ಮಂಗಳೂರು: ದಕ್ಷಿಣ ಕನ್ನಡ ನೂತನ ಡಿ.ಸಿ ಯಾಗಿ ಚೆನ್ನಪ್ಪಗೌಡ ಇಂದು ಪ್ರಭಾರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮರಿಂದ ಅಧಿಕಾರ ವಹಿಸಿಕೊಂಡರು.
1982ರಲ್ಲಿ ಭಾರತ ಸೇವಾ ಆಯೋಗದಿಂದ ಅಧಿಕಾರ ವಹಿಸಿ ಮೊದಲ ಬಾರಿಗೆ ಭದಾವತಿಯಲ್ಲಿ ಮುನಿಸಿಪಲ್ ಕಮಿಷನರಾಗಿ ನೇಮಕಗೊಂಡು ನಂತರ ಬೆಂಗಳೂರು, ತುಮಕೂರಿನಲ್ಲಿ ಕಮಿಷನರ್ ಆಗಿ, ಮೈಸೂರು ಜಿಲ್ಲಾ ಪಂಚಾಯತ್ನಲ್ಲಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ, ರಾಮನಗರದಲ್ಲಿ ವಿಶೇಷ ಅಧಿಕಾರಿಯಾಗಿ ಮಂಗಳೂರಿನಲ್ಲಿ ಮೂಡ ಕಮಿಷನರ್ ಆಗಿ ಸೇವೆ ಸಲ್ಲಿಸಿದ್ದಾರೆ.
ಮೈಸೂರು, ಉತ್ತರ ಕನ್ನಡ, ರಾಮನಗರ ಹಾಗೂ ಚಿಕ್ಕಮಗಳೂರುಗಳಲ್ಲಿ ಜಿಲ್ಲಾಧಿಕಾರಿ ಸೇವೆ ಸಲ್ಲಿಸಿ ಜನಮೆಚ್ಚಿದ ಅಧಿಕಾರಿ ಎನಿಸಿಕೊಂಡಿದ್ದಾರೆ. ಮೈಸೂರಿನಲ್ಲಿ ಅಚ್ಚುಕಟ್ಟಾಗಿ ದಸರಾ ನಿರ್ವಹಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಉತ್ತರಕನ್ನಡದಲ್ಲಿ ಕಾರವಾರದಿಂದ ಗೋವಾಕ್ಕೆ ಅನಧಿಕೃತವಾಗಿ ಸಾಗಾಟ ವಾಗುತ್ತಿದ್ದ ಮರಳು ದಂಧೆಯನ್ನು ಹತೋಟಿಗೆ ತಂದು, ಉತ್ತರ ಕನ್ನಡದಲ್ಲಿ ಆದಿವಾಸಿಗಳಿಗಾಗಿ ನೀರಾವರಿ, ಬೆಳಕು, ಸೋಲಾರ್ ವ್ಯವಸ್ಥೆಗಳನ್ನು ಅಳವಡಿಸಿದ್ದಾರೆ. ಚಿಕ್ಕಮಗಳೂರಿನಲ್ಲಿ ರಸ್ತೆಯನ್ನು ಅಗಲೀಕರಣ ಮಾಡುವಲ್ಲಿ ಚೆನ್ನಪ್ಪ್ಪ ಗೌಡರು ಪ್ರಧಾನ ಪಾತ್ರ ವಹಿಸಿದ್ದಾರೆ. ಚಿಕ್ಕಮಗಳೂರಿನ ಎಂ.ಜಿ ರಸ್ತೆ, ರತ್ನಗಿರಿ ರಸ್ತೆ ಅಭಿವೃದ್ಧಿ, ಬಾಬಾಬುಡನ್ ಗಿರಿಯನ್ನು ಪ್ಲಾಸ್ಟಿಕ್ ರಹಿತ ಪ್ರದೇಶವನ್ನಾಗಿ ಮಾಡುವಲ್ಲಿ ಶ್ರಮವಹಿಸಿ ಅದರ ಸುತ್ತಮುತ್ತಲಿನ 30 ಕಿ,ಮೀ ವರೆಗೆ ಪ್ಲಾಸ್ಟಿಕ್ ನಿಷೇಧಗೊಳಿಸಿದ್ದಾರೆ. ಬಾಬಾಬುಡನ್ ಗಿರಿಯಲ್ಲಿ ಬಸ್, ಕಾರುಗಳಿಗೆ ಟೋಲ್ ಗೇಟ್ಗಳ ಮೂಲಕ ಪಾರ್ಕಿಂಗ್ ಶುಲ್ಕ ವಿಧಿಸಿ ತಪಾಸಣೆಯ ಮೇಲೆ ಪ್ಲಾಸ್ಟಿಕ್ ಒತ್ತೊಯ್ಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರು. ಶೃಂಗೇರಿಯಲ್ಲಿ ನಕ್ಸಲ್ ನಿಗ್ರಹಕ್ಕೂ ಬಿಗು ಕ್ರಮ ಕೈಗೋಡಿದ್ದಾರೆ.
ಮಂಗಳೂರಿನಲ್ಲಿ 1994ರಲ್ಲಿ ನಗರಾಭಿವೃದ್ದಿ ಕಮಿಷನರಾಗಿ ಸೇವೆ ಸಲ್ಲಿಸಿದ ಅನುಭವ ಇರುವ ಚೆನ್ನಪ್ಪ್ಪ ಗೌಡರು ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೆಗಾಮೀಡಿಯಾ ನ್ಯೂಸ್ ನೊಂದಿಗೆ ಮಾತನಾಡಿ ಮಂಗಳೂರಿನ ರಸ್ತೆಯ ಅಗಲೀಕರಣದ ಕೆಲಸ ಹಾಗೂ ನಗರದ ಟ್ರಾಫಿಕ್ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸುವ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ನಗರದ ಜನರಿಗೆ ಇರುವ ಸವಲತ್ತುಗಳು ಗ್ರಾಮೀಣ ಜನರಿಗೆ ಸುಲಭವಾಗಿ ಸಿಗುವಂತೆ ಪ್ರಯತ್ನಿಸುವುದಾಗಿ ತಿಳಿಸಿದರು. ಬಿಲ್ಡರ್ಸ್ ಮತ್ತು ಸರಕಾರಿ ಜಾಗ ಅತಿಕ್ರಮಣ ಮಾಡುವವರನ್ನು ಕಟ್ಟುನಿಟ್ಟಾಗಿ ಗಮನಿಸುವುದಾಗಿ ತಿಳಿಸಿದರು.
ನಾಳೆ ಚೆನ್ನಪ್ಪ ಗೌಡರು ಅಧಿಕೃತವಾಗಿ ಅಧಿಕಾರ ವಹಿಸಲಿದ್ದು ನಿರ್ಗಮಿಸುವ ಜಿಲ್ಲಾಧಿಕಾರಿ ಸುಬೋಧ್ ಯಾದವರಿಗೆ ಬೀಳ್ಕೊಡುಗೆ ಸಮಾರಂಭ ನಡೆಯಲಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಭಾಕರ ಶರ್ಮ ತಿಳಿಸಿದ್ದಾರೆ.
Click this button or press Ctrl+G to toggle between Kannada and English