ಹೊಸತನಗಳ ಹೊಸ ತುಳು ಚಿತ್ರ ‘ರಂಬಾರೂಟಿ’ ಏಪ್ರಿಲ್ 1 ರಂದು ಬಿಡುಗಡೆ

9:46 PM, Thursday, March 31st, 2016
Share
1 Star2 Stars3 Stars4 Stars5 Stars
(5 rating, 6 votes)
Loading...

Rambarooti ಮಂಗಳೂರು : ಹೊಸ ತಂತ್ರಜ್ಞಾನದೊಂದಿಗೆ ಹೊಸ ಯುವ ನಟರನ್ನು ಹಾಕಿ ನಿರ್ದೇಶಿಸಿದ ರಂಬಾರೂಟಿ ಚಿತ್ರ ಚಿತ್ರಪ್ರೇಮಿಗಳಿಗೆ ಮನರಂಜನೆ ನೀಡಲು ಸಿದ್ದಗೊಂಡಿದೆ ಎಂದು ಯುವ ನಿರ್ದೇಶಕ ಪ್ರಜ್ವಲ್ ಕುಮಾರ್ ಅತ್ತಾವರ ನಗರದಲ್ಲಿ ಚಿತ್ರದ ಬಿಡುಗಡೆ ಕುರಿತು ನಡೆದ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.

ರಂಬಾರೂಟಿ ಚಿತ್ರ ಒಪೇರಾ ಡ್ರೀಮ್ ಮೂವೀಸ್ ಲಾಂಛನದಲ್ಲಿ ಪ್ರಕಾಶ್ ಕಾಬೆಟ್ಟು ಹಾಗೂ ಶ್ರೀನಿವಾಸ್ ಉಜಿರೆ ನಿರ್ಮಾಣದಲ್ಲಿ ಮೂಡಿಬಂದಿದೆ. ಮಂಗಳೂರು ನಗರ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಒಟ್ಟು 13 ಚಿತ್ರ ಮಂದಿರಗಳಲ್ಲಿ ಚಿತ್ರ ಎಪ್ರಿಲ್ 1 ರಂದು ಬಿಡುಗಡೆಗೊಳ್ಳಲಿದೆ. ಮಂಗಳೂರಿನ ಪ್ರಭಾತ್, ಬಿಗ್ ಸಿನಿಮಾಸ್, ಪಿ.ವಿ.ಆರ್, ಸಿನಿಪೊಲಿಸ್, ಉಡುಪಿಯಲ್ಲಿ ಕಲ್ಪನ, ಮಣಿಪಾಲದಲ್ಲಿ ಐಯೋನೆಕ್ಸ್, ಕಾರ್ಕಳದಲ್ಲಿ ರಾಧಿಕ, ಮೂಡಬಿದ್ರೆಯಲ್ಲಿ ಅಮರಶ್ರೀ, ಸುರತ್ಕಲ್ ನಲ್ಲಿ ನಟರಾಜ್, ಬಿಸಿ ರೋಡಿನಲ್ಲಿ ನಕ್ಷತ್ರ, ಬೆಳ್ತಂಗಡಿಯಲ್ಲಿ ಭಾರತ್, ಪುತ್ತೂರಿನಲ್ಲಿ ಅರುಣಾ, ಸುಳ್ಯದಲ್ಲಿ ಸಂತೋಷ್ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಅವರು ಹೇಳಿದರು.

