ಬಾಳಿಗಾ ಕೊಲೆ ಪ್ರಕರಣದಲ್ಲಿ ಜಿ.ಎಸ್‌.ಬಿ. ಸಮಾಜ ಮತ್ತು ದೇವಳದ ಯಾವುದೇ ಪಾತ್ರವಿಲ್ಲ

4:56 PM, Monday, May 9th, 2016
Share
1 Star2 Stars3 Stars4 Stars5 Stars
(5 rating, 6 votes)
Loading...
gsb

ಮಂಗಳೂರು: ಕಳೆದ ಮಾ. 21ರಂದು ಕೊಲೆಯಾದ ಮಾಹಿತಿ ಹಕ್ಕು ಕಾರ್ಯಕರ್ತ ವಿನಾಯಕ ಬಾಳಿಗಾ ಪ್ರಕರಣದಲ್ಲಿ ಕೆಲವೊಂದು ಸ್ಥಾಪಿತ ಹಿತಾಸಕ್ತಿಗಳು ಅನಾವಶ್ಯಕವಾಗಿ ಜಿ.ಎಸ್‌.ಬಿ. ಸಮಾಜದ ಶ್ರೀ ದೇವಳದ ಹೆಸರು ಹಾಳು ಮಾಡುವ ಉದ್ದೇಶದಿಂದ ಪತ್ರಿಕೆಗಳು ಹಾಗೂ ದೃಶ್ಯ ಮಾಧ್ಯಮಗಳ ಮೂಲಕ ಅಪಪ್ರಚಾರ ಮಾಡುತ್ತಿವೆ. ಶ್ರೀ ಕಾಶೀಮಠ ಸಂಸ್ಥಾನ ಹಾಗೂ ಮಠಾಧಿಪತಿಗಳ ಕುರಿತಾಗಿ ಅನಗತ್ಯ ವದಂತಿ, ತಪ್ಪು ಮಾಹಿತಿ ನೀಡಿ ಸಾರ್ವಜನಿಕ ವಲಯದಲ್ಲಿ ಗೊಂದಲ ಉಂಟು ಮಾಡುತ್ತಿವೆ. ಇದು ಜಿ.ಎಸ್‌.ಬಿ. ಸಮಾಜದ, ಶ್ರೀ ದೇವಳದ ಹೆಸರು ಕೆಡಿಸುವ ಷಡ್ಯಂತ್ರವಾಗಿದೆ ಎಂದು ಜಿ.ಎಸ್‌.ಬಿ. ರಕ್ಷಣಾ ವೇದಿಕೆ ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದೆ.

ಬಾಳಿಗಾ ಕೊಲೆ ಪ್ರಕರಣದಲ್ಲಿ ಜಿ.ಎಸ್‌.ಬಿ. ಸಮಾಜ ಮತ್ತು ದೇವಳದ ಯಾವುದೇ ಪಾತ್ರವಿಲ್ಲ ಎಂದು ಜಿ.ಎಸ್‌.ಬಿ. ದೇವಾಲಯಗಳ ಒಕ್ಕೂಟದ ಅಂಗ ಸಂಸ್ಥೆಯಾಗಿರುವ ಜಿ.ಎಸ್‌.ಬಿ. ರಕ್ಷಣಾ ವೇದಿಕೆ ತಿಳಿಸಿದೆ.

ಪ್ರಕರಣದ ಬಗ್ಗೆ ಸಮಾಜದಲ್ಲಿ ಅನಗತ್ಯ ಗೊಂದಲವನ್ನುಂಟು ಮಾಡುತ್ತಿರುವ ಬೆಳವಣಿಗೆಗಳ ಕುರಿತು ಸಮಾಲೋಚಿಸುವ ಸಲುವಾಗಿ ಮೇ 9ರಂದು ಸಂಜೆ 5 ಗಂಟೆಗೆ ಕೊಂಚಾಡಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ದೇವಳಗಳ ಪ್ರತಿನಿಧಿಗಳು ಹಾಗೂ ಪ್ರಮುಖರ ಸಮಾಲೋಚನ ಸಭೆ ನಡೆಯಲಿದೆ. ಬೆಳವಣಿಗೆಗೆ ಸಂಬಂಧಿಸಿ ದೊಡ್ಡ ಪ್ರಮಾಣದ ಪ್ರತಿಭಟನ ಸಭೆಯನ್ನೂ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ವೇದಿಕೆ ವಿವರಿಸಿದೆ.

