ಕಾಸರಗೋಡು: ನಗರ ಹಾಗೂ ಆಸುಪಸಿನ ಐದು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜನತೆಗೆ ಶುದ್ಧ ಕುಡಿಯುವ ನೀರು ಪೂರೈಸುವ ಬಾವಿಕೆರೆ ಶಾಶ್ವತ ಅಣೆಕಟ್ಟು ಯೋಜನೆ ಮತ್ತೆ ಅತಂತ್ರ ಸ್ಥಿತಿಯತ್ತ ಸಾಗಿದೆ. ಗುತ್ತಿಗೆದಾರರು ಅಣೆಕಟ್ಟು ಕಾಮಗಾರಿಯನ್ನು ಅರ್ಧದಲ್ಲಿ ಕೈಬಿಟ್ಟು ತೆರಳಿರುವುದರಿಂದ ಈ ಅತಂತ್ರ ಸ್ಥಿತಿ ನಿರ್ಮಾಣವಾಗಿದೆ. ಇದೀಗ ಕಾಮಗಾರಿಯ ರೀ ಟೆಂಡರ್ ನಡೆಸಿ ಯೋಜನೆ ಪೂರ್ತಿಗೊಳಿಸುವಂತೆ ನೀರಾವರಿ ಖಾತೆ ಸಚಿವ ಪಿ.ಜೆ ಜೋಸೆಫ್ ನೀಡಿರುವ ಭರವಸೆ ಒಂದಷ್ಟು ಭರವಸೆಯನ್ನು ಹುಟ್ಟಿಸಿದ್ದರೂ, ಈ ವರ್ಷವೂ ಕಾಮಗಾರಿ ಪೂರ್ತಿಗೊಳ್ಳುವುದು ಅನಿಶ್ಚಿತಾವಸ್ಥೆಯಲ್ಲಿದೆ.
ಯೋಜನೆ ಜಾರಿಗೊಳ್ಳಲಿರುವ ಪ್ರದೇಶದ ಜನರನ್ನೊಳಗೊಂಡ ಕ್ರಿಯಾಸಮಿತಿ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಇಲಾಖೆ ಅಧಿಕಾರಿಗಳ ಸಮ್ಮುಖ ಸಚಿವರು ತಿರುವನಂತಪುರದಲ್ಲಿ ನಡೆಸಿದ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ.
ಬಾವಿಕೆರೆಯಲ್ಲಿ ಸ್ಥಾಪಿಸಲುದ್ದೇಶಿಸಿರುವ ಶಾಶ್ವತ ಅಣೆಕಟ್ಟು ಪ್ರದೇಶ ನಿರ್ಮಾಣ ಸ್ಥಳ ಯೋಜನೆಗೆ ಸೂಕ್ತವಲ್ಲ ಎಂಬುದಾಗಿ ಕೆಲಸ ಆರಂಭಗೊಂಡ ಹಲವು ವರ್ಷಗಳ ಅನಂತರ ವಿಜಿಲೆನ್ಸ್ ವಿಭಾಗ ಸರ್ಕಾರಕ್ಕೆ ವರದಿ ಸಲ್ಲಿಸಿರುವುದು ಸ್ಥಳೀಯ ನಾಗರಿಕರನ್ನು ರೊಚ್ಚಿಗೆಬ್ಬಿಸಿದೆ. ಇದರಿಂದ ಅಣೆಕಟ್ಟು ನಿರ್ಮಾಣ ಕಾರ್ಯ ಅತಂತ್ರಸ್ಥಿತಿಯತ್ತ ಸಾಗುತ್ತಿರುವುದನ್ನು ಮನಗಂಡ ಸ್ಥಳೀಯರು ತಮ್ಮ ವಿರೋಧ ಸೂಚಿಸಿದ್ದರು. ವಿಜಿಲೆನ್ಸ್ ವರದಿ ಆಧರಿಸಿ ಶಾಶ್ವತ ಅಣೆಕಟ್ಟು ನಿರ್ಮಣಕಾರ್ಯ ಸ್ಥಗಿತಗೊಳಿಸಿದಲ್ಲಿ, ಬಾವಿಕೆರೆಯಲ್ಲಿ ನಿರ್ಮಿಸುವ ತಾತ್ಕಾಲಿಕ ಅಣೆಕಟ್ಟು ನಿರ್ಮಾಣಕ್ಕೆ ತಡೆಯೊಡ್ಡುವುದಾಗಿ ನಾಗರಿಕರು ಬೆದರಿಕೆಯೊಡ್ಡಿದ್ದಾರೆ.
