ಉಪ್ಪಳ : ಉಪ್ಪಳ ಪೇಟೆಯಲ್ಲಿ ಮತ್ತೆ ಗೂಂಡಾ ಆಕ್ರಮಣ ಉಂಟಾಗಿದ್ದು ಇಬ್ಬರನ್ನು ಗೂಂಡಾ ತಂಡವೊಂದು ತಲವಾರಿನಿಂದ ಇರಿದ ಘಟನೆ ಗುರುವಾರ ರಾತ್ರಿ ಸಂಭವಿಸಿದೆ. ಇರಿತದಿಂದ ಗಾಯಗೊಂಡ ತಳಂಗರೆಯ ಆರಿಫ್ ಉಪ್ಪಳ ಪ್ರತಾಪ್ ನಗರದ ಅಬ್ದುಲ್ಲ ಎಂದು ಗುರುತಿಸಲಾಗಿದೆ.
ಇವರಿಬ್ಬರನ್ನು ಮಂಗಳೂರಿನ ಯುನಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುರುವಾರ ರಾತ್ರಿ 9 ಘಂಟೆ ಸುಮಾರಿಗೆ ಇವರಿಬ್ಬರು ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಉಪ್ಪಳದ ರಮ್ಭಿಝ್ , ಫಾರೂಕ್ ಎಂಬಿಬ್ಬರ ನೇತೃತ್ವದಲ್ಲಿ ತಲುಪಿದ ತಂಡ ತಲವಾರಿನಿಂದ ಇರಿದಿದೆ. ಹಳೆ ವೈಷಮ್ಯವೇ ಇರಿತಕ್ಕೆ ಕಾರಣವೆಂದು ತಿಳಿದುಬಂದಿದೆ. ಘಟನೆ ತಿಳಿದು ಕುಂಬಳೆ ಸಿ.ಐ ಸುರೇಶ್ ಬಾಬು , ಮಂಜೇಶ್ವರ ಠಾಣಾಧಿಕಾರಿ ಪ್ರಮೋದ್ ನೇತೃತ್ವದ ಪೋಲೀಸ್ ತಂಡ ಸ್ಥಳಕ್ಕಾಗಮಿಸಿದೆ. ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಪ್ಪಳದಲ್ಲಿ ಕಳೆದ ಮೂರು ವರ್ಷಗಳಿಂದ ಗೂಂಡಾ ತಂಡಗಳು ಪರಸ್ಪರ ಹೊಡೆದಾಡುತ್ತಿರುವುದು ಇದು ಐದನೇ ಬಾರಿಯಾಗಿದ್ದು,ನಾಗರಿಕರು ತೀವ್ರ ಭಯಭೀತರಾಗಿದ್ದಾರೆ.ಜೊತೆಗೆ ಕಳೆದೊಂದು ವರ್ಷದಿಂದ ಗಲ್ಫ್‌ನಲ್ಲಿ ಉದ್ಯೋಗ ಕಳೆದುಕೊಂಡು ಊರಿಗೆ ತಲಪಿದ ಯುವಕರು ಸಮಾಜ ಘಾತುಕ ಕೃತ್ಯಗಳಿಗೆ ಮುಖಮಾಡಿದ್ದು,ಗೂಂಡಾ ತಂಡಗಳನ್ನು ಕಟ್ಟಿಕೊಂಡು ನಾಗರಿಕರಿಂದ ಹಫ್ತಾ ವಸೂಲಿ,ಗಾಂಜಾ,ಅಫೀಮ್ ಮೊದಲಾದ ಮಾದಕ ವಬಸ್ತುಗಳ ವ್ಯಾಪಾರದಲ್ಲಿ ತೊಡಗಿ ಪರಸ್ಪರ ಹೊಡೆದಾಟಗಳಿಗೆ ಎಳಸುತ್ತಿರುವುದನ್ನು ನಿಯಂತ್ರಿಸಲಾರದ ಪೋಲೀಸ್ ವ್ಯವಸ್ಥೆಯ ಬಗ್ಗೆ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Click this button or press Ctrl+G to toggle between Kannada and English