ಕುಂಬಳೆ: ಮಂಜೇಶ್ವರ ಮಂಡಲ ಐಕ್ಯ ರಂಗದ ಅಭ್ಯರ್ಥಿ ಪಿ.ಬಿ.ಅಬ್ದುಲ್ ರಝಾಕ್ ಅವರ ಗೆಲುವಿನ ಸಂಭ್ರಮಾಚರಣೆಯ ಹಿನ್ನೆಲೆಯಲ್ಲಿ ಗುರುವಾರ ಸಂಜೆ ನಡೆದ ವಿಜಯೋತ್ಸವ ಮೆರವಣಿಗೆಯಲ್ಲಿ ಮುಸ್ಲಿಂ ಲೀಗ್ ಕಾರ್ಯಕರ್ತರ ಎಲ್ಲೆ ಮೀರಿದ ವಿಜಯೋತ್ಸವ ಆರ್ಭಟದಲ್ಲಿ ಮಂಡಲದ ವಿವಿಧೆಡೆ ಪೋಲಿಸರ ಸಹಿತ ಅನೇಕರು ಗಾಯಗೊಂಡಿದ್ದಾರೆ.
ಹಲವು ಅಂಗಡಿಗಳು ,ವಾಹನಗಳು, ಮನೆಗಳು ಹಾನಿಗೀಡಾಗಿವೆ. ಈ ಸಂಬಂಧ 147 ಮಂದಿ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ. ಪುತ್ತಿಗೆಯಲ್ಲಿ ಮುಸ್ಲಿಂ ಲೀಗ್ ಕಾರ್ಯಕರ್ತರು ನಡೆಸಿದ ಮೆರವಣಿಗೆಯಿಂದ ಖತೀಬ್‌ನಗರದಲ್ಲಿ ರಸ್ತೆ ತಡೆ ಸೃಷ್ಟಿಸಿತು. ಇದನ್ನು ತಡೆಯಲೆತ್ನಿಸಿದ ಪೋಲೀಸರ ಮೇಲೆ ಲೀಗ್ ಕಾರ್ಯಕರ್ತರ ತಂಡ ಕಲ್ಲೆಸೆತ ನಡೆಸಿದೆ. ಈ ಸಂಬಂಧ ಅಡಿಶನಲ್ ಎಸ್.ಐ ವರ್ಕಿ ನೀಡಿದ ದೂರಿನಂತೆ 104 ಲೀಗ್ ಕಾರ್ಯಕರ್ತರ ವಿರುದ್ಧ ದೂರು ದಾಖಲಿಸಲಾಗಿದೆ. ಪುತ್ತಿಗೆ ಸಿಪಿಐಎಂ ಲೋಕಲ್ ಕಾರ್ಯದರ್ಶಿ ಇಬ್ರಾಹಿಂ ಅವರ ಮನೆ ಹಿತ್ತಿಲಿಗೆ ನುಗ್ಗಿದ ಲೀಗ್ ಕಾರ್ಯಕರ್ತರು ಮನೆಯ ಕಿಟಕಿ ಗಾಜನ್ನು ಹಾನಿ ಗೈದ ಘಟನೆಗೆ ಸಂಬಂಧಿಸಿ ಅವರು ನೀಡಿದ ದೂರಿನಂತೆ 8 ಲೀಗ್ ಕಾರ್ಯಕರ್ತರ ವಿರುದ್ಧ ದೂರು ದಾಖಲಿಸಲಾಗಿದೆ.
ಬಾಡೂರು ಶಾಹುಲ್ ಹಮೀದ್ ಅವರ ಸ್ವಿಫ್ಟ್ ಕಾರು, ಸೀಂತಾಂಗೋಳಿ ಮುಗು ಮೊಹಮ್ಮದ್ ಅವರ ಕಾರು, ಪುತ್ತಿಗೆ ಕಯ್ಯಾಂಕೂಡ್ಲು ನಿವಾಸಿ ಮಯಿಮೂನ ಅವರ ಕಾರು, ಎರಡು ಪೋಲಿಸ್ ಜೀಪಸಹಿತ ಇನ್ನೆರಡು ಜೀಪುಗಳು ಹಾನಿಗೊಳಗಾಗಿವೆ.