ಇದೀಗ ಕಾಸರಗೋಡು ಜನತೆಗೆ ತಾತ್ಕಾಲಿಕ ಅಣೆಕಟ್ಟು ಆಸರೆಯಾಗಿದ್ದು, ಇದಕ್ಕೆ ತಡೆಯೊಡ್ಡಿದಲ್ಲಿ ಬೇಸಿಗೆಯಲ್ಲಿ ಕಾಸರಗೋಡು ನಗರ ಹಾಗೂ ಐದು ಗ್ರಾಪಂ ವ್ಯಾಪ್ತಿಗೆ ಪೂರೈಕೆಗೊಳ್ಳುವ ನೀರು ಲವಣಯುಕ್ತವಾಗಲಿದೆ. ತಾತ್ಕಾಲಿಕ ಅಣೆಕಟ್ಟು ನಿರ್ಮಾಣದಲ್ಲೂ ಉಪ್ಪುನೀರು ನುಸುಳುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿ ಶಾಶ್ವತ ಅಣೆಕಟ್ಟು ನಿರ್ಮಾಣಕ್ಕೆ ಯೋಜನೆ ಹಾಕಿಕೊಳ್ಳಲಾಗಿತ್ತು.
ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ:
ಸ್ಥಳೀಯ ನಾಗರಿಕರ ಬೆದರಿಕೆ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲಾಧಿಕಾರಿ ಕಾಸರಗೋಡಿನಲ್ಲಿ ಸಭೆ ನಡೆಸಿ, ಸಚಿವರೊಂದಿಗೆ ಚರ್ಚೆಗೆ ವೇದಿಕೆ ನಿರ್ಮಿಸಿಕೊಟ್ಟಿದ್ದರು. ಇದೀಗ ಫೆಬ್ರವರಿ ತಿಂಗಳ ಅಂತ್ಯಕ್ಕೆ ರೀ ಟೆಂಡರ್ ಕಾರ್ಯಕ್ಕೆ ಆಡಳಿತಾನುಮತಿ, ತಾಂತ್ರಿಕ ಅನುಮತಿ ನೀಡುವುದರ ಜತೆಗೆ ಮಾರ್ಚ್ ತಿಂಗಳಲ್ಲಿ ರೀ ಟೆಂಡರ್ ನೀಡಲು ಕ್ರಮ ಕೈಗೊಳ್ಳುವುದಾಗಿ ಸಚಿವ ಪಿ.ಜೆ ಜೋಸೆಫ್ ಭರವಸೆ ನಿಡಿದ್ದರು.
