ಕೊನೆಗೂ ಸಾಕಾರಗೊಂಡ ಅಂತರ್ ರಾಜ್ಯ ಕಡಿಮೆ ದೂರದ ಸಂಚಾರಿ ರಸ್ತೆ

7:40 PM, Tuesday, April 12th, 2016
Share
1 Star2 Stars3 Stars4 Stars5 Stars
(4 rating, 7 votes)
Loading...
Sullia Bandadka

ಕಾಸರಗೋಡು : ಹಲವು ವರ್ಷಗಳ ಬಹು ನಿರೀಕ್ಷಿತ ಸುಳ್ಯ-ಬಂದಡ್ಕ ಅಂತರ್ ರಾಜ್ಯ ಸಂಪರ್ಕದ ರಾಜ್ಯ ಹೆದ್ದಾರಿ ಕಾಮಗಾರಿ ಪೂರ್ತಿಯಾಗಿದೆ.ಮೂರು ಕೋಟಿ ರೂ.ವ್ಯಯಿಸಿ ಈ ರಸ್ತೆಯ ಕಾಮಗಾರಿ ನಡೆಸಲಾಗಿದೆ.ಈ ಮೂಲಕ ಬಂದಡ್ಕ ದಾರಿಯಾಗಿ ಸುಳ್ಯ ತಲಪಲು ಅತೀ ಕಡಿಮೆ ದೂರದ ರಸ್ತೆಯ ಕನಸು ನನಸಾಗಿದೆ.ಕೇರಳದ ಕನ್ನಾಡಿತೋಡಿನಿಂದ ಸುಳ್ಯ ತಾಲೂಕಿನ ಆಳೆಟ್ಟಿ ಗ್ರಾ.ಪಂ ನ ಕೋಲ್ಚಾರ್ ವರೆಗಿನ 1800 ಮೀಟರ್ ದೂರದ ರಸ್ತೆಯ ಕಾಮಗಾರಿ ಪೂರ್ತೀಕರಿಸಲಾಗಿದೆ.ಏ.14 ರಂದು ಈ ರಸ್ತೆ ಲೋಕಾರ್ಪಣೆಗೊಳ್ಳಲಿದೆ.

ಪುತ್ತೂರಿನ ಹರೀಶ್ ಪೂಜಾರಿ ಈ ಕಾಮಗಾರಿಯ ಟೆಂಡರ್ ಪಡೆದು ರಸ್ತೆ ನಿರ್ಮಿಸಿದವರು.ಮೂರು ತಿಂಗಳ ಕಾಮಗಾರಿಯಲ್ಲಿ ರಸ್ತೆ ನಿರ್ಮಾಣ ಪೂರ್ತಿಗೊಳಿಸಲಾಗಿದೆ.ಆಲೆಟ್ಟಿಯಲ್ಲಿರುವ ಸೇತುವೆಯೊಂದನ್ನು ಎತ್ತರಿಸಿ ನಿರ್ಮಿಸಲು ಬಾಕಿಯಿದೆ. ಕರ್ನಾಟಕ ಸರಕಾರ 90ಲಕ್ಷ ರೂ.ಗಳನ್ನು ಈ ಸೇತುವೆ ಎತ್ತರಿಸಿ ನಿರ್ಮಿಸಲು ನಿಧಿ ಮೀಸಲಿರಿಸಿದೆ.

ಪ್ರಸ್ತುತ ಈ ಸೇತುವೆ ಕೇವಲ 2.5 ಮೀಟರ್ ಮಾತ್ರ ಅಗಲವಿದ್ದು,ಇನ್ನಷ್ಟು ಅಗಲೀಕರಿಸಿ ಎತ್ತರಗೊಳಿಸುವ ಅಗತ್ಯವಿದೆ.

