ದೇವ ಮಾನವ, ಪವಾಡ ಪುರುಷ ಸತ್ಯ ಸಾಯಿ ಬಾಬ ಅಸ್ತಂಗತ

12:36 PM, Sunday, April 24th, 2011
Share
1 Star2 Stars3 Stars4 Stars5 Stars
(No Ratings Yet)
Loading...

ಸತ್ಯಸಾಯಿಬಾಬಾಪುಟ್ಟಪರ್ತಿ : ನ್ಯೂಮೋನಿಯಾ, ಉಸಿರಾಟ ಮತ್ತು ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದ ಸಾಯಿ ಬಾಬ (86) ಸುಮಾರು ಒಂದು ತಿಂಗಳ ಕಾಲ ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿ ಭಾನುವಾರ ಬೆಳಗ್ಗೆ 7.40ಕ್ಕೆ ಕೊನೆಯುಸಿರೆಳೆದಿದ್ದಾರೆ. ಸಾಯಿಬಾಬಾ ಆರೋಗ್ಯದಲ್ಲಿ ಚೇತರಿಕೆ ಕಾಣದೆ ಹೃದಯ ಸ್ತಂಭನಗೊಂಡು ಸಾವನ್ನಪ್ಪಿದ್ದಾರೆ.
ಈ ಕುರಿತು ಸತ್ಯಸಾಯಿ ಬಾಬಾ ಟ್ರಸ್ಟ್ 10.10ಕ್ಕೆ ಅಧಿಕೃತ ಘೋಷಣೆ ಮಾಡಿದೆ. ಪುಟ್ಟಪರ್ತಿಯಲ್ಲಿ ಸ್ಮಶಾನ ಮೌನ ನೆಲೆಸಿದೆ. ಸಾಯಿ ಕುಲವಂತ್ ಹಾಲ್ ನಲ್ಲಿ ಸಾಯಿಬಾಬಾ ಅಂತಿಮ ದರ್ಶನಕ್ಕೆ ಇಂದು ಸಂಜೆ 6 ಗಂಟೆಗೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಭಾನುವಾರ, ಮಂಗಳವಾರ ಮತ್ತು ಬುಧವಾರವೂ ಭಕ್ತರಿಗಾಗಾಗಿ ಬಾಬಾ ಅಂತಿಮ ದರ್ಶನ ಇರುತ್ತದೆ.
ಸಾಯಿಬಾಬಾ ಬಂಧುಗಳು ಒಬ್ಬೊಬ್ಬರಾಗಿ ಮರಣಶಯ್ಯೆಯಲ್ಲಿರುವ ಬಾಬಾ ಅವರನ್ನು ಭೇಟಿ ಮಾಡುತ್ತಿದ್ದಾರೆ. ಬಾಬಾ ಭಕ್ತರು ದುಃಖದ ಮಡುವಿನಲ್ಲಿದ್ದಾರೆ. ಲಕ್ಷಾಂತರ ಭಕ್ತರು ಪುಟ್ಟಪರ್ತಿಯತ್ತ ಧಾವಿಸುತ್ತಿದ್ದಾರೆ. ಪುಟ್ಟಪರ್ತಿ ತುಂಬಾ ಖಾಕಿ ಪಡೆ ಗರ್ಜಿಸುತ್ತಿದೆ. ಪಟ್ಟಣದಲ್ಲಿ ಅಘೋಷಿತ ಬಂದ್ ಇದೆ. ಎಲ್ಲ ವಾಹನಗಳ ಸಂಚಾರವನ್ನು ಬಂದ್ ಮಾಡಲಾಗಿದೆ. ಸಮೀಪದ ಹೆಲಿಪ್ಯಾಡ್ ಗಣ್ಯ ವ್ಯಕ್ತಿಗಳ ಆಗಮನಕ್ಕಾಗಿ ಕಾಯುತ್ತಿದೆ.
ಹಲವು ದಿನಗಳಿಂದ ಬಾಬಾ ಆರೋಗ್ಯ ಸಂಪೂರ್ಣವಾಗಿ ಹದಗೆಟ್ಟು, ವಿಷಮಸ್ಥಿತಿ ತಲುಪಿತ್ತು. ಅವರ ಸರ್ವಾಂಗಗಳು ನಿಷ್ಕ್ರಿಯವಾಗಿದ್ದವು. ಯಾವುದೇ ಚಿಕಿತ್ಸೆಗೂ ಬಾಬಾ ಸ್ಪಂದಿಸುತ್ತಿರಲಿಲ್ಲ.

