ಕಾಸರಗೋಡು: ಸಂವಿಧಾನಬದ್ಧವಾಗಿ ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತ ಕನ್ನಡಿಗರಿಗೆ ನೀಡಲಾಗಿದ್ದ ಸವಲತ್ತು ಮತ್ತು ಹಕ್ಕುಗಳನ್ನು ನಿರಂತರ ಕಸಿಯುತ್ತಲೇ ಬಂದಿರುವ ಕೇರಳ ಸರಕಾರ ಇದೀಗ ಕಡ್ಡಾಯ ಮಲಯಾಳ ಭಾಷಾ ಮಸೂದೆ-2015 ರ ಮುಖಾಂತರ ಕನ್ನಡಿಗರನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದು, ಇದರ ವಿರುದ್ಧ ನಿರಂತರ ಹೋರಾಟ ಅನಿವಾರ್ಯವಾಗಿದ್ದು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕನ್ನಡಿಗರನ್ನು ಚುನಾವಣಾ ಕಣಕ್ಕಿಳಿಸಲು ಕನ್ನಡ ಹೋರಾಟ ಕ್ರಿಯಾ ಸಮಿತಿ ತೀರ್ಮಾನಿಸಿದೆ.
ಕಾಸರಗೋಡು ಸರ್ವೀಸ್ ಕೋ-ಓಪರೇಟಿವ್ ಬ್ಯಾಂಕ್ (ಹೊಸ ಬಸ್ ನಿಲ್ದಾಣದ ಬಳಿ)ನ ಎರಡನೇ ಮಹಡಿಯಲ್ಲಿರುವ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಕೇರಳ ಸರಕಾರದ ಕನ್ನಡ ವಿರೋಧಿ ಧೋರಣೆಯನ್ನು ತೀವ್ರವಾಗಿ ಖಂಡಿಸಲಾಯಿತು. ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತಕರಿಗೆ ಸಂವಿಧಾನಬದ್ಧವಾಗಿ ನೀಡಲಾದ ವಿಶೇಷ ಹಕ್ಕು ಮತ್ತು ಸವಲತ್ತುಗಳನ್ನು ಕಸಿಯುತ್ತಲೇ ಬಂದಿರುವ ಕೇರಳ ಸರಕಾರ ಇದೀಗ ಮಲಯಾಳ ಭಾಷಾ ಮಸೂದೆಯ ಮುಖಾಂತರ ಕನ್ನಡಿಗರ ಅಸ್ತಿತ್ವವನ್ನೇ ಕಸಿದುಕೊಳ್ಳಲು ಹೊಂಚು ಹಾಕಿದೆ. ಭಾಷಾ ಮಸೂದೆಯ ಪರಿಣಾಮವಾಗಿ ಕಾಸರಗೋಡಿನಲ್ಲಿ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಆಡು, ನುಡಿಗಳನ್ನೆಲ್ಲ ಹತ್ತಿಕ್ಕಲು ಪ್ರಯತ್ನಿಸುತ್ತಿದೆ. ಇದರ ವಿರುದ್ಧ ಈಗಾಗಲೇ ಫೆ.2 ರಂದು ಜಿಲ್ಲಾಧಿಕಾರಿ ಕಚೇರಿಯ ಮುಂದೆ ಧರಣಿ ನಡೆಸಿ ಕನ್ನಡಿಗರ ಶಕ್ತಿ ಪ್ರದರ್ಶನವನ್ನು ತೋರ್ಪಡಿಸಿದ್ದೇವೆ. ಈ ಮಸೂದೆಯ ತಿದ್ದುಪಡಿಯ ತನಕ ಹೋರಾಟದಿಂದ ಹಿಂದೆ ಸರಿಯದಿರಲು ಸಭೆಯಲ್ಲಿ ತೀರ್ಮಾನಿಸಲಾಯಿತು.1969 ರ ಭಾಷಾ ಮಸೂದೆಯನ್ನು ಮುಂದುವರಿಸುವ ತನಕ ಹೋರಾಟ ನಡೆಯಲಿದೆ ಎಂದು ಸರಕಾರಕ್ಕೆ ಇದೇ ಸಂದರ್ಭದಲ್ಲಿ ಮುನ್ನೆಚ್ಚರಿಕೆಯನ್ನು ನೀಡಿದೆ.