ಈ ರಸ್ತೆ ಕಾಮಗಾರಿ ಪೂರ್ತಿಯಾಗಿರುವುದು ಗಡಿ ಪ್ರದೇಶದ ನೂರಾರು ಕುಟುಂಬಗಳಿಗೆ ನವ ಚೈತನ್ಯಕ್ಕೆ ಕಾರಣವಾಗಿದೆ.ಕೇರಳದ ಬಂದಡ್ಕ ಗಡಿ ಪ್ರದೇಶದಿಂದ ವಿದ್ಯಾಭ್ಯಾಸ ಹಾಗೂ ವ್ಯಾಪಾರಗಳಿಗೆ ಸುಳ್ಯ,ಮಡಿಕೇರಿ,ಮೈಸೂರು,ಬೆಂಗಳೂರಿಗೆ ತೆರಳುವವರಿಗೆ ಈ ರಸ್ತೆ ತುಂಬಾ ಪ್ರಯೋಜನಕಾರಿಯಾಗಿ ಮಾರ್ಪಡಲಿದೆ.ಕರ್ನಾಟಕದ ವಿವಿಧೆಡೆಗಳಿಂದ ಶಬರಿಮಲೆ ಸಹಿತ ಇತರ ಯಾತ್ರಾ ಕೇಂದ್ರಗಳಿಗೆ ತೆರಳುವವರಿಗೂ ಈ ರಸ್ತೆ ಸಹಕಾರಿಯಾಗಲಿದೆ.ಅಂತರ್ ರಾಜ್ಯ ಬಸ್ ಸಂಚಾರವನ್ನೂ ಶೀಘ್ರ ಒದಗಿಸಿದರೆ ಹೆಚ್ಚು ಪರಿಣಾಮಕಾರಿಯಾಗಲಿದೆ.

ಕೇರಳದ ಕನ್ನಾಡಿತೋಡಿನಿಂದ ಸುಳ್ಯ ತಲಪಲು ಈ ಹಿಂದೆ 15ಕಿ.ಮೀಗಳ ಸುತ್ತು ಬಳಸಿನ ದಾರಿ ಬಳಸಲಾಗುತ್ತಿತ್ತು.ಆದರೆ ಈ ನೂತನ ರಸ್ತೆ ನಿರ್ಮಾಣಗೊಂಡಲ್ಲಿಗೆ ಈ ದೂರ ಅರ್ಧದಷ್ಟು ಕಡಿತಗೊಂಡಿದೆ.ನೂತನ ರಸ್ತೆ 7.75 ಮೀಟರ್ ಅಗಲವಿದ್ದು,ಸಂಚಾರ ಯೋಗ್ಯವಾಗಿದೆ.ಈ ರಸ್ತೆ ನಿರ್ಮಾಣಕ್ಕೆ ಕರ್ನಾಟಕ ಸರಕಾರ ಮುತುವರ್ಜಿ ವಹಿಸಿತ್ತು.

ರಸ್ತೆ ನಿರ್ಮಿಸಲು ಕರ್ನಾಟಕ ಅರಣ್ಯ ಇಲಾಖೆ ಅಡ್ಡಿಪಡಿಸಿತ್ತು.ಕೇರಳಕ್ಕೆ ರಸ್ತೆ ನಿರ್ಮಿಸಿದಲ್ಲಿ ಅಕ್ರಮ ಮರ ಸಾಗಾಟ ವ್ಯಾಪಕಗೊಳ್ಳುವುದೆಂದು ಅರಣ್ಯ ಇಲಾಖೆ ವಾದ ಮಂಡಿಸಿತ್ತು.ಕರ್ನಾಟಕ ಲೋಕೋಪಯೋಗಿ ಇಲಾಖೆ ಮತ್ತು ಅರಣ್ಯ ಇಲಾಖೆಯ ಮಧ್ಯೆ ಈ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿ ದೂರುಗಳಿದ್ದವು.ಬಳಿಕ ಅರಣ್ಯ ಇಲಾಖೆ 1.35 ಹೆಕ್ಟೆರ್ ಅರಣ್ಯದ ಮರಗಳನ್ನು ಕಡಿದು ರಸ್ತೆ ನಿರ್ಮಿಸಲು ಒಪ್ಪಿ ಕೊನೆಗೂ ಈ ರಸ್ತೆ ನಿರ್ಮಾಣ ಸಾಕಾರಗೊಂಡಿದೆ.ಇದಕ್ಕಾಗಿ ಸುಮಾರು 104 ಮರಗಳನ್ನು ಕಡಿಯ ಬೇಕಾಗಿ ಬಂತೆಂದು ಅರಣ್ಯ ಇಲಾಖೆ ತಿಳಿಸಿದೆ.ಇದಕ್ಕೆ ಬದಲಾಗಿ ಸುಳ್ಯದ ಅಮರ ಪಡ್ನೂರು ಗ್ರಾಮದಲ್ಲಿ ೩.೩೦ ಹೆಕ್ಟೆರ್ ಭೂಮಿಯನ್ನು ಕರ್ನಾಟಕ ರೆವೆನ್ಯೂ ಇಲಾಖೆ ಅರಣ್ಯ ಇಲಾಖೆಯ ಸುಪರ್ಧಿಗೆ ಒಪ್ಪಿಸಿದೆ.ಅರಣ್ಯ ಇಲಾಖೆ ಕಡಿದುರುಳಿಸಿದ ಮರಗಳ ಬದಲಾಗಿ ಇಲ್ಲಿ ಮತ್ತೆ ಮರ ಬೆಳೆಸುವ ಯೋಜನೆ ಇರಿಸಿಕೊಂಡಿದೆ.ಸುಳ್ಯ ಭಾಗದಿಂದ ಕೋಲ್ಚಾರ್ ತನಕ ಈ ಹಿಂದೆಯೇ ರಸ್ತೆ ನಿರ್ಮಾಣ ಪೂರ್ತಿಯಾಗಿತ್ತು.ಇದೀಗ ಕೇರಳ ಭಾಗದಿಂದಲೂ ಕೋಲ್ಚಾರ್ ತನಕ ರಸ್ತೆ ನಿರ್ಮಿಸಲಾಗಿದೆ.