ಶಾಸಕರ ಇಚ್ಛಾಶಕ್ತಿ ಕೊರತೆ:
ಬಾವಿಕೆರೆ ಶಾಶ್ವತ ಅಣೆಕಟ್ಟು ನಿರ್ಮಾಣದಲ್ಲಿ ಕಾಸರಗೋಡು ಹಾಗೂ ಉದುಮ ಶಾಸಕರ ಇಚ್ಛಾಶಕ್ತಿ ಕೊರತೆ ಎದ್ದುಕಾಣುತ್ತಿದೆ. ಅಣೆಕಟ್ಟು ನಿರ್ಮಾಣಗೊಳ್ಳುತ್ತಿರುವ ಪ್ರದೇಶ ಉದುಮ ಕ್ಷೇತ್ರದಲ್ಲಿದ್ದು, ಇಲ್ಲಿಂದ ನೀರು ಕಾಸರಗೋಡು ಶಾಸಕರ ಕ್ಷೇತ್ರಕ್ಕೆ ರವಾನೆಯಾಗುತ್ತಿದೆ. ಇಬ್ಬರು ಶಾಸಕರೂ, ವಿರುದ್ಧ ರಾಜಕೀಯ ಪಕ್ಷಗಳನ್ನು ಪ್ರತಿನಿಧೀಕರಿಸುತ್ತಿರುವುದರಿಂದ ಇವರ ಮಧ್ಯೆ ಹೊಂದಾಣಿಕೆ ಕೊರತೆಯೂ ಕಂಡುಬರುತ್ತಿದೆ. ಇದೀಗ ಗುತ್ತಿಗೆ ವಹಿಸಿಕೊಂಡಿರುವ ವ್ಯಕ್ತಿ ಅರ್ಧದಲ್ಲಿ ತೆರಳಿರುವುದರಿಂದ ಕಾಸರಗೋಡು ಶಾಸಕಗೆ ಅಣೆಕಟ್ಟು ನಿರ್ಮಾಣದ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲದಿರುವುದು ಸಾಬೀತಾಗಿದೆ. ಇನ್ನು ಉದುಮ ಕ್ಷೇತ್ರದ ಜನತೆಗೆ ಅಣೆಕಟ್ಟಿನ ಹನಿ ನೀರೂ ಪ್ರಯೋಜನಕ್ಕೆ ಲಭಿಸುತ್ತಿಲ್ಲ ಎಂಬುದಾಗಿ ಉದುಮ ಶಾಸಕ ಕೆ. ಕುಞಿರಾಮನ್ ತಿಳಿಸುತ್ತಿರುವುದರಿಂದ ಅವರೂ ಶಾಶ್ವತ ಅಣೆಕಟ್ಟು ಯೋಜನೆ ಬಗ್ಗೆ ಉತ್ಸುಕರಾಗಿಲ್ಲ ಎಂಬುದನ್ನು ಸೂಚಿಸುತ್ತಿದೆ.
ಸರ್ಕಾರದ ಇಚ್ಛಾಶಕ್ತಿಯ ಕೊರತೆ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಯೋಜನೆ ಆರಂಭಗೊಂಡು ಹತ್ತು ವರ್ಷ ಕಳೆದರೂ, ಕೆಲಸ ಪೂರ್ತಿಗೊಳಿಸುವುದು ಅಸಾಧ್ಯವಾಗಿದೆ. ಇದರಿಂದ ಕಾಸರಗೋಡಿನ ಜನತೆಗೆ ಬೇಸಿಗೆಯಲ್ಲಿ ಉಪ್ಪುನೀರಿನ ಸೇವನೆ ಇಂದಿಗೂ ಅನಿವಾರ್ಯವಾಗಿದೆ. ಕಳೆದ ಮೂವತ್ತು ವರ್ಷಗಳಿಂದ ಬಾವಿಕೆರೆ ಹೊಳೆಗೆ ಪ್ಲಾಸ್ಟಿಕ್ ಚೀಲದಲ್ಲಿ ಮರಳು ತುಂಬಿಸಿ ತಾತ್ಕಾಲಿಕ ಅಣೆಕಟ್ಟು ನಿರ್ಮಿಸಲಾಗುತ್ತಿದೆ. ಅಣೆಕಟ್ಟು ನಿರ್ಮಾಣಕ್ಕೆ ಮಾತ್ರ ಟೆಂಡರ್ ನೀಡುವ ಇಲಾಖೆ, ಈ ಪ್ಲಾಸ್ಟಿಕ್ ಮಾಲಿನ್ಯವನ್ನು