ಮಂಜೇಶ್ವರ: ವಿದ್ಯಾಭ್ಯಾಸದ ಮಹತ್ವವನ್ನು ಅರಿತು ಹಿರಿಯ ತಲೆಮಾರಿನವರು ಗ್ರಾಮೀಣ ಪ್ರದೇಶಗಳಲ್ಲಿ ಆರಂಭಿಸಿದ ವಿದ್ಯಾಲಯಗಳು ದಾಖಲೆ ವರ್ಷಗಳಷ್ಟು ಕಾಲ ಸೇವಾ ತತ್ಪರವಾಗಿರುವುದು ವಿಧ್ಯೆಯ ಮಹತ್ವದ ಸಾಧನೆಯನ್ನು ಪ್ರತಿಬಿಂಬಿಸುತ್ತದೆ. ಶಿಕ್ಷಣ ಇಂದು ವ್ಯಾಪಾರೀಕರಣಗೊಂಡು ನೈಜ ಶಿಕ್ಷಣ ನೀಡುವಲ್ಲಿ ಸೋತಿರುವುದು ಗಂಭೀರ ವಿಷಯವಾಗಿದ್ದು, ಈ ನಿಟ್ಟಿನಲ್ಲಿ ಸೇವಾ ಮನೋಭಾವದಿಂದ ಶಿಕ್ಷಣ ಎಲ್ಲೆಡೆ ವ್ಯಾಪಿಸುವಲ್ಲಿ ಅಹರ್ನಿಶಿ ಕಾರ್ಯವೆಸಗುತ್ತಿರುವ ವಿದ್ಯಾಲಯಗಳು ನೈಜ ಅರ್ಥದ ದೇಗುಲಗಳೆಂದು ಮಲಬಾರ್ ದೇವಸ್ವಂ ಬೋರ್ಡ್ ಅಧ್ಯಕ್ಷ ಸಜೀವ್ ಮರೋಳಿ ಅಭಿಪ್ರಾಯ ವ್ಯಕ್ತಪಡಿಸಿದರು.
ಮಂಜೇಶ್ವರದ ಪ್ರಸಿದ್ದ ಎಸ್ ಎ ಟಿ ಶಾಲಾ ನವತಿ ಮಹೋತ್ಸವದ ಸಮಿತಿ ಆಶ್ರಯದಲ್ಲಿ ಮಂಜೇಶ್ವರ ಉಪ ಜಿಲ್ಲಾ ವ್ಯಾಪ್ತಿಯ ವಿವಿಧ ಶಾಲಾ ಮಕ್ಕಳಿಗೆ ವಿವಿಧ ಸ್ಪರ್ಧಾ ಕಾರ್ಯಕ್ರಮ ಹಾಗೂ ನವತಿ ಶುಭಾಶಂಸನಾ ಕಾರ್ಯಕ್ರಮವನ್ನು ಅನಂತ ವಿದ್ಯಾ ಸಭಾಂಗಣದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ನವತಿ ಮಹೋತ್ಸವ ಸಮಿತಿ ಅಧ್ಯಕ್ಷ ಡಾ.ಕೆ.ಅನಂತ ಕಾಮತ್ ಅಧ್ಯಕ್ಷತೆ ವಹಿಸಿದ್ದರು.ದೇವಸ್ವಂ ಬೋರ್ಡ್‌ನ ಎಂ.ಪಿ.ಕೃಷ್ಣನ್,ಕಾಸರಗೋಡು ವಿಭಾಗದ ಅಧ್ಯಕ್ಷ ಪೊಯ್ಯಂ ಜನಾರ್ಧನ,ಸದಸ್ಯರಾದ ಸತ್ಯನ್,ಎಂ.ಗುರುದತ್ ಕಾಮತ್,ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ನಂದಿಕೇಶನ್ ಎನ್ ಮೊದಲಾದವರು ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ದಿ.ಎಂ.ವಾಮನ ಕಾಮತ್ ಮತ್ತು ದಿ.ನಳಿನಿ ಕಾಮತ್ ಮಂಜೇಶ್ವರ ಇವರ ಸ್ಮರಣಾರ್ಥ ಎಸ್ ಎ ಟಿ ಶಾಲೆಗೆ ನೀಡಲಾದ ಎಲ್‌ಸಿಡಿ ಪ್ರೋಜೆಕ್ಟರ್ ನ್ನು ಅವರ ಪುತ್ರ ಎಂ.ಗುರುದತ್ ಕಾಮತ್ ಹಸ್ತಾಂತರಿಸಿದರು.
