ಜಿಲ್ಲೆಯಲ್ಲಿ ನಾಲ್ವರು ಹಾಲಿ ಶಾಸಕರ ಜಯಭೇರಿ

8:35 PM, Thursday, May 19th, 2016
Share
1 Star2 Stars3 Stars4 Stars5 Stars
(5 rating, 8 votes)
Loading...
Kerala Count

ಕಾಸರಗೋಡು: ಕಾಸರಗೋಡು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಪೈಕಿ ಮೂರು ಕ್ಷೇತ್ರಗಳಲ್ಲಿ ಎಲ್‌ಡಿಎಫ್ ಮತ್ತು ಎರಡು ಕ್ಷೇತ್ರಗಳಲ್ಲಿ ಯುಡಿಎಫ್ ಗೆಲುವು ಸಾಧಿಸಿದೆ. ಗೆಲುವು ಸಾಧಿಸಿದ ನಾಲ್ವರು ಹಾಲಿ ಶಾಸಕರಾಗಿದ್ದಾರೆ.

ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕ ಪಿ.ಬಿ.ಅಬ್ದುಲ್ ರಝಾಕ್, ಕಾಸರಗೋಡು ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕ ಎನ್.ಎ.ನೆಲ್ಲಿಕುನ್ನು, ಉದುಮ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕ ಕೆ.ಕುಂಞಿರಾಮನ್, ಕಾಂಞಂಗಾಡ್ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕ ಇ.ಚಂದ್ರಶೇಖರನ್, ತೃಕ್ಕರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಎಂ.ರಾಜಗೋಪಾಲನ್ ಗೆಲುವು ಸಾಧಿಸಿದ್ದಾರೆ.

ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಜಿದ್ದಾಜಿದ್ದಿನ ಹೋರಾಟದಲ್ಲಿ ಮುಸ್ಲಿಂ ಲೀಗ್‌ನ ಪಿ.ಬಿ.ಅಬ್ದುಲ್ ರಝಾಕ್ ಗೆಲುವು ಸಾಧಿಸಿದರು. ಅವರು ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಕೆ.ಸುರೇಂದ್ರನ್ ಅವರನ್ನು ಕೇವಲ 89 ಮತಗಳ ಅಂತರದಿಂದ ಪರಾಭವಗೊಳಿಸಿದರು. ಈ ಕ್ಷೇತ್ರದಲ್ಲಿ ಮಾಜಿ ಶಾಸಕ ಸಿಪಿಎಂನ ಸಿ.ಎಚ್.ಕುಂಞಂಬು ತೃತೀಯ ಸ್ಥಾನದಲ್ಲಿ ತೃಪ್ತಿಪಟ್ಟರು. ಪಿ.ಬಿ.ಅಬ್ದುಲ್ ರಝಾಕ್ 56870 ಮತಗಳನ್ನು ಪಡೆದರೆ ಕೆ.ಸುರೇಂದ್ರನ್ 56786 ಮತಗಳನ್ನು ಪಡೆದು ಕೆಲವೇ ಅಂತರದಿಂದ ಪರಾಭವಗೊಂಡರು. ಸಿ.ಎಚ್.ಕುಂಞಂಬು 42565 ಮತಗಳನ್ನು ಪಡೆದಿದ್ದಾರೆ.

ಕಾಸರಗೋಡು ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕ ಎನ್.ಎ.ನೆಲ್ಲಿಕುನ್ನು ಅವರು ಬಿಜೆಪಿಯ ರವೀಶ ತಂತ್ರಿ ಕುಂಟಾರು ಅವರನ್ನು8607 ಮತಗಳ ಅಂತರದಿಂದ ಪರಾಭವಗೊಳಿಸಿದರು. ಎನ್.ಎ.ನೆಲ್ಲಿಕುನ್ನು 64727 ಮತಗಳನ್ನು ಪಡೆದರೆ ಬಿಜೆಪಿಯ ರವೀಶ ತಂತ್ರಿ ಕುಂಟಾರು 56120 ಮತಗಳನ್ನು ಪಡೆದಿದ್ದಾರೆ. ಐಎನ್‌ಎಲ್‌ನ ಡಾ|ಎ.ಎ.ಅಮೀನ್ ಕೇವಲ 21615 ಮತಗಳಿಗೆ ತೃಪ್ತಿ ಪಟ್ಟರು.