ನಿರ್ದೇಶಕ ಪ್ರಜ್ವಲ್ ಕುಮಾರ್ ಅತ್ತಾವರ ಅವರು ಮೊದಲಬಾರಿಗೆ ಈ ಚಿತ್ರ ನಿರ್ದೇಶಿಸಿದ್ದಾರೆ. ಶಾರ್ಟ್‌ಫಿಲ್ಮ್ ಆಲ್ಬಂ ಸಾಂಗ್, ಜಾಗೃತಿ ಚಿತ್ರ ಟೆಲಿಫಿಲ್ಮ್‌ಗಳಲ್ಲಿ ತೊಡಗಿಸಿಕೊಂಡು ಅನುಭವವಿರುವವರು. ನಾಯಕ ನಟ ವಿ.ಜೆ ವಿನೀತ್, ನಾಯಕಿಯರಾಗಿ ಶ್ರುತಿ ಕೋಟ್ಯಾನ್, ಚಿರಶ್ರೀ ಅಂಚನ್ ಕಾಣಿಸಿಕೊಳ್ಳಲಿದ್ದಾರೆ. ಪ್ರಮುಖ ಹಾಸ್ಯ ಕಲಾವಿದರಾಗಿ ಶಬರೀಶ್ ಕಬ್ಬಿನಾಲೆ ಪ್ರೇಕ್ಷಕರಿಗೆ ಖುಷಿ ನೀಡಲಿದ್ದಾರೆ. ಹರೀಶ್ ಶೆಟ್ಟಿ, ssಸನಿಲ್ ಗುರು, ಸಂದೇಶ್ ಶೆಟ್ಟಿ ಸೇರಿ ಒಟ್ಟು 41 ಮಂದಿ ಹೊಸನಟರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಹರೀಶ್ ಶೆಟ್ಟಿ, ಶಾನಿಲ್ ಗುರು ಖಳನಟರು.

Rambarooti

ಸಿನೆಮಾ 2014 ಆಗಸ್ಟ್ 16 ರಂದು ಮಂಗಳೂರಿನ ಅತ್ತಾವರ ಉಮಾಮಹೇಶ್ವರ ದೇವಸ್ಥಾನದಲ್ಲಿ ಶುಭಾರಂಭ ಗೊಂಡು ವಾರಾಂತ್ಯಗಳ ಶೆಡ್ಯೂಲ್ ಮಾಡಿಕೊಂಡು 9 ತಿಂಗಳ ಚಿತ್ರೀಕರಣ ಹಾಗೂ 3 ತಿಂಗಳ ಪೋಸ್ಟ್ ಪ್ರೊಡಕ್ಷನ್‌ನಲ್ಲಿ ಚಿತ್ರ ಪೂರ್ಣಗೊಂಡಿದೆ ಎಂದು ಅವರು ಹೇಳಿದರು.

ಚಿತ್ರದ ನಿರ್ಮಾಪಕ ಶ್ರೀನಿವಾಸ್ ಉಜಿರೆ ಮಾತನಾಡಿ ಚಿತ್ರದಲ್ಲಿ ಹೊಸತನಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡಲಾಗಿದೆ. ಚಿತ್ರದಲ್ಲಿ ಯುವ ನಟರ ಶ್ರಮ ಹಾಗೂ ಅಭಿನಯ ಚಿತ್ರದ ಪ್ಲಸ್ ಪಾಯಿಂಟ್ ಎಂದು ಅವರು ತಿಳಿಸಿದ್ದಾರೆ.

ನಾಯಕ ನಟ ವಿ.ಜೆ ವಿನೀತ್ ಮಾತನಾಡಿ ಯುವಕರ ತಂಡ ಮಾಡಿದ ಚಿತ್ರಕ್ಕೆ ಪ್ರೇಕ್ಷಕರು ಆರ್ಶೀವಾದಿಸಬೇಕೆಂದು ಹೇಳಿದರು. ಚಿತ್ರದ ನಾಯಕಿ ಶ್ರುತಿ ಕೋಟ್ಯಾನ್ ಚಿತ್ರದ ಬಗ್ಗೆ ಮಾತನಾಡಿದರು.

ಸಹನಟ ಸಂದೇಶ್ ಶೆಟ್ಟಿ, ಸಂಗೀತ ನಿರ್ದೇಶಕ ಲಾಯ್ ವೆಲೆನ್‌ಟಿನ್ ಸಲ್ಡಾನ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.

