ಕಾಸರಗೋಡು: ಬೇಕಲ ಕೋಟೆ ಎಂದಾಗ ನೆನಪಾಗುವುದು ಕನ್ನಡಿಗರ ಶೌರ್ಯದ ಕತೆಗಳು. ದೈವ, ದೇವರುಗಳ ನಾಡಾದ ಕಾಸರಗೋಡಿನಿಂದ ಸುಮಾರು 18 ಕಿ.ಮಿ. ದೂರದಲ್ಲಿ ಪ್ರಕೃತಿ ರಮಣೀಯವಾದ ಸುಂದರ ತಾಣ ಬೇಕಲ ಕೋಟೆ. ಕಳೆದ ಹಲವಾರು ವರ್ಷಗಳಿಂದ ನಿರಂತರವಾಗಿ ಹಲವು ಭಾಷೆಯ ಹಲವಾರು ಚಲನ ಚಿತ್ರಗಳು ಚಿತ್ರೀಕರಣಗೊಂಡಿದೆ. ಅವುಗಳಲ್ಲಿ ಕೆಲವು ಸೂಪರ್ ಹಿಟ್ ಆದವುಗಳು ಇವೆ. ಕಳೆದ ವಾರವಷ್ಟೇ ಮರಾಠಿ ಚಿತ್ರದ ಚಿತ್ರೀಕರಣ ನಡೆದಿದೆ. ಇದರ ಬೆನ್ನಿಗೆ ಕನ್ನಡ ಚಿತ್ರವೊಂದರ ಚಿತ್ರೀಕರಣ ನಡೆಯುತ್ತಿದೆ. ಪ್ರೊಡೆಕ್ಷನ್ ಮೆನೇಜರ್ ಉದಯ ಕುಮಾರ್ ಮನ್ನಿಪ್ಪಾಡಿ ಅವರ ನೇತೃತ್ವದಲ್ಲಿ ಸದ್ದುಗದ್ದಲವಿಲ್ಲದೆ ‘ಹೊಂಬಣ್ಣ’ ಕನ್ನಡ ಚಲನಚಿತ್ರ ಚಿತ್ರೀಕರಣ ನಡೆಯುತ್ತಿದೆ.
‘ನವಭಾವದ ಅಲೆಯ ಏರಿ ಬಂದು ಜೊತೆಯಾದ ನಾವಿಕ
ಒಲವಿಂದ ದೂರ ತೀರ ಯಾನ ಬಲು ರೋಚಕ
ಗಮನದೆಲೆ ಗಮ್ಯ ನೀನು ನೆನಪಿನ ಗುಂಗೇತಕೆ….‘
ಎಂಬ ಗೀತೆಗೆ ರಕ್ಷಿತ್ ತೀರ್ಥಹಳ್ಳಿ ಅವರ ನಿರ್ದೇಶನದಲ್ಲಿ ಪ್ರವೀಣ್ ಎಸ್. ಅವರು ತಮ್ಮ ಕ್ಯಾಮರಾದಲ್ಲಿ ಧನಂಜಯ್ ಹಾಗೂ ವರ್ಷ ಜೋಡಿಯಲ್ಲಿ ಮೂಡಿಬಂದ ಈ ಹಾಡನ್ನು ಸೊಗಸಾಗಿ ಸೆರೆ ಹಿಡಿಯಲಾಗಿದೆ.
ರಕ್ಷಿತ್ ತೀರ್ಥಹಳ್ಳಿ ಅವರು ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ, ನಿರ್ದೇಶನ ನೀಡಿರುವ ಹೊಂಬಣ್ಣ ಕನ್ನಡ ಚಲನ ಚಿತ್ರವನ್ನು ಸ್ವಾಮಿ ಅಸೋಸಿಯೇಟ್ಸ್ ಬ್ಯಾನರಲ್ಲಿ ಟಿ.ಸಿ.ಸಿದ್ದರಾಜು ನಿರ್ಮಿಸುತ್ತಿದ್ದಾರೆ. ಚಿತ್ರದ ನಾಯಕ ನಟನಾಗಿ ಧನಂಜಯ್ ಹಾಗೂ ಸುಬ್ಬು ಗೌಡ ಕಾಣಿಸಿಕೊಳ್ಳಲಿದ್ದಾರೆ. ನಾಯಕಿ ನಟಿಯಾಗಿ ವರ್ಷ ವಿ. ಹಾಗೂ ದ್ವಿತೀಯ ನಾಯಕಿ ನಟಿಯಾಗಿ ಪವಿತ್ರ ಕಾಣಿಸಿಕೊಳ್ಳಲಿದ್ದಾರೆ. ಉಳಿದ ಪಾತ್ರಗಳಲ್ಲಿ ದತ್ತಣ್ಣ, ಚಂದ್ರು, ದೀಪಿಕಾ, ಮಯೂರಿ, ನೀನಾಸಂ ಅಶ್ವಿತ್, ಅಂಬುಜಾಕ್ಷಿ, ಮಂಜು ಪಾಟೀಲ್ ಮುಂತಾದವರು ಅಭಿನಯಿಸಿದ್ದಾರೆ. ರಕ್ಷಿತ್ ಅವರ ಸಾಹಿತ್ಯಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಮನೀಷಾ, ಹೇಮಂತ್, ವಾಣಿ ಹರಿಕೃಷ್ಣ, ಅನನ್ಯ ಹಾಗೂ ಭರತ್ ಅವರ ಸುಮಧುರ ಧ್ವನಿಯಲ್ಲಿ ಈ ಚಿತ್ರದ ಎಲ್ಲಾ ಹಾಡುಗಳು ಸುಂದರವಾಗಿ ಮೂಡಿ ಬರಲಿವೆ.
ಕಾಸರಗೋಡಿನ ರಂಗಕರ್ಮಿ ಉದಯ ಕುಮಾರ್ ಮನ್ನಿಪ್ಪಾಡಿ ಈ ಚಿತ್ರದ ಪ್ರೊಡೆಕ್ಷನ್ ಮೆನೇಜರಾಗಿ ಕಾರ್ಯ ನಿರ್ವಹಿಸಿದ್ದಾರೆ. ಹೊಂಬಣ್ಣ ಚಿತ್ರದ ಸಹನಿರ್ದೇಶಕರಾಗಿ ವಿಷ್ಣು ಹೆಬ್ಬಾರ್, ಕ್ಯಾಮರಾದಲ್ಲಿ ಶೇಖರ್, ಚಂದ್ರು, ಪ್ರವೀಣ್ ಸಹಕರಿಸಿದ್ದಾರೆ. ಸಂಕಲನ ಅಕ್ಷಯ್ ಪಿ.ರಾವ್, ಕಲಾ ನಿರ್ದೇಶಕರಾಗಿ ಕನಕ, ಸಹಾಯಕರಾಗಿ ಮಹೇಶ್ ಬೆಂಗಳೂರು, ಅಮೃತ ಸಹಕರಿಸಿದ್ದಾರೆ.
Click this button or press Ctrl+G to toggle between Kannada and English