ರಾಜ್ಯ ಮಟ್ಟದ ಹೋರಾಟ : ಕನ್ನಡಿಗರ ಅಸ್ತಿತ್ವವನ್ನು ಉಳಿಸಿಕೊಳ್ಳಲು ಗ್ರಾಮ ಮಟ್ಟದಿಂದ ರಾಜ್ಯ ಮಟ್ಟದ ವರೆಗೆ ಹೋರಾಟ ಅನಿವಾರ್ಯವಾಗಿದೆ. ಪಂಚಾಯತ್ ಮಟ್ಟದಿಂದ ವಿಕೇಂದ್ರೀಕೃತ ಹೋರಾಟ ನಡೆಸಲು ತೀರ್ಮಾನಿಸಬೇಕಾಗಿದೆ. ಎಲ್ಲೆಲ್ಲೂ ಕನ್ನಡದ ಧ್ವನಿಯ ಜೊತೆಗೆ ಹೋರಾಟದ ಮೂಲಕ ಸರಕಾರ ಎಚ್ಚೆತ್ತುಕೊಳ್ಳಬೇಕಾದಂತೆ ಹೋರಾಟದ ಕಾವನ್ನು ತೋರಿಸಬೇಕಾಗಿದೆ ಎಂದು ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಮನ್ವಯ ಸಮಿತಿ ಅಧ್ಯಕ್ಷ ಬಿ.ಪುರುಷೋತ್ತಮ ಮಾಸ್ತರ್ ಹೇಳಿದರು.
ಫೆ.೨ ರಂದು ನಡೆಸಿದ ಜಿಲ್ಲಾಧಿಕಾರಿ ಕಚೇರಿ ಧರಣಿ ಆರಂಭ ಮಾತ್ರ. ಗುರಿ ತಲುಪುವ ವರೆಗೆ ಹೋರಾಟ ನಡೆಸುವುದಾಗಿ ಸರಕಾರಕ್ಕೆ ಎಚ್ಚರಿಕೆಯನ್ನು ನೀಡಿದ ಪುರುಷೋತ್ತಮ ಮಾಸ್ತರ್ ಜಿಲ್ಲಾಧಿಕಾರಿಗೆ ಭಾಷಾ ಅಲ್ಪಸಂಖ್ಯಾತ ಕನ್ನಡಿಗರನ್ನು ಸಂರಕ್ಷಿಸುವ ಜವಾಬ್ದಾರಿಯಿದೆ. ಆದರೆ ಅವರಿಗೆ ಅಂತಹ ಕಾಳಜಿಯಿಲ್ಲ. ಜಿಲ್ಲಾಧಿಕಾರಿಗಳು ಕನ್ನಡಿಗರ ಬಗ್ಗೆ ಹೊಣೆಗಾರಿಕೆಯಿಂದ, ಜವಾಬ್ದಾರಿಕೆಯಿಂದ ಕೆಲಸ ಮಾಡಿಲ್ಲ. ಕೇರಳ ಸರಕಾರದ ಕನ್ನಡ ಪರ ಆದೇಶಗಳನ್ನು ಜಿಲ್ಲಾಧಿಕಾರಿಗಳು ಮತ್ತು ಸಂಬಂಧಪಟ್ಟ ಅಧಿಕಾರಿಗಳು ಪಾಲಿಸಬೇಕಾಗಿದ್ದರೂ, ಈ ಕಾರ್ಯವನ್ನು ಮಾಡಿಲ್ಲ. ಕೇರಳ ಸರಕಾರ ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತ ಕನ್ನಡಿಗರನ್ನು ದ್ವಿತೀಯ ದರ್ಜೆ ಪ್ರಜೆಗಳನ್ನಾಗಿ ಪರಿಗಣಿಸಿದೆ ಎಂದರು.
ನೂತನ ಮಲಯಾಳ ಮಸೂದೆಯ ಮೂಲಕ ಶಾಲೆಗಳಲ್ಲಿ ಮತ್ತು ನ್ಯಾಯಾಲಯಗಳಲ್ಲಿ ಮಲಯಾಳವನ್ನು ಕಡ್ಡಾಯಗೊಳಿಸಲು ಶ್ರಮಿಸುತ್ತಿದೆ. ಭಾಷಾ ಮಸೂದೆಯಿಂದ ಕನ್ನಡಿಗರಿಗೆ ಯಾವುದೇ ತೊಂದರೆಯಿಲ್ಲ ಎಂದು ಕೇವಲ ಬಾಯಿ ಮಾತಿನಲ್ಲಿ ಭರವಸೆ ನೀಡಿದರೆ ಸಾಲದು. ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತ ಕನ್ನಡಿಗರಿಗೆ ಯಾವುದೇ ಅನ್ಯಾಯ ಎಸಗುವುದಿಲ್ಲ ಎಂದು ಲಿಖಿತವಾಗಿ ನೀಡಬೇಕು. ಅಲ್ಲಿಯ ವರೆಗೆ ಹೋರಾಟ ಮುಂದುವರಿಯಲಿದೆ ಎಂದು ಇದೇ ಸಂದರ್ಭದಲ್ಲಿ ಅವರು ಸರಕಾರಕ್ಕೆ ಮುನ್ನೆಚ್ಚರಿಕೆಯನ್ನು ನೀಡಿದರು.
