ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ನೌಕರ ಶಿವರಾಮ ಮಡಿವಾಳನನ್ನು ದೇವಸ್ಥಾನದ ಕಪಾಟಿನಲ್ಲಿದ್ದ ಚಿನ್ನಾಭರಣ ಸಮೇತ 20 ಲಕ್ಷ ರೂ.ಗಳಿಗೂ ಅಧಿಕ ಮೌಲ್ಯದ ಸೊತ್ತುಗಳನ್ನು ಆತ ಅಪಹರಿಸಿದ್ದಾನೆಂದು ಆರೋಪಿಸಿ ಪೊಲೀಸರು ಸೋಮವಾರ ಆತನನ್ನು ಮನೆಯಲ್ಲಿ ಬಂಧಿಧಿಸಿದ್ದಾರೆ.
ಕಪಾಟಿನ ಕೀಲಿಕೈ ಸಹಿತ ಪರಾರಿಯಾಗಿ ಸಾಕಷ್ಟು ಊಹಾಪೋಹ ಮತ್ತು ಕುತೂಹಲ ಮೂಡಿಸಿದ್ದ ಆರೋಪಿ ದೇಗುಲಕ್ಕೆ ಭಕ್ತರು ನೀಡಿದ ಸೊತ್ತುಗಳನ್ನು ಅತ ಅಪಹರಿಸಿದುದ್ದಾಗಿ ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ.
ಡಿವೈಎಸ್‌ಪಿ ಮಂಜುನಾಥ ಶೆಟ್ಟಿ ನೇತೃತ್ವದ ಪೊಲೀಸ್ ತಂಡವು ಆತನನ್ನು ಕೊಲ್ಲೂರು ಠಾಣೆಯಲ್ಲಿ ವಿಚಾರಣೆ ನಡೆಸುತ್ತಿದ್ದ ಹಲವಾರು ಮಹತ್ವದ ವಿಚಾರಗಳು ಬೆಳಕಿಗೆ ಬರುತ್ತಿವೆ.
ದೇವಸ್ಥಾನಕ್ಕೆ ಕಾರ್ಯನಿರ್ವಹಣಾಧಿಕಾರಿ ಇದ್ದರೂ 2012ರಿಂದ 2016ರ ತನಕ ದೇವರ ಚಿನ್ನಾಭರಣಗಳನ್ನು ಇಟ್ಟಿರುವ ಕಪಾಟಿನ ಸಂಪೂರ್ಣ ಉಸ್ತುವಾರಿಯನ್ನು ಸೇವಾ ಕೌಂಟರ್‌ನ ನೌಕರನಾಗಿರುವ ಶಿವರಾಮ ಮಡಿವಾಳನೇ ನೋಡಿಕೊಳ್ಳುತ್ತಿದ್ದ. ಫೆ. 14ರಿಂದ 15 ದಿನಗಳ ಅವಧಿಗೆ ಈತ ರಜೆ ಬೇಕೆಂದು ರಜಾ ಅರ್ಜಿ ಸಲ್ಲಿಸಿದ್ದು, ತೆರಳುವ ಮುನ್ನ ಲೆಕ್ಕಾಚಾರಗಳನ್ನೆಲ್ಲ ಒಪ್ಪಿಸುವಂತೆ ಕಾರ್ಯನಿರ್ವಹಣಾಧಿಕಾರಿ ಟಿ.ಆರ್. ಉಮಾ ಸೂಚಿಸಿದ್ದರು. ಆದರೂ ಆತ ಫೆ. 13ರಂದು ಸಂಗ್ರಹವಾದ 4 ಲ.ರೂ. ಮತ್ತು ಚಿನ್ನಾಭರಣಗಳಿದ್ದ ಕಪಾಟಿನ ಕೀಲಿಕೈ ಸಹಿತ ತೆರಳಿದ್ದ. ಕಾರ್ಯನಿರ್ವಹಣಾಧಿಕಾರಿಯವರು ಮತ್ತೆ ಫೋನ್ ಮೂಲಕ ಹಣ ಮತ್ತು ಕೀಲಿಕೈಯನ್ನು ತಂದೊಪ್ಪಿಸುವಂತೆ ಆದೇಶಿಸಿದಾಗ ಮರುದಿನ 4 ಲ.ರೂ.ಗಳನ್ನು ಮಾತ್ರ ಪತ್ನಿಯ ಮೂಲಕ ದೇಗುಲಕ್ಕೆ ಕಳುಹಿಸಿಕೊಟ್ಟಿದ್ದ. ಕೀಲಿಕೈಯನ್ನು ಹಿಂದಿರುಗಿಸದ ಕಾರಣ ಮತ್ತು ಬಳಿಕ ಫೋನ್ ಸಂಪರ್ಕಕ್ಕೂ ಲಭ್ಯವಾಗದೆ ಇದ್ದ ಹಿನ್ನೆಲೆಯಲ್ಲಿ ಕಾರ್ಯನಿರ್ವಹಣಾಧಿಕಾರಿಯವರು ಆತ ಪರಾರಿಯಾಗಿರುವುದಾಗಿ ಕೊಲ್ಲೂರು ಪೊಲೀಸರಿಗೆ ದೂರು ನೀಡಿದ್ದರು.
