧ್ಯಕ್ಷರಾದ ಕೆ.ಟಿ.ಶೈಲಜಾ ಭಟ್, ಬಿಸಿಎಂ ನಿಗಮದ ಅಧ್ಯಕ್ಷ ಎನ್.ಬಿ. ಅಬೂಬಕ್ಕರ್, ಜಿಲ್ಲಾಧಿಕಾರಿ ಸುಬೋಧ್ ಯಾದವ್, ರಾಜ್ಯದ ವೈದ್ಯಕೀಯ ಶಿಕ್ಷಣ ನಿರ್ದೇಶಕಿ ಡಾ| ಅರುಣಾ, ದ.ಕ.ಜಿ.ಪಂ. ಮುಖ್ಯ ಕಾರ್ಯನಿರ್ವಹಕಧಿಕಾರಿ ಪಿ. ಶಿವಶಂಕರ್, ಮನಪಾ ಆಯುಕ್ತ ಡಾ.ಕೆ.ಎನ್. ವಿಜಯಪ್ರಕಾಶ್ ಉಪಸ್ಥಿತರಿದ್ದರು.
ಲೇಡಿಗೋಶನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ಡಾ| ಶಕುಂತಳಾ ಸ್ವಾಗತಿಸಿದರು. ಹಿರಿಯ ತಜ್ಞೆ ಡಾ| ಜೆ.ಪೂರ್ಣಿಮಾ ವಂದಿಸಿದರು.
Click this button or press Ctrl+G to toggle between Kannada and English