ಮಂಗಳೂರು : ದಕ್ಷಿಣ ಭಾರತದ ನಾಥ ಪಂಥದ ಪ್ರಮುಖ ಕೇಂದ್ರವಾದ ಕದಳೀ ಶ್ರೀ ಯೋಗೇಶ್ವರ (ಜೋಗಿ) ಮಠದ ನೂತನ ರಾಜರಾಗಿ ಶ್ರೀ ಯೋಗಿ ನಿರ್ಮಲ್‌ನಾಥ್‌ಜೀಯವರು ಅಖಿಲ ಭಾರತ ವರ್ಷಿಯ ಅವಧೂತ್ ಬೇಖ್ ಬಾರಹ ಪಂಠ ಯೋಗಿ ಮಹಾಸಭಾದ ಮುಂದಾಳುಗಳು, ಜೋಗಿ ಸಮಾಜದ ಬಾಂಧವರು, ಭಕ್ತಾಭಿಮಾನಿಗಳ ಉಪಸ್ಥಿತಿಯಲ್ಲಿ ಪಟ್ಟಾಭಿಷಿಕ್ತರಾದರು. ಇದೇ ವೇಳೆ ವಿಟ್ಲ ಜೋಗಿ ಮಠದ ಅರಸುವಾಗಿ ಯೋಗಿ ಶ್ರೀ ಶ್ರದ್ಧಾನಾಥ್‌ಜೀಯವರು ಪಟ್ಟಾಭಿಷೇಕಗೊಂಡರು.
ಪಾರಂಪರಿಕ ತಂತ್ರಿಗಳಾದ ಶ್ರೀ ವಿಠಲದಾಸ್‌ರವರ ನೇತೃತ್ವದಲ್ಲಿ ವೈದಿಕ ವಿಧಿ ವಿಧಾನಗಳು ನೆರವೇರಿ 9.25 ರ ಮೇಷ ಲಗ್ನ ಸುಮುಹೂರ್ತದಲ್ಲಿ ಮಹಾ ಶಿವರಾತ್ರಿಯ ಶುಭ ದಿನದಂದು ಉಭಯ ಸ್ವಾಮಿಗಳು ಪೀಠಾಧಿಪತಿಗಳಾಗಿ ಅಧಿಕಾರ ವಹಿಸಿಕೊಂಡರು. ಈ ಮೂಲಕ ಮುಂದಿನ ಹನ್ನೆರಡು ವರ್ಷ ಕದಳೀ ಪೀಠ ಹಾಗೂ ವಿಟ್ಲ ಜೋಗಿ ಮಠದ ಆಡಳಿತ ನಿರ್ವಹಣೆಯನ್ನು ಶ್ರೀ ನಿರ್ಮಲ್‌ನಾಥ್‌ಜೀ ಹಾಗೂ ಶ್ರೀ ಶ್ರದ್ಧಾನಾಥ್‌ಜೀ ವಹಿಸಲಿದ್ದಾರೆ.
ಮಠದ ಆವರಣದಲ್ಲಿರುವ ಶಿಲಾ ಪೀಠದಲ್ಲಿ ಉಭಯ ಯೋಗಿಗಳನ್ನು ಕುಳ್ಳಿರಿಸಿ ಜಲಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕ್ರಿಯೆಗಳನ್ನು ನೆರವೇರಿಸಿ ನಂತರ ಮಠದ ಒಳಗಿರುವ ಮರಳು ಧೂಮವತಿ ಎದುರು ಶ್ರೀ ನಿರ್ಮಲ್‌ನಾಥ್‌ಜೀಗೆ ನಿರ್ಗಮನ ಪೀಠಾಧಿಪತಿ ಶ್ರೀ ಸಂಧ್ಯಾನಾಥ್‌ಜೀ ಪಟ್ಟದ ಕತ್ತಿಯನ್ನು ನೀಡಿ ರಾಜ ತಿಲಕವನ್ನಿಟ್ಟರು.
ಈ ಪ್ರಕ್ರಿಯೆ ಮುಗಿದ ಬಳಿಕ ಪಟ್ಟಾಭಿಷಿಕ್ತರಾದ ನೂತನ ರಾಜ ತಾನು ತಂದ ಪಾತ್ರ ದೇವತೆಯನ್ನು ಪ್ರತಿಷ್ಠಾಪಿಸಿದರು. ನಿರ್ಗಮನ ಪೀಠಾಧಿಪತಿಗಳು ಅವರ ಕಾಲಾವಧಿಯವರೆಗೆ ತನ್ನಿಂದ ಪೂಜಿಸಲ್ಪಟ್ಟ ಪಾತ್ರ ದೇವತೆಯನ್ನು ಅಲ್ಲಿಂದ ತೆರವುಗೊಳಿಸಿದರು. ಬಳಿಕ ನಿರ್ಗಮನ ಪೀಠಾಧಿಪತಿಗಳು ತನ್ನ ಆಡಳಿತ ಅವಧಿಯ ಲೆಕ್ಕಪತ್ರಗಳನ್ನು, ಸ್ಥಿರ, ಚರ ಸೊತ್ತುಗಳ ವಿವರಗಳನ್ನು ಪ್ರಾಮಾಣಿಕವಾಗಿ ನೂತನ ಪೀಠಾಧಿಪತಿಗಳಿಗೆ ಆಡಳಿತ ಸಮಿತಿಯ ಸಮಕ್ಷಮದಲ್ಲಿ ಒಪ್ಪಿಸಿ ‘ಕದಳೀವನ’ದ ಪರಂಪರೆಯಂತೆ ಸಾಂಕೇತಿಕ ಸಮಾಧಿ ಹೊಂದಲು ಸಿದ್ಧರಾದರು.