ಗೌಡ ಸಾರಸ್ವತ ಸಮಾಜವು ಕಠಿನ ಪರಿಶ್ರಮ, ದೇವರ ಮೇಲೆ ಅತೀವ ಶ್ರದ್ಧಾಭಕ್ತಿಯನ್ನು ಇಟ್ಟುಕೊಂಡಿದ್ದು, ತಪ್ಪು ಮಾಡಿದವರಿಗೆ ದೇವರೇ ಶಿಕ್ಷಿಸುವರು ಎಂಬ ಅಪಾರ ನಂಬಿಕೆ ಇಟ್ಟಿರುವ ಸಮಾಜವಾಗಿರುತ್ತದೆ. ಶ್ರೀ ದೇವಳದ ಆಡಳಿತ ಮಂಡಳಿ ಹಾಗೂ ಭಜಕರಿಗೆ ನಮ್ಮ ದೇಶದ ಕಾನೂನಿನ ಮೇಲೆ ನಂಬಿಕೆ ಇದ್ದು, ಈ ರೀತಿಯ ಕೃತ್ಯಗಳಲ್ಲಿ ಪಾಲ್ಗೊಳ್ಳುವುದಿಲ್ಲ ಎಂಬ ವಿಶ್ವಾಸವಿದೆ.

ಹಾಗಾಗಿ ಯಾವುದೇ ಅನ್ಯ ಮಾರ್ಗವನ್ನು ಅವಲಂಬಿಸುವ ಅನಿವಾರ್ಯತೆ ಯಾ ಆವಶ್ಯಕತೆ ಸಮಾಜಕ್ಕಿರುವುದಿಲ್ಲ. ಆದರೆ ಕೆಲವೊಂದು ಸ್ಥಾಪಿತ ಹಿತಾಸಕ್ತಿಗಳು ಅನಾವಶ್ಯಕವಾಗಿ ಶ್ರೀದೇವಳದ ಹೆಸರು ಹಾಳು ಮಾಡುವ ಉದ್ದೇಶದಿಂದ ಮಾಧ್ಯಮಗಳಲ್ಲಿ, ಸಾಮಾಜಿಕ ಜಾಲ ತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿವೆ.

ಬಾಳಿಗಾ ಕೊಲೆ ತನಿಖೆಗೆ ಪೂರ್ಣ ಪ್ರಮಾಣದ ಸಹಕಾರ ನೀಡಲಾಗುತ್ತಿದ್ದು, ಮುಂದೆಯೂ ಅಗತ್ಯವಿರುವ ಸಹಕಾರ ನೀಡಲು ಸಿದ್ಧರಿದ್ದೇವೆ ಎಂದು ಸಂಘಟನೆ ಸ್ಪಷ್ಟಪಡಿಸಿದೆ.

ಗೌಡ ಸಾರಸ್ವತ ಸಮಾಜದ ಪ್ರತಿಷ್ಠಿತ ದೇವಳಗಳಲ್ಲಿ ರಥ ಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನವೂ ಒಂದಾಗಿ ರುತ್ತದೆ. 2 ವರ್ಷಗಳ ಹಿಂದೆ ನಡೆದ ಶ್ರೀ ದೇವಳದ ಜೀರ್ಣೋದ್ಧಾರ ಹಾಗೂ ಪುನಃಪ್ರತಿಷ್ಠಾ ಮಹೋತ್ಸವ ಕಾಲದಲ್ಲಿ ಯಾವುದೇ ಅವ್ಯವಹಾರ ನಡೆದಿರುವುದಿಲ್ಲ. ಈ ಬಗ್ಗೆ ನ್ಯಾಯಾಲಯಕ್ಕೆ ಬೇಕಾಗಿದ್ದ ಎಲ್ಲ ಮಾಹಿತಿಗಳನ್ನು ದೇವಳದ ವತಿಯಿಂದ ನೀಡಲಾಗಿದೆ. ಶ್ರೀ ದೇವಳದಲ್ಲಿನ ಕಾರ್ಯಕ್ರಮಗಳು, ವ್ಯವಹಾರಗಳು ಯಾವತ್ತೂ ಶಿಸ್ತುಬದ್ಧ ಹಾಗೂ ಪಾರದರ್ಶಕ ಆಡಳಿತದ ಹಿನ್ನೆಲೆ ಹೊಂದಿದ್ದು, ಈ ಕೊಲೆ ಪ್ರಕರಣದಲ್ಲಿ ಶ್ರೀ ದೇವಳವು ಭಾಗಿಯಾಗಿಲ್ಲ. ಅನಗತ್ಯವಾಗಿ ಶ್ರೀ ಕಾಶೀ ಮಠ ಸಂಸ್ಥಾನ ಮತ್ತು ಮಠಾಧಿಪತಿಗಳ ಬಗ್ಗೆಯೂ ಸುಳ್ಳು ಸುದ್ದಿಗಳನ್ನು ಹಬ್ಬಿಸಲಾಗುತ್ತಿದೆ ಎಂದು ವೇದಿಕೆ ತಿಳಿಸಿದೆ.