ತೆರವುಗೊಳಿಸುವ ಗೋಜಿಗೆ ಹೋಗುತ್ತಿಲ್ಲ. ಇದರಿಂದ ಹೊಳೆ ಇದೀಗ ಪ್ಲಾಸ್ಟಿಕ್ ಮಾಲಿನ್ಯದಿಂದ ತುಂಬಿಕೊಂಡಿದೆ. ಹೊಳೆಯಲ್ಲಿ ತುಂಬಿಕೊಂಡಿರುವ ಪ್ಲಾಸ್ಟಿಕ್ ತೆರವುಗೊಳಿಸುವಂತೆ ಕ್ರಿಯಾಸಮಿತಿ ಪದಾಧಿಕಾರಿಗಳು ಸಂಬಂಧಪಟ್ಟವರನ್ನು ಒತ್ತಾಯಿಸಿದ್ದಾರೆ. ಪ್ರತಿವರ್ಷ ಇಲ್ಲಿ ತಾತ್ಕಾಲಿಕ ಅಣೆಕಟ್ಟು ನಿರ್ಮಾಣಕ್ಕೆ ಲಕ್ಷಾಂತರ ರೂ. ವ್ಯಯಿಸಲಾಗುತ್ತಿದೆ. ಶಾಶ್ವತ ಅಣೆಕಟ್ಟು ನಿರ್ಮಾಣ ಯೋಜನೆ ಅತಂತ್ರವಾಗಿದ್ದ ಹಿನ್ನಲೆಯಲ್ಲಿ ಈ ಬಾರಿ ಮರಳುಚೀಲದಿಂದ ನಿರ್ಮಿಸುವ ತಾತ್ಕಾಲಿಕ ಅಣೆಕಟ್ಟು ಕಾಮಗಾರಿಯೂ ವಿಳಂಬವಾಗಿ ಸಾಗುತ್ತಿದೆ.
2005 ರಲ್ಲಿ ಕಾಮಗಾರಿ ಆರಂಭಗೊಂಡಿರುವ ಬಾವಿಕೆರೆ ಶಾಶ್ವತ ಅಣೆಕಟ್ಟು ಕಾಮಗಾರಿಯ ಗುತ್ತಿಗೆ ವಹಿಸಿಕೊಂಡವರು ಕಾಮಗಾರಿ ಅರ್ಧದಲ್ಲಿ ಕೈಬಿಟ್ಟು ತೆರಳಿದ್ದಾರೆ. ಬಾವಿಕೆರೆ ಶಾಶ್ವತ ಅಣೆಕಟ್ಟಿನಿಂದ ಉದುಮ ಕ್ಷೇತ್ರದ ಜನತೆಗೆ ಕಿಂಚಿತ್ತೂ ಲಾಭವಿಲ್ಲದಿದ್ದರೂ, ಅಣೆಕಟ್ಟು ನಿಮಾರ್ಣದ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದೇನೆ. ಮುಂದುವರಿದ ಕೆಲಸಗಳಿಗೆ ಎಸ್ಟಿಮೇಟ್ ತಯಾರಿಸುತ್ತಿರುವ ಬಗ್ಗೆ ಜಲಸಂಪನ್ಮೂಲ ಖಾತೆ ಸಚಿವರಿಂದ ಭರವಸೆ ಲಭಿಸಿದೆ. ಶಾಶ್ವತ ಅಣೆಕಟ್ಟು ನಿರ್ಮಾಣಕ್ಕೆ ಇದುವರೆಗೆ ೪.೩೮ಕೋಟಿ ರೂ. ವ್ಯಯಿಸಲಾಗಿದ್ದು, ಶಾಶ್ವತ ಅಣೆಕಟ್ಟು ನಿರ್ಮಣ ಕಾರ್ಯ ಶೀಘ್ರ ಪೂರ್ತಿಗೊಳಿಸುವ ಬಗ್ಗೆ ನೀರಾವರಿಸಚಿವಾಲಯದ ಜತೆ ನಿರಂತರ ಸಂಪರ್ಕವಿರಿಸಿಕೊಂಡು ಕೆಲಸ ಪೂರ್ತಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು.
ಕೆ. ಕುಞಿರಾಮನ್
ಶಾಸಕ, ಉದುಮ
Click this button or press Ctrl+G to toggle between Kannada and English