ಅಂಗಡಿಮೊಗರುವಿನಲ್ಲಿ ಲೀಗ್ ಕಾರ್ಯಕರ್ತರು ನಡೆಸಿದ ದೊಂಬಿಯನ್ನು ನಿಯಂತ್ರಿಸಲು ಎರಡು ಸುತ್ತು ಅಶ್ರುವಾಯು ಪ್ರಯೋಗಿಸಲಾಯಿತು. ಪೈವಳಿಕೆ ಪಂಚಾಯತಿನ ಅಟ್ಟೆಗೋಳಿ ವಿಷ್ಣು ನಗರದಲ್ಲಿ ಬಿಜೆಪಿ ಕಾರ್ಯಕರ್ತರಾದ ಸದಾನಂದ ಅವರ ಮನೆ ಕಿಟಕಿ ಬಾಗಿಲು ಪಿಕ್‌ಅಪ್ ವಾಹನ, ಅವರ ಅಂಗಳದಲ್ಲಿ ನಿಲ್ಲಿಸಲಾಗಿದ್ದ ಇದ್ದಂಗೋಡಿಯ ನಿವಾಸಿ ಹರೀಶ ಎಂಬರ ಕಾರು, ಬೈಕ್, ಪರಿಸರದ ಬಾಲಕೃಷ್ಣ ಮಾಸ್ತರ್ ಮನೆಯ ಕಿಟಕಿ ಬಾಗಿಲು, ಅಟ್ಟೆಗೋಳಿ ಶ್ರೀ ಅಯ್ಯಪ್ಪ ಭಜನಾ ಮಂದಿರ , ಸಂಪತ್ ಕುಮಾರ ಅವರ ಇಟ್ಟಿಗೆ ತಯಾರಿಕಾ ಘಟಕದ ಕಛೇರಿ, ಈಚರ್ ವಾಹನಗಳು ಮೊದಲಾದವುಗಳನ್ನು ಹಾನಿಗೊಳಿಸಲಾಗಿದೆ. ಈ ವೇಳೆ ಆನಂದ ಎಂಬವರ ಮೇಲೆ ತಂಡವೊಂದು ಹಲ್ಲೆಗೊಳಿಸಿದ್ದು, ಗಂಭೀರ ಗಾಯಗೊಂಡ ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಮಲ, ಲಲಿತ, ಅರ್ಪಿತ, ದಯಾನಂದ ಎಂಬವರೂ ಸಹ ಗಾಯಗೊಂಡಿದ್ದು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗುರುವಾರ ಸಂಜೆ ಬಾಯಿಕಟ್ಟೆಯಿಂದ ಉಪ್ಪಳ ಭಾಗಕ್ಕೆ ಸಾಗುತ್ತಿದ್ದ ಲೀಗ್ ಕಾರ್ಯಕರ್ತರ ಬೃಹತ್ ರ‍್ಯಾಲಿಯಲ್ಲಿ ಬೈಕ್ ಹಾಗೂ ಟೆಂಪೋಗಳಲ್ಲಿ ಮುಖಕ್ಕೆ ಬಣ್ಣ ಹಚ್ಚಿ ಬಂದ 100 ರಷ್ಟು ಮಂದಿಯ ತಂಡ ಕಲ್ಲು ಹಾಗೂ ಮರದ ತುಂಡುಗಳಿಂದ ಏಕಾಏಕಿಯಾಗಿ ಮನೆಗಳಿಗೆ ಅತಿಕ್ರಮಿಸಿ ವಾಹನಗಳನ್ನು ಪುಡಿಗಟ್ಟಿ ಹಾನಿಗೊಳಿಸಿ ತಂಡ ಪರಾರಿಯಾದ ಘಟನೆ ತಿಳಿದು ಬಂದಿದೆ. ಈ ವೇಳೆ ನೂರಾರು ಮಕ್ಕಳು, ಮಹಿಳೆಯರು ದಿಕ್ಕೆಟ್ಟು ಓಡುತ್ತಿದ್ದ ಸಂದರ್ಭ ಉಂಟಾಯಿತು.
ಪರಿಸ್ಥಿತಿ ನಿಯಂತ್ರಣ:
ಜಿಲ್ಲೆಯಾದ್ಯಂತ ಮತ ಎಣಿಕೆಯ ಬೆನ್ನಲ್ಲಿ ಉಂಟಾದ ದೊಂಬಿ-ಗಲಭೆಯ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಹೇರಿದ ಕಾರಣ ಶುಕ್ರವಾರ ಗೊಂದಲಗಳು ಸಂಪೂರ್ಣ ನಿಯಂತ್ರಣಕ್ಕೆ ಬಂದವು.ಮಂಜೇಶ್ವರ,ಉಪ್ಪಳ,ಕುಂಬಳೆ,ಬದಿಯಡ್ಕ,ಪೆರ್ಲ,ಮುಳ್ಳೇರಿಯಾ ಸಹಿತ ವಿವಿಧೆಡೆ ಪೋಲೀಸ್ ಸರ್ಪಗಾವಲು ಏರ್ಪಡಿಸಿ ಗಲಭೆಗಳಾಗದಂತೆ ಕ್ರಮ ಕೈಗೊಳ್ಳಲಾಯಿತು.ಇಬ್ಬರಿಗಿಂತ ಹೆಚ್ಚು ಮಂದಿ ಗುಂಪು ಸೇರುವುದು,ಸಭೆ ನಡೆಸುವುದು ಮೊದಲಾದವುಗಳನ್ನು ವಾರಗಳ ಮಟ್ಟಿಗೆ ನಿಷೇಧಿಸಲಾಗಿದೆ.
Click this button or press Ctrl+G to toggle between Kannada and English