ಕಾರ್ಯಕರ್ತರು ಸಂಘಟಿತರಾಗಿ ಐಕ್ಯರಂಗದ ವಿಜಯಕ್ಕೆ ಮುನ್ನುಡಿ ಬರೆಯಬೇಕು : ಯು.ಟಿ ಖಾದರ್

9:28 PM, Tuesday, April 19th, 2016
Share
1 Star2 Stars3 Stars4 Stars5 Stars
(5 rating, 6 votes)
Loading...
Kerala Khader election campaign

ಉಪ್ಪಳ: ಕಾಸರಗೋಡು ಅಭಿವೃದ್ದಿಗೆ ಹೊಸ ಭಾಷ್ಯ ಬರೆದ ಐಕ್ಯರಂಗ ಮತ್ತೆ ಅಧಿಕಾರಕ್ಕೇರಲಿದೆ. ಕಳೆದ ಬಾರಿ ಚುನಾವಣೆಯಲ್ಲಿ ಜಿಲ್ಲೆಯ ಎರಡು ಕ್ಷೇತ್ರಗಳಲ್ಲಿ ಗೆದ್ದ ಐಕ್ಯರಂಗ ಈ ಬಾರಿ ಐದು ಕ್ಷೇತ್ರಗಳನ್ನೂ ತನ್ನದಾಗಿಸಿಕೊಳ್ಳಲಿದೆ ಎಂದು ಮಾಜಿ ಸಚಿವ, ಹಿರಿಯ ಮುಸ್ಲಿಂ ಲೀಗ್ ನೇತಾರ ಚೆರ್ಕಳಂ ಅಬ್ದುಲ್ಲಾ ಹೇಳಿದರು.
ಉಪ್ಪಳ ಮರಿಕೆ ಹಾಲ್ ನಲ್ಲಿ ಮಂಗಳವಾರ ಸಂಜೆ ನಡೆದ ಐಕ್ಯರಂಗ ಸಮಾವೇಶದಲ್ಲಿ ಅವರು ಮಾತನಾಡುತ್ತಿದ್ದರು.

ಇತ್ತೀಚೆಗೆ ನಡೆದ ಸ್ಥಳೀಯ ಚುನಾವಣೆಯಲ್ಲಿ ಜಿಲ್ಲಾ ಪಂಚಾಯತ್ ಐಕ್ಯರಂಗದ ಪಾಲಾಗಿದೆ. ಕ್ಷೇತ್ರದ ಎಲ್ಲಕಾರ್ಯಕರ್ತರು ಅವಿರತ ಶ್ರಮಿಸಿ ಐಕ್ಯರಂಗವನ್ನು ಅಧಿಕಾರಕ್ಕೆ ತರಬೇಕಾಗಿದೆ ಎಂದು ವಿನಂತಿಸಿದರು.

ನ್ಯಾಯವಾದಿ .ಕೆ ಶ್ರೀಧರನ್ ನಾಯರ್ ಮಾತನಾಡಿ ಮಂಜೇಶ್ವರ ವಿಧಾನ ಸಭಾಕ್ಷೇತ್ರ ಐಕ್ಯರಂಗದ ರಾಜಕೀಯ ಶ್ರದ್ದಾಕೇಂದ್ರವಿದ್ದಂತೆ, ಮತಸೌಹಾರ್ದತೆ ಹಾಗೂ ಜಾತ್ಯಾತೀತ ನೆಲೆಗಟ್ಟಿನ ನೆಲವಾಗಿದೆ, ಇಲ್ಲಿ ಮತ ವಿಕೇಂದ್ರಿಕರಣವನ್ನು ಬಗ್ಗು ಬಡಿದು ಐಕ್ಯರಂಗವನ್ನು ವಿಜಯಿಗೊಳಿಸಬೇಕಾಗಿದೆ ಎಂದು ಹೇಳಿದರು. ಕ್ಷೇತ್ರದಲ್ಲಿ ಸುಮಾರು 877 ಕೋಟಿ ರೂ.ಗಳ ಅಭಿವೃದ್ದಿ ಯೋಜನೆಗಳನ್ನು ರೂಪಿಸಿ ಜನದನಿಯ ನಾಯಕನಾಗಿರುವ ಪಿ.ಬಿ ಅಬ್ದುಲ್‌ರಜಾಕ್‌ರವರನ್ನು ಆರಿಸಿ ತರಬೇಕೆಂದು ಹೇಳಿದರು.ಮಂಜೇಶ್ವರ ಕ್ಷೇತ್ರದಲ್ಲಿ 16000 ಕ್ಕೂ ಹೆಚ್ಚು ಅಂತರದಿಂದ ಗೆದ್ದು ಕೋಮುವಾದ ಬಿಜೆಪಿಗೆ, ಓಲೈಕೆ ರಾಜಕೀಯ ಪಕ್ಷವಾದ ಎಡರಂಗಕ್ಕೆ ಇಲ್ಲಿ ಅವಕಾಶವಿಲ್ಲವೆಂದು ತೋರಿಸಬೇಕಿದೆ ಎಂದರು. ಎಡರಂಗವು ಐಕ್ಯರಂಗದ ಅಭಿವೃದ್ದಿ ಪರ ನಡೆಯ ಮುಂದೆ ಜಯಿಸುವುದು ಅಸಾಧ್ಯದ ಮಾತು ಎಂದು ಹೇಳಿದರು. ಕಾಸರಗೋಡು ವೈದ್ಯಕೀಯ ಕಾಲೇಜು, ಮಂಜೇಶ್ವರ ಬಂದರು ಯೋಜನೆ, ನೀರು, ರಸ್ತೆ ,ವಿದ್ಯುತ್ ನಂತಹ ಸಮಗ್ರ ಅಭಿವೃದ್ದಿಯನ್ನು ನೀಡಿದ ಪಕ್ಷ ಐಕ್ಯರಂಗವೆಂದರು.