ಈ ಅವಧಿಯಲ್ಲಿ ಬಂದುಹೋದ ಅಧಿಕಾರಿಗಳು ಖಜಾನೆಯ ಕೀಲಿಕೈಯ ಉಸ್ತುವಾರಿ ವಹಿಸಿಕೊಳ್ಳದೇ ಅದನ್ನು ಸಾಮಾನ್ಯ ನೌಕರನೊಬ್ಬನ ಕೈಯಲ್ಲಿ ಇರಗೊಟ್ಟಿರುವುದು ನಾನಾ ಸಂಶಯಗಳಿಗೆ ಕಾರಣವಾಗಿದೆ. ಈ ಪ್ರಕರಣದ ಹಿಂದೆ ಇನ್ನೂ ಹಲವಾರು ಕೈ ಸೇರಿಕೊಂಡಿವೆಯೇ ಎಂಬ ಅನುಮಾನ ದೇಗುಲದ ಭಕ್ತರನ್ನು ಕಾಡುತ್ತಿದೆ.
ಭಕ್ತರಿಂದ ಶ್ರೀದೇವಿಗೆ ಕಾಣಿಕೆ ರೂಪದಲ್ಲಿ ಬಂದಿರುವ ಚಿನ್ನಾಭರಣಗಳನ್ನು, ನೌಕರನೊಬ್ಬ ಎಗರಿಸಿರುವುದು ಕೊಲ್ಲೂರು ದೇವಸ್ಥಾನದ ಇತಿಹಾಸದಲ್ಲಿ ಪ್ರಥಮ ಎನ್ನಲಾಗಿದೆ. ಆ ಕಪಾಟಿನಲ್ಲಿದ್ದ ಚಿನ್ನಾಭರಣಗಳು, ಈಗ ಉಳಿದಿರುವ ಆಭರಣಗಳ ಲೆಕ್ಕಾಚಾರ ಕಪಾಟಿನ ಬೀಗ ತೆರೆದ ಅನಂತರವೇ ತಿಳಿದುಬರಲಿದೆ.
ಡಿವೈಎಸ್‌ಪಿ ಮಂಜುನಾಥ ಶೆಟ್ಟಿ ನೇತೃತ್ವದಲ್ಲಿ ಸರ್ಕಲ್ ಇನ್‌ಸ್ಪೆಕ್ಟರ್ ಸುದರ್ಶನ್ ಹಾಗೂ ಎಸ್‌ಐ ಶೇಖರ ಅವರು ಆರೋಪಿಯಿಂದ ಮಾಹಿತಿ ಕಲೆಹಾಕುತ್ತಿದ್ದಾರೆ. ಚಿನ್ನಾಭರಣಗಳನ್ನು ಅಡವಿಟ್ಟಿದ್ದಾನೆ ಎನ್ನಲಾದ ವಿವಿಧ ಬ್ಯಾಂಕ್‌ಗಳಲ್ಲಿನ ಆತನ ಖಾತೆಯ ಮಾಹಿತಿಯನ್ನೂ ಸಂಗ್ರಹಿಸುತ್ತಿದ್ದಾರೆ.
ದೇವಸ್ಥಾನದಲ್ಲಿ ನಡೆದಿರುವ ಘಟನೆ ಮನಸ್ಸಿಗೆ ತುಂಬಾ ನೋವನ್ನುಂಟುಮಾಡಿದೆ. ಆರೋಪಿಗಳು ಯಾರೇ ಆಗಿರಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಎಂದು ಬೈಂದೂರು ಶಾಸಕ ಗೋಪಾಲ ಪೂಜಾರಿ ಅವರು ಪೊಲೀಸರಿಗೆ ಸೂಚಿಸಿದ್ದಾರೆ.
Click this button or press Ctrl+G to toggle between Kannada and English