ದಾಸರ ಕೀರ್ತನೆಗಳ ಕಂಪನ್ನು ಮನೆ ಮನೆಗೆ ಮುಟ್ಟಿಸಬೇಕು

8:57 PM, Monday, February 8th, 2016
Share
1 Star2 Stars3 Stars4 Stars5 Stars
(5 rating, 6 votes)
Loading...
Vishnumurty Temple

ಬದಿಯಡ್ಕ: ವೇದ, ಉಪನಿಷತ್ತುಗಳಲ್ಲಿ ಬರುವ ಜಠಿಲವಾದ ವಿಷಯಗಳನ್ನು ಸರಳವಾಗಿ ಕೀರ್ತನೆಗಳ ಮೂಲಕ ಜನ ಸಾಮಾನ್ಯರಿಗೂ ತಿಳಿಯುವಂತೆ ತಿಳಿದು ಹೇಳಿದವರು ಪುರಂದರ ದಾಸರು. ಜಗತ್ತಿನ ಎಲ್ಲಾ ಆಗು ಹೋಗುಗಳನ್ನು ತಮ್ಮ ಕೀರ್ತನೆಯಲ್ಲಿ ಅಳವಡಿಸಿಕೊಂಡಿದ್ದಾರೆ ಎಂದು ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆಯಾಗಿದ್ದ ನಿವೃತ್ತ ಪ್ರಾಧ್ಯಾಪಕಿ ಡಾ.ಯು.ಮಹೇಶ್ವರಿ ಅವರು ಹೇಳಿದರು.

ಕೂಡ್ಲು ವಿಷ್ಣುಮಂಗಲ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಜರಗಿದ ಪುರಂದರ ದಾಸರ ಆರಾಧನಾ ಮಹೋತ್ಸವದಂಗವಾಗಿ ಪುರಂದರದಾಸರ ಸಾಹಿತ್ಯದ ಬಗ್ಗೆ ವಿಶೇಷ ಉಪನ್ಯಾಸ ನೀಡಿ ಮಾತನಾಡುತ್ತಿದ್ದರು.

ದಾಸ ಪರಂಪರೆಯಲ್ಲಿ ಶ್ರೇಷ್ಠರೆನಿಸಿರುವ ಪುರಂದರದಾಸರ ಸಾಹಿತ್ಯ ಶ್ರೇಷ್ಠವಾದುದು ಎಂದು ತಿಳಿಸಿದ ಅವರು, ದಾಸರ ಕೀರ್ತನೆಗಳ ಕಂಪನ್ನು ಮನೆ ಮನೆಗೆ ಮುಟ್ಟಿಸುವ ಕೆಲಸ ಅಭಿನಂದನೀಯ, ಪ್ರಸ್ತುತ ಕನ್ನಡಕ್ಕೆ ಎದುರಾಗಿರುವ ಕಂಟಕದ ಈ ಸಂದರ್ಭದಲ್ಲಿ ಕನ್ನಡದ ಬಗ್ಗೆ, ಸಾಹಿತ್ಯದ ಬಗ್ಗೆ ತಿಳಿವಳಿಕೆ ಮೂಡಿಸುವ ಜೊತೆಗೆ ಜಾಗೃತಿ ಮೂಡಿಸುವುದು ಅನಿವಾರ್ಯವಾಗಿದೆ ಎಂದು ಆಶಯ ವ್ಯಕ್ತಪಡಿಸಿದರು.

ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆನುವಂಶಿಕ ಮೊಕ್ತೇಸರ ಕೆ.ಜಿ.ಶ್ಯಾನುಭೋಗ್ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಪುರಂದರ ದಾಸರ ಹಾಡುಗಳು ಮಾನವನ ಜೀವನಕ್ಕೆ ದಾರಿ ದೀಪವಾಗಿದೆ. ಮಾನವ ಹೇಗೆ ಇರಬೇಕು, ಹೇಗೆ ನಡೆದುಕೊಳ್ಳಬೇಕು, ಹೇಗೆ ಸಾಂಸ್ಕೃತಿಕ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂಬುದರ ಬಗ್ಗೆ ತಿಳಿಸುತ್ತವೆ. ಜೀವನ ಮೌಲ್ಯಗಳನ್ನು ದಾಸರ ಪದಗಳು ಸಾರುತ್ತವೆ ಎಂದರು.

ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ,ದಾಸ ಸಾಹಿತ್ಯ ಪ್ರಾಜೆಕ್ಟ್‌ನ ಕೇರಳ ರಾಜ್ಯ ಸಂಚಾಲಕ ಶಿವರಾಮ ಕಾಸರಗೋಡು ಮಾತನಾಡಿ,ದಾಸ ಸಾಹಿತ್ಯ ಪ್ರಾಜೆಕ್ಟ್‌ನ ಯೋಜನೆಗಳ ವಿವರ ನೀಡಿದರು. ದಾಸ ಸಾಹಿತ್ಯ ಪ್ರಾಜೆಕ್ಟ್‌ನ ತರಬೇತುದಾರರಾದ ವೀಣಾ ಪ್ರಸನ್ನ ಶ್ಯಾನುಭೋಗ್, ಚಿಂತಕ ಕೆ.ವಿಷ್ಣು ಶ್ಯಾನುಭೋಗ್, ಕೃಪಾ ಕೆ.ಜಿ.ಶ್ಯಾನುಭೋಗ್ ಮೊದಲಾದವರು ಉಪಸ್ಥಿತರಿದ್ದರು.

ಸೂರ್ಯಕುಮಾರಿ ಟೀಚರ್ ಸ್ವಾಗತಿಸಿ, ಬಿ.ಸುರೇಶ್ ನಾಕ್ ವಂದಿಸಿದರು. ಕೆ.ಜಗದೀಶ್ ಕೂಡ್ಲು ಕಾರ್ಯಕ್ರಮ ನಿರೂಪಿಸಿದರು. ವಿಷ್ಣುಮಂಗಲ ಮಹಾವಿಷ್ಣು ದೇವಸ್ಥಾನಕ್ಕೆ ವಿವಿಧ ಭಜನಾ ಮಂಡಳಿಗಳ ಸದಸ್ಯರು ಉಚಿತವಾಗಿ ನೀಡಿದ ಅಡುಗೆ ಪಾತ್ರೆಗಳನ್ನು ದೇವಸ್ಥಾನದ ಮೊಕ್ತೇಸರ ಕೆ.ಜಿ.ಶ್ಯಾನುಭೋಗ್ ಅವರಿಗೆ ಹಸ್ತಾಂತರಿಸಿದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English