ಸಮಾಧಿ ಹೊಂದಲು ನಿರ್ಗಮನ ಪೀಠಾಧಿಪತಿಯವರು ತಾನು ತಂದ ಪಾತ್ರ ದೇವತೆಯನ್ನು ಹಿಡಿದುಕೊಂಡು ತನ್ನ ಅನುಯಾಯಿಗಳೊಂದಿಗೆ ಬೊಕ್ಕಪಟ್ಣ ಬೋಳೂರಿನ ತಣ್ಣೀರುಬಾಬಿ ಸಮುದ್ರದಲ್ಲಿ ಪಾತ್ರ ದೇವತೆಯನ್ನು ವಿಸರ್ಜಿಸಿ ಪೂಜೆ ಸಲ್ಲಿಸಿ, ಮೂರು ಬಾರಿ ಸಮುದ್ರದಲ್ಲಿ ಮುಳುಗೆದ್ದು ಜಲ ಸಮಾಧಿ ಎಂಬ ಸಂಕೇತವನ್ನು ಆಚರಿಸಿ ಮರಳಿದರು. ನಂತರ ಅವರಿಗೆ ನೂತನ ಪೀಠಾಧಿಪತಿಗಳು ಅವರ ಮುಂದಿನ ಪ್ರಯಾಣಕ್ಕೆ ಸೌಕರ್ಯ ಕಲ್ಪಿಸಿಕೊಡುತ್ತಾರೆ.
ಆ ಬಳಿಕ ತ್ರ್ಯಂಬಕೇಶ್ವರದಿಂದ ಮಂಗಳೂರಿನ ಕದಳೀ ಜೋಗಿ ಪೀಠದವರೆಗೆ ಬಂದು ಈ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಎಲ್ಲಾ ಯೋಗಿಗಳಿಗೂ ಹಿಂತಿರುಗುವ ಪ್ರಯಾಣ ವೆಚ್ಚವನ್ನು ಪೀಠಾಧಿಪತಿಗಳು ನೀಡಿದರು.
ಈ ಎಲ್ಲಾ ವಿಧಾನಗಳು ಮುಗಿದ ಬಳಿಕ ನೂತನ ಪೀಠಾಧಿಪತಿಗಳ ಜತೆಯಲ್ಲಿ ಹೊಸ ಸಿಬ್ಬಂದಿಗಳು ಮಠದ ಆಡಳಿತಕ್ಕೆ ನಿಯೋಜಿಸಲ್ಪಡುತ್ತಾರೆ. ದೈನಂದಿನ ಉಸ್ತುವಾರಿಯನ್ನು ’ಕಾರ್‌ಬಾರಿ’ ನೋಡಿಕೊಂಡರೆ, ಅಡಿಗೆಯ ಹೊಣೆಗಾರಿಕೆ ’ಭಂಡಾರಿ’ಯದ್ದು. ಲೆಕ್ಕ ಪತ್ರ ಬರೆಯಲು ’ಕೊಠಾರಿ’ ಮತ್ತು ಪೂಜೆಯ ಹೊಣೆಗಾರಿಕೆಗೆ ’ಪೂಜಾರಿ’ ಇರುತ್ತಾರೆ. ಇವರೆಲ್ಲರೂ ದರ್ಶಿನಿ ಯೋಗಿಗಳು ಮತ್ತು ಮುಂದಿನ 12 ವರ್ಷ ಇಲ್ಲಿಯೇ ಇರುತ್ತಾರೆ.
ಮಹಂತ ಸೂರಜ್‌ನಾಥ್ ಜೀ, ಮಹಂತ ಕೃಷ್ಣಾನಾಥ್ ಜೀ, ಮಹಂತ ಸೋಮನಾಥ್ ಜೀ, ಮಹಂತ ಶಿವನಾಥ್‌ಜೀ, ಮಹಂತ ರವೀಂದ್ರನಾಥ ಜೀ, ಮಹಂತ ಡಾ. ಶ್ರೀಕೃಷ್ಣಾನಾಥ್ ಜೀ ಮಹಾರಾಷ್ಟ್ರ ಉಪಸ್ಥಿತರಿದ್ದರು.
Click this button or press Ctrl+G to toggle between Kannada and English