ಸಾಹಸ ಮತ್ತು ಸಾಧನೆಗಳಿಂದ ಸಮಾಜ ಅಭಿವೃದ್ಧಿ : ಡಾ|ಶಿವಾನಂದ ಬೇಕಲ್

11:35 PM, Tuesday, February 2nd, 2016
Share
1 Star2 Stars3 Stars4 Stars5 Stars
(5 rating, 4 votes)
Loading...

Ramakshatriya

ಕಾಸರಗೋಡು: ಇತಿಹಾಸದ ಸಾಧನೆ ಹೆಜ್ಜೆ ಹೆಜ್ಜೆಗೆ ಸ್ಮರಿಸುತ್ತಾ ಸಾಹಸ ಮತ್ತು ಸಾಧನೆಗಳಿಂದ ಸಮಾಜವನ್ನು ಅಭಿವೃದ್ಧಿ ಸಾಗಿಸಬಹುದು. ಸಜ್ಜನಿಕೆ, ಸೌಜನ್ಯ, ಸಂಸ್ಕೃತಿ, ಸಂಸ್ಕಾರ ಅದ್ಭುತಗಳಿಂದ ಕೂಡಿದ ರಾಮರಾಜ ಕ್ಷತ್ರಿಯ ಯಾನೆ ಕೋಟೆಯವರ ಸಮಾಜ ಇಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆಯನ್ನು ನಡೆಸುತ್ತಾ ಒಟ್ಟು ಸಮಾಜದಲ್ಲಿ ಗುರುತಿಸುವ ಮಟ್ಟಿಗೆ ಅಭಿವೃದ್ಧಿಯತ್ತ ಸಾಗಿದ್ದೇವೆ. ಇನ್ನಷ್ಟು ಸಾಧನೆಗೆ ಸಮಾಜದ ಒಗ್ಗಟ್ಟು, ಏಕತೆಯನ್ನು ರೂಢಿಸಿಕೊಳ್ಳಬೇಕೆಂದು ಆಕಾಶವಾಣಿ ಮತ್ತು ದೂರದರ್ಶನದ ನಿವೃತ್ತ ನಿರ್ದೇಶಕ ಡಾ|ಶಿವಾನಂದ ಬೇಕಲ್ ಅವರು ಹೇಳಿದರು.

ಬೇಕಲ ಪಾಲಕುನ್ನಿನ ಶ್ರೀ ಅಂಬಿಕಾ ಸಭಾಭವನದಲ್ಲಿ ಆಯೋಜಿಸಿದ ಎರಡು ದಿನಗಳ ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸಮಾಜೋತ್ಸವ-2016 ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕಾಸರಗೋಡಿನಲ್ಲಿ ಕನ್ನಡ ಮನೆಮಾತಾಗಿರುವ ಕೆಲವೇ ಸಮಾಜಗಳಲ್ಲಿ ಶುದ್ಧ ಕನ್ನಡವನ್ನು ಮಾತನಾಡುವವರು ನಾವು. ಅಂತಿದ್ದರೂ ಇಂದಿನ ಪರಿಸ್ಥಿತಿಯಲ್ಲಿ ಇತರ ಭಾಷಿಗರೊಂದಿಗೆ ಹಲವಾರು ಕಾರಣಗಳಿಂದ ಸ್ಪರ್ಧಿಸಿ ಉದ್ಯೋಗ ಗಿಟ್ಟಿಸಿಕೊಳ್ಳಬೇಕಾದರೆ ಹರಸಾಹಸ ಪಡುವ ಪರಿಸ್ಥಿತಿ ನಮ್ಮದಾಗಿದೆ. ನಮ್ಮ ಸಮಾಜವನ್ನು ಇತರ ಹಿಂದುಳಿದ ಜಾತಿ ಪಟ್ಟಿಗೆ ಸೇರಿಸಿದ್ದರೂ, ಕಾಲೇಜು ಪ್ರವೇಶದಲ್ಲಿ ಒಬಿಸಿ ಆಗಿ ಪರಿಗಣಿಸುತ್ತಿಲ್ಲ. ಮಾತ್ರವಲ್ಲ ಕೇರಳ ಕೆ.ಇ.ಟಿ. ಪ್ರವೇಶ ಪರೀಕ್ಷೆಗೆ ಸಂಬಂಧಿಸಿದ ಹಾಗೆ ಸಾಮಾಜಿಕ ಹಾಗೂ ಶೈಕ್ಷಣಿಕ ಹಿಂದುಳಿದ ಪಟ್ಟಿ(ಒಇಸಿ) ಯಲ್ಲಿ ನಮ್ಮ ಜಾತಿಯ ಹೆಸರು ಸೇರ್ಪಡೆಗೊಂಡಿಲ್ಲ, ಈ ನಿಟ್ಟಿನಲ್ಲಿ ಕೇರಳ ಮತ್ತು ಕರ್ನಾಟಕ ರಾಜ್ಯ ಸರಕಾರಗಳ ಅವಗಾಹನೆಗೆ ನಮ್ಮ ಸಮಸ್ಯೆಗಳನ್ನು ತಂದು ಅವರ ಪೂರ್ಣ ಬೆಂಬಲವನ್ನು ಪಡೆಯುವುದೂ ಈ ಸಮ್ಮೇಳನದ ಉದ್ದೇಶಗಳಲ್ಲೊಂದಾಗಿದೆ. ಹಾಗಾಗಿ ಈ ಸಮ್ಮೇಳನ ಅದೊಂದು ವಿಶಿಷ್ಟ ಸತ್ಸಂಪ್ರದಾಯಕ್ಕೆ ನಾಂದಿ ಹಾಡಲಿ ಎಂಬುದೇ ಆಶಯ ಎಂದರು.

