ಇಸ್ಲಾಮಾಬಾದ್ : ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್‌ನನ್ನು ಅಮೆರಿಕ ಸೇನಾ ಪಡೆ ಪಾಕಿಸ್ತಾನದಲ್ಲಿ ಹತ್ಯೆಗೈಯುವ ಮೂಲಕ ಜಗತ್ತಿನ ಅತ್ಯಂತ ಕುಖ್ಯಾತ ಭಯೋತ್ಪಾದಕನ ಅದ್ಯಾಯಕ್ಕೆ ತೆರೆ ಎಳೆದಿದೆ. ಲಾಡೆನ್ ಪಾಕ್ ಮಿಲಿಟರಿ ಬೇಸ್‌ನಿಂದ ಒಂದೂವರೆ ಕಿಲೋ ಮೀಟರ್ ದೂರದಲ್ಲಿಯೇ ವಾಸವಾಗಿದ್ದರೂ ಕೂಡ ಆತನ ಬಗ್ಗೆ ಯಾವುದೇ ಮಾಹಿತಿಗಳನ್ನು ಪಾಕ್ ಅಮೇರಿಕನ್ ಸೇನೆಗೆ ನೀಡಿರಲಿಲ್ಲ .
ಅಮೆರಿಕ ನೇತೃತ್ವದ ಪಡೆ ಕಳೆದ ಹತ್ತು ವರ್ಷಗಳಿಂದ ಲಾಡೆನ್ ಬೇಟೆಯಲ್ಲಿ ತೊಡಗಿತ್ತು. ಆದರೆ ಪಾಕಿಸ್ತಾನ ಮಾತ್ರ ಲಾಡೆನ್ ಇರುವಿಕೆ ಬಗ್ಗೆ ಯಾವುದೇ ಸುಳಿವು ನೀಡದೆ, ಆತ ದೇಶದಲ್ಲಿ ಠಿಕಾಣಿಯೇ ಹೂಡಿಲ್ಲ ಎಂದು ಸಮಜಾಯಿಷಿ ನೀಡುತ್ತಿತ್ತು. ಏತನ್ಮಧ್ಯೆ ಭಾನುವಾರ ರಾತ್ರಿ ಇಸ್ಲಾಮಾಬಾದ್‌ನಿಂದ 60 ಕಿಲೋ ಮೀಟರ್ ದೂರದಲ್ಲಿರುವ ಅಬೋಟಾಬಾದ್‌ನ ಮನೆಯಲ್ಲಿ ವಾಸವಾಗಿದ್ದ ಲಾಡೆನ್‌ನನ್ನು ಅಮೆರಿಕ ಸೇನೆ ಹತ್ಯೆಗೈದಿರುವುದು ಪಾಕಿಸ್ತಾನಕ್ಕೆ ತೀವ್ರ ಮುಖಭಂಗವಾದಂತಾಗಿದೆ.
ಅಫ್ಘಾನಿಸ್ತಾನದಿಂದ ವಲಸೆ ಬಂದಿದ್ದ ಮೋಸ್ಟ್ ವಾಂಟೆಡ್ ಕ್ರಿಮಿನಲ್ ಲಾಡೆನ್ ಪಾಕಿಸ್ತಾನದ ಪ್ರಮುಖ ನಗರವಾದ ಇಸ್ಲಾಮಾಬಾದ್‌ನ ಉತ್ತರ ಭಾಗದ ಅಬೋಟಾಬಾದ್‌ನಲ್ಲಿಯೇ ಐಶಾರಾಮಿ ಮನೆ ನಿರ್ಮಿಸಿ ಠಿಕಾಣಿ ಹೂಡಿದ್ದ. ಅಲ್ಲದೇ ಅಲ್ಲಿ ಪಾಕಿಸ್ತಾನದ ಮಿಲಿಟರಿ ಅಕಾಡೆಮಿ ಕೂಡ ಇದೆ. ಅದೂ ಕೇವಲ ಒಂದೂವರೆ ಕಿಲೋ ಮೀಟರ್ ಅಂತರದಲ್ಲಿಯೇ ಲಾಡೆನ್ ಅಡಗಿಕೊಂಡಿದ್ದ.
