ಚಿತ್ರ ನಟ ಮುರಳಿ ಇನ್ನಿಲ್ಲ

7:36 AM, Wednesday, September 8th, 2010
Share
1 Star2 Stars3 Stars4 Stars5 Stars
(No Ratings Yet)
Loading...

ಚೆನ್ನೈ : ಕನ್ನಡ ಚಿತ್ರರಂಗದಲ್ಲಿ ಹಲವಾರು ಚಿತ್ರಗಳಲ್ಲಿ ನಟಿಸಿಮಿಂಚಿದ ನಟ ಮುರಳಿ (46) ಚೆನ್ನೈನಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಕನ್ನಡದಲ್ಲಿ ಅಜಯ್ ವಿಜಯ್, ಪ್ರೇಮ ಪರ್ವ, ಪ್ರೇಮ ಪ್ರೇಮ ಪ್ರೇಮ ಮತ್ತಿತರ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.ಮಂಗಳವಾರ  ಮಗಳ ನಿಶ್ಚಿತಾರ್ಥ ಮುಗಿಸಿ ಮಲಗಿದ್ದ ಮುರಳಿ ಬೆಳಗ್ಗೆ ಏಳದ್ದನ್ನು ನೋಡಿ ಮನೆಯವರು ಎಬ್ಬಿಸಲು ಹೋದಾಗ ಅವರು ತೀರಿಕೊಂಡ ವಿಚಾರ ಬೆಳಕಿಗೆ ಬಂದಿದೆ ಮುರಳಿ ಪತ್ನಿ ಶೋಭಾ, ಇಬ್ಬರು ಪುತ್ರರು ಹಾಗೂ ಒಬ್ಬ ಪುತ್ರಿಯನ್ನು ಅಗಲಿದ್ದಾರೆ.
ಕನ್ನಡದಲ್ಲಿ ಹಲವು ಜನಪ್ರಿಯ ಹಾಡುಗಳಲ್ಲಿ ಹೆಜ್ಜೆ ಹಾಕಿದರೂ, ಸಿಕ್ಕ ಅವಕಾಶ ಕಡಿಮೆ.  ‘ಹೀರೋ ಹೀರೋ ಹೀರೋ… ನಾನೇ ನಾನೇ ನಾನೇ…’ ಅನ್ನೋ ಹಾಡು ಇಂದಿಗೂ ಪ್ರೇಕ್ಷಕರ ಮನದಾಳದಲ್ಲಿದೆ.  ಕನ್ನಡದಲ್ಲಿ ನಟಿ ತಾರಾ  ಚಿತ್ರದ ಹೀರೋ ಆಗಿ ಮೊದಲ ಬಾರಿ ನಟಿಸಿದ್ದರು. ಮುರಳಿ ಕನ್ನಡಕ್ಕಿಂತ ಹೆಚ್ಚು ಜನಪ್ರಿಯರಾಗಿದ್ದು ತಮಿಳಿನಲ್ಲಿ.  ತಮಿಳಿಂದ ಬಂದ ಅವಕಾಶಕ್ಕೆ ಮುರಳಿ ಬೇಡವೆನ್ನಲಿಲ್ಲ. ತಮಿಳಿನಲ್ಲಿ ಅದೃಷ್ಟವೂ ಕೈ ಹಿಡಿಯಿತು. ನಂತರ ಚೆನ್ನೈನಲ್ಲಿಯೇ ನೆಲೆಸಿ ತಮಿಳು ಚಿತ್ರಗಳಲ್ಲಿ ಈಗಿನವರೆಗೂ ನಟಿಸಿಕೊಂಡಿದ್ದರು. 50ಕ್ಕೂ ಹೆಚ್ಚು ತಮಿಳು ಚಿತ್ರಗಳಲ್ಲಿ ನಟಿಸಿ ತಮ್ಮ ಮನೋಜ್ಞ ಅಭಿನಯಕ್ಕಾಗಿ ತಮಿಳು ನಾಡು ರಾಜ್ಯ ಸರ್ಕಾರದ ಪ್ರಶಸ್ತಿಯನ್ನೂ ಪಡೆದವರು.