ಯಾವುದೇ ಸಾಧನೆ ಆಗಬೇಕಾದರೆ, ಅದರ ಚಿಂತನೆ ಆಗಬೇಕು. ಆ ಚಿಂತನೆ ಅನ್ನೋದು ಕಾರ್ಯರೂಪಕ್ಕೆ ಬರಬೇಕು. ಆ ಕಾರ್ಯ ಸಾಧನೆಯ ರೂಪದಲ್ಲಿ ಸಫಲವಾಗಿ ಎಲ್ಲರೂ ಆ ಫಲವನ್ನು ಉಣ್ಣುವಂತಾಗಬೇಕು. ಆ ಚಿಂತನೆಯ ಕೆಲಸ ನಡೆಯಬೇಕಾಗಿದೆ. ಇಂದು ಬೇಕಲವನ್ನು, ಕಾಸರಗೋಡನ್ನು ಬದಲಾಯಿಸಬೇಕಾದರೆ ಹತ್ತು ಚಿಂತನೆ ಇರತಕ್ಕಂಥ, ಛಲದಿಂದ ಹಿಡಿದ ಕೆಲಸವನ್ನು ಸಾಧಿಸತಕ್ಕಂಥ, ಹತ್ತು ಜನ ಬೇಕಾಗಿದ್ದಾರೆ. ಇಂದು ಬೇಕಾಗಿರೋದು ಮೈಂಡ್ ಸೆಟ್, ಮಾನಸಿಕ ಸಿದ್ಧತೆ. ನನ್ನ ಊರು, ನನ್ನ ಜನ ಎನ್ನುವ ಮಾನಸಿಕ ದೃಷ್ಟಿಕೋನ, ಮಾನಸಿಕ ಬದ್ಧತೆ, ಮಾನಸಿಕ ಸಿದ್ಧತೆ. ನನ್ನ ಜನ ನಗ್ತಾ ಇರೋದನ್ನು ನೋಡುಬೇಕು ಅನ್ನತಕ್ಕಂಥ ಒಂದು ಬದ್ಧತೆ. ಅದನ್ನು ತಾನು ನಿ‘ಯಿಸಬಲ್ಲೆ ಎಂಬಂಥ ಮಾನಸಿಕ ಸಿದ್ಧತೆ ಬೇಕು ಎಂದು ಅಭಿಪ್ರಾಯಪಟ್ಟರು.

ಮಂಗಳೂರು ಕೋಟೆಕಾರು ಶ್ರೀ ಶೃಂಗೇರಿ ಶಂಕರಮಠದ ಧರ್ಮಾಧಿಕಾರಿ ಸತ್ಯಶಂಕರ ಬೊಳ್ಳಾವ ದೀಪ ಬೆಳಗಿಸಿ ಉದ್ಘಾಟಿಸಿ ಹಿತವಚನವಿತ್ತರು. ಲಕ್ಷದ್ವೀಪ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ರಮಾಕಾಂತ ಬೇಕಲ್ ಅವರು ನೂತನ ಧ್ವಜವನ್ನು ಅನಾವರಣಗೊಳಿಸಿದರು. ಇದೇ ಸಂದಭದಲ್ಲಿ ‘ಕ್ಷಾತ್ರ ತೇಜ’ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ಖ್ಯಾತ ನೇತ್ರ ತಜ್ಞ ಡಾ|ಕೃಷ್ಣ ಪ್ರಸಾದ್, ಬಾಲಕೃಷ್ಣ ಮಾಸ್ತರ್, ಹಿರಿಯ ಹೃದ್ರೋಗ ತಜ್ಞ ಡಾ|ಕೆ.ಬಿ.ಪ್ರಸಾದ್, ಜ್ಯುವೆಲ್ಸ್ ಆಫ್ ಇಂಡಿಯಾದ ಸಂದೀಪ್ ಬೇಕಲ್ ಶುಭಹಾರೈಸಿದರು.

ನಿಧಿ ವಿ.ರಾವ್ ಮತ್ತು ಬಳಗದಿಂದ ಪ್ರಾರ್ಥನೆ ನಡೆಯಿತು. ಸಮಾಜೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಲೋಕೇಶ್ ಕುಮಾರ್ ಎಸ್.ಅಣಂಗೂರು ಸ್ವಾಗತಿಸಿ, ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘದ ಅಧ್ಯಕ್ಷ ನಿರಂಜನ ಕೊರಕ್ಕೋಡು ಪ್ರಾಸ್ತಾವಿಕ ನುಡಿದರು. ಸತೀಶ್ ದೋಣಿ ಬಾಗಿಲು ಕಾರ್ಯಕ್ರಮ ನಿರೂಪಿಸಿದರು. ಎಸ್‌ಡಿಎಂ ಲಾ ಕಾಲೇಜಿನ ಪ್ರಾಧ್ಯಾಪಕ ಪ್ರೊ|ಸಾಯಿನಾಥ್ ಮಲ್ಲಿಗೆಮಾಡು ವಂದಿಸಿದರು.

ಇದಕ್ಕೂ ಮುನ್ನ ಪ್ರತಿನಿಧಿಗಳ ಸಮ್ಮೇಳನ ನಡೆಯಿತು. ವಿವಿಧ ಸ್ಪರ್ಧೆಗಳು, ಕರಕುಶಲ ಮತ್ತು ಚಿತ್ರಕಲಾ ಪ್ರದರ್ಶನ ಜರಗಿತು. ಸಮಾಜ ಬಾಂಧವರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English