ಸತ್ಯ ಸಾಯಿಬಾಬಾ ಜನನ
ಶ್ರೀ ಸತ್ಯ ಸಾಯಿಬಾಬಾ ಅವರು 1926 ನವೆಂಬರ್ 23 ರಂದು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಪುಟ್ಟಪರ್ತಿಯಲ್ಲಿ ಜನಿಸಿದರು. ತಂದೆ ವೆಂಕಪ್ಪರಾಜು ಮತ್ತು ತಾಯಿ ಈಶ್ವರಮ್ಮ ಅವರ ಪ್ರೀತಿ ಪಾತ್ರದ ಕುಡಿಯಾಗಿದ್ದರು.
ಸತ್ಯನಾರಾಯಣ ಪೂಜೆಯ ಪ್ರಸಾದ ಸೇವಿಸಿದ ನಂತರ ಮಗುವಿನ ಜನನವಾಗಿದ್ದರಿಂದ ಮಗುವಿಗೆ ಸತ್ಯನಾರಾಯಣ ಎಂದು ಹೆಸರಿಡಲಾಗಿತ್ತು. ಪುಟ್ಟಪರ್ತಿಯಲ್ಲಿರುವ ಶಾಲೆಯಲ್ಲಿ ಬಾಬಾ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಪೂರೈಸಿದರು. ಬಾಬಾ ಎಂಡು ವರ್ಷದ ಬಾಲಕನಾಗಿದ್ದಾಗಲೇ ಅಪಾರ ಪ್ರತಿಭಾವಂತರಾಗಿದ್ದರು.
1940 ಮೇ 23 ರಂದು 14 ವರ್ಷ ವಯಸ್ಸಿನಲ್ಲಿ ಬಾಬಾ, ತಾವು ಶಿವಶಕ್ತಿ ಸ್ವರೂಪ ಶಿರಡಿ ಸಾಯಿಬಾಬಾ ಅವತಾರ ಎಂದು ಘೋಷಿಸಿ ಕೈಯಲ್ಲಿರುವ ಹೂವುಗಳನ್ನು ಗಾಳಿಯಲ್ಲಿ ತೂರಿದಾಗ,ಭೂಮಿಗೆ ಬಿದ್ದ ಹೂವುಗಳಿಂದ ತೆಲಗು ಭಾಷೆಯಲ್ಲಿ ಸಾಯಿಬಾಬಾ ಎನ್ನುವ ರೂಪವನ್ನು ಪಡೆದವು.1940ರ ಅಕ್ಟೋಬರ್ 20 ರಂದು ಭಕ್ತರ ಕರೆಯ ಮೇರೆಗೆ ಮನೆಯನ್ನು ತೊರೆಯುತ್ತಿರುವುದಾಗಿ ಹೇಳಿದರು.
ಸತ್ಯಸಾಯಿಬಾಬಾ ತಮ್ಮ 25ನೇ ವರ್ಷದ ಹುಟ್ಟುಹಬ್ಬದ ದಿನದಂದು 1950ರಲ್ಲಿ ಪುಟ್ಟಪರ್ತಿಯಲ್ಲಿ ‘ಪ್ರಶಾಂತಿ ನಿಲಯಂ’ ಆಶ್ರಮ ಸ್ಥಾಪಿಸಿದರು. ಇಂದು ಆ ಆಶ್ರಮ ಜಗತ್ತಿನಾದ್ಯಂತ ಜ್ಞಾನ ದೇಗುಲವಾಗಿ ಪರಿವರ್ತನೆಗೊಂಡಿದೆ.ದೇಶ ವಿದೇಶಗಳಲ್ಲಿರುವ ಲಕ್ಷಾಂತರ ಭಕ್ತರು ಬಾಬಾ ಅವರ ದರ್ಶನಕ್ಕಾಗಿ ತಮ್ಮ ತನು, ಮನ,ಧನವನ್ನು ಅರ್ಪಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English