ಲಾಯ್ ವೆಲೆನ್ ಟಿನ್ ಸಲ್ಡಾನ ಸಂಗೀತ ನೀಡಿದ್ದಾರೆ. ಬಲ..ಬಲ… ಗೊಬ್ಬುಗಾ ನಮ ಲಗೋರಿ, ಎಂಚಿ ಸಾವ್ಯ ಸಾಂಗ್ ಈಗಾಗಲೇ ಹಿಟ್ ಹಾಡುಗಳ ಸಾಲಿನಲ್ಲಿ ಸೇರಿವೆ. ತುಳುವಿನಲ್ಲಿ ಸಾಮಾನ್ಯವಾಗಿ ಬಳಸುವ ಆಡುಮಾತಿಗೆ ಒಂದಷ್ಟು ಇಂಗ್ಲೀಷ್ ಪದಪುಂಜ ಬೆರೆಸಿ ರ್ಯಾಂಪ್ ಸಾಂಗ್ ಕಟ್ಟಲಾಗಿದೆ ಸೌಮ್ಯೇಶ್ ಬಂಗೇರರ ಸಾಹಿತ್ಯಕ್ಕೆ ಅವರದ್ದೇ ಧ್ವನಿಯಿದೆ ಇದು ಈ ಚಿತ್ರದ ವಿಶೇಷತೆ.

ರಾಪ್ ಮತ್ತು ರೀಮಿಕ್ಸ್ ಹಾಡುಗಳೊಂದಿಗೆ ತುಳು ಸಿನಿಮಾದಲ್ಲಿ ಇದೇ ಮೊದಲ ಬಾರಿಗೆ ಆರು ಹಾಡುಗಳಿವೆ. ಹಾಡುಗಳ ಚಿತ್ರೀಕರಣವನ್ನು ಕರಾವಳಿ ತೀರದ ಹಲವೆಡೆಯಲ್ಲದೆ ಪ್ರಕೃತಿ ರಮಣೀಯ ಪಶ್ಚಿಮಘಟ್ಟದ ಕಳಸ, ಹೆಬ್ರಿ, ಕಾರ್ಕಳ ಸಮೀಪದ ಹಲವು ಸುಂದರ ತಾಣಗಳಲ್ಲಿ ನಡೆಸಲಾಗಿದೆ.

ಸುನಾದ್ ಗೌತಮ್ ಕಾರ್ಕಳ ಅವರು ಹಿನ್ನೆಲೆ ಸಂಗೀತವನ್ನು ನೀಡಿದರೆ. ಪ್ರಜ್ವಲ್ ಕುಮಾರ್ ಅತ್ತಾವರ ಅವರು ಚಿತ್ರಕ್ಕಾಗಿ ನಾಲ್ಕು ಹಾಡುಗಳನ್ನು ಬರೆದಿದ್ದು, ದೀಪಕ್ ಕೋಡಿಕಲ್, ಅವಿನಾಶ್ ಪೂಜಾರಿ, ಲಾಯ್ ವೆಲೆಂಟಿನ್ ಸಲ್ದಾನ, ಮೆಲ್ವಿನ್ ಆಂಟನಿ ಡಿಸೋಜ, ಸವಿತಾ ಪುತ್ತೂರು, ಶೆರ್ವಿನ್ ಅಮ್ಮನ್ನ ಧ್ವನಿ ನೀಡಿದ್ದಾರೆ. ಎಂಚಿ ಸಾವು ಯಾ ಎಂಬ ಹಾಡನ್ನು ಸೌಮೇಶ್ ಬಂಗೇರ ಅವರೇ ರಚಿಸಿ, ರಾಗ ಸಂಯೋಜಿಸಿ ಹಾಡಿದ್ದಾರೆ.