ಕೇರಳ ರಾಜ್ಯಮಟ್ಟದ ಶಾಲಾ ಕಲೋತ್ಸವದಲ್ಲಿ ಇಂಗ್ಲೀಶ್ ಕಂಠಪಾಠ ಸ್ಪರ್ಧೆಯಲ್ಲಿ ಎ ಗ್ರೇಡ್ ಗಳಿಸಿದ ಆಶ್ರಿತ್ ಶೆಟ್ಟಿ ಹಾಗೂ ಎಂ ಗುರುದತ್ ಕಾಮತ್ ರವರನ್ನು ಗೌರವಿಸಲಾಯಿತು.
ನವತಿ ಮಹೋತ್ಸವ ಸಮಿತಿ ಕಾರ್ಯದರ್ಶಿ ಹಾಗೂ ಶಾಲಾ ಪ್ರಬಂಧಕ ಎಂ.ದಿನೇಶ್ ಶೆಣೈ ಪ್ರಾಸ್ತಾವಿಕವಾಗಿ ಮಾತನಾಡಿದರು.ಪ್ರಾಂಶುಪಾಲೆ ಮನೋರಮಾ ಕಿಣಿ ಸ್ವಾಗತಿಸಿ,ಶಾಲಾ ನೌಕರ ವೃಂದದ ಕಾರ್ಯದರ್ಶಿ ಜಿ.ವೀರೇಶ್ವರ ಭಟ್ ವಂದಿಸಿದರು.ಅಧ್ಯಾಪಕ ಶಾಂತಾರಾಮ್ ಕಾರ್ಯಕ್ರಮ ನಿರೂಪಿಸಿದರು.
ಅಪರಾಹ್ನ ನಡೆದ ಸಮಾರೋಪ ಸಮಾರಂಭದಲ್ಲಿ ನವತಿ ಮಹೋತ್ಸವ ಸಮಿತಿ ಅಧ್ಯಕ್ಷ ಡಾ.ಕೆ ಅನಂತ ಕಾಮತ್ ಅಧ್ಯಕ್ಷತೆ ವಹಿಸಿದರು.ಕಾಂಞಿಂಗಾಡ್ ಶಾಸಕ ಇ.ಚಂದ್ರಶೇಖರನ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.ರಾಮಕೃಷ್ಣ ಕಡಂಬಾರ್,ಎಂ.ಜೆ.ಕಿಣಿ,ಎಂ ವಿಠಲದಾಸ್ ಭಟ್,ಸುಪ್ರೀಯಾ ಶೆಣೈ,ಮನೋರಮಾ ಕಿಣಿ,ಸುದತಿ ಬಿ,ಸುಮತಿ ಟೀಚರ್,ಅಬ್ದುಲ್ ಬಶೀರ್,ಫರೀದ್ ಎಂ.ಪಿ ಉಪಸ್ಥಿತರಿದ್ದರು.
ಮಹೋತ್ಸವ ಸಮಿತಿ ಕಾರ್ಯದರ್ಶಿ ಎಂ.ದಿನೇಶ್ ಶೆಣೈ ಸ್ವಾಗತಿಸಿ,ಪ್ರಾಸ್ತಾವಿಕವಾಗಿ ಮಾತನಾಡಿದರು.ಕಿರಣ್ ಕುಮಾರ್ ವಂದಿಸಿದರು.ಜಿ.ವೀರೇಶ್ವರ ಭಟ್ ಕಾರ್ಯಕ್ರಮ ನಿರೂಪಿಸಿದರು.
Click this button or press Ctrl+G to toggle between Kannada and English