ಕುಂಬಳೆ: ರಾಜ್ಯದಲ್ಲಿ ಅನಿವಾರ್ಯ ರಾಜಕೀಯ ಬದಲಾವಣೆಗೆ ಕಾಲ ಸನ್ನಿಹಿತವಾಗಿದ್ದು, ಬಿಜೆಪಿ ಅಭ್ಯರ್ಥಿಗಳು ಗೆಲ್ಲುವ ಅನುಕೂಲಕರ ವಾತಾವರಣ ಹಿಂದಿಗಿಂತ ಇಂದು ಅತಿ ಹೆಚ್ಚಿದೆಯೆಂದು ಮಲೆಯಾಳಂ ಚಲನಚಿತ್ರ ತಾರೆ, ಭರತ್ ಸುರೇಶ್ ಗೋಪಿ ಅಭಿಪ್ರಾಯ ವ್ಯಕ್ತಪಡಿಸಿದರು.
ವಿಧಾನ ಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸೋಮವಾರ ಕುಂಬಳೆ ಸಿಟಿ ಹಾಲ್ ಸಭಾಂಗಣದಲ್ಲಿ ಆಯೋಜಿಸಲಾದ ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ಎನ್‌ಡಿಎ ಬೃಹತ್ ಚುನಾವಣಾ ಪ್ರಚಾರ ಸಭೆಯ ಕಾರ್ಯಕರ್ತರ ಸಮಾವೇಶದಲ್ಲಿ ಅವರು ಮಾತನಾಡುತ್ತಿದ್ದರು.
ರಾಜ್ಯದ ಕಳೆದ 60 ವರ್ಷಗಳ ಎಡ,ಬಲ ರಂಗಗಳ ಸ್ವಾರ್ಥ ಲಾಲಸೆಯ ಆಡಳಿತದಿಂದ ರಾಜ್ಯ ಕಂಗೆಟ್ಟು ಅಭಿವೃದ್ದಿಯಲ್ಲಿ ತೀವ್ರ ಹಿನ್ನಡೆ ಕಂಡಿದೆ.ಜನ ಸಾಮಾನ್ಯರು ಜೀವನ ನಿರ್ವಹಣೆ,ಉದ್ಯೋಗ ಸಹಿತ ಪ್ರಾಥಮಿಕ ಸೌಕರ್ಯಗಳಿಂದ ವಂಚಿತರಾಗಿ, ಗಲಭೆ, ಗದ್ದಲಗಳ ಬದುಕನ್ನು ಕಾಣುವಂತಾದುದು ದುರ್ದೈವವಾಗಿದ್ದು,ಈ ಬಾರಿ ಕನಿಷ್ಠ ಐದು ಮಂದಿ ಬಿಜೆಪಿ ಶಾಸಕರನ್ನು ಗೆಲ್ಲಿಸುವ ಮೂಲಕ ಅಭಿವೃದ್ದಿಯ ಹೊಸ ಶಕೆಗೆ ನಾಂದಿ ನೀಡಬೇಕಿದೆಯೆಂದು ಅವರು ತಿಳಿಸಿದರು.
ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೇರಿದ ಬಳಿಕ ರಾಷ್ಟ್ರ ವ್ಯಾಪಿಯಾಗಿ ಅಭಿವೃದ್ದಿ ಸಹಿತ ಸಮಗ್ರ ಬದಲಾವಣೆಯ ನೂತನ ಸಂಕ್ರಾಂತಿಯ ಬೆಳಕು ತೋರಿಬಂದಿದೆ.ಆದರೆ ಕೇರಳದಲ್ಲಿ ಬಿಜೆಪಿಯನ್ನು ಪ್ರತಿನಿಧಿಸುವ ಸಂಸದನಾಗಲಿ,ಶಾಸಕನಾಗಲಿ ಇಲ್ಲದಿರುವುದರಿಂದ ವಿವಿಧ ಅಭಿವೃದ್ದಿ ಯೋಜನೆಗಳು ದೊರಕದ ಕ್ಲಿಷ್ಟ ಸನ್ನಿವೇಶ ನಿರ್ಮಾಣವಾಗಿದ್ದು,ಇದನ್ನು ತೊಲಗಿಸುವಲ್ಲಿ ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕನೂ ಅಮೂಲ್ಯ ಮತಗಳನ್ನು ಬಿಜೆಪಿಗೆ ನೀಡುವ ಮೂಲಕ ಅಭಿವೃದ್ದಿಯ ವಕ್ತಾರರಾಗಬೇಕೆಂದು ಅಭಿಪ್ರಾಯಪಟ್ಟರು.