ಥಾಯ್‌ಲ್ಯಾಂಡಿನ ಮುಥಾಯ್ ಎಂಬ ಮಾರ್ಷಲ್ ಆರ್ಟ್‌ನ ಸೊಗಡು ಚಿತ್ರಕ್ಕೆ ಹೊಸ ಮೆರುಗು. ಕಾರ್ತಿಕ್ ಎಸ್. ಕಟೀಲ್ ಸ್ಟಂಟ್‌ನಲ್ಲಿ ಡ್ಯೂಪ್ ಇಲ್ಲದೇ ಫೈಟ್ ಚಿತ್ರೀಕರಣ ಮಾಡಲಾಗಿದೆ. ಮಾರ್ಷಲ್ ಆರ್ಟ್‌ನ ಪೂರ್ಣ ಪ್ರಮಾಣದ ಬಳಕೆ ತುಳು ಚಿತ್ರರಂಗಕ್ಕೆ ಹೊಸದು. ಮಾತ್ರವಲ್ಲ ಮಂಗಳೂರಿನ ಡಿಸಾರ‍್ಡ ರ್ ತಂಡದ ಬೈಕ್ ಸ್ಟಂಟ್ ಕಲಾವಿದನನ್ನು ಚಿತ್ರದಲ್ಲಿ ಪರಿಚಯಿಸಲಾಗಿದೆ. ಟೈಟಲ್ ತಕ್ಕಂತೆ ಪ್ರೇಕ್ಷಕನಿಗೆ ಮನರಂಜನೆ ಕ್ಲೈಮಾಕ್ಸ್ ನಲ್ಲಿ ಪೂರ್ಣ ಚಿತ್ರಣ ತೆರೆದಿಡುವ ಚಿತ್ರವಿದು. ಕಥಾವಸ್ತುವಿನ ಹಿಂದೆ ಪಾತ್ರಗಳಿಗೆ ಜೀವ ನೀಡಲಾಗಿದೆ ಹಾಸ್ಯದ ಲೇಪನವೂ ಇರುವುದರಿಂದ ತುಳು ಸಿನಿರಸಿಕರನ್ನು ಸೆಳೆದುಕೊಳ್ಳುವಲ್ಲಿ ಚಿತ್ರ ಯಶಸ್ಸು ಕಾಣಲಿದೆ.

Rambarooti

ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ನಿರ್ದೇಶಕ ಪ್ರಜ್ವಲ್ ಕುಮಾರ್ ಅತ್ತಾವರ ನಿರ್ವಹಿಸಿದ್ದು, ಪ್ರಸಾದ್ ಕುಮಾರ್ ಕಾರ್ಕಳ ಚಿತ್ರಕ್ಕಾಗಿ ಕ್ಯಾಮರಾ ಕೆಲಸ ಮಾಡಿದ್ದಾರೆ. ಚಿತ್ರದ ಸಂಕಲನ ಕಿಶನ್ ನಾಯ್ಕ್ ನಡೆಸಿದ್ದು, ಹಾಡುಗಳ ಚಿತ್ರೀಕರಣ ಮತ್ತು ಸಂಕಲವನ್ನು ಪ್ರತೀಕ್ ಶೆಟ್ಟಿ ನಿರ್ವಹಿಸಿದ್ದಾರೆ.

ವಿವೇಕ್ ಗೌಡ ಸಹ ನಿರ್ದೇಶಕರಾಗಿ, ಪ್ರಭಾ ಶ್ರೀನಿವಾಸ್ ಕಾರ್ಯನಿರ್ವಾಹಕ ನಿರ್ಮಾಪಕರಾಗಿ, ನವೀನ್ ಶೆಟ್ಟಿ ಮತ್ತು ಅವಿನಾಶ್ ಪೂಜಾರಿ ನೃತ್ಯಸಂಯೋಜಕರಾಗಿ ಕೆಲಸ ಮಾಡಿದ್ದಾರೆ. ಕಾರ್ತಿಕ್ ಎಸ್ ಕಟೀಲ್ ಸಾಹಸ ದೃಶ್ಯಗಳ ಸಂಯೋಜಿಸಿದ್ದು, ಪ್ರಚಾರ ವಿನ್ಯಾಸ ಶ್ರೀಕಾಂತ್ ದೇವಾಡಿಗ ಅವರದು.

ಈಗಾಗಲೇ ಚಿತ್ರದ ಟ್ರೇಲರ್ ಹಾಡುಗಳು ಯುಟ್ಯೂಬ್ ನಲ್ಲಿ ದಾಖಲೆಯ ವಿಕ್ಷಕರನ್ನು ಹೊಂದಿದೆ. ಹೊಚ್ಚ ಹೊಸ ಕಾಮಿಡಿ ದೃಶ್ಯಗಳ ಸಹಿತ ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನು ಹೊಂದಿರುವ ರಂಬಾರೂಟಿ ಸಿನಿಮಾ ತುಳು ಚಿತ್ರರಸಿಕರಿಗೆ ಹೊಸ ಅನುಭವ ನೀಡಲಿದೆ ಎಂಬುದು ಚಿತ್ರ ತಂಡದ ಭರವಸೆಯಾಗಿದೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English