ಬಂಗಾರದ ಮನುಷ್ಯ  ಚಿತ್ರ ನೀಡಿದ ನಿರ್ದೇಶಕ ಸಿದ್ಧಲಿಂಗಯ್ಯ ಅವರ ಪುತ್ರರಾದ ಮುರಳಿ ಅಪ್ಪಟ ಕನ್ನಡಿಗರು. ಇತ್ತೀಚೆಗಷ್ಟೇ ಮುರಳಿ ತಮ್ಮ ಮಗನನ್ನೂ ಚಿತ್ರರಂಗಕ್ಕೆ ತರುವ ಪ್ರಯತ್ನ ಮಾಡಿದ್ದರು. ಬಾನ ಕಾತಾಡಿ ಎಂಬ ತಮಿಳು ಚಿತ್ರದಲ್ಲಿ ತಮ್ಮ ಪುತ್ರ ಅಥರ್ವರನ್ನು ನಾಯಕ ನಟನನ್ನಾಗಿ ಪರಿಚಯಿಸಿದ್ದರು. ಆತ ನಟಿಸುವುದನ್ನು ನೋಡಬೇಕೆಂಬುದೇ ನನಗಾಸೆ ಎಂದು ಮುರಳಿ ತನ್ನ ಆಸೆಯನ್ನು ಬೆಂಗಳೂರಿನ ಪತ್ರಕರ್ತರ ಜೊತೆ ಹಂಚಿ ಕೊಂಡಿದ್ದರು. ಮಗ ಅಥರ್ವ ಚೆನ್ನೈನಲ್ಲೇ ಬೆಳೆದರೂ ಕೂಡಾ ಅಪ್ಪಟ ಕನ್ನಡದಲ್ಲೇ ಪತ್ರಕರ್ತರ ಜೊತೆ ಮಾತನಾಡಿದ್ದರು.
ನನಗೆ ಕನ್ನಡದಲ್ಲಿ ಅವಕಾಶ ಕಡಿಮೆಯಾಯಿತು. ಈಗಲೂ ಕನ್ನಡದಲ್ಲಿ ನಟಿಸುವ ಆಸೆಯಿದೆ. ನನ್ನ ಮಗನಾದರೂ ಕನ್ನಡ ನಟನಾಗುವುದನ್ನು ನೋಡುವ ಆಸೆ ನನ್ನದು. ಆತನಿಗೆ ನೀವು ಪ್ರೋತ್ಸಾಹ ನೀಡಬೇಕು ಎಂದು ಮುರಳಿ ಹೇಳಿದ್ದರು. ಆದರೆ ಮಗನ ಮೊದಲ ಚಿತ್ರ ಬಿಡುಗಡೆಯಾಗಿ ಕೆಲವೇ ದಿನಗಳಲ್ಲಿ ಮುರಳಿ ಇಹ ಲೋಕ ತ್ಯಜಿಸಿದ್ದಾರೆ.  ಕನಸು ನನಸಾಗುವ ಮುನ್ನವೇ ಅವರು ಮರೆಯಾಗಿದ್ದಾರೆ. ತಮಿಳು ಹಾಗೂ ಕನ್ನಡ ಚಿತ್ರರಂಗದ ಗಣ್ಯರು ಅವರ ನಿಧನಕ್ಕೆ ಆಘಾತ ವ್ಯಕ್ತಪಡಿಸಿದ್ದು, ಶೋಕ ವ್ಯಕ್ತಪಡಿಸಿದ್ದಾರೆ.
ಅಪ್ಪನ ಸಾವು ನಿಜಕ್ಕೂ ಆಘಾತ ತಂದಿದೆ. ನಿನ್ನೆಯಷ್ಟೆ ಎಲ್ಲರೂ ನಾವು ಜೊತೆಗೆ ಕೂತು ಎಷ್ಟೋ ಹೊತ್ತು ಮಾತನಾಡಿದ್ದೆವು. ಆದರೆ ಮಲಗಿದವರು ಏಳಲೇ ಇಲ್ಲ. ನನಗೆ ನಂಬಲೇ ಆಗುತ್ತಿಲ್ಲ. ನಮ್ಮ ಮನೆಯ ಪ್ರತಿಯೊಂದು ವಿಚಾರವನ್ನು ನಿರ್ವಹಿಸುತ್ತಿದ್ದುದು ಅವರೇ. ಹಾಗಾಗಿ ಮುಂದೆ ಹೇಗೆ ಎಂಬುದೇ ನಮಗೆ ತಿಳಿಯುತ್ತಿಲ್ಲ ಎಂದು ಮಗ ಅಥರ್ವ ಕಂಬನಿ ಮಿಡಿದಿದ್ದಾರೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English