ಮಂಜೇಶ್ವರ ಮಂಡಲ ಬಿಜೆಪಿ ಅಧ್ಯಕ್ಷ ಹರಿಶ್ಚಂದ್ರ ಮಂಜೇಶ್ವರ ಅಧ್ಯಕ್ಷತೆ ವಹಿಸಿದ ಸಭೆಯನ್ನು ಕಾರ್ಕಳ ಶಾಸಕ ಸುನಿಲ್ ಕುಮಾರ್ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ,ಕರ್ನಾಟಕದೊಡನೆ ನಿಕಟ ಸಂಪರ್ಕ ಹೊಂದಿರುವ ಗಡಿ ಪ್ರದೇಶ ಮಂಜೇಶ್ವರದಿಂದ ಕೇರಳದ ಬಿಜೆಪಿಯ ಹೊಸ ಶಖೆ ಪ್ರಾರಂಭಗೊಳ್ಳಬೇಕು.ಕರ್ನಾಟಕದ ಮಹಾನಗರಗಳ ಸಹಿತ ವಿವಿಧೆಡೆಗಳ ಆಸ್ಪತ್ರೆಗಳು,ಕೈಗಾರಿಕೆಗಳಲ್ಲಿ ದುಡಿಯುವ ಬಹುತೇಕ ಕೇರಳದ ಉದ್ಯೋಗಿಗಳು ಕೇರಳದಲ್ಲಿ ಉದ್ಯೋಗವಕಾಶ ಲಭ್ಯವಿದ್ದರೆ ಕರ್ನಾಟಕದಲ್ಲಿ ದುಡಿಯುವ ಅಗತ್ಯವಿರುತ್ತಿತ್ತೇ ಎಂದು ಪ್ರಶ್ನಿಸಿದರು.ಬಹುಕಾಲದಿಂದ ಕೇರಳವನ್ನಾಳಿದ ಕಾಂಗ್ರೆಸ್ಸ್ ಹಾಗೂ ಕಮ್ಯುನಿಸ್ಟ್ ಪಕ್ಷಗಳ ಸ್ವ ಹಿತಾಸಕ್ತಿ ಮತ್ತು ಭ್ರಷ್ಟಾಚಾರದ ಆಡಳಿತದ ಕಾರಣ ತೀವ್ರ ಹಿಂದುಳಿದಿರುವ ರಾಜ್ಯವನ್ನು ಬಲಪಡಿಸಲು ಬಿಜೆಪಿಯಿಂದ ಮಾತ್ರ ಸಾಧ್ಯ.ಈ ನಿಟ್ಟಿನಲ್ಲಿ ಮತದಾರರು ವ್ಯವಸ್ಥಿತ ಕಾರ್ಯಸೂಚಿಯ ಮೂಲಕ ಬಿಜೆಪಿಯ ಗೆಲುವಿಗೆ ಎಲ್ಲಾ ಅಸಂತೃಪ್ತಿಯನ್ನು ಬದಿಗೊತ್ತಿ ಪ್ರಯತ್ನಿಸಬೇಕೆಂದು ಕರೆ ನೀಡಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಅಡ್ವ.ಶ್ರೀಕಾಂತ್,ರಾಜ್ಯ ಸಮಿತಿ ಸದಸ್ಯ ಸುರೇಶ್ ಕುಮಾರ್ ಶೆಟ್ಟಿ ಪೂಕಟ್ಟೆ,ಕರ್ನಾಟಕ ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ,ಪ್ರಮೀಳಾ ಸಿ.ನಾಯ್ಕ್,ಬಿಜೆಪಿ ಮಂಜೇಶ್ವರ ಕ್ಷೇತ್ರದ ಅಭ್ಯರ್ಥಿ,ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೆ.ಸುರೇಂದ್ರನ್,ಬಿಡಿಜೆಎಸ್ ಜಿಲ್ಲಾಧ್ಯಕ್ಷ ಕೆ.ನಾರಾಯಣನ್,ಮುಖಂಡರಾದ ಬಾಲಕೃಷ್ಣ ಶೆಟ್ಟಿ,ಮಣಿಕಂಠ ರೈ,ಕೋಳಾರು ಸತೀಶ್ಚಂದ್ರ ಭಂಡಾರಿ,ಟಿ.ಆರ್.ಕೆ ಭಟ್, ವಲ್ಸರಾಜ್,ವಿಜಯ ರೈ,ಸರೋಜ ಆರ್.ಬಲ್ಲಾಳ್,ರೂಪವಾಣಿ ಆರ್.ಭಟ್ ಮೊದಲಾದವರು ಉಪಸ್ಥಿತರಿದ್ದರು.ಬಾಲಕೃಷ್ಣ ಶೆಟ್ಟಿ ಪ್ರಸ್ತಾವಿಕವಾಗಿ ಮಾತನಾಡಿದರು.ರಾಜ್ಯ ಬಿಜೆಪಿ ಸದಸ್ಯ ಸುರೇಶ್ ಕುಮಾರ್ ಶೆಟ್ಟಿ ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ಎನ್‌ಡಿಎ ಚುನಾವಣಾ ಪ್ರಚಾರ ಸಮಿತಿಯ 1008 ಸದಸ್ಯರ ಪದಾಧಿಕಾರಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದರು. ಮುರಳೀಧರ ಯಾದವ್ ನಾಯ್ಕಾಪು ಸ್ವಾಗತಿಸಿ,ಎ.ಕೆ.ಕಯ್ಯಾರು ವಂದಿಸಿದರು.ನಿರಂಜನ ಆಚಾರ್ಯ ನೀರ್ಚಾಲು ಪ್ರಾರ್ಥನೆ ಹಾಡಿದರು.
Click this button or press Ctrl+G to toggle between Kannada and English