1960 ರ ಸಂದರ್ಭದಲ್ಲಿ ಕೇರಳದಲ್ಲಿ ಆಹಾರ ವಸ್ತುಗಳಿಗೆ ತೀವ್ರ ಕೊರತೆ ಬಂದಾಗ ಕೇರಳದಿಂದ ಜನ ಸಾಮಾನ್ಯರು ಗಡಿ ಪ್ರದೇಶದ ಮೂಲಕ ಕರ್ನಾಟಕದತ್ತ ನುಸುಳಿ ಅಕ್ಕಿ ಸಹಿತ ಅಗತ್ಯ ವಸ್ತುಗಳನ್ನು ಖರೀದಿಸುತ್ತಿದ್ದರು.ಅಂದಿನಿಂದ ಜನರು ಬಳಸುತ್ತಿದ್ದ ಕಾಲು ದಾರಿಯನ್ನೇ ಇದೀಗ ರಸ್ತೆಯಾಗಿ ಪರಿವರ್ತಿಸಲಾಗಿರುವುದು ವಿಶೇಷತೆಯಾಗಿದೆ.ಟಿಪ್ಪು ಸುಲ್ತಾನ್ ಮೈಸೂರಿನ ಅರಸನಾಗಿದ್ದ ವೇಳೆ ಅರಬ್ಬೀ ವ್ಯಾಪಾರಿಗಳಿಂದ ಅಗತ್ಯ ವಸ್ತುಗಳನ್ನು ಖರೀದಿಸಿ ಕುದುರೆಗಳ ಮೂಲಕ ಬೇಕಲದ ಕಡಲ ತೀರದಿಂದ ಚಂದ್ರಗಿರಿ ನದಿಯ ಮೂಲಕ ಕುಂಡಂಗುಳಿ,ಬಂದಡ್ಕ ಮೂಲಕ ಸುಳ್ಯ ತಲಪಿ ಸಾಗಾಟ ನಡೆಸಿದ ರಸ್ತೆ ಇದೀಗ ನಿರ್ಮಿಸಲಾದ ರಸ್ತೆ ಇದ್ದಲ್ಲಿ ಎಮದು ಇತಿಹಾಸ ತಿಳಿಸುತ್ತದೆ.

ಕೇರಳ ಮತ್ತು ಕರ್ನಾಟಕ ಗಡಿ ಪ್ರದೇಶಗಳ ಜನ ಸಾಮಾನ್ಯರ ಎಷ್ಟೋ ಕಾಲದ ಹೋರಾಟದ ಫಲವಾಗಿ ಈ ರಸ್ತೆ ಸಾಕಾರವಾಗಿದೆ.ಎಂ.ನೀಲಕಂಠನ್ ನಾಯರ್,ಪುರುಷೋತ್ತಮ ಪ್ರೀತಂ ಕುಮಾರ್ ರೈ,ಅಚ್ಯುತ ಗೌಡ ಮೊದಲಾದವರ ಕ್ರೀಯಾ ಸಮಿತಿಯ ಸತತ ಹೋರಾಟದ ಫಲವಾಗಿ ಕೊನೆಗೂ ಅಂತರ್ ರಾಜ್ಯ ಕಡಿಮೆ ದೂರದ ರಸ್ತೆ ನಿರ್ಮಾಣ ಪೂರ್ತಿಯಾಗಿರುವುದು ಎರಡೂ ರಾಜ್ಯಗಳಿಗೂ ಹೊಸ ಶಖೆಯ ಆರಂಭಕ್ಕೆ ಮುನ್ನುಡಿಯೆಂದು ಭಾವಿಸಲಾಗಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English