ಕಾಸರಗೋಡಿನ ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆ, ನೋವು, ಸಂಕಟಗಳೆಲ್ಲವನ್ನು ಕರ್ನಾಟಕದ ಮೂಲೆ ಮೂಲೆಗೂ ಪಸರಿಸಬೇಕು. ಈ ಮೂಲಕ ಹೋರಾಟಕ್ಕೆ ಅವರ ಬೆಂಬಲವನ್ನು ಪಡೆಯಬೇಕೆಂದರು. ಇಂದು ಇಲ್ಲಿ ಸ್ಥಳನಾಮಗಳನ್ನು ಬದಲಾಯಿಸುತ್ತಾ ಕನ್ನಡದ ಅಸ್ತಿತ್ವವನ್ನು ಅಳಿಸಿ ಹಾಕುವ ಪ್ರಯತ್ನ ನಡೆಯುತ್ತಿದೆ. ಇದನ್ನು ಪ್ರತಿಭಟಿಸಬೇಕೆಂದರು.
ಕರ್ನಾಟಕ ಮುಖ್ಯಮಂತ್ರಿಗೆ ನಿಯೋಗ : ಕೇರಳ ಸರಕಾರದ ಭಾಷಾ ಮಸೂದೆಯ ಪರಿಣಾಮವಾಗಿ ಕಾಸರಗೋಡಿನ ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆ, ಸಂಕಟಗಳ ಬಗ್ಗೆ ಕರ್ನಾಟದ ಜನರಿಗೆ ತಿಳಿಯಲು ಕರ್ನಾಟಕದ ಮುಖ್ಯಮಂತ್ರಿಯಲ್ಲಿಗೆ ನಿಯೋಗವೊಂದನ್ನು ಕಳುಹಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಕನ್ನಡಿಗರ ಸಮಸ್ಯೆಯ ವಿರುದ್ಧ ಹೋರಾಟ ನಡೆಸಲು ಕರ್ನಾಟಕದ ಜನರ ಬೆಂಬಲ ಪಡೆಯಲು ನಿರ್ಧರಿಸಲಾಯಿತು.
ದ.ಕನ್ನಡ, ಉಡುಪಿ ಜಿಲ್ಲೆಯ ಶಾಸಕರನ್ನು ಭೇಟಿಯಾಗಿ ಕನ್ನಡ ಪರ ಹೋರಾಟಕ್ಕೆ ಬೆಂಬಲವನ್ನು ಪಡೆಯುವುದು ಮೊದಲಾದವುಗಳ ಬಗ್ಗೆ ತೀರ್ಮಾನಿಸಲಾಯಿತು. ಕಾಸರಗೋಡಿನ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ತಲಪ್ಪಾಡಿಯಲ್ಲಿ ರಸ್ತೆ ತಡೆ ಮಾಡುವ ಮೂಲಕ ಕೇರಳ ಸರಕಾರಕ್ಕೆ ಮುನ್ನೆಚ್ಚರಿಕೆಯನ್ನು ನೀಡಿದೆ. ಕಾಸರಗೋಡಿನ ಕನ್ನಡಿಗರಿಗೆ ಬೆಂಬಲವಾಗಿ ನಿಂತ ಕರ್ನಾಟಕ ರಕ್ಷಣಾ ವೇದಿಕೆಗೆ ಅಭಿನಂದನೆ ಸಲ್ಲಿಸಲಾಯಿತು. ಮುಂದಿನ ಹೋರಾಟಕ್ಕೂ ಅವರ ಬೆಂಬಲವನ್ನು ಪಡೆಯಲು ತೀರ್ಮಾನಿಸಲಾಯಿತು.