ಉದುಮ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕ ಕೆ.ಕುಂಞಿರಾಮನ್ ಜಿದ್ದಾಜಿದ್ದಿನ ಹೋರಾಟದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಸುಧಾಕರನ್ ಅವರನ್ನು3832 ಮತಗಳ ಅಂತರದಿಂದ ಪರಾಭವಗೊಳಿಸಿದರು. ಕೆ.ಕುಂಞಿರಾಮನ್ 70769 ಮತಗಳನ್ನು ಪಡೆದರೆ, ಕೆ.ಸುಧಾಕರನ್ 66847 ಮತಗಳನ್ನು ಪಡೆದರು. ಬಿಜೆಪಿಯ ಕೆ.ಶ್ರೀಕಾಂತ್ 21231 ಮತಗಳನ್ನು ಪಡೆದು ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟರು.

ಕಾಂಞಂಗಾಡ್ ವಿಧಾನಸಭಾ ಕ್ಷೇತ್ರದಲ್ಲಿ ಸಿಪಿಐ ಅಭ್ಯರ್ಥಿ ಇ.ಚಂದ್ರಶೇಖರನ್ ಅವರು ಕಾಂಗ್ರೆಸ್ ಅಭ್ಯರ್ಥಿ ಧನ್ಯ ಸುರೇಶ್ ಅವರನ್ನು 26011 ಮತಗಳ ಅಂತರದಿಂದ ಪರಾಭವಗೊಳಿಸಿದರು. ಇ.ಚಂದ್ರಶೇಖರನ್ 80558 ಮತಗಳನ್ನು ಪಡೆದರೆ, ಧನ್ಯ ಸುರೇಶ್ 54547 ಮತಗಳನ್ನು ಪಡೆದರು. ಬಿಡಿಜೆಎಸ್‌ನ ಎಂ.ಪಿ.ರಾಘವನ್ 24404 ಮತಗಳನ್ನು ಪಡೆದರು.

ತೃಕ್ಕರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಸಿಪಿಎಂನ ಎಂ.ರಾಜಗೋಪಾಲನ್ ಕಾಂಗ್ರೆಸ್‌ನ ಕೆ.ಪಿ.ಕುಂಞಿಕಣ್ಣನ್ ಅವರನ್ನು 16385 ಮತಗಳ ಅಂತರದಿಂದ ಪರಾಭವಗೊಳಿಸಿದರು. ಎಂ.ರಾಜಗೋಪಾಲನ್ 78279 ಮತಗಳನ್ನು ಪಡೆದರೆ, ಕೆ.ಪಿ.ಕುಂಞಿಕಣ್ಣನ್ 61921 ಮತಗಳನ್ನು ಪಡೆದರು. ಬಿಜೆಪಿಯ ಎಂ.ಭಾಸ್ಕರನ್ 10707 ಮತಗಳನ್ನು ಪಡೆದಿದ್ದಾರೆ.

89 ಮತಗಳಿಂದ ಕೆ.ಸುರೇಂದ್ರನ್ ಪರಾಭವ : ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ಕೆ.ಸುರೇಂದ್ರನ್ ಕೇವಲ 89 ಮತಗಳ ಅಂತರದಿಂದ ಪರಾಭವಗೊಂಡರು. ಕಡಿಮೆ ಅಂತರದಿಂದ ಪರಾಭವದ ಹಿನ್ನೆಲೆಯಲ್ಲಿ ಮರು ಎಣಿಕೆ ನಡೆದರೂ ಅಷ್ಟೇ ಮತಗಳಿಂದ ಸುರೇಂದ್ರನ್ ಪರಾಭವಗೊಂಡರು.
ಇದೇ ಕ್ಷೇತ್ರದಲ್ಲಿ ಕೆ.ಸುರೇಂದ್ರನ್ ಅವರ ಹೆಸರಿಗೆ ಸಾಮ್ಯತೆ ಇರುವ ಸ್ವತಂತ್ರ ಅಭ್ಯರ್ಥಿ ಕೆ.ಸುಂದರ ಅವರಿಗೆ 467 ಮತಗಳು ಲಭಿಸಿದೆ. ಮತ ಎಣಿಕೆಯ ಆರಂಭದಿಂದಲೇ ಮುಸ್ಲಿಂ ಲೀಗ್ ಮತ್ತು ಬಿಜೆಪಿ ಅಭ್ಯರ್ಥಿಯ ಮತಗಳಲ್ಲಿ ತೀವ್ರ ಪೈಪೋಟಿ ನಡೆದಿತ್ತು. ಕೊನೆಗೂ ಪಿ.ಬಿ.ಅಬ್ದುಲ್ ರಝಾಕ್ ಗೆಲುವು ಸಾಧಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English