ಕಾಸರಗೋಡು: ಕಳೆದ 50 ವರ್ಷಗಳಿಂದ ಕೇರಳದ ಆಧ್ಯಾತ್ಮಿಕ ಮತ್ತು ಸಾಮಾಜಿಕ ವಲಯಗಳಲ್ಲಿ ಕ್ಷೇತ್ರ ಸಂರಕ್ಷಣಾ ಸಮಿತಿಯು ಸಕ್ರಿಯವಾಗಿ ಕಾರ್ಯಾಚರಿಸುತ್ತಿದೆ. ಸ್ತ್ರೀ ಸುರಕ್ಷೆ , ಸ್ತ್ರೀ ಸಬಲೀಕರಣ, ಕುಟುಂಬ ಭದ್ರತೆ ಇತ್ಯಾದಿಗಳನ್ನು ಗುರಿಯಾಗಿರಿಸಿಕೊಂಡು ಈ ಸ್ತ್ರೀ ಸ್ವಾಭಿಮಾನ್ ಯಾತ್ರೆಯನ್ನು ಆಯೋಜಿಸಲಾಗಿದೆ. ಅತ್ಯಂತ ದಯನೀಯ ಹಾಗೂ ಆಪತ್ತಿನಿಂದ ಕೂಡಿದ ಸಾಮಾಜಿಕ ವ್ಯವಸ್ಥೆಯಲ್ಲಿ ಸ್ತ್ರೀಯರು ಬದುಕುವಂತಾಗಿದೆ ಎಂದು ಗೋವಾದ ರಾಜ್ಯಪಾಲೆ ಮೃದುಲಾ ಸಿನ್ಹಾ ಅಭಿಪ್ರಾಯ ವ್ಯಕ್ತಪಡಿಸಿದರು.
ಕೇರಳ ಕ್ಷೇತ್ರ ಸಂರಕ್ಷಣಾ ಸಮಿತಿಯ ಸುವರ್ಣ ಜಯಂತಿ ಆಚರಣೆಯ ಅಂಗವಾಗಿ ಮಾತೃಸಮಿತಿಯ ರಾಜ್ಯಾಧ್ಯಕ್ಷೆ ಪ್ರೊ.ವಿ.ಟಿ.ರಮಾ ಅವರ ನೇತೃತ್ವದಲ್ಲಿ ಅನಂತಪುರದಿಂದ ಅನಂತಪುರಿವರೆಗೆ (ಕಾಸರಗೋಡು ಜಿಲ್ಲೆಯಿಂದ ತಿರುವನಂತಪುರ ಜಿಲ್ಲೆ ತನಕ) ‘ಸ್ತ್ರೀ ಸ್ವಾಭಿಮಾನ ಯಾತ್ರೆ’ಗೆ ಭಾನುವಾರ ಅನಂತಪುರದಿಂದ ಆರಂಭಗೊಂಡು ಕಾಸರಗೋಡಿನಲ್ಲಿ ಭವ್ಯ ಸ್ವಾಗತ ನೀಡಿ ಬಳಿಕ ಶ್ರೀ ಮಲ್ಲಿಕಾರ್ಜುನ ದೇಗುಲದ ಆವರಣದಲ್ಲಿ ಏರ್ಪಡಿಸಿದ ಸಾರ್ವಜನಿಕ ಸಮಾರಂಭದಲಿ ಅವರು ಯಾತ್ರೆಯನ್ನು ವಿಧ್ಯುಕ್ತವಾಗಿ ಉದ್ಘಾಟಿಸಿ ಮಾತನಾಡುತ್ತಿದ್ದರು.
ಯುವತಿಯರು ಮತ್ತು ಮಹಿಳೆಯರು ಇಂದು ಉಪ‘ಗ ವಸ್ತುವಾಗಿ ಮಾರ್ಪಾಡುಗೊಂಡಿದ್ದಾರೆ. ಬಹುತೇಕ ಕಡೆಗಳಲ್ಲೂ ಮಹಿಳೆಯರಿಗೆ ತಾಯಿಯ ಸ್ಥಾನಮಾನ ದೊರಕುತ್ತಿಲ್ಲ. ಮಾತ್ರವಲ್ಲದೆ ಸ್ತ್ರೀಯರು ಇಂದು ಎಲ್ಲೆಡೆ ಒಂದಲ್ಲ ಒಂದು ರೀತಿಯಲ್ಲಿ ಅಪಮಾನ ಹಾಗೂ ಅವಹೇಳನ ಅನುಭವಿಸುತ್ತಿದ್ದಾರೆ. ನಿಜವಾಗಿಯೂ ಸ್ತ್ರೀಯರು ಪೂಜನೀಯರು. ಭಾರತೀಯ ಸನಾತನ ಸಂಸ್ಕೃತಿಯಲ್ಲಿ ಮಹಿಳೆಯರಿಗೆ ವಿಶೇಷ ಗೌರವ ಕಲ್ಪಿಸಲಾಗಿದೆ. ಈ ಶ್ರೇಷ್ಠ ಸಂಸ್ಕೃತಿಯನ್ನು ಮತ್ತು ಭಾರತೀಯ ಮೌಲ್ಯವನ್ನು ಎತ್ತಿ ಹಿಡಿದು ಅಭಿವೃದ್ಧಿಪಡಿಸಬೇಕಾದುದು ಇಂದಿನ ಅನಿವಾರ್ಯವಾಗಿದೆ ಎಂದು ಮೃದುಲಾ ಸಿನ್ಹಾ ಅವರು ಹೇಳಿದರು. ಈ ಯಾತ್ರೆಯು ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಅಧ್ಯಕ್ಷತೆ ವಹಿಸಿದ್ದರು.