ಅಧಿಕಾರಿಗಳ ವಿರುದ್ಧ ಕ್ರಮ : ಸರಕಾರದ ಆದೇಶಗಳನ್ನು ಪಾಲಿಸದ ಕಾಸರಗೋಡಿನ ವಿವಿಧ ಸರಕಾರಿ ಇಲಾಖೆಗಳ ಅಽಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದೂ ಸರಕಾರವನ್ನು ಸಭೆಯಲ್ಲಿ ಒತ್ತಾಯಿಸಲಾಯಿತು. ಕಾಸರಗೋಡಿನ ಎಲ್ಲಾ ಕನ್ನಡಿಗರು ಒಗ್ಗಟ್ಟಿನಿಂದ ಕೇರಳ ಸರಕಾರದ ಮಲತಾಯಿ ಧೋರಣೆಯನ್ನು ಪ್ರತಿಭಟಿಸಬೇಕಾಗಿದೆ. ಕಳೆದ ಫೆ.2 ರಂದು ಜಿಲ್ಲಾಧಿಕಾರಿ ಕಚೇರಿಯ ಮುಂದೆ ನಡೆಸಿದ ಧರಣಿ ಮುಷ್ಕರದಲ್ಲಿ ಸಾವಿರಾರು ಮಂದಿ ಪಾಲ್ಗೊಳ್ಳುವ ಮೂಲಕ ಸರಕಾರಕ್ಕೆ ಈಗಾಗಲೇ ಮುನ್ನೆಚ್ಚರಿಕೆ ನೀಡಿದೆ. ಕನ್ನಡಿಗರಿಗೆ ಘಾಸಿ ಆದಲ್ಲಿ ಇನ್ನಷ್ಟು ಶಕ್ತಿಯುತವಾಗಿ ಹೋರಾಟ ನಡೆಸಲು ಮುಂದಾಗಲಿದೆ ಎಂಬ ಎಚ್ಚರಿಕೆಯಾಗಿದೆ ಎಂದು ಸಭೆಯಲ್ಲಿ ಅಭಿಪ್ರಾಯಪಡಲಾಯಿತು.
ಬಲಪಡಿಸಲು ತೀರ್ಮಾನ : ಸಭೆಯಲ್ಲಿ ಕನ್ನಡ ಸಮನ್ವಯ ಸಮಿತಿಯನ್ನು ಇನ್ನಷ್ಟು ಬಲಪಡಿಸಲು ಮತ್ತು ಇರುವ ಘಟಕಗಳನ್ನು ನವೀಕರಿಸಲು, ಚೇತರಿಕೆ ನೀಡಲು ತೀರ್ಮಾನಿಸಲಾಯಿತು. ಗ್ರಾಮೀಣ ಪ್ರದೇಶದಲ್ಲಿ ಕನ್ನಡ ಸಮನ್ವಯ ಸಮಿತಿಗಳನ್ನು ರೂಪಿಸಲು ತೀರ್ಮಾನ ತೆಗೆದುಕೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಕನ್ನಡಿಗರಿಗೆ ಮನದಟ್ಟಾಗುವಂತೆ ಮನವರಿಕೆ ಮಾಡಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಕೇರಳ ಗಡಿನಾಡ ಘಟಕದ ಅಧ್ಯಕ್ಷ ಎಸ್.ವಿ.ಭಟ್, ಅಪೂರ್ವ ಕಲಾವಿದರು ಸಂಸ್ಥೆಯ ಅಧ್ಯಕ್ಷ ಉಮೇಶ್ ಸಾಲಿಯಾನ್, ಪತ್ರಕರ್ತ ಗಂಗಾಧರ, ಹಿರಿಯ ನಾಗರಿಕ ವೇದಿಕೆ ಕಾರ್ಯದರ್ಶಿ ಗೋಪಾಲಕೃಷ್ಣ ಭಟ್, ಅಪೂರ್ವ ಕಲಾವಿದರು ಸಂಸ್ಥೆಯ ಡಾ|ರತ್ನಾಕರ ಮಲ್ಲಮೂಲೆ, ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘಟನೆಯ ಅಧ್ಯಕ್ಷ ಮಹಾಲಿಂಗೇಶ್ವರ ಭಟ್, ವಿಶ್ವನಾಥ ರಾವ್, ವೆಂಕಟೇಶ್ ಮೊದಲಾದವರು ಮಾತನಾಡಿದರು.
ಕನ್ನಡ ಹೋರಾಟ ಕ್ರಿಯಾ ಸಮಿತಿ ಅಧ್ಯಕ್ಷ ಜಗನ್ನಾಥ ಶೆಟ್ಟಿ ಸ್ವಾಗತಿಸಿ, ಕನ್ನಡ ಸಮನ್ವಯ ಸಮಿತಿ ಕಾಸರಗೋಡು ಘಟಕ ಅಧ್ಯಕ್ಷ ಜೋಗೇಂದ್ರನಾಥ್ ವಿದ್ಯಾನಗರ ವಂದಿಸಿದರು. ಇದೇ ಸಂದರ್ಭದಲ್ಲಿ ಫೆ.2 ರಂದು ನಡೆದ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಧರಣಿ ಕಾರ್ಯಕ್ರಮದ ಆಯವ್ಯಯವನ್ನು ಅಂಗೀಕರಿಸಲಾಯಿತು.
Click this button or press Ctrl+G to toggle between Kannada and English