ಒಟ್ಟಾರೆ ಇಸ್ಲಾಮಾಬಾದ್ ಅಬೋಟಾಬಾದ್‌ನಲ್ಲಿಯೇ ಲಾಡೆನ್ ಹತ್ಯೆಯಾದ ನಂತರ ಪಾಕಿಸ್ತಾನದ ವಿರುದ್ಧ ಹಲವು ದೇಶಗಳು ಕೆಂಗಣ್ಣು ಬೀರಿವೆ. ಅವೆಲ್ಲಕ್ಕಿಂತಲೂ ಪಾಕಿಸ್ತಾನದ ಸುಳ್ಳುಬುರುಕ ಹೇಳಿಕೆ, ಪಾಕ್ ಇಬ್ಬಗೆ ನೀತಿ ಜಗಜ್ಜಾಹೀರಾದಂತಾಗಿದೆ. ಇಷ್ಟೆಲ್ಲಾ ಆದರೂ ಲಾಡೆನ್ ಹತ್ಯೆಯ ಕಾರ್ಯಾಚರಣೆಯಲ್ಲಿ ಪಾಕಿಸ್ತಾನ ಸಂಪೂರ್ಣ ನೆರವು ನೀಡಿದೆ ಎಂದು ಅಮೆರಿಕ ಹೇಳಿಕೆ ನೀಡಿದೆ. ವಿಪರ್ಯಾಸ ಎಂಬಂತೆ ಲಾಡೆನ್ ಹತ್ಯೆ ಕುರಿತಂತೆ ಪಾಕಿಸ್ತಾನದ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿಯಾಗಲಿ, ಪ್ರಧಾನಿ ಯೂಸೂಫ್ ರಾಜಾ ಗಿಲಾನಿ ಸೇರಿದಂತೆ ಯಾರೊಬ್ಬರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಅಮೆರಿಕದ ವರ್ಲ್ಡ್ ಟ್ರೇಡ್ ಸೆಂಟರ್ ಮೇಲೆ ಲಾಡೆನ್ ದಾಳಿ ನಡೆಸಿದ ನಂತರ ಅಮೆರಿಕ ಸೇನೆ ಆತನ ಬೇಟೆಯಲ್ಲಿ ತೊಡಗಿತ್ತು. ಅಂತೂ ಸರಿಸುಮಾರು ಒಂಬತ್ತು ವರ್ಷಗಳ ನಂತರ ಕೊನೆಗೂ ಲಾಡೆನ್ ಅಫ್ಘಾನಿಸ್ತಾನದ ಪರ್ವತಶ್ರೇಣಿ ಪ್ರದೇಶದಲ್ಲಿ ಅಡಗಿಕೊಂಡಿಲ್ಲ, ಬದಲಾಗಿ ಪಾಕಿಸ್ತಾನದ ಪ್ರಮುಖ ನಗರವಾದ ಅಬೋಟಾಬಾದ್‌ನಲ್ಲಿಯೇ ಐಶಾರಾಮಿ ಮನೆಯೊಂದರಲ್ಲಿ ತನ್ನ ಕಿರಿಯ ಪತ್ನಿಯ ಜೊತೆ ಠಿಕಾಣಿ ಹೂಡಿರುವುದನ್ನು ಪತ್ತೆ ಹಚ್ಚಿತ್ತು.
ಪಾಕಿಸ್ತಾನದ ಮಿಲಿಟರಿ ಬೇಸ್‌ನಿಂದ ಒಂದೂವರೆ ಕಿಲೋ ಮೀಟರ್ ದೂರದಲ್ಲಿ ಸುಮಾರು ಮೂರು ಅಂತಸ್ತುಗಳ ಐಶಾರಾಮಿ ಮನೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಲಾಡೆನ್ ವಾಸ್ತವ್ಯ ಹೂಡಿದ್ದನಂತೆ. ಆತನ ಮನೆಯಲ್ಲಿ ದೂರವಾಣಿ, ಇಂಟರ್ನೆಟ್ ಯಾವುದೇ ಸಂಪರ್ಕ ಇರಲಿಲ್ಲವಾಗಿತ್ತು. ಆದರೆ ಆತ ನಂಬಿಗಸ್ಥ ಕೊರಿಯರ್ ಮೂಲಕ ಸಂಪರ್ಕ ಸಾಧಿಸುತ್ತಿದ್ದ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.
ಕೊರಿಯರ್ ಸಂಪರ್ಕದ ಜಾಡು ಹಿಡಿದು ಲಾಡೆನ್ ನೆಲೆಯನ್ನು ಅಮೆರಿಕದ ಅಧಿಕಾರಿಗಳು ಪತ್ತೆ ಹಚ್ಚಿದ್ದರು. ಲಾಡೆನ್ ಇರುವಿಕೆ ಬಗ್ಗೆ ಅಮೆರಿಕ 2010 ಆಗಸ್ಟ್ ತಿಂಗಳಿನಲ್ಲಿಯೇ ಪತ್ತೆ ಹಚ್ಚಿತ್ತು. ಆತ ಅತ್ಯಂತ ಐಶಾರಾಮಿ ಮನೆ ಹೊಂದಿರುವುದನ್ನು ಕಂಡು ನಾವೇ ಆಶ್ಚರ್ಯಚಕಿತಗೊಂಡಿರುವುದಾಗಿ ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ.
ಮನೆಯ ಸುತ್ತ ಸುಮಾರು 18 ಅಡಿ ಎತ್ತರದ ಗೋಡೆ ಕಟ್ಟಲಾಗಿತ್ತು. ಆ ಬಂಗಲೆಗೆ ಎರಡು ಪ್ರವೇಶ ದ್ವಾರ ಇದ್ದು, ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿತ್ತು. ಮನೆಯಲ್ಲಿ ಲಾಡೆನ್‌ನ ಇಬ್ಬರು ಪತ್ನಿಯರು, ಮಕ್ಕಳು ಹಾಗೂ ಸಹೋದರರು ವಾಸವಾಗಿದ್ದರು ಎಂದು ಅಮೆರಿಕದ ಅಧಿಕಾರಿಗಳು ವಿವರಿಸಿದ್ದಾರೆ.
ಸಂಭಾವ್ಯ ದಾಳಿಯ ಹೊಡೆತದಿಂದ ರಕ್ಷಣೆ ಪಡೆಯುವ ನಿಟ್ಟಿನಲ್ಲಿ ಮನೆಯ ಗೋಡೆಗಳನ್ನು ಐದು ಅಡಿ ಅಗಲವಾಗಿ ನಿರ್ಮಿಸಲಾಗಿತ್ತು. ಮನೆಯ ಸುತ್ತಲೂ ಕೆಲವು ಕಿಟಕಿಗಳಿದ್ದು, ಮೇಲ್ಮಹಡಿಗೆ ಏಳು ಅಡಿಯ ಗೋಡೆಯನ್ನು ಕಟ್ಟಲಾಗಿತ್ತು. ಈ ಮನೆಯ ಅಂದಾಜು ವೆಚ್ಚ 1 ಬಿಲಿಯನ್ ಡಾಲರ್ ಎಂಬುದಾಗಿ ಅಂದಾಜಿಸಲಾಗಿದೆ.
Click this button or press Ctrl+G to toggle between Kannada and English