ಕರ್ನಾಟಕದ ಆರೋಗ್ಯ ಸಚಿವ ಯು.ಟಿ ಖಾದರ್ ಮಾತನಾಡಿ ಪಿ.ಬಿ ಅಬ್ದುಲ್‌ರಜಾಕ್ ಕಳೆದ ಐದು ವರ್ಷದಲ್ಲಿಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಅವಿರತ ಶ್ರಮಿಸಿದ್ದಾರೆ, ಇವರ ಗೆಲುವಿಗೆ ಕಾರ್ಯಕರ್ತರು ಶ್ರಮಿಸುವುದು ಅತ್ಯವಶ್ಯ, ಬೂತ್ ಮಟ್ಟದಲ್ಲಿ ಕಾರ್ಯಕರ್ತರು ಸಂಘಟಿತರಾಗಿ ಐಕ್ಯರಂಗದ ವಿಜಯಕ್ಕೆ ಮುನ್ನುಡಿ ಬರೆಯಬೇಕೆಂದರು. ಪ್ರತಿಪಕ್ಷಗಳ ನಡೆ ಕೇವಲ ದಸರಾ ಗೊಂಬೆಗಳಂತೆ, ಚುನಾವಣೆ ಸಮೀಪಿಸಿದಾಗ ಮತದಾರರ ನೆನಪಾಗಿ ಹೊಸ ಆಶ್ವಾಸನೆಗಳೊಂದಿಗೆ ಜನರನ್ನು ಸಮೀಪಿಸುತ್ತಾರೆ ಎಂದರು.

ಕಾಸರಗೋಡು ಜಿಲ್ಲೆಯಲ್ಲಿ ಕಮ್ಯುನಿಸ್ಟರ ಕುತಂತ್ರದಿಂದ ಪ್ರತಿಭಾ ಪಲಾಯನವಾಗುತ್ತಿದೆ, ಬಹಳಷ್ಟು ಮಂದಿ ಹೊರರಾಜ್ಯ ಹಾಗೂ ಹೊರ ದೇಶಗಳನ್ನು ಅವಲಂಬಿಸುವ ಪರಿಸ್ಥಿತಿ ಕಮ್ಯುನಿಸ್ಟ್ ರಾಜಕಾರಣದಿಂದ ಒದಗಿದೆ ಎಂದು ಅವರು ಹೇಳಿದರು, ಮಂಜೇಶ್ವರ ಕ್ಷೇತ್ರದಲ್ಲಿ ಬಿಜೆಪಿ ಗೆಲ್ಲುವ ಕನಸು ಕೇವಲ ಹಗಲುಗನಸು ಎಂದು ಕುಟುಕಿದರು. ಕೇಂದ್ರ ಸರಕಾರದ ಎರಡು ವರ್ಷದ ಆಡಳಿತದಿಂದ ದೇಶಕ್ಕೆ ಏನೂ ಸಿಗಲಿಲ್ಲ, ದೇಶದ ಪ್ರಧಾನಿ ಸಮಸ್ಯೆಗಳ ಬಗ್ಗೆ ಗಮನ ಹರಿಸದೆ, ವಿಶ್ವನಾಯಕನಾಗಲು ಹೊರಟಿರುವುದು ಹಾಸ್ಯಾಸ್ಪದ ವಿಷಯವಾಗಿದೆ ಎಂದರು. ಯುಪಿಎ ಸರಕಾರವಿದ್ದ ಸಂದರ್ಭ ದೇಶ ಶೈಕ್ಷಣಿಕವಾಗಿ, ಬೌದ್ದಿಕವಾಗಿ ಅಭಿವೃದ್ದಿ ಪಥದಲ್ಲಿ ಮುಂದುವರಿಯುತ್ತಿತ್ತು ಎಂದು ಹೇಳಿದರು.

ಸಮಾವೇಶದಲ್ಲಿಕಾಸರಗೋಡು ಮಾಜಿ ಶಾಸಕ ಸಿ.ಟಿ ಅಹಮ್ಮದಾಲಿ, ಸುಬ್ಬಯ್ಯರೈ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ ಬಶೀರ್, ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ,ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಎ.ಕೆ.ಎಂ ಅಶ್ರಫ್, ಎ.ಎ ಅರಿಪ್ಪಾಡಿ, ಅಬ್ದುಲ್‌ರಹಿಮಾನ್,ಜಿಲ್ಲಾ ಕಾಂಗ್ರೆಸ್ಸ್ ಅಧ್ಯಕ್ಷ ಅಡ್ವ.ಎ.ಶ್ರೀಧರನ್,ಪ್ರಧಾನ ಕಾರ್ಯದರ್ಶಿ ಕೇಶವ ಪ್ರಸಾದ ನಾಣಿತ್ತಿಲು,ಸುಂದರ ಆರಿಕ್ಕಾಡಿ,ಸೋಮಶೇಖರ ಜೆ.ಎಸ್ ಮುಂತಾದವರು ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English