ಯಾತ್ರೆಯು ಫೆ.7ರಂದು ಸಂಜೆ ೪ಗಂಟೆಗೆ ತಿರುವನಂತಪುರದ ನಾಯನಾರ್ ಪಾರ್ಕ್‌ನಲ್ಲಿ ಸಮಾಪ್ತಿಯಾಗಲಿದೆ.
ವಿವಿಧ ಕೇಂದ್ರಗಳಲ್ಲಿ ಕೇರಳದ ಮಹಿಳೆಯರ ಹಲವು ಸಾಂಪ್ರದಾಯಿಕ ವೇಷ ಭೂಷಣ ಪ್ರದರ್ಶನವಿರುವುದು. ಅಲ್ಲದೆ ವಿಶೇಷ ಸಾಮರ್ಥ್ಯ ತೋರಿದ ಮಹಿಳೆಯರನ್ನು ಆಯಾ ಕೇಂದ್ರಗಳಲ್ಲಿ ಗೌರವಿಸಲಾಗುವುದು. ರಾಜ್ಯದಲ್ಲಿ ಇದೀಗ ಸುಮಾರು 2500 ಮಾತೃ ಸಮಿತಿಗಳಿವೆ. ಸ್ತ್ರೀಯರನ್ನು ‘ಜಯ್ ಮಾತಾ’ ಎಂದು ಸಂಬೋಧಿಸಲು ಮಾತೃ ಸಮಿತಿಯು ಯಾತ್ರೆಯ ಉದ್ದಗಲಕ್ಕೂ ಯೋಜನೆ ರೂಪಿಸಿದೆ.
ಕಾರ್ಯಕ್ರಮದಲ್ಲಿ ಗೋಪಾಲಕುಟ್ಟಿ ಮಾಸ್ತರ್, ಪ್ರಭಾಕರ ಭಟ್, ಅಯ್ಯಪ್ಪದಾಸ್, ಎ.ಕೆ.ಬಿ.ನಾಯರ್ ಶುಭಹಾರೈಸಿದರು. ಸಂಧ್ಯಾ ವಿ.ಶೆಟ್ಟಿ, ನಿಶಾ ಸೋಮನ್, ಪ್ರಮೀಳಾ ಸಿ.ನಾಕ್, ಶಾಂತ ಎಸ್.ಪಿಳ್ಳೆ, ಕೆ.ಎಸ್.ನಾರಾಯಣನ್, ಕೆ.ಕೆ.ಬಾಲನ್, ಶಾಂತ ಪಣಿಕ್ಕರ್ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಯಾತ್ರೆಯ ನಾಯಕಿ ಪ್ರೊ.ವಿ.ಟಿ.ರಮಾ ಅವರು ಪ್ರಾಸ್ತಾವಿಕ ಮಾತನಾಡಿದರು. ರಾಜನ್ ಮುಳಿಯಾರು ಸ್ವಾಗತಿಸಿದರು.
ಯಾತ್ರೆಗೆ ಜಿಲ್ಲೆಯ ಪೊಯಿನಾಚಿ ಹಾಗೂ ಮಾವುಂಗಾಲ್‌ನಲ್ಲಿ ಭವ್ಯ ಸ್ವಾಗತ ನೀಡಲಾಯಿತು.
ಸ್ತ್ರಿ ಸ್ವಾಭಿಮಾನ್ ಯಾತ್ರೆಯು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸಾಗಲಿದೆ. ನಾನಾ ಜಿಲ್ಲೆಗಳಲ್ಲಾಗಿ ೭೦ರಷ್ಟು ಸ್ವಾಗತ ಕಾರ್ಯಕ್ರಮಗಳು ಮತ್ತು 14 ಸಮಾರೋಪ ಸಮಾರಂಭಗಳನ್ನು ವ್ಯವಸ್ಥೆ ಮಾಡಲಾಗಿದೆ. ಸ್ವಾಗತ ಕಾರ್ಯಕ್ರಮ ಹಾಗೂ ಸಮಾರೋಪ ಸಮಾರಂಭಗಳು ನಗರ ಪ್ರದೇಶಗಳನ್ನು ಕೇಂದ್ರೀಕರಿಸಿ ನಡೆಯಲಿದೆ. ಪ್ರತಿದಿನ ೫ರಿಂದ ೬ರಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.ಯಾತ್ರೆಯ ತಂಡದಲ್ಲಿ 45 ಮಂದಿ ಜೊತೆಯಲಿದ್ದಾರೆ.
Click this button or press Ctrl+G to toggle between Kannada and English