ಮೃತ ವಿನಾಯಕ ಬಾಳಿಗಾ ಅವರು ಶ್ರೀ ದೇವಳದ ಜೀರ್ಣೋದ್ಧಾರ ಸಂದರ್ಭದಲ್ಲಿ ಅವ್ಯವಹಾರ ನಡೆದಿದೆ ಎಂದು ಈಗಾಗಲೇ ನ್ಯಾಯಾಲಯದಲ್ಲಿ ಹೂಡಿದ್ದ ವ್ಯಾಜ್ಯ ವಿಚಾರಣೆಯ ಹಂತದಲ್ಲಿದೆ. ಈ ಸಂದರ್ಭದಲ್ಲಿ ಯಾವುದೇ ರೀತಿಯ ಅಪ ಪ್ರಚಾರ ನ್ಯಾಯಾಂಗ ನಿಂದನೆ ಎನಿಸುತ್ತದೆ. ಬಾಳಿಗಾ ಕೊಲೆ ನಡೆದ ಬಳಿಕ ನಗರದ ಬಂದರು ಪೊಲೀಸ್‌ ಠಾಣೆಯ ಇನ್‌ಸ್ಪೆಕ್ಟರ್‌ ಶಾಂತಾರಾಂ ಅವರು ಶ್ರೀ ದೇವಳಕ್ಕೆ ಬಂದಿದ್ದು, ವಿಚಾರಣೆಯಲ್ಲಿ ಪೂರ್ಣ ಸಹಕಾರ ನೀಡಲಾಗಿದೆ. ಮುಂದೆಯೂ ತನಿಖೆಗೆ ಪೂರ್ಣ ಪ್ರಮಾಣದಲ್ಲಿ ಸಹಕರಿಸಲಿದೆ. ಆದರೆ ಪೊಲೀಸ್‌ ಇಲಾಖೆಯ ಮೇಲೆ ಅನಗತ್ಯ ಒತ್ತಡ ಹೇರಲಾಗುತ್ತಿದೆ. ಮಾಧ್ಯಮಗಳು ಮತ್ತು ಸಾಮಾಜಿಕ ಜಾಲ ತಾಣಗಳಲ್ಲಿ ಸುಳ್ಳು ಸುದ್ದಿ ಮತ್ತು ವದಂತಿಗಳನ್ನು ಹಬ್ಬಿಸಿ ಸಮಾಜಕ್ಕೆ ತಪ್ಪು ಸಂದೇಶವನ್ನು ರವಾನಿಸಲಾಗುತ್ತಿದೆ. ಸಮಾಜ ಬಾಂಧವರು ಇಂತಹ ಅಪಪ್ರಚಾರಗಳಿಗೆ ಕಿವಿಗೊಡದೆ ಎಂದಿನಂತೆ ದೇವರು, ದೇವಳ ಹಾಗೂ ಗುರು ಪೀಠದ ಮೇಲಿನ ವಿಶ್ವಾಸವನ್ನು ಬೆಳೆಸಿಕೊಂಡು ಸಮಾಜದ ಘನತೆ ಕಾಯಬೇಕು ಎಂದು ಪತ್ರಿಕಾ ಹೇಳಿಕೆ ತಿಳಿಸಿದೆ.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English